ಬೇಸಿಗೆ ರಜೆಯ ಪಿಕ್ಚರು : ಏಪ್ರಿಲ್ 10 ದಾಟಿದ ಮೇಲೆ
Team Udayavani, Apr 9, 2019, 6:00 AM IST
ವರ್ಷದ ಹತ್ತು ತಿಂಗಳ ಅವಧಿಯಲ್ಲಿ ಪಠ್ಯ, ಶಿಕ್ಷಕ, ಶಾಲೆಯಲ್ಲಿಯೂ ಕಲಿಯಲಾಗದ್ದನ್ನು ಐವತ್ತು ದಿನದ ರಜೆ ಕಲಿಸಿಬಿಡುತ್ತದೆ. ಆದರೆ, ನಮ್ಮ ಗಣನೆಗೆ ಅದು ಬರುವುದೇ ಇಲ್ಲ. ಯಾಕೆಂದರೆ, ಅದರಿಂದ ಶಾಲೆಯ ಆವರಣದಲ್ಲಿನ ಬ್ಯಾನರಿನಲ್ಲಿ ಆತನ ಭಾವಚಿತ್ರ ಅಚ್ಚಾಗುವುದಿಲ್ಲ, ಸಂಬಂಧಿಕರೆಲ್ಲ ಸಂಭ್ರಮಿಸುವುದಿಲ್ಲ, ಊರೆಲ್ಲ ಪ್ರಶಂಸಿಸುವುದಿಲ್ಲ…
ಏಪ್ರಿಲ್ ತಿಂಗಳು ಬಂತೆಂದರೆ ವಿದ್ಯಾರ್ಥಿ ಬದುಕಿನ ಕಾಲಘಟ್ಟದಲ್ಲಿ ಸಡಗರ, ಸಂಭ್ರಮ. ಅಲ್ಲಿಯವರೆಗೂ ಕಾಡುತ್ತಿದ್ದ ಭಯಭರಿತ ವಾತಾವರಣಕ್ಕೆಲ್ಲ ಪೂರ್ಣವಿರಾಮ ಬೀಳುವ ಕಾಲವದು. ಅದರಲ್ಲೂ ಏಪ್ರಿಲ್ ಹತ್ತನೇ ತಾರೀಕೆಂದರೆ ಕುತೂಹಲ ಮಿಶ್ರಿತ ಭಯ. ತೀರಾ ಹಳ್ಳಿಭಾಷೆಯಲ್ಲಿ ಹೇಳ್ಳೋದಾದರೆ, ಏಪ್ರಿಲ್ 10 ಅಂದ್ರೆ, “ಪಾಸು- ಫೇಲು’ ದಿನ! ಶಾಲೆಯ ಕಾಂಪೌಂಡಿಗೆ ಒತ್ತಿ ರಣಬಿಸಿಲಿಗೆ ಸುಟ್ಟು ಕರಕಲಾದಂತಿರುತ್ತಿದ್ದ ಪಾಚಿ ಗಿಡದ ಮೇಲೆ ಬೆಳೆಯುವ ಸಣ್ಣ ಗಾತ್ರದ ಎರಡು ಚಿಕ್ಕ ಹುಲ್ಲೆಳೆದು ತುದಿಯ ಕೊಂಡಿಯಂತಿರುತ್ತಿದ್ದ ಅವುಗಳನ್ನು ಸಿಕ್ಕಿಸಿ ಎಳೆದಾಗ ಎರಡೂ ಕೊಂಡಿಗಳು ಹಾಗೇ ಉಳಿದುಕೊಂಡರೆ ಪಾಸ್, ಒಂದು ಹುಲ್ಲಿನ ಕೊಂಡಿ ಎಲೆ ತುಂಡಾದರೂ ಫೇಲು, ಎರಡೂ ತುಂಡಾದರೆ ಅಧೋಗತಿ! ಹೀಗೆ ಒಬ್ಬೊಬ್ಬರದು ಒಂದೊಂದು ಬಗೆಯ ಶಾಲಾ ಫಲಿತಾಂಶದ ಲೆಕ್ಕಾಚಾರ!
