ಸುಮಲತಾ ಟೀಚರ್‌ಗೆ ಮೆಳ್ಳಗಣ್ಣು ವರದಾನವಾಗಿತ್ತು!
Team Udayavani, Mar 20, 2018, 5:36 PM IST
8ನೇ ತರಗತಿ ಓದುತ್ತಿದ್ದಾಗ ನಮಗೊಬ್ಬರು ಟೀಚರ್ ಇದ್ದರು. ಸುಮಲತ ಮಿಸ್ ಅಂತ ಅವರ ಹೆಸರು. ನಮಗೆ ಸಮಾಜವಿಜ್ಞಾನ ಬೋಧಿಸುತ್ತಿದ್ದರು. ತುಂಬಾ ತಮಾಷೆಯ ವ್ಯಕ್ತಿತ್ವ ಅವರದಾಗಿತ್ತು. ಅಷ್ಟೇ ಕಟ್ಟುನಿಟ್ಟನ್ನೂ ಕೆಲವೊಮ್ಮೆ ತೋರುತ್ತಿದ್ದರು. ಯಾವಾಗ ಅವರು ತಮಾಷೆಯಿಂದಿರುತ್ತಾರೆ, ಯಾವಾಗ ಅವರು ಸಿಟ್ಟಾಗುತ್ತಾರೆ ಎಂಬುದನ್ನು ಕಂಡು ಹಿಡಿಯಲು ಯಾರಿಂದಲೂ ಸಾಧ್ಯವಿರಲಿಲ್ಲ.
ಎಷ್ಟೋ ಸಲ ಅವರು ತಮಾಷೆ ಮಾಡುತ್ತಿದ್ದಾರೇನೋ ಎಂದು ತಪ್ಪಾಗಿ ತಿಳಿದು ತರಗತಿಯಲ್ಲಿ ಜೋರಾಗಿ ನಕ್ಕು ಅದೆಷ್ಟೋ ಹುಡುಗರು ಬೆತ್ತದ ರುಚಿ ನೋಡಿದ್ದರು. ಅವರಿಗೆ ಮೆಳ್ಳಗಣ್ಣಿನ ಸಮಸ್ಯೆಯಿತ್ತು. ನಿಜ ಹೇಳಬೇಕೆಂದರೆ ಅದು ಅವರಿಗಿಂತ ಹೆಚ್ಚಾಗಿ ತೊಂದರೆಗೊಳಗಾಗಿದ್ದು ವಿದ್ಯಾರ್ಥಿಗಳೇ. ಟೀಚರ್‌ಗೆ ಮೆಳ್ಳಗಣ್ಣಿನ ಸಮಸ್ಯೆಯಿದ್ದರೆ ವಿದ್ಯಾರ್ಥಿಗಳಿಗೆ ಹೇಗೆ ತೊಂದರೆಯಾಗುತ್ತೆ ಅಂತ ನೀವೆಲ್ಲರೂ ಕೇಳಬಹುದು. ಒಂದು ದಿನ ಏನಾಯ್ತು ಅಂದರೆ…
ಸುಮಲತಾ ಮಿಸ್ ಪಾಠ ಮಾಡುತ್ತಿದ್ದರು. ಪಾಠ ಮಾಡುವಾಗ ಬೋರ್ಡ್ ಮೇಲೆ ಬರೆಯಲೆಂದು ಹಿಂದಕ್ಕೆ ತಿರುಗಿದರು. ಅದನ್ನೇ ಕಾಯುತ್ತಿದ್ದ ಹುಡುಗರು ಪಿಸುಪಿಸು ಶುರುಮಾಡಿದರು. ಶಿಕ್ಷಕರು ಬೋರ್ಡ್ ಮೇಲೆ ಬರೆಯುವ ಸಮಯ ನಮಗೆಲ್ಲರಿಗೂ ಇಂಟರ್‌ವೆಲ್ ಇದ್ದ ಹಾಗೆ. ಯಾವ ಗೆಳೆಯನಿಗೆ ಯಾವ ಸಂದೇಶ ತಲುಪಿಸಬೇಕು? ಚಾಕಲೇಟು ದಾಟಿಸಲು, ಹೀಗೆ ಎಲ್ಲವಕ್ಕೂ ನಮಗೆ ಅದೇ ಸುಸಂದರ್ಭ.
ಹೀಗಾಗಿ ಆ ದಿನವೂ ಮಿಸ್ ಹಿಂದಕ್ಕೆ ತಿರುಗಿದಾಗ ನಾವೆಲ್ಲರೂ ಮಾತಾಡಲು ಶುರುಮಾಡಿದ್ದೆವು. ಮಿಸ್ ತಮಾಷೆಯ ಮೂಡಲ್ಲಿದ್ದುದರಿಂದ ಬೈಯಲ್ಲ ಅಂದುಕೊಂಡಿದ್ದೆವು. ಅದೇ ಆಗಿದ್ದು ಎಡವಟ್ಟು. ತರಗತಿಯಲ್ಲಿ ಗುಸುಗುಸು ಕೇಳಿ ಅವರು ಕೆಂಡಾಮಂಡಲರಾದರು. ಬೆತ್ತ ಕೈಗೆತ್ತಿಕೊಂಡರು. “ನಾನು ಎಷ್ಟು ಸಲ ನಿನಗೆ ಹೇಳಬೇಕು ಮಾತಾಡಬೇಡ ಅಂತ. ಪದೇ ಪದೇ ಅದನ್ನೇ ರಿಪೀಟ್ ಮಾಡ್ತೀಯ” ಎಂದು ಸಿಟ್ಟು ಕಾರಿಕೊಂಡೇ ಮೊದಲನೇ ಬೆಂಚಿನ ಬಳಿ ಬಂದರು. ನಾವೆಲ್ಲರೂ ಗಡ ಗಡ ನಡುಗಿದೆವು.
