ದೀಪಾವಳಿ ದಿನವೇ ಬೆಂಕಿ ಹೊತ್ತಿಕೊಂಡಿತು
Team Udayavani, Dec 31, 2019, 4:22 AM IST
ಇತ್ತೀಚೆಗಂತೂ ಕವಿಮಹಾಶಯರಿಗಾಗಿ ಹಲವಾರು ವಾಟ್ಸಾಪ್ ಗುಂಪುಗಳು ಹುಟ್ಟಿಕೊಂಡಿವೆ. ಎಲ್ಲಾ ಗುಂಪುಗಳಲ್ಲೂ ಅವರೇ ಇದ್ದರೂ, ಅಲ್ಲಲ್ಲಿ ಆಗತಾನೆ ಕತೆ, ಕವಿತೆಯನ್ನು ಓದಿಕೊಳ್ಳುತ್ತಿರುವವರೂ ಇದ್ದಾರೆ. ಸಾಹಿತಿ, ಬರಹಗಾರರನ್ನು ಗುಂಪಿಗೆ ಸೇರಿಸುವುದು ಬಲು ಸುಲಭವಾಗಿದೆ. ಪತ್ರಿಕೆಗಳಲ್ಲಿ ಹೆಸರು, ಫೋನ್ ನಂಬರ್ ಕಂಡರೆ ಮುಗೀತು. ಹೇಳದೇ ಕೇಳದೆ, ಅವರನ್ನೂ ಹೊಸ ಹೊಸ ಗುಂಪುಗಳಲ್ಲಿ ಸೇರಿಸಿಬಿಡುತ್ತಾರೆ. “ನಾನು ನಿಮ್ಮನ್ನು ವಾಟ್ಸಾಪ್ ಗುಂಪಿಗೆ ಸೇರಿಸಬಹುದೆ?’ ಅಂತ ಸೌಜನ್ಯಕ್ಕಾದರೂ ಯಾರೂ ಕೇಳುವುದಿಲ್ಲ. ಇಂತಿಪ್ಪ ಜನರೇ, ಪತ್ರಿಕೆಯಲ್ಲಿ ಪ್ರಕಟವಾದ, ನನ್ನ ಬರಹದ ಕೊನೆಗಿದ್ದ ಮೊಬೈಲ್ ನಂಬರ್ ಅನ್ನು ಹಲವು ಗುಂಪುಗಳಲ್ಲಿ ಹಾಕಿಬಿಡುತ್ತಿದ್ದರು. ಅದರಿಂದ ನಾನು ಬಿಡಿಸಿಕೊಂಡು ಬರುವುದು, ಮತ್ತೆ ಇನ್ನೊಬ್ಬರು ನನ್ನ ಸೇರಿಸುವುದೂ ಮಾಮೂಲಿಯಾಗಿತ್ತು. ಇಂಥದೇ ಮಾರ್ಗದಲ್ಲಿ ಸೇರಿಕೊಂಡ ಗ್ರೂಪ್, ಈ ಕಾವ್ಯ ಸಿಂಚನ ವೇದಿಕೆ.