ಪಾಸು- ಫೇಲ್‌ಗೂ ಮರ್ಯಾದೆ ಇರುತ್ತಿದ್ದ ಕಾಲವದು. ಫೇಲಾಗುತ್ತಿದ್ದವರ ಸಂಖ್ಯೆ ಕಮ್ಮಿಯಾಗಿದ್ದರೂ ಏಪ್ರಿಲ್ ಹತ್ತರ ಗುಮ್ಮ ಮಾತ್ರ ಹಿಂದಿನ ರಾತ್ರಿಯೇ ನಿದ್ದೆ ಬರದಂತೆ ತಡೆಯುತ್ತಿತ್ತು. ಅಂತೂ ಏಪ್ರಿಲ್ ಹತ್ತು ಮುಗಿಯಿತೆಂದರೆ ಪಾಸಾದ ಖುಷಿಯಲ್ಲೂ ಆ ಕ್ಷಣಕ್ಕೊಮ್ಮೆ ನವಿರಾದ ಸಂಕಟವೊಂದು ಮನಸ್ಸನ್ನು ಸೋಕಿ ಹೋಗುತ್ತಿತ್ತು. ಸುಮಾರು ಐವತ್ತು ದಿನಗಳ ರಜೆಯಲ್ಲಿ ಶಾಲೆಯನ್ನು, ಗೆಳೆಯ- ಗೆಳತಿಯರನ್ನು, ಆಟವನ್ನು, ಶಿಕ್ಷಕರನ್ನು “ಮಿಸ್’ ಮಾಡಿಕೊಳ್ಳುವ ಸೂಕ್ಷ್ಮನೋವದು. ಅದರಲ್ಲೂ ಮುಂಬರುವ ಶೈಕ್ಷಣಿಕ ವರ್ಷಕ್ಕೆ ಆ ಶಾಲೆ ಬಿಟ್ಟು ಇನ್ನೊಂದು ಶಾಲೆ ಸೇರುವುದಾದರಂತೂ ಆ ವೇದನೆ ಇಮ್ಮಡಿ. ಆ ದುಃಖ ವನ್ನು ತಣಿಸಲು ಜೊತೆಗಿದ್ದು ಸಾಂತ್ವನ ನೀಡುತ್ತಿದ್ದುದ್ದು ಬೇಸಿಗೆ ರಜೆ ಮಾತ್ರ! ರಜೆಗೊಂದಿಷ್ಟು ನಡೆದೇ ತೀರುತ್ತದೆಂದು ಖಚಿತವಾಗಿ ಹೇಳಲಿಕ್ಕಾಗದ ಯೋಜನೆಗಳು!
ಗುಪ್ತ್ ಗುಪ್ತ್ ಮುಖ್ಯಾಂಶಗಳು
ರಜೆ ಸಿಕ್ಕಿದ ಮಾರನೇ ದಿನವೇ ಆಚೀಚಿನ ಹುಡುಗರನ್ನೆಲ್ಲ ಸೇರಿಸಿ ಗಂಭೀರ ಚರ್ಚೆಗಳು ನಡೆಯುತ್ತಿದ್ದವು. ಊರಲ್ಲಿ ಯಾವ ಮಾವಿನಮರಕ್ಕೆ ಕಲ್ಲೆಸೆದರೆ ಬಾಯಿ ಸಿಹಿಯಾದೀತು? ಯಾರ ಗೇರುತೋಟದಲ್ಲಿ ಗೇರುಬೀಜ ಬಿದ್ದಿದ್ದರೂ ವಾರಸುದಾರರಿಲ್ಲದೆ ಹಾಳಾಗುತ್ತಿವೆ? ಯಾವ ಹೊಳೆಯಲ್ಲಿ ಈಜಲು ತೆರಳಿದರೆ ಮನೆಯವರಿಗೆ ಸುದ್ದಿ ಮುಟ್ಟದು ಎಂಬೆಲ್ಲ ಗುಪ್ತ ವಿಚಾರಗಳು ಚರ್ಚೆಯ ಮುಖ್ಯಾಂಶಗಳಾಗಿರುತ್ತಿದ್ದವು.
