ಸೂಫಿ ಹೇಳಿದ ಕತ್ತೆಯ ಫಿಲಾಸಫಿ
Team Udayavani, Apr 24, 2018, 2:33 PM IST
“ಮನುಷ್ಯನಿಗೆಷ್ಟು ಭೂಮಿ ಬೇಕು?’ ಎಂಬ ಸಾಲನ್ನು ನಮ್ಮಗಳ ಎದೆಯಲ್ಲಿ ಹರಿಬಿಟ್ಟವರು ರಷ್ಯನ್ ತತ್ವಜ್ಞಾನಿ ಲಿಯೋ ಟಾಲ್‌ಸ್ಟಾಯ್. ಅವರ ಆ ಕತೆಯಲ್ಲಿ ಪಹೋಮ್‌ನ ಆಸೆ ಅನೇಕ ಪಾಠಗಳನ್ನು ತೆರೆದಿಡುತ್ತದೆ. ಆದರೆ, ಟಾಲ್‌ಸ್ಟಾಯ್‌ರ ಈ ಕತೆ ಅರಳುವುದಕ್ಕೂ ಮೊದಲೇ ಸೂಫಿ ಲೋಕದೊಳಗೆ ಇಂಥದ್ದೇ ಕತೆಯ ಮೊಳಕೆಯೊಂದಿತ್ತು. ಏನೂ ಇಲ್ಲದೇ, ಎಲ್ಲವನ್ನೂ ಕಂಡುಕೊಳ್ಳುವ ಆ ಖುಷಿಯೇ ಇವೆಲ್ಲ ಕತೆಗಳಿಗೆ ಮೂಲವೆನ್ನುವುದು ಸತ್ಯ. ನಿಮ್ಮ ಖುಷಿಗೆ ಆ ಸೂಫಿ ಕತೆಯ ಅನುವಾದ…
ದಟ್ಟ ಕಾಡಿನಲ್ಲಿ ಒಂದು ಜೋಂಪಡಿ. ಮರ ಕಡಿಯುವ ಕೆಲಸ ಮಾಡುತ್ತಿದ್ದ ಅತಿ ಬಡವನೊಬ್ಬ ಆ ಗುಡಿಸಲಿನಲ್ಲಿ ವಾಸವಿದ್ದ. ಗುಡಿಸಲು ಎಷ್ಟು ಚಿಕ್ಕದಿತ್ತೆಂದರೆ, ಅದರಲ್ಲಿ ಅವನು ಮತ್ತು ಅವನ ಹೆಂಡತಿಯಷ್ಟೇ ಮಲಗಬಹುದಿತ್ತು. ಕಣ್ಣನಿರಿವ ಕತ್ತಲಿನ ಒಂದು ನಡುರಾತ್ರಿ. ಸಿಡಿಲಬ್ಬರದ ಮಳೆ, ಕಾಡೇ ಬುಡಮೇಲಾಗಿ ಬೀಳುತ್ತೇನೋ ಎಂಬ ದಿಗಿಲು ಹುಟ್ಟಿಸುವ ಮಳೆ ಅದು. ಠಕ್ ಠಕ್; ಯಾರೋ ಬಾಗಿಲು ಬಡಿದ ಸದ್ದಾಯಿತು.
ಮರ ಕಡಿಯುವವ, ಹೆಂಡತಿಗೆ ಹೇಳಿದ: “ಹೋಗಿ ಬಾಗಿಲು ತೆಗೀ. ಮಳೆ ಬೇರೆ ಜೋರು ಬರಿ¤ದೆ. ಯಾರೋ ಅರ್ಧದಾರಿಯಲ್ಲಿ ಸಿಲುಕಿದ್ದಿರಬಹುದು. ಕರಾಳ ಕತ್ತಲೂ ತಬ್ಬಿದೆ. ಈ ಕಾಡಿನಲ್ಲಿ ಕ್ರೂರ ಮೃಗಗಳು ದಾಳಿಗೈದರೆ ಅವರ ಕತೆಯೇನು? ಬಾಗಿಲನ್ನು ಬೇಗ ತೆಗೆದು ಬಿಡು’. ಹೆಂಡತಿ ತುಸು ಮುಖ ಬಾಡಿಸಿಕೊಂಡು, “ಆದರೆ, ಈ ಗುಡಿಸಲಿನೊಳಗೆ ಜಾಗವೇ ಇಲ್ಲವಲ್ಲ’.
ಅದಕ್ಕೆ ಅವನಂದ, “ನೋಡು… ಜಾಗ ಇರಲು ಇದೇನು ಅರಮನೆಯಲ್ಲ. ಪ್ರಪಂಚದ ಯಾವ ಭಾಗಕ್ಕಾದರೂ ಹೋಗಿ ನೋಡು, ಎಲ್ಲ ಕಡೆಯೂ ಜಾಗ ಸಾಲದೆಂದು ಗೋಳಿಡುವವರು ಸಿಗುತ್ತಾರೆ. ಹೇಳಿಕೇಳಿ ಇದು ಬಡವನ ಗುಡಿಸಲು. ಇಬ್ಬರು ಆರಾಮವಾಗಿ ಮಲಗಬಹುದು; ಮೂವರು ಹೊಂದಿಕೊಂಡು ಕೂರಬಹುದು. ನಾವು ಜಾಗ ಮಾಡೋಣ. ನೀನು ಬಾಗಿಲು ತೆಗೀ’.
ಬಾಗಿಲು ತೆರೆದಳು. ಅಪರಿಚಿತನೊಬ್ಬ ಒಳಕ್ಕೆ ಬಂದ. ನಗುಮೊಗದಿಂದಲೇ ಮಾತಿಗಿಳಿದ. ಯಾರ್ಯಾರಿಗೋ ಸಂಬಂದಿಸಿದ್ದ ಗಾಳಿಸುದ್ದಿ ಅಲ್ಲಿ ಹಬ್ಬಿದವು. ಕಚಗುಳಿ ಇಡುವ ಕತೆಗಳು ಕಿವಿಯೊಳಗೆ ಕಾವಿಟ್ಟವು. ಆ ರಾತ್ರಿ ಯಾರೂ ಮಲಗಲೇ ಇಲ್ಲ, ಕಾರಣ, ಅಲ್ಲಿ ಕಾಲು ಚಾಚಲು ಜಾಗವೇ ಇದ್ದಿರಲಿಲ್ಲ. ಹಾಗೆ ಕತೆಗಳು ಸಾಗುತ್ತಿದ್ದಂತೆ, ಮತ್ತೆ ಯಾರೋ ಬಾಗಿಲು ಬಡಿದ ಸದ್ದಾಯಿತು.
ಅಪರಿಚಿತನು ಬಾಗಿಲು ಬುಡದಲ್ಲಿಯೇ ಕುಳಿತಿದ್ದರಿಂದ, ಮರ ಕಡಿಯುವವನು “ಗೆಳೆಯಾ, ಬಾಗಿಲನ್ನು ತೆರೆ. ಯಾರೋ ಕಷ್ಟದಲ್ಲಿದ್ದಂತಿದೆ’ ಎಂದ. “ನೀನೊಬ್ಬ ವಿಚಿತ್ರ ಮನುಷ್ಯನಿದ್ದೀಯ. ಇಲ್ಲಿ ಜಾಗವೇ ಇಲ್ಲವಲ್ಲ.,,’ ಎಂದು ಆಗಷ್ಟೇ ಬಂದ ಅಪರಿಚಿತ ಸಿಡಿಮಿಡಿಗೊಂಡು ಹೇಳಿದ. “ನಿನ್ನ ರೀತಿಯೇ ನನ್ನ ಪತ್ನಿಯೂ ವಾದಿಸುತ್ತಿದ್ದಳು. ನಾನು ಅವಳ ಮಾತನ್ನು ಕೇಳಿದ್ದಿದ್ದರೆ, ನೀನು ಇಷ್ಟರಲ್ಲಾಗಲೇ ನಡುಕಾಡಿನಲ್ಲಿ ಮೃಗಗಳ ಪಾಲಾಗಿರುತ್ತಿದ್ದೆ.
ನೀನೂ ವಿಶೇಷ ಮನುಷ್ಯನೇ ಆಗಿದ್ದೀ, ಆದರೆ ನಿನಗೆ ನಾವಿಬ್ಬರೂ ನಿಂತು ನಿನಗೆ ಜಾಗ ಕೊಟ್ಟಿದ್ದೇವೆಂಬುದು ತಿಳಿಯುತ್ತಿಲ್ಲವಷ್ಟೇ. ನಾವಿಬ್ಬರೂ ಇಡೀ ದಿನ ಕಾಡಿನಲ್ಲಿ ಕೆಲಸ ಮಾಡಿ ಸುಸ್ತಾಗಿದ್ದೇವೆ. ನಮಗೆ ದಿನದಲ್ಲಿ ಒಮ್ಮೆ ಆಹಾರ ಸಿಗುವುದೇ ಕಷ್ಟ. ಇದು ನಮ್ಮ ಕಷ್ಟ; ಇರಲಿ, ನೀನು ಬಾಗಿಲು ತೆಗೀ. ನೆನಪಿಟ್ಟುಕೋ, ಇದು ನಿನ್ನ ಗುಡಿಸಲಲ್ಲ. ಇಲ್ಲಿ ಮೂವರು ಅನುಸರಿಸಿಕೊಂಡು ಕೂರಬಹುದು. ನಾಲ್ವರು ತುಸು ಒತ್ತೂತ್ತಾಗಿ, ಹೊಂದಿಕೊಳ್ಳಬಹುದು.
