ಕೊನೆಯ ಪುಟದ ತಾಜ್‌ಮಹಲ್
Team Udayavani, Nov 7, 2017, 11:38 AM IST
ಪ್ರೇಯಸಿಯ ನೆನಪಿಗೆ ತಾಜ್‌ಮಹಲ್ ಕಟ್ಟಲಾಗದವರಿಗೆಲ್ಲ ನೋಟ್‌ಬುಕ್ಕಿನ ಕೊನೆಯ ಪುಟದ ಮೇಲೆ ಒಂದು ಸೆಳೆತವಿದೆ. ಅಲ್ಲಿ ಸಂಗಾತಿಯ
ರೇಖಾಚಿತ್ರ, ಪ್ರಪೋಸ್ ಮಾಡುವ ಕನಸುಗಳು, ಆಕೆಯ ಊರು, ಆಕೆಯ ಇಷ್ಟ, ಆಕೆಗಿಟ್ಟ ಅಡ್ಡಹೆಸರು- ಎಲ್ಲವನ್ನೂ ಬಿಡಿಸಿ, ಅದನ್ನು ಚುಂಬಿಸಿ, ಕನಸು ಕಾಣುವ ಆ ಕ್ಷಣದ ಸುಖ ಕಂಡು ಷಹಜಹಾನ್ ಕೂಡ ಹೊಟ್ಟೆಕಿಚ್ಚು ಪಡುತ್ತಾನೇನೋ…
ಮೊನ್ನೆ ಮೊನ್ನೆ ಅವ್ವ ನನ್ನ ಮದುವೆಗೆಂದು ಮನೆಯ ಧೂಳು ಕೊಡವಲು ನಿಂತಿದ್ದಳು. ಆರಂಭದಿಂದಲೂ ಎತ್ತಿಟ್ಟುಕೊಂಡಿದ್ದ ನನ್ನ ಓದಿನ ಪರಿಕರಗಳನ್ನು ಒಂದೆರಡು ಚೀಲದಲ್ಲಿ ಕಟ್ಟಿ ಮೇಲೆ ಎಸೆದಿದ್ದೆ. ಮನೆ ಗುಡಿಸುವ ನೆಪದಲ್ಲಿ ಅವು ಕೆಳಗೆ ಬಂದು ಬಿದ್ದಿದ್ದವು. ಕುತೂಹಲಕ್ಕೆಂದು ಏನಿದೆ ಎಂದು ನೋಡತೊಡಗಿದೆ. ಹೈಸ್ಕೂಲ್‌ನಲ್ಲಿ ಬರೆದ ನೋಟ್ಸ್ ಸಿಕ್ಕವು. ಕೊನೆಯ ಪುಟ ನೋಡಿ ನಗು ಬಂತು.
ಅಲ್ಲಿ ಬರೆದುಕೊಂಡಿದ್ದ ಹುಡುಗಿಯ ಹೆಸರು ನೋಡಿ, ಅರೆಕ್ಷಣ ಪುಳಕಿತನಾದೆ. ಅದರ ಜೊತೆಯಲ್ಲಿ ಅವಳ ಮುಖವೂ ನೆನಪಾಯ್ತು. ಮೊದಲ ಪ್ರೀತಿಯ ಕ್ಷಣಗಳು ಕಾಡಿದವು. ಹಾಗೆ ಅದನ್ನು ತೆಗೆದಿಟ್ಟು ಇನ್ನೊಂದಿಷ್ಟು ನೋಟ್ಸ್‌ಗಳನ್ನು ಕೆದಕಿದೆ. ಅಲ್ಲೂ ಕುತೂಹಲಕ್ಕೆ ಕೊನೆಯ ಪುಟಕ್ಕೆ ಬಿದ್ದೆ. ಅಲ್ಲೊಬ್ಬಳದ್ದು ಹೆಸರು. ನಾನಾಗಲೇ ಒಂದ್ಹೆಜ್ಜೆ ಮುಂದೆ ಹೋಗಿ ಹೃದಯದ ಚಿಹ್ನೆ ಬಳಸಿ, ಅದರೊಳಗೆ ನನ್ನ ಮತ್ತು ಅವಳ ಹೆಸರು ಬರೆದುಕೊಂಡಿದ್ದೆ.
