ಮರಕ್ಕೆ ಕಲ್ಲು ಹೊಡೆದು ಕೀಟ ಹಿಡ್ಯೋದೇ ಕೆಲ್ಸ!
Team Udayavani, Nov 6, 2018, 4:00 AM IST
ಅಪ್ಪ ಅಮ್ಮ ಹೊಲದಲ್ಲಿ ದುಡಿಯುತ್ತಿದ್ದರೆ, ನಾನು ಗಿರಿಜಿಂಬೆಗಾಗಿ ಹುಡುಕಾಡುತ್ತಿದ್ದೆ. ಗಿರಿಜಿಂಬೆ ಸಿಕ್ಕರೆ ಅದನ್ನು ಬಂಧಿಸಿ ಸಾಯಂಕಾಲ ಮನೆಗೆ ತರುತ್ತಿದ್ದೆ. ಗೆಳೆಯರಿಗೆಲ್ಲ ಅದರ ಶಬ್ದ, ಬಣ್ಣ, ಹಾರುವ ಪರಿಯನ್ನು ಕಂಡು ಆನಂದವಾಗುತ್ತಿತ್ತು.
ನಾನಾಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದೆ. ಆಗ ಅಪ್ಪ-ಅಮ್ಮ ಬೆಳಗ್ಗೆ ಬೇಗ ಎದ್ದು, ನಮಗೆ ಉಪಾಹಾರ ಮಾಡಿ ಕೊಟ್ಟು, ಹೊಲಕ್ಕೆ ಹೋಗುತ್ತಿದ್ದರು. ಶಾಲೆಗೆ ರಜಾ ಸಿಕ್ಕರೆ ನನಗೆ ಖುಷಿಯೋ ಖುಷಿ. ಅಪ್ಪ ಅಮ್ಮನ ಜೊತೆ ಹೊಲಕ್ಕೆ ಹೋಗಬಹುದಲ್ಲ ಎಂದು. ಅವರು ಹೊಲದಲ್ಲಿ ಕೆಲಸ ಮಾಡುತ್ತಿದ್ದರೆ, ನಾನು ನನ್ನದೇ ಲೋಕದಲ್ಲಿರುತ್ತಿದ್ದೆ.
ಜಮೀನಿನ ಬದುವಿನ ಮೇಲಿದ್ದ ಮರದ ಕೊಂಬೆಗಳನ್ನು ಸೂಕ್ಷ್ಮವಾಗಿ ಹುಡುಕಾಡಿ, ಗಿರಿಜಿಂಬೆ ಕೀಟಗಳನ್ನು ಹಿಡಿಯುತ್ತಿದ್ದೆ. ಗಿರಿಜಿಂಬೆಗಳು, ಮುಳ್ಳಿನ ಮರದ ಎಲೆಗಳನ್ನು ಕಾಲಿನಲ್ಲಿ ಹಿಡಿದು ಕುಳಿತಿರುತ್ತಿದ್ದವು. ಮುಳ್ಳಿನ ಮರ ಹತ್ತಲಾಗದಿದ್ದರಿಂದ, ಗಿರಿಜಿಂಬೆ ಕುಳಿತಿದ್ದ ಕೊಂಬೆಗೆ ಕಲ್ಲು ಎಸೆಯುತ್ತಿದ್ದೆ. ಮೂರ್ನಾಲ್ಕು ಕಲ್ಲುಗಳಲ್ಲಿ ಯಾವುದಾದರೊಂದು ಕಲ್ಲು ಕೊಂಬೆಗೆ ಬಿದ್ದರೂ ಗಿರಿಜಿಂಬೆ ನೆಲಕ್ಕೆ ಬೀಳುತ್ತಿತ್ತು. ಆಗ ಅದನ್ನು ಹಿಡಿದು ಕೊರಳಿಗೆ ದಾರ ಕಟ್ಟಿಬಿಡುತ್ತಿದ್ದೆ.
ಆ ದಾರದ ತುದಿಯನ್ನು ಹಿಡಿದರೆ, ಅದು ನನ್ನಿಂದ ತಪ್ಪಿಸಿಕೊಳ್ಳಲು, ನುಣುಪಾಗಿದ್ದ ಹಸಿರು ರೆಕ್ಕೆಗಳನ್ನು ಆಗಲಿಸಿ ಹಾರಿಹೋಗಲು ಪ್ರಯತ್ನಿಸುತ್ತಿತ್ತು. ಅದರೆ ದಾರ ಸ್ವಲ್ಪವೇ ಉದ್ದವಿದ್ದುದರಿಂದ ಗಿರ್ ಗಿರ್… ಎಂದು ಶಬ್ದ ಮಾಡುತ್ತಾ ಕೈ ಸುತ್ತ ಹಾರುತ್ತಾ, ನನ್ನ ಮೇಲೆ ಕುಳಿತುಕೊಳ್ಳುತ್ತಿತ್ತು. ಆ ಶಬ್ದ ಕೇಳಲೇ ಏನೋ ಖುಷಿ. ನಂತರ ಅದಕ್ಕೆ ಬೇಕಾಗುವ ಆಹಾರ ಸಂಗ್ರಹಿಸಬೇಕಿತ್ತು.
