ಚಕ್ಕರ್‌ವ್ಯೂಹದ ಕಥೆಗಳು
Team Udayavani, May 29, 2018, 1:40 PM IST
ಪಠ್ಯ ಬದಲಾಗಿದೆ; ಮೇಷ್ಟ್ರು ಹೈಟೆಕ್ ಆಗಿದ್ದಾರೆ; ಶಾಲೆ ಮಾಡರ್ನ್ ಆಗಿದೆ. ಆದರೆ, ಶಾಲೆಯ ಶುರುವಿನಲ್ಲಿನ ಈ ಚಕ್ಕರ್ ಸಂಸ್ಕೃತಿ ಕಾಲ ಸರಿದರೂ ಬದಲಾಗಿಲ್ಲ. ಎರಡು ತಿಂಗಳ ವಿರಾಮದ ಬಳಿಕ ಢಣಢಣ ಗಂಟೆ ಬಾರಿಸಿದೆ, ಶಾಲೆಯ ಬಾಗಿಲು ತೆರೆದುಕೊಂಡಿದೆ. ಇಷ್ಟು ದಿನ ರಜೆಯಲ್ಲಿ ಪರಮಾನಂದದಿ ತೇಲಿದ ಕೆಲವು ಮಕ್ಕಳಿಗೆ ಶಾಲೆಗೆ ಹೋಗಲು ಯಾಕೋ ಮನಸ್ಸಿಲ್ಲ. ಚಕ್ಕರ್ ಹೊಡೆಯಲು ಕ್ರಿಯೇಟಿವ್ ನೆಪಗಳನ್ನು ಸಂಶೋಧಿಸುವವರಿಗೂ ಕಡಿಮೆಯಿಲ್ಲ. ಅಂದು ಬಾಲ್ಯದ ದಿನಗಳಲ್ಲಿ ಹೀಗೆಯೇ ಚಕ್ಕರ್ ಹಾಕಿದ ಹುಡುಗರು, ಆ ಮನಃಸ್ಥಿತಿಯನ್ನು ಮೀರಿ, ಮುಂದೆ ಒಳ್ಳೇ ಹುಡುಗರಾಗಿ ಈಗ ಸಮಾಜದೆದುರು ನಿಂತಿದ್ದಾರೆ. ತಾವು ಚಕ್ಕರ್‌ವ್ಯೂಹವನ್ನು ಭೇದಿಸಿದ ಸ್ವಾರಸ್ಯಕರ ಪ್ರಸಂಗಗಳನ್ನು ಜೋಶ್ ಜತೆ ಹಂಚಿಕೊಂಡಿದ್ದಾರೆ…
– – –
ಎಲ್ಲಿಗೆ ಹೊಂಟೀಯಾ ಚಿಗವ್ವ?
ಮಳೆಗಾಲದಲ್ಲಿ ಶಾಲೆ ಶುರುವಾಗುವ ಸಂದರ್ಭದಲ್ಲಿ ನಮ್ಮ ಕಡೆ ಮಲ್ಲಿಗೆ ಮೊಗ್ಗಿನ ಸೀಸನ್ ಭಾರಿ ಜೋರು. ನಾನು ಮೇಲಿಂದ ಮೇಲೆ ಶಾಲೆ ತಪ್ಪಿಸುತ್ತಿದ್ದುದು ಒಂದೇ ಕಾರಣಕ್ಕೆ. ಅದು ಹೂವಿನ ತೋಟಗಳಿಗೆ ಹೋಗಿ ಹೂವು ತರುವುದಕ್ಕಾಗಿ ಮತ್ತು ಅಮ್ಮನಿಗೆ ಹೂವು ಕಟ್ಟುವುದಕ್ಕೆ ಸಹಾಯ ಮಾಡಲು. ಒಂದಿನ ಅವ್ವಗ ಹೂವಿನ ಕುಚ್ಚದ ಮೂಟೆ ಕೊಟ್ಟುಬರಲೆಂದು ಶಾಲೆ ತಪ್ಪಿಸಿಕೊಂಡು ಬಸ್ ಸ್ಟಾÂಂಡ್‌ನಲ್ಲಿ ಬಸ್‌ಗೆ ಕಾಯ್ತಾ ಇ¨ªೆ. ಆಗ ನನ್ನ ಪಾಠೀ ಚೀಲ ಶಾಲೆಯಲ್ಲಿತ್ತು. ಗುರುಗಳಿಗೆ ನಾನು ಹೋಗಿರುವುದು ಗೊತ್ತಾಗದಿರಲಿ ಅಂತ ಈ ಏರ್ಪಾಡು. ಆದರೆ, ನನ್ನ ದುರಾದೃಷ್ಟಕ್ಕೆ ಬಸ್‌ಸ್ಟಾÂಂಡ್‌ನಲ್ಲಿ ನಿಂತಿ¨ªಾಗ ದಿಢೀರನೇ ಮುಖ್ಯ ಗುರುಗಳು ದಾಸರ ಗುರುಗಳು ಪ್ರತ್ಯಕ್ಷವಾಗಿಬಿಟ್ರಾ. ಅವರನ್ನು ನೋಡಿ ಹೆದರಿ ನೋಡಿಲ್ಲವೇನೋ ಅನ್ನುವ ಹಾಗೆ ತಿರುಗಿ ಕುಳಿತೆ. ಗುರುಗಳು ಹತ್ತಿರವೇ ಬಂದ್ರು. ಇನ್ನೇನು ನನ್ನನ್ನು ಶಾಲೆಗೆ ಬರಬ್ಯಾಡ ಇನ್ನು ಅಂತ ಹೊರಹಾಕುವರೇನೋ ಅಂತ ನಡುಗತೊಡಗಿದೆ. ಆದರೆ, ಗುರುಗಳು ಹತ್ತಿರ ಬಂದು “ಎಲ್ಲಿಗೆ ಹೊಂಟೀಯಾ ಚಿಗವ್ವ?’ ಅಂದ್ರು. ಅವರು ಪ್ರೀತಿಯಿಂದ ಮಕ್ಕಳಿಗೆ ಚಿಗವ್ವ, ಅತ್ತೆ, ದೊಡ್ಡವ್ವಾಂತಿದ್ರು. ನನಗೆ ಸುಳ್ಳು ಹೇಳಲು ಮನಸ್ಸು ಬರಲಿಲ್ಲ. “ಅವ್ವಗ ಹೂವು ಕೊಟ್ಟು ಬರಾಕ ಹೊಂಟೀನ್ರಿ ಮಾಸ್ತರ’ ಅಂದೆ. ಅವರು ತಲೆ ನೇವರಿಸಿ ಹೋಗು ಅಂದ್ರು. ಅವತ್ತಿಂದ ಶಾಲೆ ತಪ್ಪಿಸಿದಾಗ ಏನೂ ಕೇಳುತ್ತಿರಲಿಲ್ಲ.
ಅದು ಬಿಟ್ಟರೆ ಶಾಲೆಗೆ ಚಕ್ಕರ್ ಹಾಕುತ್ತಿದ್ದಿದ್ದು ತೋಟಕ್ಕೆ ಲಗ್ಗೆ ಇಡಲು. ನಾನು, ತಂಗಿ , ಗೆಳತಿಯರಾದ ಜಯಶ್ರೀ, ನಂದಾ, ಹೇಮಾವತಿ, ಕುಮ್ಮಕ್ಕನ ನೇತೃತ್ವದಲ್ಲಿ ಕನ್ನೇರಬಾವಿಯ ತೋಟಕ್ಕೆ ಹೋಗಿ ಬಿಡ್ತಿದ್ವಿ. ಅಲ್ಲಿ ಒಗರು ಹಣ್ಣು, ಚಳ್ಳಹಣ್ಣು, ಸೇಂಗಾ ಇತ್ಯಾದಿಗಳ ಆಕರ್ಷಣೆ ಸೆಳೆಯುತ್ತಿತ್ತು. ಒಬ್ಬೊಬ್ಬರೂ ಹುಣಸೆ ಹಣ್ಣು , ಬೆಳ್ಳುಳ್ಳಿ, ಜೀರಿಗೆ, ಬೆಲ್ಲ, ಉಪ್ಪು, ಹುಂಚಿಹಣ್ಣು ಮುಂತಾದವನ್ನು ಜಬರದಸ್ತಾಗಿ ಹಂಚಿಕೊಳ್ಳುತ್ತಿದ್ವಿ. ಈಗ ನಾನು ಟೀಚರ್ ಆಗೀನಿ. ಮಕ್ಕಳು ಶಾಲೆ ಸುಳ್ಳು ಹೇಳಿ ಚಕ್ಕರ್ ಹಾಕಿದರೆ ಬೇಗ ಗೊತ್ತಾಗ್ತದ. ಗೊತ್ತಾಗಿಯೂ ಕೆಲವೊಮ್ಮೆ ಸುಮ್ಮನಿರುತ್ತೇನೆ, ಹೊಡೆಯುವುದಿಲ್ಲ. ಮುಂದಿನ ಬಾರಿ ಅದು ರಿಪೀಟ್ ಆಗದಂತೆ ಮಾಡಲು ಪ್ರಯತ್ನಿಸುವೆ.