ಅದು ಪಿಯುಸಿಯ ನೋಟ್ಸ್. ನನ್ನ ನಗು ತುಟಿ ಬಿಚ್ಚಿ ಆಚೆ ಬಂದಿತು. ಹೈಸ್ಕೂಲ್ನಲ್ಲಿ ಮೊದಲು ಅದೇ ಲವ್ ಎನಿಸಿತ್ತು. ಪಿ.ಯುಗೆ ಬಂದ ಮೇಲೆ ಕಾಲೇಜಿನ ಜೊತೆಗೆ ಹುಡುಗಿಯೂ ಹೊಸಬಳು ಬಂದಿದ್ದಳು. ಬಿ.ಎ. ಓದುವಾಗಿನ ನೋಟ್ಸ್‌ಗಳು ಸಿಕ್ಕವು. ಅಲ್ಲಿ ಕೊನೆಯ ಪುಟಗಳಲ್ಲಿ ಅರ್ಧರ್ಧ ಪುಟದಷ್ಟು ಬರೆದಿದ್ದ ಪ್ರೇಮ ಪತ್ರಗಳೇ ಸಿಕ್ಕವು. ಅದು ಪ್ರೀತಿಯೇ ಆಗಿರಲಿಲ್ಲ, ಬರೀ ಒಂದು ಆಕರ್ಷಣೆ.
ಹೀಗೆ ಬರೆದು ಬರೆದುಕೊಂಡೇ ನಾನು ಓದುವ ಅವಕಾಶದಿಂದ ವಂಚಿತನಾದೆ. ಆ ವಯಸ್ಸಿನಲ್ಲಿ ಪ್ರತಿ ಹಂತದಲ್ಲೂ ಒಬ್ಬೊಬ್ಬರು ಇಷ್ಟವಾಗುತ್ತಾ ಹೋಗುತ್ತಾರೆ. ನನ್ನಂಥವರು ನೋಟ್ಸ್‌ಗಳಲ್ಲಿ ಕೊನೆ ಪುಟವನ್ನು ಹೀಗೆ ಹಾಳು ಮಾಡಿಕೊಳ್ಳುತ್ತಾರೆ. ಯಾಮಾರಿದರೆ ಕೊನೆಯ ಪುಟದಂತೆ ಬದುಕು ಕೂಡ ಹಾಳಾಗುತ್ತದೆ; ವಯಸ್ಸಲ್ಲದ ವಯಸ್ಸಿನಲ್ಲಿ ಪ್ರೇಮವಲ್ಲದ ಪ್ರೇಮ ಅರಳತೊಡಗಿದಾಗ! ಕಾಲ ಬದಲಾಗಿದೆ.
ಅದರೊಂದಿಗೆ ನಮ್ಮ ಮನಸ್ಸೂ. ಆದರೆ, ನಮ್ಮಿಷ್ಟದ ಹುಡುಗ, ಹುಡುಗಿಯ ಹೆಸರನ್ನು ನೋಟ್ಸ್‌ನ ಕೊನೆಯ ಪುಟದಲ್ಲಿ ಬರೆದುಕೊಳ್ಳುವ ಗೀಳು ಬದಲಾಗಿಲ್ಲ. ಅದು ಬದಲಾಗುವುದೂ ಇಲ್ಲ. ತೋರಿಕೆಯ ವರ್ತನೆಗೆ ಬದಲಾವಣೆ ಹೆಚ್ಚು. ಆದರೆ, ಆಳದ ಭಾವಕ್ಕಲ್ಲ. ಅದಕ್ಕೆಂದೇ ಇರಬೇಕು, ಇಂದಿಗೂ ಕೊನೆಯ ಪುಟಗಳು ಹುಡುಗ- ಹುಡುಗಿಯ ಹೆಸರನ್ನು ಬರೆಸಿಕೊಳ್ಳಲು ಕಾದಿರುತ್ತವೆ.
ತನ್ನಿಷ್ಟದ ಹೆಸರನ್ನು ಬರೆದುಕೊಂಡು ಆಗಾಗ್ಗೆ ನೋಡುತ್ತಾ, “ಪ್ರೀತಿ ಮಾಡುತ್ತಿದ್ದೇನೆ’ ಅಂದುಕೊಳ್ಳುವ ಭಾವವೇ ಅವರಿಗೆ ಚೆಂದ. ಅವರಿಗೆ ನೋಟ್ಸ್ ಕೊಡುವ ನೆಪದಲ್ಲಿ ಕೊನೆಯ ಪುಟದ ಸಹಾಯದಿಂದ ಅದನ್ನು ನಿವೇದನೆ ಮಾಡಿದ್ದೂ ಉಂಟು. ಕೆಲವು ಸಂಬಂಧಗಳು ಕಟ್ ಆಗಿದ್ದುಂಟು. ಜಗಳವಾಗಿದ್ದೂ ಉಂಟು. “ಅವಳ’ ಹೆಸರು ಬರೆದುಕೊಂಡೇ ಕನಸು ಕಂಡು ಫೇಲಾಗಿದ್ದೂ ಉಂಟು.