ಆದರೆ, ನಾವು ಜಾಗವನ್ನು ಸೃಷ್ಟಿಸಬೇಕಷ್ಟೇ’ ಎಂದು ಮರಕಡಿಯುವವ ಆತನಿಗೆ ನಿಷ್ಠುರ ದನಿಯಲ್ಲಿ ಪ್ರತ್ಯುತ್ತರಿಸಿದ್ದ. ಈ ಉಪದೇಶ ಕೇಳಿದ ಮೇಲೆ, ಆತ ಬಾಗಿಲು ತೆರೆಯದೇ ಇರುತ್ತಾನೆಯೇ? ತೆರೆದ. ಮನುಷ್ಯನೊಬ್ಬ ಮೊಗದಲ್ಲಿ ಖುಷಿಯನ್ನು ಚಿಮುಕಿಸಿಕೊಂಡು, ಗುಡಿಸಲಿನೊಳಕ್ಕೆ ಕಾಲಿಟ್ಟ. ಅಷ್ಟೂ ಮಂದಿಗೂ ಇಕ್ಕಟ್ಟೇ ಆದರೂ ಅನುಸರಿಸಿಕೊಂಡು ಕೂರುವುದು ಅನಿವಾರ್ಯವಾಗಿತ್ತು.
ಅಲ್ಲಿ ಒಂದು ಇಂಚು ಜಾಗವೂ ಮಿಕ್ಕಿರಲಿಲ್ಲ. ಮತ್ತೆ ಕತೆಗಳು ಹಬ್ಬಿದವು. ಗಾಳಿಸುದ್ದಿಗಳು ಆ ಗುಡಿಸಲಿನಲ್ಲಿ ಹರಿದಾಡಿದವು. ಅಷ್ಟೊತ್ತಿಗೆ ಯಾರೋ ಪುನಃ ಬಾಗಿಲು ಬಡಿದ ಸದ್ದಾಯಿತು. ಹಾಗೆ ಸದ್ದಾಗುತ್ತಿದ್ದಂತೆ, ಹೆಂಡತಿಯೂ, ಆ ಇಬ್ಬರು ಅಪರಿಚಿತರೂ ಹೆದರಿ, ಮರ ಕಡಿಯುವವನನ್ನೇ ಗಾಬರಿಯಿಂದ ನೋಡತೊಡಗಿದರು; ಎಲ್ಲಿ ಇವನು ಬಾಗಿಲು ತೆಗೀ ಅಂತಾನೋ ಅಂತ.
ಆತ ಅದನ್ನೇ ಹೇಳಿಬಿಟ್ಟ. “ಬಾಗಿಲು ತೆರೆದುಬಿಡಿ. ನನಗೆ ಗೊತ್ತು ಹೊರಗೆ ಯಾರು ಬಾಗಿಲು ಬಡಿಯುತ್ತಿದ್ದಾರೆಂತ. ಈ ಜಗತ್ತಿನಲ್ಲಿ ನನಗಿರುವ ಏಕೈಕ ಗೆಳೆಯ ನನ್ನ ಕತ್ತೆ. ಪಾಪ, ಆತ ಹೊರಗೆಯೇ ಉಳಿದುಬಿಟ್ಟಿದ್ದಾನೆ. ಧಾರಾಕಾರವಾಗಿ ಮಳೆಯೂ ಹೊಯ್ಯುತ್ತಿದೆ. ಬೇಗನೆ ಬಾಗಿಲು ತೆರೆದುಬಿಡಿ…’ ಎಂದು ಸೂಚಿಸಿದ. ಈಗ ಬರಲಿರುವ ಕತ್ತೆ ಆ ಗುಡಿಸಲಿಗೆ ನಾಲ್ಕನೇ ಅತಿಥಿ. ಯಾರಿಗೂ ಕೂರಲು ಜಾಗವೇ ಇಲ್ಲ.
