ಈ ಪಾಪಚ್ಚಿಯ ಹೃದಯದ ಮೇಲೆ ಸಮ್ಮತಿಯ ಸಹಿ ಹಾಕಿ ಬಿಡು…..
Team Udayavani, Oct 31, 2017, 11:11 AM IST
ಬೆಳದಿಂಗಳ ಬಿಲ್ಲೆಯೇ…
ನಿನ್ನ ಕಂಡ ಆ ಅಮೃತಘಳಿಗೆಯಿಂದೀಚೆಗೆ ನನ್ನ ಅಂತರಂಗದಲ್ಲಿ ಸಿಹಿಯಾದ ಅನಾಹುತಗಳ ಅಲೆ ವಿಪರೀತವಾಗಿಬಿಟ್ಟಿದೆ. ನನ್ನೆಲ್ಲಾ ಚಡಪಡಿಕೆಗಳನ್ನು, ನಿನ್ನೊಟ್ಟಿಗೆ ಮಾಡಿಕೊಳ್ಳಬೇಕೆಂದಿರುವ ಒಡಂಬಡಿಕೆಗಳನ್ನು ಬಯಲು ಮಾಡಲಾಗದೆ ಬಸವಳಿದಿದ್ದೇನೆ. ನಿನ್ನ ಕಣ್ಣುಗಳಲ್ಲಿ ನನ್ನ ಒಲವ ದೃಷ್ಟಿ ನೆಟ್ಟು, ಎಲ್ಲವನ್ನೂ ತೋಡಿಕೊಂಡು ಹಗುರಾಗಿಬಿಡಬೇಕೆಂದು ಅದೆಷ್ಟು ಹಗಲು ರಾತ್ರಿಗಳ ರಿಹರ್ಸಲ್ಲು ನಡೆಸಿದ್ದೇನೆ ಗೊತ್ತಾ? ಉಹುಂ, ಆ ಯೋಜನೆಗಳೆಲ್ಲಾ ಅನುಷ್ಠಾನಗೊಳ್ಳದೆ ಹಳ್ಳ ಹಿಡಿದುಬಿಟ್ಟಿವೆ. ಮೇಲಾಗಿ, ಎದೆನುಡಿಗಳನ್ನೆಲ್ಲಾ ಚಕಚಕಾ ಅಂತ ಕಾಗದಕ್ಕಿಳಿಸಿ ನಿನಗೆ ತಲುಪಿಸಬೇಕೆಂದು ಎಷ್ಟೇ ತಿಪ್ಪರಲಾಗ ಹಾಕಿದರೂ, ದಿಕ್ಕೆಟ್ಟ ಪದಗಳು ದಕ್ಕುತ್ತಲೇ ಇಲ್ಲ. ಪ್ರವಾಹೋಪಾದಿಯಲ್ಲಿ ಧುಮ್ಮಿಕ್ಕುವ ನಿನ್ನದೇ ಕನವರಿಕೆಗಳಿಗೆ ಕಡಿವಾಣದ ಜಾಡು ಯಾವುದೆಂದು ತೋಚುತ್ತಿಲ್ಲ. ಚೂರು ಸಹಕರಿಸೆಯಾ ಸವಿಜೇನೆ?
ಅಂದಹಾಗೆ ಮೊನ್ನೆ ದೀಪಾವಳಿಯಂದು ನಮ್ಮೂರ ಬೀದಿಯಲ್ಲಿ ಹಚ್ಚಿಟ್ಟ ಸಾಲು ಸಾಲು ಹಣತೆಗಳಿಗಿಂತ ನಿನ್ನೆರಡು ಅವಳಿ ಕಣ್ಣುಗಳ ಹಾವಳಿಯ ಹಾಲೆºಳಕಿಗೆ ನನ್ನೊಳಗೊಂದು ಸ್ಫೂರ್ತಿಯ ಬುಗ್ಗೆ ಭುಗಿಲೆದ್ದಿದೆ. ನನ್ನೆದೆಯೊಳಗಿದ್ದ ಅಷ್ಟೂ ನೋವುಗಳನ್ನೆಲ್ಲಾ ಅಚ್ಚುಕಟ್ಟಾಗಿ ಗುಡಿಸಿ ನಿರಾಳತೆಯ ಭಾವಕ್ಕೆ ದೂಡಿದ ನಿನಗೆ ಯಾವ ಬಿರುದುಬಾವಲಿ ನೀಡಬೇಕೆಂದು ತಿಳೀತಿಲ್ಲವಲ್ಲ?
ಗೊತ್ತುಗುರಿಯಿಲ್ಲದೆ ನಿನ್ನನ್ನು ಹುಚ್ಚನಂತೆ ಹಚ್ಚಿಕೊಂಡುಬಿಟ್ಟಿದ್ದೀನಿ. ಕ್ಷಣಕ್ಷಣಕ್ಕೂ ನಿನ್ನ ನೆನಪುಗಳನ್ನೇ ಆರಾಧಿಸುತ್ತಾ ಮಿಠಾಯಿಯಂತೆ ಚಪ್ಪರಿಸುತ್ತಿದ್ದೇನೆ. ಎಡಬಿಡದೆ ಎದೆಪೂರಾ ನಿನ್ನನ್ನೇ ಆರಾಧಿಸುತ್ತಿದ್ದೇನೆ. ಈ ಪಾಪಚ್ಚಿ ಹುಡುಗನ ಹೃದಯದ ಮೇಲೊಂದು ಸಮ್ಮತಿಯ ಸಿಹಿಯಾದ ಸಹಿ ಗೀಚಿಬಿಡು, ನನ್ನ ಈ ಮಿಕ್ಕ ಬದುಕನ್ನು ನಿನ್ನ ಖುಷಿಗಾಗಿ ಎತ್ತಿಟ್ಟುಬಿಡುವೆ. ಪ್ರಾಮಿಸ್!
ಇಂತಿ,
ನಿನ್ನ ಧ್ಯಾನಿ ಹಾಗೂ ಮೌನಿ
ಹೃದಯ ರವಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.