ಕೆಲವರು ಅದೇ ದಿಸೆಯಿಂದ ಪರಸ್ಪರರು ಒಪ್ಪಿ ಪ್ರೇಮಿಗಳಾಗಿ ಕಾಲೇಜು ಬಿಟ್ಟು, ಓದು ಬಿಟ್ಟು ಕೂತಿದ್ದು ಉಂಟು. ಹುಚ್ಚು ಪ್ರೇಮಕ್ಕೆ ಪ್ರಾಣ ಹೋದದ್ದೂ ಉಂಟು. ಅದು ಆ ವಯಸ್ಸು ತಂದುಕೊಡುವ ಹುಚ್ಚುತನದ ಗಿಫ್ಟ್! ಆದರೆ, ಇಲ್ಲಿ ವಿಚಾರ ಅದಲ್ಲ! ನೀವು ಓದುವ ನಿಮ್ಮ ಪರಿಕರಗಳು ಇರುವುದು, ನಿಮ್ಮ ಪ್ರೇಮ ಸಂದೇಶದ ಸಹಾಯಕ್ಕೆ ಬರುವ ಮೇಘದೂತನಂಥ ಕಾರ್ಯಕ್ಕೆ ಅಲ್ಲ.
ನಿಮ್ಮ ಇಷ್ಟದ ಹುಡುಗ, ಹುಡುಗಿಯ ಹೆಸರು ಕೆತ್ತಿಕೊಳ್ಳಲೂ ಅಲ್ಲ. ನೋಟ್ಸ್‌ಗಳಲ್ಲಿ ಬರೆದುಕೊಳ್ಳುವುದಕ್ಕೆ ಪಾಠಗಳದ್ದೇ ರಾಶಿ ರಾಶಿ ವಿಷಯವಿದೆ. ಓದುವುದಕ್ಕೆ ಸಾಲದಷ್ಟು ಮಾಹಿತಿ ಇದೆ. ಆದರೆ, ನೀವು ಕೊನೆಯ ಪುಟದಲ್ಲಿ ಆಕೆಯ ಹೆಸರು ಬರೆದುಕೊಂಡು, ಕನಸು ಕಾಣುತ್ತಾ ಕೊನೆಯ ಬೆಂಚಿನಲ್ಲಿ ಕೂತುಕೊಂಡರೆ ಮುಂದೆ ನೀವು ಬರೀ ಕೂತೇ ಇರಬೇಕಾಗುತ್ತದೆ.
ಈ ವಯಸ್ಸಿನಲ್ಲಿ ಕ್ರಶ್ ಸಹಜ. ಅದನ್ನು ತೋರಿಸಲು ಹುಡುಕುವ ಮಾರ್ಗಗಳೂ ಸಹಜ. ಅದಕ್ಕೆ ನಿಮ್ಮ ಮನಸ್ಸು. ಬುಕ್ಕು, ನೋಟ್ಸು ಬಲಿಯಾಗುವುದು ಬೇಡ. ಓದನ್ನು ಅಡ್ಡದಾರಿಗೆ ತಳ್ಳುವ ನೀತಿಗೆ ಬರೆದುಕೊಳ್ಳುವ ಪ್ರೀತಿಯ ಹೆಸರುಗಳು ಕಾರಣವಾಗುವುದು ಬೇಡ. ಅದು ನಿಮ್ಮ ಶ್ರದ್ಧೆಯ, ಶಿಸ್ತಿನ ಸಂಕೇತವೂ ಹೌದು. ನೆನಪಿರಲಿ: ನೋಟ್ಸ್‌ಗಳ ಕೊನೆಯ ಪುಟದಲ್ಲಿ ಪ್ರೀತಿಗೆ ಜಾಗ ಕೊಡದವನೇ ಬದುಕಿನಲ್ಲಿ ಗೆಲ್ಲುತ್ತಾನೆ.
* ಸದಾಶಿವ್ ಸೊರಟೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ… ನಕ್ಸಲ್ ಎನ್‌ಕೌಂಟರ್ ಬಗ್ಗೆ ಡಿಐಜಿ ಹೇಳಿದ್ದೇನು ?
Udupi: ಈಶ್ವರನಗರ-ಪರ್ಕಳ ರಸ್ತೆಯ ಹೊಂಡಗಳಿಗೆ ಕೊನೆಗೂ ತೇಪೆ
Udupi: ವಿಸಿಲ್ ಹೊಡೆದು, ಕೈ ಸನ್ನೆಯಲ್ಲೇ ಟ್ರಾಫಿಕ್ ನಿರ್ವಹಣೆ!
Paddana-Tulu folk songs: ಮರೆಯಾಗದಿರಲಿ ಪಾಡ್ದನನವೆಂಬ ಸಂಸ್ಕೃತಿಯ ಸಂಪರ್ಕ ಕೊಂಡಿ
Padubidri: ನಿಧಾನವಾಗಿ ಚಲಿಸಿ, ಹೆದ್ದಾರಿ ಕಾಮಗಾರಿ ನಡೆಯುತ್ತಿದೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.