ಟೆಕ್ಕಿಗಳ ಅಧ್ಯಾತ್ಮ: ಕೆಲಸ ತೊರೆದು ಆಫ್ಲೈನ್ ಆದವರು!
Team Udayavani, Jul 25, 2017, 11:25 AM IST
ಸಾಫ್ಟ್ವೇರ್ ಲೋಕದ ತುತ್ತ ತುದಿಯಲ್ಲೊಂದು ಅಧ್ಯಾತ್ಮವಿದೆ. ಹಾಗೆ ಅಧ್ಯಾತ್ಮದ ಬೆಳಕು ಕಂಡವರು, ಮರುದಿನ ಟೆಕ್ಕಿ ಆಗಿ ಇರುವುದಿಲ್ಲ! ಕಂಪ್ಯೂಟರ್ ಲಾಗ್‌ಔಟ್ ಆಗುತ್ತದೆ. ನೆಮ್ಮದಿಯ ತಾಣದತ್ತ ಮನಸ್ಸು ಜಿಗಿಯುತ್ತದೆ. ಆಫ್ಲೈನ್‌ಗೆ ಅಪ್ಪಿಕೊಳ್ಳುತ್ತಾರೆ. ಇಂಥ ಕೆಲವು ವಿರಾಗಿ ಟೆಕ್ಕಿಗಳ ಲೋಕದಲ್ಲಿ ಒಂದು ಸುತ್ತು…
ನ್ಯೂಟನ್ ಹೇಳದೇ ಬಿಟ್ಟ ನಾಲ್ಕನೇ “ಚಲನೆಯ ನಿಯಮ’ವನ್ನು ಆ್ಯಪಲ್ ದಿಗ್ಗಜ ಸ್ಟೀವ್ ಜಾಬ್ಸ್ ಹೀಗೆ ಹೇಳುತ್ತಾರೆ; “ಯಾವುದೇ ಜ್ಞಾನದ ತುತ್ತ ತುದಿಯಲ್ಲಿ ಅದಕ್ಕೆ ವಿರುದ್ಧವಾದ ಜ್ಞಾನದ ಆಕರ್ಷಣೆ ಇರುತ್ತೆ’! ಸ್ಟೀವ್ ಜಾಬ್ಸ್ಗೆ ಈ ಜ್ಞಾನೋದಯ ಆಗುವುದು ತಡವಾಗಿ. ಇನ್ನೇನು ಬದುಕಿಗೆ ತೆರೆಬಿತ್ತು ಅಂತೆನ್ನಿಸಿದಾಗ, ಆಸ್ಪತ್ರೆಯ ಬೆಡ್ಡಿನ ಮೇಲೆ ಬುದ್ಧನಂತೆ ಮಾತಾಡುತ್ತಾರೆ ಜಾಬ್ಸ್; “ಕಣ್ಣೆದುರು ಕತ್ತಲಿದೆ. ಕೃತಕ ಉಸಿರಾಟದ ಈ ಮಶೀನುಗಳಿಂದ ಹೊತ್ತಿಕೊಂಡ ಹಸಿರು ದೀಪ ಮತ್ತು ಗುಂಯ್‌ಗಾಟ್ಟುವ ಸದ್ದಿನಿಂದ ನನ್ನ ಸಾವು ನನ್ನನ್ನು ಆವರಿಸಿಕೊಳ್ಳುತ್ತಿರುವುದು ಕಾಣಿಸುತ್ತಿದೆ. ನನಗೀಗ ಅನ್ನಿಸುತ್ತಿದೆ; ಒಬ್ಬ ಮನುಷ್ಯ ಒಂದು ಕ್ಷೇತ್ರದಲ್ಲಿ ಒಂದು ಹಂತಕ್ಕೆ ಏರಿದ ಮೇಲೆ, ಹಣದ ಸಂಪಾದನೆಗೂ ಮೀರಿದ ಸಾಧನೆಗೆ ಇಳಿಯಬೇಕು. ಛೇ, ನಾನು ಅದನ್ನು ಮಾಡಬೇಕಿತ್ತು’!