ಹತ್ತಿರ ಬಂದವರೇ ಸ್ಟಾÂಂಡಪ್ ಎಂದರು. ನನ್ನ ಪಕ್ಕ ಕೂತಿದ್ದ ಗೆಳೆಯ ಪ್ರಕಾಶ ಎದ್ದು ನಿಂತ. ಮಿಸ್ “ನೀನ್ಯಾಕೋ ಎದ್ದು ನಿಂತೆ? ನಾನು ಹೇಳಿದ್ದು ರಾಜೇಶ್‌ಗೆ’ ಎಂದರು. ಮಿಸ್‌ನ ಮೆಳ್ಳಗಣ್ಣಿನಿಂದಾಗಿ ಪ್ರಕಾಶ ತನಗೇ ಹೇಳಿದ್ದು ಎಂದುಕೊಂಡಿದ್ದ. ಪಾಪ, ಅವನದೇನೂ ತಪ್ಪಿರಲಿಲ್ಲ. ಸರಿ ಹೋಗಲಿ ಎಂದು ಪ್ರಕಾಶನನ್ನು ಕೂರಿಸಿದರಾ? ಇಲ್ಲ. “ನೀನಾಗಿಯೇ ಎದ್ದು ನಿಂತುಕೊಂಡೆ ಅಂದರೆ ನೀನು ಕೂಡಾ ಮಾತಾಡಿರುತ್ತೀಯಾ’ ಎಂದು ಹೇಳಿ ಅವನಿಗೂ ಬೆತ್ತದೇಟು ಕೊಟ್ಟರು.
ಹೀಗೆ ಸುಮಲತಾ ಮಿಸ್‌ನ ಕೆಂಗಣ್ಣಿಗೆ ಅಲ್ಲಲ್ಲ ಮೆಳ್ಳಗಣ್ಣಿಗೆ ನಾವು ಪಾತ್ರರಾಗುತ್ತಿದ್ದೆವು. ಹಾಗೆ ನೋಡಿದರೆ ಅವರಿಗೆ ಮೆಳ್ಳಗಣ್ಣು ವರದಾನವೇ ಆಗಿತ್ತು! ಆದರೆ ಅಂದಿನ ನಮ್ಮ ಪಾಡು ಕೇಳುವವರಾರು? ಈಗ ಅವೆಲ್ಲವನ್ನೂ ಮೆಲುಕು ಹಾಕಿದರೆ ತುಂಬಾ ನಗು ಬರುತ್ತದೆ. ಮೊನ್ನೆ ಊರಿಗೆ ಹೋಗಿದ್ದಾಗ ದಾರಿಯಲ್ಲಿ ಸುಮಲತಾ ಮಿಸ್ ಸಿಕ್ಕಿದ್ದರು. ಅವರನ್ನು ನೋಡಿ ಹತ್ತು ವರ್ಷಗಳ ಮೇಲೆಯೇ ಆಗಿತ್ತು.
ಇಷ್ಟು ಸಮಯವಾದರೂ ನನ್ನ ಹೆಸರು ಹಿಡಿದು ಮಾತನಾಡಿಸಿದ್ದು ಆಶ್ಚರ್ಯ ತಂದಿತು. “ಎಲ್ಲಿದ್ದೀಯಾ? ಏನು ಕೆಲಸ ಮಾಡುತ್ತಿದ್ದೀಯಾ?’ ಎಂದು ಕೇಳಿ ತಿಳಿದುಕೊಂಡರು. ನನ್ನ ಬಗ್ಗೆ ಮಾತ್ರವಲ್ಲದೆ ನನ್ನ ಜೊತೆ ಓದುತ್ತಿದ್ದವರ ಬಗ್ಗೆಯೂ ಕೇಳಿದರು. ನಿಜ ಹೇಳಬೇಕೆಂದರೆ ನಾನೇ ಅವರನ್ನೆಲ್ಲಾ ಮರೆತಿದ್ದೆ. ಆದರೆ ಮಿಸ್ ನಮ್ಮನ್ನೆಲ್ಲಾ ಎಷ್ಟು ನೆನಪಿಟ್ಟುಕೊಂಡಿದ್ದಾರಲ್ಲ ಎಂದು ತುಂಬಾ ಖುಷಿಯಾಯಿತು. ಅವರು ತಮ್ಮ ಮನೆಗೆ ಕರೆದರು. ನಾನು ಇನ್ನೊಂದು ಸಲ ಬರುತ್ತೇನೆ ಎಂದು ಹೇಳಿ ಬೀಳ್ಕೊಟ್ಟೆ.
* ಹರೀಶ, ಪುತ್ತೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.