– ಸಾವಿತ್ರಿ ಹಟ್ಟಿ, ಗದಗ
– – –
ತಿಂಡಿ ಊಟ ಎಂಥ ಬ್ಯಾಡ…
ಎಲ್ಲಾ ಮಕ್ಕಳಂತೆ ನನ್ನನ್ನು ಪೆಡಂಭೂತದಂತೆ ಕಾಡುತ್ತಿದ್ದಿದ್ದು ಹೋಂ ವರ್ಕು. ನನ್ನನ್ನು ಚಕ್ಕರ್ ಹಾಕುವಂತೆ ಪ್ರೇರೇಪಿಸುತ್ತಿದ್ದಿದ್ದೇ ಟೀಚರ್‌ಗಳು ದಂಡಿಯಾಗಿ ಕೊಡುತ್ತಿದ್ದ ಹೋಂವರ್ಕುಗಳು. ಒನ್ ಗುಡ್ ಮಾರ್ನಿಂಗ್ ಹಾಸಿಗೆಯಿಂದ ಎದ್ದೆ. ಎದ್ದು ಹಲ್ಲುಜ್ಜಲು ಹೋಗುವಾಗಲೇ ಬರಸಿಡಿಲು ಎರಗಿತ್ತು! ಏನೂ ಅಂತೀರಾ ಆ ದಿನ ಮಾಡಲೇಬೇಕು ಎಂದು ಹೇಳಿದ್ದ ಹೋಂ ವರ್ಕನ್ನು ನಾನು ಮಾಡಿಯೇ ಇರಲಿಲ್ಲ. ಏನಪ್ಪಾ ಮಾಡೋದು ಅಂತ ಶುರುವಾಯಿತು ತಲೆನೋವು. ಐಡಿಯಾ ಹೊಳೆಯಿತು. ತಲೆಯಲ್ಲಿದ್ದ ನೋವು ಹೊಟ್ಟೆಗೆ ಶಿಫ್ಟ್ ಆಯ್ತು. ಹೊಟ್ಟೆ ನೋವು ಅಂತ ಒಂದೇ ವರಾತ ನಂದು. ಅಮ್ಮನಿಗೆ ನೋಡಲಾಗದೆ ಆಯ್ತು, ಹೊಟ್ಟೆ ನೋವು ಅಂತೀಯ, ಏನೂ ತಿನ್ಬೇಡ ಅಂದಳು. ಆ ದಿನದ ಕ್ಲಾಸು ತಪ್ಪಿಸಿಕೊಳ್ಳಲು ಯಾವ ತ್ಯಾಗಕ್ಕೂ ಸಿದ್ಧನಿದ್ದೆ ಇನ್ನು ಒಂದಿನದ ಬ್ರೇಕ್‌ಫಾಸ್ಟ್ ತ್ಯಾಗದ ಬಗ್ಗೆ ತಲೆ ಕೆಡಿಸಿಕೊಳ್ಳುತ್ತೀನಾ? ಹೀಗೆ ಒಂದು ಚಕ್ಕರ್‌ಗಾಗಿ ಬ್ರೇಕ್‌ಫಾಸ್ಟ್ ಅನ್ನು ತ್ಯಾಗ ಮಾಡಿದ್ದೆ. ನನ್ನ ಪುಟ್ಟ ಮಗ ಮುಂದೆ ಶಾಲೆಗೆ ಸೇರಿದಾಗ ಯಾವ ಐಡಿಯಾ ಕಂಡುಕೊಳ್ಳುತ್ತಾನೆ ಅನ್ನೋ ಕುತೂಹಲವಿದೆ!