ಇಲ್ಲಿ ಕೆಲವು ಟೆಕ್ಕಿಗಳಿಗೆ ಸ್ಟೀವ್ ಜಾಬ್ಸ್ನಂತೆ ಬೇಸರ ಮುತ್ತಿಕೊಳ್ಳುವುದಿಲ್ಲ. ಕಾರಣ, ಆ ಆ್ಯಪಲ್ ಮಹಾಶಯನಿಗೂ ಮೊದಲೇ ಇವರಲ್ಲಿ ಬದುಕಿನ ಸತ್ಯ ಫಳಕ್ಕನೆ ಬೆಳಗಿದೆ. ಸಿಇಟಿ ಬರೆದು, ರ್‍ಯಾಂಕ್ ಗಿಟ್ಟಿಸಿ, ಎಂಜಿನಿಯರಿಂಗ್ ಕಾಲೇಜಿನ ದುಬಾರಿ ಸೀಟಿಗೆ ಕಚೀìಫ್ ಇಟ್ಟು, ರಾತ್ರಿ ಬೆಳಗಾಗುವಂತೆ ಕನ್ನಡಕದ ಪಾಯಿಂಟ್ ಹೆಚ್ಚಿಸಿಕೊಳ್ಳುವ ಭರದಲ್ಲಿ ಓದಿ, ಸ್ಯಾನ್‌ಫ್ರಾನ್ಸಿಸ್ಕೋದ ಸಿಲಿಕಾನ್ ವ್ಯಾಲಿಯಲ್ಲಿ ಸೂಟ್ ಧರಿಸಿ- ಡಾಲರ್ ಎಣಿಸುವಂತೆ ಕನಸು ಕಂಡು, ಕೈತುಂಬಾ ಸಂಬಳ ಸಿಗುವ ಕಂಪನಿಗೆ ಸೇರಿ, ಹೆತ್ತವರ ಹರಕೆಗಳನ್ನು ತೀರಿಸುವ ಟೆಕ್ಕಿಗಳಿಗಿಂತ, ಭಿನ್ನ ದಾರಿಯಲ್ಲಿ ನಡೆಯಲು ಇವರು ಸಾದಾ ಹವಾಯಿ ಚಪ್ಪಲಿಯಲ್ಲಿ ನಿಂತಿರುತ್ತಾರೆ. ಆ ಹಾದಿಯ ನಡಿಗೆ ಸುಲಭದ್ದಲ್ಲ. ಹೋದಲ್ಲೆಲ್ಲ ಎ.ಸಿ.ಯ ಉಪಚಾರ ಇರುವುದಿಲ್ಲ. ಆದರೂ, ಆ ಕಲ್ಲು- ಮುಳ್ಳಿನ ಹಾದಿಯ ಪಯಣದ ರೋಚಕತೆ ಎದೆಗಿಳಿಸಿಕೊಳ್ಳಬೇಕು. ಅದಕ್ಕಾಗಿಯೇ, ದುಬಾರಿ ಸಂಬಳದ ಕೆಲಸವನ್ನು ಅವರು ತೊರೆಯುತ್ತಾರೆ.
