ತೂಗಾಡುವ ಜುಮ್ಕಿಯ ಜಿಂಕೆಯೇ…
Team Udayavani, Oct 10, 2017, 12:21 PM IST
ನಮ್ಮೂರನ್ನೂ ನಮ್ಮೊರನ್ನೂ ಮರೆಸಿದ ಪುಟ್ಟಿ…
ಅದೆಷ್ಟೋ ಇಸವಿಗಳಿಂದ ನಿನ್ನೊಟ್ಟಿಗೆ ತೋಡಿಕೊಳ್ಳಲಾಗದ ಮಾತೊಂದು ಗುಬ್ಬಚ್ಚಿಯಂತೆ ಎದೆ ಗೂಡೊಳಗೇ ಉಳಿದುಬಿಟ್ಟಿದೆ. ನಿನ್ನನ್ನು ಕಂಡ ತಕ್ಷಣ ನನ್ನೊಳಗಿರುವ ಅಷ್ಟೂ ಗುಟ್ಟುಗಳನ್ನು, ಹೃದಯ ಮಾಡಿಕೊಂಡ ಯಡವಟ್ಟುಗಳನ್ನು ಪಟಪಟಾ ಅಂತ ಒದರಿಬಿಡಬೇಕೆಂದು ಎಷ್ಟೇ ತಯಾರಿ ಮಾಡಿಕೊಂಡರೂ, ನೀನು ಎದುರಾದಾಗ ಠುಸ್ ಪಟಾಕಿಯಂತೆ ಕಕ್ಕಾಬಿಕ್ಕಿಯಾಗಿದ್ದೇನೆ. ಈ ಪೀಕಲಾಟಗಳ ಗೊಡವೆಯೇ ಬೇಡವೆಂದುಕೊಂಡುದರ ನೇರ ಪರಿಣಾಮವೇ ಈ ಕಾಗದದ ಕಾಲು ಹಿಡಿದುಕೊಂಡದ್ದು! ಉಫ್, ಎಂದು ಉಸಿರೂದಿ ಕುತೂಹಲದಿಂದ ನೀನು ಕಾಗದವನ್ನು ಒಡೆಯುವ ಹೊತ್ತಿಗೆ ನನ್ನೆದೆ ಢವಢವನೆ ಅಗತ್ಯಕ್ಕಿಂತ ಜಾಸ್ತಿ ಬಡಿದುಕೊಳ್ಳುತ್ತಿರುತ್ತದೆ. ಜೋಕೆ!
ಅದೆಂಥದೋ ಅಮೃತಘಳಿಗೆಯಲ್ಲಿ ನೀನು ಪರಿಚಯವಾಗಿಬಿಟ್ಟೆ. ಅವತ್ತು, ಖುಷಿಯ ದಿಬ್ಬಣದ ಮೇರೆ ಮೀರಿ ಜಾತ್ರೆಯಲ್ಲಿ ಜಗ್ಗಿನಕಾ ಅಂತ ಕುಣಿದು ಕುಪ್ಪಳಿಸಿದಂತೆ ತನುಮನವೆಲ್ಲಾ ತೇಲಾಡಿಬಿಟ್ಟಿತ್ತು. ನಿನ್ನ ಅವಳಿ ಕಣ್ಣುಗಳ ನವಿರಾದ ಹಾವಳಿ, ಅತ್ತಿಂದಿತ್ತ ಮಜವಾಗಿ ತೂಗಾಡುವ ಜುಮ್ಕಿ, ಮೂಗುತಿಯ ಝಲಕು, ಕಿಸಕ್ಕೆಂದು ನೀನು ಸಣ್ಣಗೆ ನಕ್ಕಾಗ ದಿಢೀರ್ ಪ್ರತ್ಯಕ್ಷವಾಗುವ ಪುಟಾಣಿ ಕೆನ್ನೆಗುಳಿ, ಮುಖದ ಮೇಲೆ ಆಗಾಗ್ಗೆ ಸರಸವಾಡುವ ರೇಶಿಮೆಯ ಆ ಜೋಡಿ ಕೇಶ, ಸಮೃದ್ಧ ಮುಗ್ಧತೆ, ಎಳೆಮಕ್ಕಳೊಟ್ಟಿಗೆ ಕಂದಮ್ಮನಂತಿರುವ ನಿನ್ನ ಆ ಪಾಪು ಹೃದಯವೇ ಇರಬೇಕು ನನ್ನನ್ನು ಸೆಳೆದ ಪರಿಕರಗಳು. ಉಹುಂ, ನಾ ನಿನ್ನೆಡೆಗೆ ಮೋಹಿತನಾಗಲು ಯಾವೊಂದು ಸ್ಪಷ್ಟವಾದ ಕಾರಣವನ್ನೂ ಗುರುತಿಸಲಾಗುತ್ತಿಲ್ಲ. ಹ್ಮಾಂ, ನಿಜಕ್ಕೂ ನನ್ನದು ಅಕಾರಣ ಪ್ರೇಮವೇ ಸರಿ.