– ಸುಜಿತ್ ವೆಂಕಟರಾಮಯ್ಯ, ಬೆಂಗಳೂರು
– – –
ತಂಗಿ ಚಕ್ಕರ್ ಪಾರ್ಟಿ, ನಾನಲ್ಲ!
ಮನೆಯಲ್ಲಿ ಶಾಲೆಗೆ ಹೋಗುವವರು ನಾನು, ತಂಗಿ, ತಮ್ಮ ಮೂವರಿದ್ದೆವು. ಅಪ್ಪ ಹಳೆ ಬಜಾಜ್ ಸ್ಕೂಟರ್‌ನಲ್ಲಿ ನಮ್ಮ ಮೂವರನ್ನೂ ಸುಳ್ಯದ ಎಲಿಮೆಂಟರಿ ಶಾಲೆಗೆ ಕರೆದೊಯ್ಯುತ್ತಿದ್ದಿದ್ದು ನನ್ನಲ್ಲಿ ಅಚ್ಚಳಿಯದೆ ಉಳಿದ ನೆನಪು. ನಾನು ವಿಧೇಯ ವಿದ್ಯಾರ್ಥಿ ಎಂದು ಹೆಸರು ಮಾಡಿದ್ದೆ. ಶಿಕ್ಷಕರ ಅಚ್ಚುಮೆಚ್ಚಿನ ಸ್ಟೂಡೆಂಟ್. ಹೀಗಾಗಿ ಸುಮ್ಮ ಸುಮ್ಮನೆ ರಜೆ ಹಾಕುವುದಕ್ಕೆ ಮನಸ್ಸು ಬರುತ್ತಿರಲಿಲ್ಲ. ಒಳ್ಳೆ ವಿದ್ಯಾರ್ಥಿಯಾದರೆ ಅದೇ ಸಮಸ್ಯೆ. ಅದೇ ನನ್ನ ತಂಗಿ ತುಂಬಾ ಬೋಲ್ಡ್. “ನಾನಿವತ್ತು ಶಾಲೆಗೆ ಬಂಕ್’ ಎಂದು ಮನೆಯಲ್ಲಿ ಹೇಳಿ ಒಂದೇ ಪೆಟ್ಟಿಗೆ ಹೇಳಿ ಚಕ್ಕರ್ ಹಾಕಿಬಿಡುತ್ತಿದ್ದಳು. ನನಗೆ ಹಾಗೆ ಮಾಡಲಾಗುತ್ತಿರಲಿಲ್ಲ. ಒಮ್ಮೊಮ್ಮೆ ಚಕ್ಕರ್ ಹಾಕುವುದರ ಮಜವನ್ನು ಅನುಭವಿಸಿಬಿಡಬೇಕಿತ್ತು ಅಂತ ಅನ್ನಿಸುತ್ತೆ.
– ಸುನಯನ, ಸುಳ್ಯ
– – –
ರಸ್ತೆ ಮೇಲೆ ಕೂತುಬಿಟ್ಟೆ
ಚಕ್ಕರ್ ಹಾಕೋದಕ್ಕೆ ಅವಾರ್ಡ್ ಅಂತ ಇದ್ದಿದ್ರೆ ನನಗೇ ಕೊಟ್ಟುಬಿಡುತ್ತಿದ್ದರು. ವರ್ಷದ 365 ದಿನಗಳಲ್ಲಿ ಏನಿಲ್ಲವೆಂದರೂ 100ಕ್ಕೂ ಹೆಚ್ಚು ಬಾರಿ ಚಕ್ಕರ್ ಹಾಕುತ್ತಿದ್ದೆ. ಅದೂ ಡಿಸೈನ್ ಡಿಸೈನ್ ಉಪಾಯಗಳನ್ನು ಬಳಸಿ. ಒಂದು ಟೆಕ್ನಿಕ್ ಅನ್ನು ಮತ್ತೂಮ್ಮೆ ಬಳಸುತ್ತಿರಲಿಲ್ಲ.