“ಟೆಕ್ ಲೋಕದ ಅಧ್ಯಾತ್ಮ’ ರೂಪುಗೊಳ್ಳವುದು ಹೀಗೆ. ಬೇರೆಲ್ಲ ಕ್ಷೇತ್ರಗಳಿಗಿಂತ ಇತ್ತೀಚಿನ ದಿನಗಳಲ್ಲಿ ಸಾಫ್ಟ್ವೇರ್ ಕ್ಷೇತ್ರವನ್ನು ಹೆಚ್ಚು ಆವರಿಸುತ್ತಿರುವ ಈ ಶೂನ್ಯ ಭಾವ ಮತ್ತು ಅದರಾಚೆಯ ನೆಮ್ಮದಿಯ ಹುಡುಕಾಟದಲ್ಲಿ ಒಂದು ಜೋಶ್ ಕಾಣಿಸುತ್ತದೆ. ಕೆಲ್ಸಕ್ಕೆ ಗುಡ್ ಬೈ ಹೇಳುವವರ ಕೊನೆಯ ದಿನದ ಕಚೇರಿ ಡೈರಿಯೂ ಊಹೆಗೆ ಕಬ್ಬಿಣದ ಕಡಲೆಯೇ. ಬಾಸ್‌ಗೆ ರಾಜೀನಾಮೆ ರವಾನೆ ಆಗಿ, ಅದಾಗಲೇ ನೊಟೀಸ್ ಪೀರಿಯೆಡ್ ಮುಗಿದಿರುತ್ತೆ. ಕೊನೆಯ ಬಾರಿಗೆ ಫೇಸ್‌ಬುಕ್ ಅನ್ನು ನೋಡಿ, ಖಾತೆಯನ್ನು ಪರಮನೆಂಟಾಗಿ ಡಿಲೀಟ್ ಮಾಡುತ್ತಾರೆ ಕೆಲವರು. ಇಷ್ಟಪಟ್ಟು ಆನ್‌ಲೈನ್‌ನಲ್ಲಿ ಕಾಲುಬುಡಕ್ಕೆ ತರಿಸಿಕೊಂಡ ಐಫೋನನ್ನು ಗೆಳೆಯನಿಗೋ, ಪರಿಚಿತರಿಗೋ ನೀಡಿ, ಒಂದು ಸಾದಾ ಫೋನನ್ನು ಕಿಸೆಗೆ ತುಂಬಿಕೊಂಡು, ಹಗುರಾಗುತ್ತಾರೆ. ಬದುಕು ಆಫ್ಲೈನ್ ಆಗುತ್ತದೆ. ಬೆಂಗ್ಳೂರಲ್ಲಿ ರುಬ್ಬಿಸಿಕೊಂಡು ಹಿಟ್ಟಾಗಿದ್ದು ಸಾಕು, ಅದರಾಚೆಗೆ ಬದುಕಿ, ಯಾರ ಕಣ್ಣಿಗೂ ಬೀಳದೆ ಸೂಪರ್‌ಹಿಟ್ ಆಗೋಣ ಎನ್ನುತ್ತದೆ ಮನಸ್ಸು. ಮಹಾನಗರಕ್ಕೆ ಕೊನೆಯ ನಮಸ್ಕಾರ ಹಾಕಿ, ಐಟಿ ಜಗತ್ತಿಗೆ “ನಿನ್ನ ಋಣ ಮುಗಿಯಿತು’ ಎಂದು ಹೇಳುವಾಗ ಇವರ ಕಣ್ಣಲ್ಲಿ, ನೀರಾಗಲೀ, ಇನಿತು ಬೇಸರವಾಗಲಿ ಇಣುಕುವುದಿಲ್ಲ. ಹಣದಾಚೆಗಿನ ಹಣತೆಯೊಂದು ಹೊತ್ತಿಕೊಂಡು, ಬೆಳಗುತ್ತಿರುತ್ತದೆ. ಆ ಬೆಳಕಿನ ಪ್ರಖರತೆ ಎಷ್ಟೆಂಬುದನ್ನು ಒಮ್ಮೆ ನೋಡಿ…
ಮದ್ವೆಗೆ 15 ದಿನ ಇದ್ದಾಗ ರಾಜೀನಾಮೆ!
ದಂಪತಿಗೆ ಇದ್ದ ಸಂಬಳ: 2.25 ಲಕ್ಷ ರೂ.
ಈಗಿನ ಆದಾಯ: 25 ಸಾವಿರ ರೂ.