ನಾಲ್ಕು ಗೇರುಬೀಜಕ್ಕೆ ಐವತ್ತು ಪೈಸೆ ಸಿಗುತ್ತಿದ್ದ ಆಗ ಗೇರುಬೀಜ ಕದಿಯುವುದು ಒಂದು ಪ್ರತಿಷ್ಠೆಯ ಕೆಲಸವೇ ಆಗಿತ್ತು.
ಓರಗೆಯವರೊಂದಿಗೆ ಇಂಥದ್ದಾದರೆ, ಇನ್ನು ನೆಂಟರ ಮನೆಗೆ ತೆರಳುತ್ತಿದ್ದ ಸಂಭ್ರಮ ಮತ್ತೂಂದೆಡೆ. ಮದುವೆ – ಮುಂಜಿಯಂಥ ಸಮಾರಂಭದಲ್ಲಿ ಸಂಬಂಧಿಕರೆಲ್ಲ ಒಟ್ಟಾದರೆ ಚಿತ್ರ-ವಿಚಿತ್ರ ಆಟಗಳ ಜಾತ್ರೆಯೇ ನೆರೆದಷ್ಟು ಸಂತಸ ನೆಲೆಯಾಗುತ್ತಿತ್ತು. ಆ ಸಂಬಂಧಿಕರೊಂದಿಷ್ಟು ಅನುಕೂಲಸ್ಥರಾದರೆ ಅವರ ಮಗ ಆಡುವ ಸೈಕಲ್ಲು , ಪುಷ್ಪಕ ವಿಮಾನದಂತೆ ಬೆರಗು ಮೂಡಿಸಿ ಮನಸ್ಸು ಅದನ್ನು ಮುಟ್ಟುವ ಹವಣಿಕೆಯಲ್ಲಿರುತ್ತಿತ್ತು. ಆ ನಡುವೆ ಹುಡುಗ- ಹುಡುಗಿ ಎಂದೆಲ್ಲ ಬೇಧವಿರದ ಆಟಗಳು, ಎಪ್ಪತ್ತೆ„ದು ಪೈಸೆಗೆ ಸಿಗುತ್ತಿದ್ದ, ಎಷ್ಟೇ ತಿಂದರೂ ಶೀತವಾಗದ ಬೆಲ್ಲದ ಐಸ್‌ಕ್ಯಾಂಡಿ, ರೂಪಾಯಿಗೆ ಇಪ್ಪತ್ತರಂತೆ ಸಿಗುತ್ತಿದ್ದ ಐವತ್ತು ಪೈಸೆ ಪಾವಲಿ ಸೈಜಿನ ಬಿಸ್ಕತ್ತುಗಳಿಗೂ, ಈಗಿನ ಪಿಜ್ಜಾ ಬರ್ಗರ್‌ಗಳಿಗೂ ಹೋಲಿಕೆ ಮಾಡಲಾಗದ್ದು! ಮನೆಯಾಟ, ಅಂಗಡಿಯಾಟ, ದೇವಸ್ಥಾನ ದಾಟದಂಥ ತರಹೇವಾರಿ ಕಲ್ಪನೆಗಳು ಮತ್ತದರ ನೀಲನಕ್ಷೆ ಸಹಿತದ ಯೋಜನೆಗಳು ನಮ್ಮೆಲ್ಲರಿಗೂ ಬಾಲ ವಿಜ್ಞಾನಿಯೆಂಬ ಪಟ್ಟ ನೀಡಿತ್ತು.