ಆದಕಾರಣ ಎಲ್ಲರೂ ಚಕಾರ ತೆಗೆದರು; “ನಿನ್ನ ಉಪಟಳ ಯಾಕೋ ಅತಿಯಾಯ್ತು. ಆ ಕತ್ತೆ ಇಲ್ಲಿಗೆ ಬಂದು ನಿಲ್ಲುವುದಾದರೂ ಎಲ್ಲಿ?’. ಈ ಮನುಷ್ಯ ಹೇಳಿದ; “ನಿಮಗಿದು ಅರ್ಥವಾಗುವುದಿಲ್ಲ. ಇದು ಬಡವನ ಜೋಂಪಡಿ. ಇಲ್ಲಿ ಯಾವಾಗಲೂ ಜಾಗವಿರುತ್ತದೆ. ಈಗ ನಾವೆಲ್ಲ ಕುಳಿತಿದ್ದೇವೆ. ಕತ್ತೆ ಇದರೊಳಗೆ ಬಂದಿತೆಂದರೆ, ನಾವೆಲ್ಲ ನಿಲ್ಲಬೇಕಾಗುತ್ತೆ. ನಾವು ಕತ್ತೆಯನ್ನು ಮಧ್ಯಕ್ಕೆ ನಿಲ್ಲಿಸಿಕೊಂಡರೆ, ಅದರ ಮೈ ಶಾಖದಿಂದ ಈ ಥಂಡಿಯಲ್ಲಿ ಆರಾಮವಾಗಿ ನಿಂತುಕೊಳ್ಳಬಹುದು. ಅದು ನಮ್ಮೆಲ್ಲರನ್ನೂ ಪ್ರೀತಿಸುತ್ತೆ, ಮುದ್ದಿಸುತ್ತೆ’.
ಅವರೆಲ್ಲರಿಗೂ ಮತ್ತೆ ಕೋಪ ನೆತ್ತಿಗೇರಿ, ಒಟ್ಟಿಗೆ ಹೇಳಿದರು; “ನಾವಿಲ್ಲಿ ನಿಲ್ಲುವುದಕ್ಕಿಂತ, ಈ ಕಾಡಿನಲ್ಲಿ ಓಡಿ ಹೋಗುವುದೇ ಲೇಸು. ಹಾಗೆ ಓಡಿ ಹೋಗಿ, ಯಾವುದಾದರೂ ಮೃಗದ ಬಾಯಿಯೊಳಗೆ ಬೀಳುವುದು ಇನ್ನೂ ಒಳ್ಳೆಯದು’. ಆದರೆ, ಯಾರಿಗೂ ಹೇಳಿದಂತೆ ಮಾಡಲು ಸಾಧ್ಯವಿರಲಿಲ್ಲ. ಹೊರಗೆ ಆಕಾಶ ಸಿಡಿಲನ್ನು ಉಗುಳುತ್ತಲಿತ್ತು. ಘೋರ ಮಳೆ ದಣಿಯದೆ, ಧಾರಾಕಾರವಾಗುತ್ತಿದೆ. ಬಾಗಿಲನ್ನು ಅನಿವಾರ್ಯವಾಗಿ ತೆರೆಯಲೇಬೇಕಾಯಿತು.
ಕತ್ತೆ ಒಳಗೆ ಬಂತು. ಅದರ ದೇಹದ ಉದ್ದಾನುದ್ದಕ್ಕೂ ಮಳೆಯ ನೀರು ತೊಟ್ಟಿಕ್ಕುತ್ತಿತ್ತು. ಮರ ಕಡಿಯುವವನು ಕತ್ತೆಯನ್ನು ಮಧ್ಯಕ್ಕೆ ಬಿಟ್ಟುಕೊಂಡ. ಅದರ ಸುತ್ತ ನಿಲ್ಲುವಂತೆ ಎಲ್ಲರಿಗೂ ಸೂಚಿಸಿ, ಹೇಳಿದ; “ನಿಮಗ್ಯಾರಿಗೂ ಗೊತ್ತೇ ಇಲ್ಲ. ನನ್ನ ಕತ್ತೆ ಪ್ರಪಂಚದ ಬಹುದೊಡ್ಡ ತತ್ತಜ್ಞಾನಿ. ನೀವೇನೇ ಬಯ್ದುಕೊಳ್ಳಿ, ಅದು ತಾಳ್ಮೆ ಕಳಕೊಳ್ಳುವುದಿಲ್ಲ. ನೀವು ಹೇಳಿದ್ದನ್ನೆಲ್ಲ ಅದು ಶಾಂತವಾಗಿ ಆಲಿಸುತ್ತಿರುತ್ತೆ’. ಅವನ ಮಾತು ಮುಗಿಯುತ್ತಿದ್ದಂತೆ. ಒಂದು ಕ್ಷಣ ಮೌನ ತಬ್ಬಿತು. ಮತ್ತೆ ಯಾರೋ ಬಾಗಿಲು ಬಡಿದ ಸದ್ದಾಯಿತು!
ಕನ್ನಡಕ್ಕೆ: ಕೀರ್ತಿ ಕೋಲ್ಗಾರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.