ಮಾಡ್ತಿರೋದು: ಆನೆ ಸಾಕಣೆ
ಇನ್ನು ಹದಿನೈದೇ ದಿನದಲ್ಲಿ ಮದ್ವೆ. ಬೆಂಗ್ಳೂರಿನ ಐಟಿ ಕಂಪನಿಯ ಕಂಪ್ಯೂಟರಿನಲ್ಲಿ ಹುಡುಗ ಕೆಲಸದಲ್ಲಿ ಮುಳುಗಿದ್ದ. ಇನ್ಫೋಸಿಸ್ ಕಂಪನಿಯಲ್ಲಿ ಕುಳಿತಿದ್ದ ಭಾವಿ ಪತ್ನಿ ಆನ್‌ಲೈನ್‌ನಲ್ಲಿ ಚಾಟಿಂಗ್ ಮಾಡುತ್ತಿದ್ದಾಳೆ. “ಹೀಗೇ ಇದ್ರೆ ಆಗೋಲ್ಲ. ಲೈಫಲ್ಲಿ ಏನಾದ್ರೂ ಮಾಡ್ಬೇಕು’ ಅಂತ ಹುಡುಗ ಟೈಪಿಸಿ ಕಳುಹಿಸಿದ್ದ. “ಬರೀ ಹೀಗೆ ಮಾತಾಡ್ತಿರೀ¤ರಾ… ಇಲ್ಲ ಏನಾದ್ರೂ ಮಾಡ್ತೀರಾ?’- ಹುಡುಗಿ ಖಡಕ್ಕಾಗಿ ರಿಪ್ಲೆ„ ಕೊಟ್ಟಳು. ಹುಡುಗ ಒಮ್ಮೆಲೆ ತಲೆ ಕೆರೆದುಕೊಂಡು, ಒಂದು ನಿರ್ಧಾರಕ್ಕೆ ಬಂದ. ಬಾಸ್‌ಗೆ ಇಮೇಲ್‌ನಲ್ಲಿ ರಾಜೀನಾಮೆ ಬರೆದು, “ಬಿಸಿಸಿ’ಯನ್ನು ಭಾವಿಪತ್ನಿಗೂ ಕಳುಹಿಸಿಬಿಟ್ಟ!
ಆಗ ಹುಡುಗಿ ಶಾಕ್! ತಕ್ಷಣ ಹುಡುಗನ ಮೊಬೈಲ್ ರಿಂಗಾಯಿತು. ಭಾವಿ ಪತ್ನಿಯ ಫೋನ್. “ಅರೆ, ಏನ್ಮಾಡಿºಟ್ರಿ?’ ಆಕೆಯ ಪ್ರಶ್ನೆ. “ನೀನೇ ಹೇಳಿದ್ಯಲ್ಲ, ಏನಾದ್ರೂ ಮಾಡು ಅಂತ. ಅದನ್ನು ಮಾಡೋ ಮುಂಚೆ ರಾಜೀನಾಮೆ ಕೊಟ್ಟೆ’ ಎಂದ ಹುಡುಗ. “ಮುಂದೆ ಏನ್ ಪ್ಲ್ರಾನ್ ಮಾಡಿದ್ದೀರಿ?’- ಆಕೆ ಕೇಳಿದಳು. “ಗೊತ್ತಿಲ್ಲ… ಏನೂ ಐಡಿಯಾ ಇಲ್ಲ’ ಎಂದ ಹುಡುಗ. ಹುಡುಗಿ ಥಟ್ಟನೆ ಫೋನಿಟ್ಟಳು.
ಇವೆಲ್ಲ ಆಗಿ, ಹತ್ತು ನಿಮಿಷವೂ ಕಳೆದಿರಲಿಲ್ಲ. ಹುಡುಗಿಯಿಂದ ಒಂದು ಇಮೇಲ್ ಬಂತು. ಅಲ್ಲಿ ಇನ್ಫೋಸಿಸ್ ಕೆಲ್ಸಕ್ಕೆ ಹುಡುಗಿಯೂ ರಾಜೀನಾಮೆ ಕೊಟ್ಟಿದ್ದಳು!
ಗೋವಿಂದ್ ಗೊರೂರು- ಶ್ವೇತಾ ಗೋವಿಂದ್ ಅವರ ಅಪರೂಪದ ಪ್ರೇಮ ಹೀಗೆ ಟೆಕ್ ಜಗತ್ತನ್ನು ಬಿಟ್ಟು ಕಾಡಿನಲ್ಲಿ ಟೇಕಪ್ ಆಗುತ್ತೆ. ನಾಲ್ಕು ವರುಷದ ಹಿಂದಿನ ಈ ಕಥೆಯನ್ನು ಗೋವಿಂದ್ ಹೇಳುವಾಗ, ಎಲ್ಲೋ ನೆಮ್ಮದಿಯ ಗೂಡಿನಿಂದ ಗುನುಗಿದ ಗುಬ್ಬಚ್ಚಿಯಂತೆ ಕಾಣಿಸುತ್ತದೆ ಅವರ ಬದುಕು. ವೀಕೆಂಡಿನಲ್ಲಿ ಟ್ರೆಕ್ಕಿಂಗ್ ಹೋಗುತ್ತಿದ್ದ ಇವರಿಬ್ಬರೂ ಪ್ರಕೃತಿಯ ಮೋಹಕ್ಕೆ ಶರಣಾದರಂತೆ. “ಬೆಳಗಾವಿ ಮೂಲದ ಶ್ವೇತಾ, ಬಾಲ್ಯದಲ್ಲಿಯೇ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ, ಪರಿಸರದ ಮೇಲೆ ಹುಚ್ಚು ಬೆಳೆಸಿಕೊಂಡಿದ್ದಳು. ಅವಳೇ ನನಗೆ ಸರಿಯಾದ ಜೋಡಿ ಎನಿಸಿತು’ ಎನ್ನುತ್ತಾರೆ ಗೋವಿಂದ್.
ಈ ಇಬ್ಬರು ನಿರುದ್ಯೋಗಿಗಳು ಮದ್ವೆಯಾಗಿ, ಹೊಸ ಬಾಳು ಕಟ್ಟಲು ಡೆಹ್ರಾಡೂನಿನ ಅಂಚಿನಲ್ಲಿರುವ ದುಧ್ವಾ ರಾಷ್ಟ್ರೀಯ ಅಭಯಾರಣ್ಯವನ್ನು ಸೇರುತ್ತಾರೆ. ಅಲ್ಲಿ ಹೆಸರಾಂತ ಪರಿಸರ ತಜ್ಞ ಬಿಲ್ಲಿ ಅರ್ಜನ್ ಸಿಂಗ್ ಅವರ ಮನೆಯ ಉಸ್ತುವಾರಿ ಜವಾಬ್ದಾರಿಯನ್ನು ಹೊತ್ತು, ದಿನವೂ ಹುಲಿ- ಚಿರತೆ- ಆನೆಗಳ ದರ್ಶನ ಮಾಡಿ, ಗರ್ಜನೆ ಕೇಳಿಸಿಕೊಂಡು ಧ್ಯಾನಸ್ಥರಾಗುತ್ತಾರೆ. ಬುಡಕಟ್ಟು ಜನರಿಗೆ ಅಕ್ಷರ ಕಲಿಸುತ್ತಾರೆ. ಅಲ್ಲಿಂದ ಮುಂದೆ ಕೆಲ ಕಾಲ ಹಿಮಾಚಲ ಪ್ರದೇಶದ ಹಳ್ಳಿಗಳತ್ತ ಸಾಗುವ ಇವರ ಬದುಕಿನ ಬಂಡಿ, ಈಗ ಪಾಂಡಿಚೇರಿಯಿಂದ 30 ಕಿ.ಮೀ. ದೂರದಲ್ಲಿರುವ “ಮರಕ್ಕಾಣಂ’ಗೆ ಬಂದು ನಿಂತಿದೆ. ಇಲ್ಲೀಗ ಈ ದಂಪತಿ, 3 ಆನೆಗಳನ್ನು ಸಾಕಿಕೊಂಡು ನಿಸರ್ಗದ ನಡುವೆ ನೆಮ್ಮದಿಯಿಂದಿದ್ದಾರೆ.