ಪಿಳಿಪಿಳಿ ಕಣ್ಣುಗಳ ಕುಮ್ಮಕ್ಕಿನಿಂದ ಆಗಷ್ಟೇ ಪಡ್ಡೆಯಾಗಿದ್ದ ನನ್ನ ಹೃದಯವನ್ನು ಲಪಟಾಯಿಸಿದ ನಿನ್ನ ಕಲೆಗೊಂದು ಸಲಾಮು. ನೀನು ಜೊತೆಜೊತೆಯಾಗಿ ಇದ್ದರೂ ಮಾತಿರಲಿಲ್ಲ, ಮೌನ ಸಂವಹನವೇ ಹಿತವೆನಿಸಿತ್ತು. ಬರುಬರುತ್ತಾ ತುಂಬಾ ಹತ್ತಿರವಾದಿರಿ. ನಿನ್ನ ಕಷ್ಟ, ತಾಪತ್ರಯಗಳಿಗೆ ನಾನೂ ಕಿವಿಯಾಗಿದ್ದೆ, ಜೊತೆಗೆ ಹೆಗಲಾಗಿದ್ದೆ ಕೂಡ. ಅವತ್ತು ಮುಕ್ತವಾಗಿ ಹೇಳಿಕೊಂಡ ನಿನ್ನ ಜೀವನದ ಆ ದುರಂತ ಕಥೆಯನ್ನು ಕೇಳಿ ನಾನು ತಬ್ಬಿಬ್ಟಾದೆ. ಒಳಗೊಳಗೇ ನೊಂದುಕೊಂಡೆ.
ಆಗಿದ್ದು ಆಗಿಹೋಗಿದೆ, ಯೋಚಿಸಬೇಡ. ಬದುಕಿನುದ್ದಕ್ಕೂ ನಾ ಜೊತೆಯಾಗಿರುತ್ತೇನೆಂಬ ಪ್ರಾಮಾಣಿಕ ಭರವಸೆಯನ್ನೂ ನೀಡಿದ್ದೆ. ನೋವು- ನಲಿವು ಹಿತವಾಗಿ ಬೆರೆತಿದ್ದಾಗಲೇ ಬದುಕು ಚೆಂದವೆಂದು ಮನವರಿಕೆ ಮಾಡಿಕೊಟ್ಟಿದ್ದೆ. ನಿನ್ನ ಮೇಲಿನ ಗೌರವ, ಆರಾಧನೆಯ ಜೊತೆಗೆ ಉತ್ಕಟವಾದ ಪ್ರೇಮವೂ ನನ್ನೊಳಗೆ ಗಾಢವಾಗಿ ಬೇರೂರಿ ಹೆಮ್ಮರವಾಗಿಬಿಟ್ಟಿತ್ತು.