ಅಜ್ಜಿಮನೆಯ ಕೋಟಿ ಕೀಟಲೆಗಳು
ಈ ಐವತ್ತು ದಿನದಲ್ಲಿ ಎಲ್ಲಕ್ಕಿಂತ ಅದ್ಭುತ ಅನುಭವ ಪಡೆಯುತ್ತಿದ್ದುದು ಅಜ್ಜಿಮನೆಯೆಂಬ ಪಾಠಶಾಲೆಯಿಂದ! ತಾಯಿ- ತಾಯಿಯ ಓರಗೆಯವರೋ ಅಥವಾ ತಂದೆ- ತಂದೆಯ ಒಡಹುಟ್ಟಿದವರೋ ಹುಟ್ಟಿ, ಆಡಿ, ನಲಿದು ಬೆಳೆದಿದ್ದ ಮನೆಯಲ್ಲಿ ಅಜ್ಜಿ ಹೇಳುತ್ತಿದ್ದ ಹಳೆಯ ಚಿತ್ರಣಗಳನ್ನು ಕಣ್ಣಿಗೆ ಕಟ್ಟಿಕೊಳ್ಳುವ ಪ್ರಾಯ ನಮ್ಮದಾಗಿರಲಿಲ್ಲ.
ಅಜ್ಜಿ ಹೇಳುತ್ತಿದ್ದ ಅವರ ಕಾಲದ ಆ ತ್ರಾಸದಾಯಕ ಕಥೆ- ವ್ಯಥೆಗಳೆಲ್ಲವೂ ಠುಸ್ಸು ಪಟಾಕಿಯೆಂದೇ ಭ್ರಮಿಸಿ ನಕ್ಕುಬಿಡುತ್ತಿದ್ದರೂ ಈಗ ಅದರ ವಾಸ್ತವ ತಿಳಿಯುವ ಅತಿ ಆಸೆ ಮೂಡಿದರೂ ಕೆಲವರಿಗೆ ಅಜ್ಜಿಯಿಲ್ಲ ಎಂಬ ಕೊರಗಾದರೆ, ಇನ್ನೂ ಕೆಲವೆಡೆ ಅಜ್ಜಿಮನೆಯೇ ಇಲ್ಲ! ಆದರೆ, ಅಜ್ಜಿಮನೆಯ ಕೋಟಿಕೀಟಲೆಗಳು ಒಬ್ಬೊಬ್ಬರಿಗೆ ಒಂದೊಂದು ನೆನಪಿನ ವಾಸನೆ ಹತ್ತಿಸುವುದು ಮಾತ್ರ ಸುಳ್ಳಲ್ಲ.
ಕೆಂಪು ಬಸ್ಸುಗಳೇ ಪುಷ್ಪಕ ವಿಮಾನ
ವರ್ಷಕ್ಕೊಮ್ಮೆಯಂತೆ ಧರ್ಮಸ್ಥಳಕ್ಕೋ, ಸುಬ್ರಹ್ಮಣ್ಯಕ್ಕೋ ತೆರಳುವ ಸಂಪ್ರದಾಯ ವಿದ್ದರಂತೂ ಮುಗಿದೇ ಹೋಯಿತು. ಅವೊಂದು ರೀತಿಯ ವಿದೇಶ ಪ್ರವಾಸದಂತೆ! ತೆರಳುವ ಬಸ್ಸಿನ ಅರ್ಧ ದರದ ಟಿಕೇಟು ಕೈಲಿ ಹಿಡಿದು ನೋಡಿದರೆ, ಅದೊಂದು ರೀತಿ ವೀಸಾದಂತೆಯೋ, ಪಾಸ್‌ಪೋರ್ಟಿನಂತೆಯೋ ಕಾಣುತ್ತಿತ್ತು. ಇನ್ನು ಆ ಸರ್ಕಾರಿ ಕೆಂಪುಬಸ್ಸುಗಳೇ ಕೆಂಪು ವಿಮಾನದಂತೆ ಗೋಚರವಾಗುತ್ತಿದ್ದವು. ಆ ಕಾಲದಲ್ಲಿ ವೀಕ್ಷಣಾ ಮನರಂಜನೆಯೆಂದರೆ, ನೆರೆಹೊರೆಯವರೆಲ್ಲ ಊರಿನ ಅನುಕೂಲಸ್ಥರ ಮನೆಗೆ ಬಂದು ಸೇರಿ ಕಾಯುತ್ತಿದ್ದ, ಪ್ರತೀ ಆದಿತ್ಯವಾರ ದೂರದರ್ಶನದಲ್ಲಿ ಸಂಜೆ ನಾಲ್ಕು ಗಂಟೆಗೆ ಪ್ರಸಾರಗೊಳ್ಳುತ್ತಿದ್ದ ಚಲನಚಿತ್ರಗಳು! ರಿಮೋಟೆಂಬ ಕಲ್ಪನೆಯೂ ಇರದ ಆಗ, ಚಲನಚಿತ್ರದ ಹೆಸರು ನೋಡಬೇಕೆಂದರೆ ದಿನಪತ್ರಿಕೆಯಲ್ಲಿ ಸುದ್ದಿವಾಹಿನಿಗಳ ವೇಳಾಪಟ್ಟಿಯನ್ನೇ ನೋಡಬೇಕಿತ್ತು! ಆದಿತ್ಯವಾರ ಸಂಜೆ ನಾಲ್ಕರಿಂದ ಆರೂವರೆತನಕ ಅದ್ಧೂರಿ ಚಲನಚಿತ್ರ ಮಹೋತ್ಸವ ಒಂದು ರೀತಿಯಲ್ಲಿ ವಾರದ ಜಾತ್ರೆಯಂತೆ!
ಹೀಗೆ, ಪ್ರತಿನಿತ್ಯದ ರಜಾದಿನಗಳ ಬಾಕಿ ಲೆಕ್ಕಾಚಾರವು ರೂಪಾಯಿಗೆ ಕೊಂಡ ಇಪ್ಪತ್ತು ಬಿಸ್ಕೇಟಿನಂತೆ ಬಹಳ ಮೌಲ್ಯಭರಿತವಾಗಿತ್ತು. ಒಂದೊಂದು ದಿನದಲ್ಲೂ ನೂರೆಂಟು ನೆನಪು, ಅನುಭವ, ಜ್ಞಾನ. ಈಗ ಅದನ್ನು ನೆನೆಯುವ ಸುಸಂದರ್ಭ. ಕಾರಣ, ಜಗತ್ತು ಸಾಕಷ್ಟು ಬದಲಾಗಿದೆ. ಕೈಗೊಂದು ಮೊಬೈಲು ಕೊಟ್ಟು ಅದಕ್ಕೊಂದಿಷ್ಟು ಇಂಟರ್ನೆಟ್ ರಿಚಾರ್ಜ್ ಮಾಡಿಸಿಬಿಟ್ಟರೆ ಸಾಕು, ಹೊಟ್ಟೆಗೆ ಹಿಟ್ಟಿಲ್ಲದೆಯೂ ಮಕ್ಕಳು ರಜಾದಿನ ಕಳೆಯುತ್ತವೆಂಬುದು ಕಾಲಕ್ಕೆ ತಕ್ಕುದಾದ ಘೋರಸತ್ಯ. ಎಲ್‌ಕೆಜಿ, ಯುಕೆಜಿ ಮಕ್ಕಳನ್ನೂ ಈ ರಜಾದಿನಗಳಲ್ಲಿ ಟ್ಯೂಶನ್‌ಗೆ ತಳ್ಳಿ ಪ್ರಾಣ ಹಿಂಡುವುದರಲ್ಲೇ ಮಗ್ನರಾಗಿರುವ ಈ ಹೊತ್ತಿನಲ್ಲಿ ಬದುಕಿನ ವಾಸ್ತವವನ್ನು ತಿಳಿಸಲು ಅವಕಾಶವನ್ನೂ ನಾವು ನೀಡುತ್ತಿಲ್ಲ. ಮಳೆಯಲ್ಲಿ ನೆನೆದರೆ ನೆಗಡಿ, ಮೈದಾನಕ್ಕೆ ಆಡಲು ಹೋದರೆ ಮೈಕೈ ಗಾಯ, ಚಪ್ಪಲಿ ಇಲ್ಲದೇ ಮನೆಹೊರಕ್ಕೆ ಕಾಲಿಟ್ಟರೆ ಮುಳ್ಳು, ಚರಂಡಿಯ ನೀರಿನಲ್ಲಿ ಆಡಿದರೂ ಕಜ್ಜಿ ಎಂಬೆಲ್ಲ ನಾಜೂಕುತನ ಅವರ ಸ್ವಾತಂತ್ರ್ಯವನ್ನು ಮತ್ತು ಬದುಕಿನಿಂದ ಪಡೆಯಬೇಕಿದ್ದ ಅನುಭವವನ್ನು ಕಟ್ಟಿಹಾಕಿದೆ.