ನಿತ್ಯ ಆನೆಗಳಿಗೆ ಸ್ನಾನ, ಆಹಾರ, ಉಪಚಾರ ಮಾಡುವುದರಲ್ಲೇ ಬದುಕು ಕಳೆಯುತ್ತಿದೆ. ದಿನದಲ್ಲಿ ಒಂದೆರಡು ಬಾರಿಯಷ್ಟೇ ಮೊಬೈಲನ್ನು ಮುಟ್ಟಿ, ನಾವು- ನೀವೆಲ್ಲ ಇರುವ ಜಗತ್ತಿನಲ್ಲಿ ಕಾಣಿಸಿಕೊಳ್ಳುತ್ತಾರಷ್ಟೇ. “ಕಂಪ್ಯೂಟರುಗಳ ನಡುವೆ ಉಸಿರಾಡುವುದಕ್ಕಿಂತ, ಇಲ್ಲಿನ ಹಸಿರು, ಪ್ರಾಣಿ- ಪಕ್ಷಿಗಳ ನಡುವೆ ಮಾತನಾಡುವುದರಲ್ಲಿ ಸಿಗುವ ಸುಖ ಹೆಚ್ಚು’ ಎನ್ನುತ್ತಾರೆ ಗೋವಿಂದ್.
ಪುಣ್ಯಕೋಟಿ ಜತೆ ಕೋಟ್ಯಾನ್
ಆಗ ಇದ್ದ ಸಂಬಳ: 2.10 ಲಕ್ಷ ರೂ.
ಈಗಿನ ಆದಾಯ: 60 ಸಾವಿರ ರೂ.
ಮಾಡ್ತಿರೋದು: ಕೃಷಿ, ಹೈನುಗಾರಿಕೆ
ಅಮೆರಿಕ, ಜರ್ಮನಿ, ಫ್ರಾನ್ಸ್, ಆಸ್ಟ್ರೇಲಿಯಾ, ಜಪಾನ್… ಹೀಗೆ ಹದಿನೈದು- ಇಪ್ಪತ್ತು ದೇಶಗಳ ಪಟ್ಟಿ ಕೊಡುತ್ತಾ ಹೋಗುತ್ತಾರೆ ಶಂಕರ್ ಕೋಟ್ಯಾನ್. ಇಪತ್ತು ವರುಷಗಳ ಹಿಂದೆ ಇನ್ಫೋಸಿಸ್‌ನಲ್ಲಿ ಎಂಜಿನಿಯರ್ ಆಗಿದ್ದಾಗ ಅವರು ಈ ದೇಶದಲ್ಲೆಲ್ಲ ಕೆಲಸ ಮಾಡಿದ ಅವರ ಅನುಭವ ದೊಡ್ಡದು. 2012ರಲ್ಲಿ ಎಂಜಿನಿಯರ್ ಕೆಲಸಕ್ಕೆ ರಾಜೀನಾಮೆ ಕೊಟ್ಟು, ಅವ ಬಂದು ನೆಲೆನಿಂತಿದ್ದು ಮೂಡುಬಿದರೆ ಸಮೀಪದ ಮೂಡುಕೊಣಜೆಯಲ್ಲಿ. ಇಲ್ಲೀಗ ಅವರು ರೈತ!
“ಜಯನಗರದಿಂದ ಎಲೆಕ್ಟ್ರಾನಿಕ್ ಸಿಟಿಗೆ ಡ್ನೂಟಿಗೆ ಹೋಗುವಾಗ 4 ತಾಸು ಸಮಯ ಟ್ರಾಫಿಕ್ಕಿನಲ್ಲಿಯೇ ಕರಗುತ್ತಿತ್ತು. ಈಗ ನನ್ನ ಹಳ್ಳಿಯಲ್ಲಿ ಆ ಟ್ರಾಫಿಕ್ ಇಲ್ಲ. ಟ್ರಾಫಿಕ್ ಆಗಬೇಕಾದರೆ, ಜೋರು ಮಳೆ ಬಂದು, ನಡು ರಸ್ತೆಯಲ್ಲಿ ಮರ ಬೀಳಬೇಕಷ್ಟೇ’ ಎನ್ನುತ್ತಾರೆ ಶಂಕರ್! ಅವರ ಹೊಲಕ್ಕೆ ಮೂರು ಕಿ.ಮೀ. ವರೆಗೆ ಮಣ್ಣಿನ ರಸ್ತೆಯಲ್ಲಿಯೇ ಸಾಗಬೇಕು. ಈ ಕಿರುಪ್ರಯಾಣ ಅವರಿಗೆಂದೂ ಆಯಾಸ ತಂದಿಲ್ಲವಂತೆ.