ಆಗ ನನ್ನ ಪ್ರತಿ ನಾಡಿಮಿಡಿತದ ಉದ್ದಗಲಕ್ಕೂ ನಿನ್ನ ಹೆಸರಿನದೇ ಒಲವಾರ್ಚನೆ. ಏಕಾಂತದಲ್ಲಿದ್ದಾಗ ನಿನ್ನ ಹಣೆಗೆ ಪುಟ್ಟದೊಂದು ಪಪ್ಪಿ ಕೊಡಬೇಕು, ಮಗುವಂತೆ ನಿನ್ನ ಮಡಿಲಲ್ಲಿ ಮಲಗಿ ತಲೆಯ ನೀವಿಸಿಕೊಳ್ಳಬೇಕೆಂಬ ಭಾವುಕತೆಯ ಬಯಕೆಗಳ ಪಟ್ಟಿ ಆಂಜನೇಯನ ಬಾಲದಂತಿದೆ. ಇನ್ನೇನು ಜೀವನಪರ್ಯಂತ ಜೊತೆಯಾಗಿ ಅದ್ದೂರಿಯಾಗಿ ಬದುಕಿಬಿಡಬಲ್ಲೆ ಎಂದು ಧಿಮಾಕಿನಿಂದ ಬೀಗುವವನಿದ್ದೆ. ಆದರೆ…
ಅದೇನಾಯ್ತು ಪಾಪು ನಿಂಗೆ? ಠೂ ಬಿಟ್ಟು ಮುನಿಸಿಕೊಂಡಿದ್ದೀಯಲ್ಲ, ಯಾಕೆ? ಒಂದೇ ಒಂದು ಸೆಕೆಂಡೂ ನಿಮ್ಮ ಬಗ್ಗೆ ಕೆಟ್ಟದಾಗಿ ನಾನು ಕಲ್ಪಿಸಿದ್ದಿಲ್ಲ. ಈಗಲೂ ಅರೆಮಂಪರಿನಲ್ಲಿ ನಿನ್ನದೇ ಕನವರಿಕೆ. ಅಪರಾತ್ರಿಯ ಮಳೆ ನನ್ನನ್ನು ಛೇಡಿಸುವಂತೆ ಭಾಸವಾಗುತ್ತೆ. ಕಣ್ಣ ಹನಿಗಳು ಹೊತ್ತಲ್ಲದ ಹೊತ್ತಲ್ಲಿ ಬುಳಬುಳನೆ ಕೆನ್ನೆಗೆ ಇಳಿದುಬಿಡುತ್ತವೆ. ಹೃದಯವಂತೂ ರಚ್ಚೆಹಿಡಿದು ಕೂತ ಮಗುವಿನ ಕೀರಲು ದನಿಯಂತೆ ರೋದಿಸುತ್ತಿದೆ. ಎದೆದನಿ ಅರ್ಥವಾಗದಷ್ಟು ನಿರ್ಭಾವುಕಿ ನೀನಲ್ಲವೆಂದು ಗೊತ್ತಿದೆ. ವಿನಾಕಾರಣ ನಿರ್ದಯಿಯಾಗಬೇಡ. ದಮ್ಮಯ್ನಾ, ಹಿಂತಿರುಗಿ ಬಂದುಬಿಡಮ್ಮಾ..
ಪ್ರೇಮಪ್ರಕರಣದಲ್ಲಿ ಸಿಕ್ಕಿ ಬಂಧಿಯಾಗಿರುವ ನನಗೆ ಜಾಮೀನು ಕೊಡಲು ನೀನು ಬಂದೇ ಬರುತ್ತೀರೆಂದು ಚಾತಕ ಹಕ್ಕಿಯಂತೆ ಕಾಯುತ್ತಿದ್ದೇನೆ..
ಇಂತಿ…..
ನಿಮ್ಮೊಲವನ್ನಷ್ಟೇ ಬಯಸುವ ಪೆಕರ..
ಹೃದಯರವಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.