ಒಮ್ಮೆ ಏನಾಯ್ತು ಅಂತೀರಾ? ಅಮ್ಮ ನನ್ನನ್ನು ಶಾಲೆಗೆ ಕರೆದೊಯ್ಯುತ್ತಿದ್ದಳು. ದಾರಿಯಲ್ಲಿ ಬ್ಯಾಂಗಲ್ ಸ್ಟೋರ್ ಒಂದು ಸಿಗುತ್ತಿತ್ತು. ಅಲ್ಲಿ ಕೆಲವೊಮ್ಮೆ ಕ್ರಿಕೆಟ್ ಬ್ಯಾಟು ಬಾಲನ್ನು ಎಲ್ಲರಿಗೂ ಕಾಣುವಂತೆ ಮುಂದೆ ಡಿಸ್‌ಪ್ಲೇ ಮಾಡುತ್ತಿದ್ದರು. ಆ ದಿನ ಬ್ಯಾಟ್ ಕಂಡೊಡನೆ ಅದು ನನಗೆ ಬೇಕು ಅಂತ ರಚ್ಚೆ ಹಿಡಿದೆ. ಇವತ್ತು ಬ್ಯಾಟ್ ಕೊಡಿಸದಿದ್ದರೆ ಶಾಲೆಗೆ ಹೋಗೋದಿಲ್ಲ ಅಂತ ರಸ್ತೆ ಮೇಲೆ ಕೂತುಬಿಟ್ಟೆ. ರಸ್ತೆಯಲ್ಲಿ ಹೋಗಿ ಬರೋರೆಲ್ಲಾ ಅಮ್ಮನನ್ನೇ ಅಪರಾಧಿಯಂತೆ ನೋಡುತ್ತಿದ್ದಾರೆ. ಬ್ಯಾಟ್ ಕೊಡಿಸಿಬಿಡೋಣವೆಂದರೆ ಅಮ್ಮ ಪರ್ಸನ್ನು ಮನೆಯಲ್ಲೇ ಬಿಟ್ಟು ಬಂದಿದ್ದರು. ಕಡೆಗೆ ಬೇರೆ ಮಾರ್ಗವಿಲ್ಲದೆ ಅಮ್ಮ ನನ್ನನ್ನು ವಾಪಸ್ ಮನೆಗೆ ಕರೆತಂದರು. ಹೆಂಗಿದೆ ಚಕ್ಕರ್ ಹಾಕೋ ಐಡಿಯಾ ಸ್ಯಾಂಪಲ್?
– ಲೇಝಿ ಶರತ್, ಬೆಂಗಳೂರು
– – –
ಮನೆಯಲ್ಲಿ ಹೈಡ್ರಾಮಾ
ಹೊಟ್ಟೆ ನೋವು, ಆ ನೋವು ಈ ನೋವು ಎಲ್ಲಾ ತುಂಬಾ ಹಳೆಯ ಐಡಿಯಾ. ಅಪ್ಪ ಅಮ್ಮಂದಿರು ಅವಕ್ಕೆ ಬಗ್ಗುವುದಿಲ್ಲ ಅಂತ ಬಹಳ ಬೇಗ ಕಂಡುಕೊಂಡುಬಿಟ್ಟಿದ್ದೆ. ಶಾಲೆ ಶುರುವಾಗುತ್ತಿದ್ದಿದ್ದೇ ಮಳೆಗಾಲದಲ್ಲಿ. ನಮುª ಶಿರಸಿ. ಮಳೆ ಬಗ್ಗೆ ಪ್ರತ್ಯೇಕವಾಗಿ ಹೇಳ್ಳೋ ಅಗತ್ಯಾನೇ ಇಲ್ಲ. ಹೀಗಾಗಿ ಸಿಚುವೇಷನ್‌ಗೆ ತಕ್ಕಂತೆ ಒಂದೊಳ್ಳೆ ಉಪಾಯ ಹುಡುಕಿದೆ. ಆಟವಾಡೋಕೆ ಹೋದಾಗ ಬಿದ್ದು ಗಾಯ ಮಾಡಿಕೊಳ್ಳೋದು. ಸ್ವಲ್ಪ ರಿಸ್ಕ್ ಏನೋ ಇತ್ತು. ಆದರೆ, ರಿಸ್ಕ್ ತೆಗೆದುಕೊಂಡರೇ ಅಲ್ವಾ ಬೇಕಾಗಿದ್ದು ಸಿಗೋದು! ಗಾಯಕ್ಕೂ ನಮ್ಮ ಚೀರಾಟ ನರಳಾಟಕ್ಕೂ ಕನೆಕ್ಷನ್ನೇ ಇರುತ್ತಿರಲಿಲ್ಲ. ಗಾಯ ಚಿಕ್ಕದಾಗಿದ್ದರೂ ಹೈಡ್ರಾಮಾ ಮಾಡುತ್ತಿದ್ದೆ. ನಮ್ಮ ಚಕ್ಕರಾಭ್ಯಾಸವನ್ನು ನೋಡಿಯೇ ಏನೋ ಶಾಲೆಯವರು ಒಂದು ತಂತ್ರ ಹೂಡಿದರು. ಶಾಲೆ ಶುರುವಾದ ಮೊದಲ 2- 3 ತಿಂಗಳು ಓದಿಗಿಂತ ಹೆಚ್ಚಾಗಿ ಆಟವಾಡಿಸುವ ತೀರ್ಮಾನ ಕೈಗೊಂಡರು. ಮಳೆಯಲ್ಲೇ ಆಟವಾಡುವ ಆಮಿಷದಿಂದ ಮಕ್ಕಳು ಚಕ್ಕರ್ ಹೊಡೆಯದಿರಲಿ ಎಂದು. 2- 3 ತಿಂಗಳ ನಂತರ ಆಟಕ್ಕೆ ಬಿಡುವೇ ಕೊಡದಂತೆ ಸಿಲೆಬಸ್ ಪೂರ್ತಿಗೊಳಿಸುತ್ತಿದ್ದಿದ್ದು ಬೇರೆ ವಿಷಯ.
– ಇಝಾಝ್, ಶಿರಸಿ
– – –
ಖತರ್‌ನಾಕ್ ಚಕ್ಕರ್ ಸ್ಟೋರಿ
ನನ್ನ ಚಕ್ಕರ್ ಕತೆ ತುಂಬಾ ಎಕ್ಸ್‌ಟ್ರೀಮ್ ಎನ್ನಬಹುದು. ಇವತ್ತಿಗೂ ಈ ಕತೆಯನ್ನು ನೆನಪಿಸಿಕೊಳ್ಳುವವರು ನಂಜನಗೂಡಿನಲ್ಲಿ ಒಂದಷ್ಟು ಮಂದಿ ಸಿಗುತ್ತಾರೆ. ಊರಲ್ಲಿ ನಾವೊಂದಷ್ಟು ಮಂದಿ ಸಮಾನಮನಸ್ಕ ಚಡ್ಡಿದೋಸ್ತ್ಗಳಿದ್ದೆವು. ನಮಗೆ ಶಾಲೆ ತುಂಬಾ ಬೋರಾಗಿತ್ತು. ಒಂದಿನ, ಎರಡಿªನ ಮೂರ್ ದಿನ, ಎಷ್ಟೂಂತ ಚಕ್ಕರ್ ಹಾಕೋದ್ ಅಂತ ಒಂದು ಪರ್ಮನೆಂಟ್ ಪರಿಹಾರ ಹುಡುಕಲು ನಿರ್ಧರಿಸಿದೆವು. ನಮ್ಮ ತಂಡದಲ್ಲಿದ್ದ ಅನೀಸ್‌ಗೆ ದುಬೈನಲ್ಲಿ ಸಂಬಂಧಿಕರಿದ್ದರು. ಅವನು ಯಾವಾಗ ನೋಡಿದರೂ ದುಬೈ ಬಗ್ಗೆ ಕೊಚ್ಚಿಕೊಂಡು ನಮಗೂ ದುಬೈ ಹುಚ್ಚು ಹತ್ತಿಸಿಬಿಟ್ಟಿದ್ದ. ಆ ಸಮಯದಲ್ಲೇ ಶಾಲೆಯ ಹೋಂ ವರ್ಕುಗಳಿಂದ ತಪ್ಪಿಸಿಕೊಳ್ಳಲು ಮಾಸ್ಟರ್ ಪ್ಲಾನು ರೆಡಿಯಾಯಿತು. ತುಂಬಾ ಸಿಂಪಲ್. ಹೇಳದೆ ಕೇಳದೆ ಮನೆ ಬಿಟ್ಟು ದುಬೈಗೆ ಪರಾರಿಯಾಗೋದು! ಇದು ಪ್ರೈಮರಿ ಸ್ಕೂಲ್‌ನಲ್ಲಿ ನಾವು ಮಾಡಿದ ಐಡಿಯಾ!