“ಸಾಫ್ಟ್ವೇರ್ ಹುದ್ದೆಯ ಆರಂಭದಲ್ಲಿ ಒಂದು ಸ್ಪಿರಿಟ್ ಇರುತ್ತದೆ. ಮೂರು ವರುಷದ ತನಕ ಎಲ್ಲರಲ್ಲೂ ಆ ಸ್ಪಿರಿಟ್ ಇರುತ್ತದೆ. ನಂತರ ಅದೇ ಕೆಲಸ ರೊಟೀನ್ ಅಂತ ಅನ್ನಿಸುತ್ತದೆ’ ಎನ್ನುವುದು ಕೋಟ್ಯಾನ್ ಮಾತು. “ಈ ಕೆಲ್ಸದಲ್ಲಿಯೇ ರಿಟೈರ್ ಆಗ್ಬೇಕಾ? ಜೀವನ ಅಂದ್ರೆ ಇಷ್ಟೇನಾ?’ ಅಂತನ್ನಿಸಿದಾಗ ಶಂಕರ್, ತಮ್ಮ ಕಂಪ್ಯೂಟರನ್ನು ಶಟ್‌ಡೌನ್ ಮಾಡಿದ್ದಾರೆ. ಈ ಕುಗ್ರಾಮಕ್ಕೆ ಬಂದು 25 ಎಕರೆ ಜಮೀನು ಖರೀದಿಸಿ, ಸಾವಯವ ಕೃಷಿ ಆರಂಭಿಸಿದ್ದಾರೆ.
ಕೃಷಿಯ ಆರಂಭದಲ್ಲಿ ಆದಾಯ ಹುಟ್ಟುವುದಿಲ್ಲ. ಆ ಸತ್ಯ ಗೊತ್ತಿದ್ದೂ, ಕೃಷಿಯ ಅನುಭವ ಇಲ್ಲದ ಶಂಕರ್ ಈ ಸಾಹಸಕ್ಕೆ ಇಳಿದಿದ್ದರು. ಒಂದು ಡೈರಿ ಫಾರ್ಮ್ ಅನ್ನೂ ಮಾಡಿದ್ದಾರೆ.
ಟೆಕ್ಕಿ ಬಿಡಿಸಿದ ಚುಕ್ಕಿ
ಹುಡುಗ್ರೂ ರಂಗೋಲಿ ಇಡ್ತಾರಾ? ಹ್ಞುಂ!!!
ಚುಕ್ಕಿಗಳ ನಡುವೆ ಬದುಕು ಕಟ್ಟಿಕೊಂಡ ಅಪರೂಪದ ಪ್ರತಿಭೆ ಮಹೇಶ್ ರಾವ್. ಉಡುಪಿಯ ಕೃಷ್ಣ ಮಠದಲ್ಲಿ ಈತ ರಂಗೋಲಿ ಬಿಡಿಸುತ್ತಿದ್ದರೆ, ಅಲ್ಲಿಯೇ ನಿಂತ ಹೆಣ್ಮಕ್ಕಳು ನಿಬ್ಬೆರಗಿನ ದೃಷ್ಟಿ ಬೀರುತ್ತಿರುತ್ತಾರೆ. “ನಂಗೆ ಈ ಥರ ರಂಗೋಲಿ ಬಿಡೊÕàಕೇ ಬರೋಲ್ವಲ್ಲ’ ಅಂತ ಕೆಲವರು ಹೊಟ್ಟೆಕಿಚ್ಚು ಪಡುತ್ತಾರೆ. ಮತ್ತೆ ಕೆಲವು ಹುಡುಗಿಯರು, ಈತ ರಂಗೋಲಿ ಬಿಡಿಸಿ, ಮುಗಿಸೋದನ್ನೇ ಕಾಯುತ್ತಿರುತ್ತಾರೆ. ಅದು ಕೇವಲ ಸೆಲ್ಫಿಗಾಗಿ!