50 ದಿನದ ರಜೆಯ ಅಪರೂಪದ ಪಾಠ
ವರ್ಷದ ಹತ್ತು ತಿಂಗಳ ಅವಧಿಯಲ್ಲಿ ಪಠ್ಯ, ಶಿಕ್ಷಕ, ಶಾಲೆಯಲ್ಲಿಯೂ ಕಲಿಯಲಾಗದ್ದನ್ನು ಐವತ್ತು ದಿನದ ರಜೆ ಕಲಿಸಿಬಿಡುತ್ತದೆ. ಆದರೆ, ನಮ್ಮ ಗಣನೆಗೆ ಅದು ಬರುವುದೇ ಇಲ್ಲ. ಯಾಕೆಂದರೆ, ಅದರಿಂದ ಶಾಲೆಯ ಆವರಣದಲ್ಲಿನ ಬ್ಯಾನರಿನಲ್ಲಿ ಆತನ ಭಾವಚಿತ್ರ ಅಚ್ಚಾಗುವುದಿಲ್ಲ, ಸಂಬಂಧಿಕರೆಲ್ಲ ಸಂಭ್ರಮಿಸುವುದಿಲ್ಲ, ಊರೆಲ್ಲ ಪ್ರಶಂಸಿಸುವುದಿಲ್ಲ. ನಿಜಾಂಶವೆಂದರೆ ಆ ಹತ್ತು ತಿಂಗಳು ಮಾಡಿದ ಗಿಣಿಪಾಠ ರಜೆ ಮುಗಿದು ಜೂನ್ ಒಂದನೇ ತಾರೀಕಿಗೆ ಕೇಳಿದರೂ ಮಕ್ಕಳ ನೆನಪಿಗೆ ನಿಲುಕುವುದಿಲ್ಲ! ಆದರೆ, ಇದೇ ಐವತ್ತು ದಿನಗಳಲ್ಲಿ ಕಲಿತ ಸೈಕಲ್ಲು, ಮಾವಿನಮರಕ್ಕೆ ಕಲ್ಲೆಸೆದು ಸಾಹುಕಾರರ ಬಳಿ ಬೈಸಿಕೊಂಡ ಭಯ, ಮರದಿಂದ ಬಿದ್ದಾಗ ಆದ ಗಾಯ, ಸೆಖೆಗೆಂದು ಕಲಿತ ಈಜು, ಸ್ನೇಹಿತರೊಡನೆ ಮಾಡಿದ ಕಿಡಿಗೇಡಿತನ, ಮುಂದಿನ ವರ್ಷದ ಖರ್ಚುವೆಚ್ಚಕ್ಕೆಂದು ಸಣ್ಣಪುಟ್ಟ ಕೆಲಸಗಳಿಗೆ ದುಡಿದ ಹಣ ಮತ್ತು ಅದರ ಅನುಭವಗಳು… ಇನ್ನೂ ಏನೇನೋ ಯಾಕೆ ಬದುಕಿನಿಂದ ಬೇಗ ಮರೆಯಾಗುವುದಿಲ್ಲ.