ದುಬೈಗೆ ಹೋಗೋಕೆ ಅಷ್ಟೊಂದು ಹಣ ಎಲ್ಲಿಂದ ಬರಬೇಕು ಅಂತ ನಮ್ಮ ಐಡಿಯಾವನ್ನು ತಳ್ಳಿ ಹಾಕಿಬಿಡಬೇಡಿ. ಅದರ ವ್ಯವಸ್ಥೆಯೂ ಆಯ್ತು. ಗೆಳೆಯನೊಬ್ಬ (ಹೆಸರು ಬೇಡ ಊರು ಬೇಡ) ಮನೆಯಿಂದ ಆಭರಣಗಳನ್ನು ಕದ್ದು ತಂದು ತಿಪ್ಪೆಯಡಿ ಹೂತಿಟ್ಟ. ರಾತ್ರೊ ರಾತ್ರಿ ಊರು ಬಿಟ್ಟು ಹೋಗುವಾಗ ಆಭರಣಗಳನ್ನು ಎತ್ತಿಕೊಳ್ಳುವುದು ಅಂತ ಅವನ ಉಪಾಯ. ಆಮೇಲಾಗಿದ್ದೆಲ್ಲಾ ಯಡವಟ್ಟು. ನಮ್ಮ ಪರಾರಿ ಪ್ಲಾನ್ ಪೋಸ್ಟ್‌ಪೋನಾಯಿತು. ಗೆಳೆಯನ ಮನೆಯಲ್ಲಿ ಆಭರಣ ಮಿಸ್ಸಾಗಿರೋದು ಗೊತ್ತಾಯ್ತು. ಗೆಳೆಯನನ್ನು ಅವನಪ್ಪ ಬೆಂಡೆತ್ತಿದಾಗ ತಿಪ್ಪೆಯಡಿ ಆಭರಣ ಹೂತಿಟ್ಟಿದ್ದನ್ನು ಬಾಯ್ಬಿಟ್ಟಿದ್ದ!
– ಅರ್ಜುನ್, ಮೈಸೂರು
(ಬಾಲ್ಯದಲ್ಲಿ ನೀವೂ ಶಾಲೆಗೆ ಹೋಗಲು, ಸತಾಯಿಸುತ್ತಿದ್ರಾ? ಚಕ್ಕರ್ ಹೊಡೆಯಲು ನಾನಾ ದಾರಿ ಹುಡುಕುತಿದ್ರಾ? ಆ “ಚಕ್ಕರ್’ವ್ಯೂಹವನ್ನು ಬೇಧಿಸಿ, ನೀವು ಒಳ್ಳೇ ವಿದ್ಯಾರ್ಥಿ ಆಗಿದ್ಹೇಗೆ? ಚುಟುಕಾಗಿ 100- 150 ಪದಗಳಲ್ಲಿ ನಮಗೆ ಬರೆದು ಕಳುಹಿಸಿ: [email protected])
– ನಿರೂಪಣೆ: ಹರ್ಷವರ್ಧನ್ ಸುಳ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.