ಗಿರಿಜಿಂಬೆ ಇದ್ದ ಮರದಲ್ಲಿಯೇ, ಜೋತು ಬಿದ್ದ ಕೊಂಬೆಗಳಿಂದ ಎಲೆಗಳನ್ನು ಕಿತ್ತುಕೊಂಡು ಒಂದು ಕೈಯಲ್ಲಿ ಗಿರಿಜಿಂಬೆ ಮತ್ತೂಂದು ಕೈಯಲ್ಲಿ ಎಲೆ ಹಿಡಿದು ಖಾಲಿ ಬೆಂಕಿಪೊಟ್ಟಣಕ್ಕೆ ಹುಡುಕಾಡುತ್ತಿದ್ದೆ. ಬೆಂಕಿಪೊಟ್ಟಣ ಸಿಕ್ಕರೆ ಅದರೊಳಗೆ ಗಿರಿಜಿಂಬೆ ಮತ್ತು ಮರದ ಎಲೆಯನ್ನು ಹಾಕಿ ಮುಚ್ಚಿ ಜೇಬಿನಲ್ಲಿ ಹಾಕಿಕೊಳ್ಳುತ್ತಿದ್ದೆ. ಸಾಯಂಕಾಲ ಅಪ್ಪ ಅಮ್ಮನ ಜೊತೆ ಜಮೀನಿನಿಂದ ಮನೆಗೆ ಬಂದೊಡನೆ, ಅಕ್ಕಪಕ್ಕದ ಗೆಳೆಯರಿಗೆಲ್ಲ ಅದನ್ನು ತೋರಿಸುತ್ತಿದ್ದೆ.
ಅವರೂ ಅಚ್ಚರಿಯಿಂದ, ಗಿರ್..ಗಿರ್ ಶಬ್ದ ಕೇಳಿ ಖುಷಿಪಡುತ್ತಿದ್ದರು. ಪಾಪ, ನಮಗೆ ಖುಷಿಯಾದರೆ, ಅದಕ್ಕೆ ಹಿಂಸೆ ಆಗುತ್ತಿತ್ತು. ಅದನ್ನೆಲ್ಲ ಅರ್ಥ ಮಾಡಿಕೊಳ್ಳುವ ವಯಸ್ಸಾಗಿರಲಿಲ್ಲ ನನ್ನದು. ಗಿರಿಜಿಂಬೆಯ ತಲೆಯ ಭಾಗ ಕಂದು ಬಣ್ಣವಾದರೆ, ಹಿಂಭಾಗ ಹಸಿರು ಬಣ್ಣದಿಂದ ಮಿಂಚುತ್ತಿತ್ತು. ರಾತ್ರಿ, ಹೊಲದಿಂದ ತಂದಿದ್ದ ಎಲೆಯ ಜೊತೆಗೆ ಅದನ್ನು ಮತ್ತೆ ಬೆಂಕಿಪೊಟ್ಟಣದಲ್ಲಿ ಹಾಕಿ ಮುಚ್ಚಿಡುತ್ತಿದ್ದೆ.
ಬೆಳಗ್ಗೆ ಎದ್ದು ಬೆಂಕಿಪೊಟ್ಟಣ ತೆರೆದು ನೋಡಿದರೆ, ಅದಕ್ಕೆ ಹಾಕಿದ್ದ ಮರದ ಎಲೆಗಳನ್ನು ಒಂದು ಚೂರೂ ಅದು ತಿಂದಿರುತ್ತಿರಲಿಲ್ಲ. ಕೊನೆಗೆ, ಗಿರಿಜಿಂಬೆಯನ್ನು ಹೊರ ತೆಗೆದು ದಾರದ ತುದಿಯನ್ನು ಹಿಡಿದು ಹಾರಾಡಲೆಂದು ಬಿಡುತ್ತಿದ್ದೆ. ಮೊದಲಿನಂತೆ ಅದಕ್ಕೆ ಹಾರಲಾಗುತ್ತಿರಲಿಲ್ಲ. ಬದಲಿಗೆ ಕಟ್ಟಿದ್ದ ದಾರದಲ್ಲಿ ನೇತಾಡುತ್ತಿತ್ತು. ಪಾಪ, ಅದಕ್ಕೆ ಸುಸ್ತಾಗಿರಬಹುದೇನೋ ಅಂತನಿಸಿ, ಮನೆಯ ಸುತ್ತ ಇದ್ದ ಯಾವುದಾದರೊಂದು ಗಿಡದ ಎಲೆಯ ಮೇಲೆ ಬಿಟ್ಟು ಬಿಡುತ್ತಿದ್ದೆ. ಸ್ವಲ್ಪ ಸಮಯದ ನಂತರ ಹೋಗಿ ನೋಡಿದರೆ ಅಲ್ಲಿ ಗಿರಿಜಿಂಬೆ ಇರುತ್ತಿರಲಿಲ್ಲ.
* ಸಣ್ಣಮಾರಪ್ಪ, ದೇವರಹಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್
Mysuru: ಕೋವಿಡ್ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್.ಮಂಜುನಾಥ್
Inquiry Report: ಬಿಜೆಪಿಗೆ ’40 ಪರ್ಸೆಂಟ್’ ಕ್ಲೀನ್‌ಚಿಟ್ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್
Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್ ಪರಾರಿ!
Leopard Attack: ನೆಲಮಂಗಲ ಸಮೀಪ ಚಿರತೆ ದಾಳಿಗೆ ರೈತ ಮಹಿಳೆ ಬಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.