ರಂಗೋಲಿ ಎನ್ನುವುದು ಪುರಾಣದಿಂದ ಇಲ್ಲಿಯತನಕ ಹೆಣ್ಮಕ್ಕಳ ಕಲೆ ಎಂದು ನಂಬಿರುವ ನಮಗೆಲ್ಲ ಈತನೊಬ್ಬ ಅಚ್ಚರಿ. ಎಂಜಿನಿಯರಿಂಗ್ ಮುಗಿಸಿ, ಅದರ ಮೇಲೆ ಎಂಬಿಎ ಪದವಿಯನ್ನೂ ಮಾಡಿಕೊಂಡ ಮಹೇಶ್ ರಾವ್ ಈಗ ಸಂಪೂರ್ಣವಾಗಿ ರಂಗೋಲಿ ಚಿತ್ರಕಾರ. ಉಡುಪಿಯ ಕೃಷ್ಣ ಮಠದಲ್ಲಿ ನಿತ್ಯ ನಡೆಯುವ ರಥೋತ್ಸವಕ್ಕೆ ಈತನದ್ದೇ ರಂಗೋಲಿಯ ಚಿತ್ತಾರ.
ಎಂಟನೇ ಕ್ಲಾಸಿನಲ್ಲಿದ್ದಾಗ ಈತ ಅಕ್ಕನೊಂದಿಗೆ ಒಂದು ರಂಗೋಲಿ ಸ್ಪರ್ಧೆಗೆ ಹೋಗಿದ್ದನಂತೆ. ಈತನೂ ಅಲ್ಲಿ ಪಾಲ್ಗೊಂಡು, ಒಂದು ರಂಗೋಲಿ ಬಿಡಿಸಿದ. ಆದರೆ, ಅದು ಅಷ್ಟು ಚೆನ್ನಾಗಿ ಮೂಡಿಬಂದಿರಲಿಲ್ಲ. ಅಲ್ಲಿದ್ದವರೆಲ್ಲ, ಈ ಹುಡುಗನನ್ನೇ ನೋಡುತ್ತಾ, ಈತ ಬಿಡಿಸಿದ ರಂಗೋಲಿಯತ್ತ ಕೈತೋರಿಸುತ್ತಾ ನಗುತ್ತಿದ್ದರಂತೆ. ಆ ಪ್ರಸಂಗವನ್ನೇ ಸವಾಲಾಗಿ ಸ್ವೀಕರಿಸಿದ ಮಹೇಶ್ ರಾವ್ ಇಂದು ರಂಗೋಲಿಯಲ್ಲಿಯೇ ರಾಷ್ಟ್ರಮಟ್ಟದ ಚಿನ್ನದ ಪದಕವನ್ನು ಗೆದ್ದಿದ್ದಾರೆ. ಧರ್ಮಸ್ಥಳದಲ್ಲಿ ರಂಗೋಲಿ ಬಿಡಿಸಿ, ಧರ್ಮಕರ್ತ ಡಾ. ವಿರೇಂದ್ರ ಹೆಗ್ಗಡೆಯವರ ಮನಗೆದ್ದಿದ್ದಾರೆ. ಶೃಂಗೇರಿಯಲ್ಲಿ 22 ತಾಸು ರಂಗೋಲಿ ಚಿತ್ರಿಸಿದ ಸಾಧನೆಯೂ ಇವರ ಬೆನ್ನಿಗಿದೆ.
ಅಂದಹಾಗೆ, ಮಹೇಶ್ ಫೇಸ್‌ಬುಕ್ ಇಂದಿಗೂ ಬಳಸುತ್ತಿಲ್ಲ. ಉಡುಪಿಯಲ್ಲಿ ನಿತ್ಯ ರಂಗೋಲಿ ತರಗತಿ ನಡೆಸುವ ಮಹೇಶ್, ಹುಡುಗರಿಗೂ ಈ ಕಲೆಯನ್ನು ಕಲಿಸುತ್ತಿದ್ದಾರೆ.
ಕೀರ್ತಿ ಕೋಲ್ಗಾರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.