ನೊಂದವರ ಕಣ್ಣೀರು ಯಾವತ್ತೂ ಒಳ್ಳೆಯದಲ್ಲ…
Team Udayavani, Jan 14, 2020, 5:00 AM IST
ನೆನಪಿಟ್ಟುಕೋ ಗೆಳೆಯ; ನಿನಗೆ ಉತ್ತಮ ಕೆಲಸದ ಜೊತೆ ಐಶಾರಾಮಿ ಜೀವನವೂ ಸಿಕ್ಕಿರಬಹುದು. ನಿನ್ನನ್ನು ದೇವರಂತೆ ಪೂಜಿಸುವ ಹೃದಯ ಮತ್ತೆಂದಿಗೂ ಸಿಗಲಾರದು.
ನನ್ನ ಬಾಳದಾರಿಯಲ್ಲಿ ಬಿರುಗಾಳಿಯಂತೆ ಬಂದು, ಕೂಡಿಟ್ಟ ನೂರಾರು ಕನಸುಗಳನ್ನು ನುಚ್ಚುನೂರು ಮಾಡಿದವನು ನೀನು. ನೀನೇ ನನ್ನ ಪ್ರಪಂಚ ಎಂದು ಬದುಕುತ್ತಿದ್ದವಳಿಗೆ, ನಿನ್ನ ಮನದಾಳದಿಂದ ಬಂದ ಮಾತನ್ನು ಎಂದಿಗೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಗೆಳೆಯ. ಬಣ್ಣ ಬಣ್ಣದ ಮಾತುಗಳನ್ನಾಡಿ ಸಾವಿರ ಆಸೆಗಳನ್ನು ಮನದಲ್ಲಿ ಬಿತ್ತಿ, ಪ್ರೇಮದ ಕಡಲಲ್ಲಿ ತೇಲುವಂತೆ ಮಾಡಿದೆ. ಜೀವನದಲ್ಲಿ ಯಾವುದೇ ಕಷ್ಟ ಬಂದರೂ ಜೊತೆಯಲ್ಲಿ ನಾನಿರುವೆ ಎಂಬ ನಿನ್ನ ಭರವಸೆ ನಿದ್ದೆಯಲ್ಲೂ ನಿನ್ನನ್ನೇ ಕನವರಿಸುವಂತೆ ಮಾಡಿತು.
ನಿನಗೆ ಒಂದಿಷ್ಟು ತೊಂದರೆಯಾದರೂ ಸಹಿಸದ ನಾನು, ನಿನಗಾಗಿ ನಿದ್ದೆ ಬಿಟ್ಟು ಕಾದದ್ದೂ ಇದೆ. ನಿನ್ನ ಕನಸುಗಳೆಲ್ಲ ಈಡೇರಬೇಕೆಂದು ನಾ ಬೇಡದ ದೇವರಿಲ್ಲ. ಇಷ್ಟಪಟ್ಟ ಕೆಲಸ ಸಿಗುವವರೆಗೆ ಮದುವೆ ವಿಷಯವನ್ನು ಮನೆಯಲ್ಲಿ ಪ್ರಸ್ತಾಪಿಸುವುದು ಬೇಡ ಅಂದಿದ್ದೆ . ನಿನ್ನ ಪ್ರತಿಯೊಂದು ಮಾತಿಗೂ ಸರಿ ಎನ್ನುತ್ತಿದ್ದ ನಾನೂ ಸರಿ, ಹಾಗೇ ಆಗಲಿ ಎಂದೆ. ಯಾಕೆಂದರೆ, ನನಗೆ ನಿನ್ನ ಸಂತೋಷ, ನೆಮ್ಮದಿ ಮುಖ್ಯವಾಗಿತ್ತು.
ದೇವರ ದಯೆ ಮತ್ತು ನಿನ್ನ ಶ್ರಮದ ಪ್ರತಿಫಲ ಎಂಬಂತೆ ನೀನು ಅಂದು ಕೊಂಡ ಕೆಲಸ ಸಿಕ್ಕೇ ಬಿಟ್ಟಿತು. ಆ ದಿನ ನನಗಾದ ಖುಷಿಯನ್ನು ಪದಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ. ಕೆಲಸದ ಕಾರಣದಿಂದ ನೀನು ದೂರದ ಊರಿಗೆ ಹೋದೆ , ಪ್ರತಿ ದಿನ ನೀನು ಸಮಯ ಸಿಕ್ಕಾಗಲೆಲ್ಲ ಮಾತನಾಡುತ್ತಿದ್ದೆ. ಆದರೆ, ನಿನ್ನ ಕಾಳಜಿ, ದಿನ ಕಳೆದಂತೆ ಕಡಿಮೆಯಾಗುತಾ ¤ ಇದೆ ಎಂಬುದು ಗಮನಕ್ಕೆ ಬಂದಾಗ, ಯಾಕೆ ಸರಿಯಾಗಿ ಮಾತನಾಡುತ್ತಿಲ್ಲ ಎಂದು ಕೇಳಿದರೆ ಸಮಯದ ನೆಪವೊಡ್ಡುತ್ತಿದ್ದೆ.
ನಂತರ ದಿನಗಳಲ್ಲಿ, ನಿನ್ನ ಮಾತಿನ ದಾಟಿ ಬದಲಾಗಿದ್ದನ್ನು ಕಂಡು ನಾನು ಪ್ರಶ್ನೆ ಮಾಡಿದಾಗ , ನಿನಗಿಂತ ನನ್ನ ಕೆಲಸವೆ ಮುಖ್ಯ ಎಂದು ಹೇಳಿಯೆ ಬಿಟ್ಟೆ . ನೀನು ಕೊಟ್ಟ ಉತ್ತರದಿಂದ ನಿನ್ನ ಮೇಲೆ ಇದ್ದ ಎಲ್ಲ ನಂಬಿಕೆಯೂ ಸುಟ್ಟು ಹೋಗಿ, ಕಣ್ಣೀರಲ್ಲಿ ಕೈ ತೊಳೆಯುವಂತೆ ಮಾಡಿತು. ನೆನಪಿಟ್ಟುಕೋ ಗೆಳೆಯ; ನಿನಗೆ ಉತ್ತಮ ಕೆಲಸದ ಜೊತೆ ಐಶಾರಾಮಿ ಜೀವನವೂ ಸಿಕ್ಕಿರಬಹುದು. ನಿನ್ನನ್ನು ದೇವರಂತೆ ಪೂಜಿಸುವ ಹೃದಯ ಮತ್ತೆಂದಿಗೂ ಸಿಗಲಾರದು. ಕೊನೆಯಾದಾಗಿ ಒಂದು ಮನವಿ. ನನ್ನ ಭಾವನೆಗಳೊಂದಿಗೆ ಆಟವಾಡಿದಂತೆ ಯಾವ ಹುಡುಗಿಯ ಜೀವನದಲ್ಲೂ ಆಟವಾಡಬೇಡ , ಯಾಕೆಂದರೆ, ನೊಂದ ಹೆಣ್ಣಿನ ಕಣ್ಣೀರು ಯಾವತ್ತೂ ಒಳ್ಳೆಯದಲ್ಲ ಕಣೋ.
ಶೈಲ ಶ್ರೀ ಬಾಯಾರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.