ಬೇಸರವೆಂದರೆ, ಇಂಥ ಬದುಕಿನಿಂದ ಈಗಿನ ಪೀಳಿಗೆ ವಂಚಿತವಾಗಿದೆ. ಬೇಸಿಗೆ ರಜೆಯಲ್ಲೂ ಟ್ಯೂಷನ್ನಿನ ಮಣಭಾರವನ್ನು ಮಕ್ಕಳ ತಲೆಮೇಲೆ ಹಾಕಿ, ಬಿಡುವಿನ ವೇಳೆಯಲ್ಲಿ ಕೈಗೊಂದು ಮೊಬೈಲು, ಟಿವಿ ಹಚ್ಚಿ ಕೊಡುವ ಬದಲು ಅವರನ್ನು ಎಲ್ಲಾದರೂ ಪ್ರವಾಸಕ್ಕೆ ಕರೆದೊಯ್ಯೋಣ, ಅಜ್ಜಿಮನೆಯೆಂಬ ಭೂಲೋಕದ ಸ್ವರ್ಗ ತೋರಿಸೋಣ, ಮೈದಾನಕ್ಕೆ ಅವರನ್ನು ಬಿಟ್ಟುಬಿಡೋಣ. ಮಕ್ಕಳು ಅಲ್ಲಿ ಆಡಲಿ, ಕೂಗಲಿ, ಕಿರುಚಲಿ, ನಗಲಿ, ಅಳಲಿ, ಬೀಳಲಿ. ಬಿದ್ದು ಕೊನೆಗೆ ಅವರೇ ಎದ್ದು ಬರಲಿ. ಅಷ್ಟಕ್ಕೂ ಅದೇ ಬದುಕಿನ ವ್ಯಾಖ್ಯಾನವೂ ಉದ್ದೇಶವೂ ಅಲ್ಲವೇ?
ನಾವು ಕಂಡ ಸುಂದರ ಬಾಲ್ಯ ಅವರದ್ದೂ ಆಗಲಿ.
ಬಾಲ್ಯದ ಅಪಹರಣ
ಒಂದಂತೂ ಒಪ್ಪಿಕೊಳ್ಳತಕ್ಕದ್ದೇ. ಈಗ ತಂದೆ- ತಾಯಿಗೆ ಇರುವುದೂ ಒಬ್ಬರೋ ಇಬ್ಬರೋ ಮಕ್ಕಳು. ಅವುಗಳೇ ಅವರಿಗೆ ಆಸ್ತಿ! ಹಾಗೆಂದು ಅವರ ಬದುಕನ್ನೇ ನಾವು ಬದುಕುವ, ಬಾಲ್ಯವನ್ನು ಕಿತ್ತಿಟ್ಟುಕೊಳ್ಳುವುದು ಸರಿಯೇ? ಒಂದೆಡೆ ಮಕ್ಕಳಿಗೆ ಉಸಿರಾಡುವುದಕ್ಕೂ ಭಯದ ವಾತಾವರಣ ಸೃಷ್ಟಿಸಿ, ಸ್ಪೂನ್‌ಫೀಡ್ ಮಾಡಿರುವ ನಾವು, ನಾಳೆ ಆತನೋ/ ಆಕೆಯೋ ಬದುಕಿನ ಸಕಲ ಸಂಕಷ್ಟಗಳನ್ನು ಎದುರಿಸಬೇಕೆಂದು ಬಯಸುವುದು ಅರ್ಥಹೀನವೇ ಸರಿ. ತಂತ್ರಜ್ಞಾನದ ಅವ್ಯಾಹತ ಬಳಕೆಯಿಂದ ಮಾನವ ಸಂಬಂಧಗಳು ಅಪಮೌಲ್ಯಕ್ಕೊಳಗಾಗುತ್ತಿರುವುದು ಕಳವಳದ ಸಂಗತಿ. ತಂತ್ರಜ್ಞಾನಗಳು ಬದುಕನ್ನು ಸರಳೀಕರಿಸುವ ಬದಲಿಗೆ ಬದುಕಿನ ಅರ್ಥ ಮತ್ತು ಮೌಲ್ಯವನ್ನೂ ಸರಳೀಕರಿಸುತ್ತಿರುವುದು ಮತ್ತೂಂದು ಕಟುಸತ್ಯ.
— ಅರ್ಜುನ್ ಶೆಣೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.