ಈ ಗುಂಪಿನಲ್ಲಿ ಇದ್ದಕ್ಕಿದ್ದಂತೆ ಹುರುಪು ಶುರುವಾಯಿತು. ಕಾರಣ, ದೀಪಾವಳಿ. ಏನಾದರು ಮಾಡಲೇಬೇಕು ಅಂತ, ಹಬ್ಬವನ್ನು ನೆಪವಾಗಿಟ್ಟುಕೊಂಡು ಗುಂಪಿನಲ್ಲಿ ಕವನ ಸ್ಪರ್ಧೆಯನ್ನು ಆಯೋಜಿಸಲಾಯಿತು. ಗ್ರೂಪ್‌ನ ಅಡ್ಮಿನ್, ಈ ಸ್ಪರ್ಧೆಯ ರೂವಾರಿ. ಬೆಳಗ್ಗೆಯಿಂದ ಸಂಜೆಯವರೆಗೂ ಕವನವನ್ನು ಗುಂಪಿನಲ್ಲಿ ಹಾಕುವುದು. ಉಳಿದವರು ಆ ಕವನಗಳ ವಿಮರ್ಶೆ ಮಾಡುವುದು ಅಂತ ತೀರ್ಮಾನವಾಯಿತು. ಹಾಗೆಯೇ, ನಮ್ಮ ಗುಂಪಿನಲ್ಲೇ ಒಬ್ಬರನ್ನು ಕವನದ ಆಯ್ಕೆಗೆ ನಿರ್ಣಾಯಕನನ್ನಾಗಿ ನೇಮಿಸಲಾಗಿತ್ತು. ಸ್ಪರ್ಧೆ ಏನೋ ಚೆನ್ನಾಗಿ ನಡೆಯಿತು. ಎಲ್ಲ ಕವಿ ಮಹಾಶಯರೂ ತಮಗೆ ತೋಚಿದಂತೆ ಕವನಗಳನ್ನು ಗೀಚಿ ಗುಂಪಿನಲ್ಲಿ ಹಾಕಿದರು. ಆದರೆ, ಸಮಸ್ಯೆ ಎದುರಾಗಿದ್ದೇ ಇಲ್ಲಿಂದ. ಯಾರೂ ವಿಮರ್ಶೆಗೆ ಮುಂದಾಗಲಿಲ್ಲ. ಕೊನೆಗೆ, ನಿರ್ಣಾಯಕ ಮಾತ್ರ ವಿಮರ್ಶೆಯಲ್ಲಿ ತೊಡಗಿದ. ಕಾವ್ಯದ ಗಂಧಗಾಳಿಯೂ ಇಲ್ಲದ ನಿರ್ಣಾಯಕನ ವಿಮರ್ಶೆಯು ಗುಂಪಿನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿತು. ಹೀಯಾಳಿಸುವ , ಮೂದಲಿಸುವ ರೂಪದಲ್ಲಿದ್ದ ಅವನ ವಿಮರ್ಶೆಯಿಂದಾಗಿ ಗುಂಪಿನ ಸದಸ್ಯರೆಲ್ಲಾ ಅವರನ್ನು ಹಾಗೂ ಅಡ್ಮಿನ್‌ನನ್ನು ತರಾಟೆಗೆ ತೆಗೆದುಕೊಂಡರು. ಆದರೆ, ವಿಮರ್ಶಕ ತನ್ನ ವಿಮರ್ಶೆ ಸರಿಯಾಗಿದೆ ಎಂದು ಸಮರ್ಥಿಸಲು ಮುಂದಾದರು. ಆಗ, ವಾದ ಜೋರಾಗಿ ಜಗಳದ ರೂಪ ಪಡೆದು, ಕೊನೆಗೆ ವಿಕೋಪಕ್ಕೆ ತಲುಪಿತು. ಇದರಿಂದಾಗಿ ಬೇಸತ್ತ ಅಡ್ಮಿನ್ ಮಹಾಶಯರು, ಈ ಕವಿಗಳ ಸಹವಾಸವೇ ಬೇಡ ಎಂದುಕೊಂಡು ಗುಂಪಿನಿಂದ ಹೊರ ನಡೆದರು. ಒಬ್ಬ ಅವಿವೇಕಿಯಿಂದಾಗಿ ಸದುದ್ದೇಶದ ಗುಂಪು ಅಂದು ಅಂತ್ಯ ಕಂಡಿತು.
ಎಲ್ಲರ ಕವನಗಳು ಬಾಯಿ ಮುಚ್ಚಿದವು. ಹೀಗೆ, ದೀಪಾವಳಿಯಂದು ನಮ್ಮ ಗ್ರೂಪ್‌ನಲ್ಲಿ ಬೆಂಕಿ ಹೊತ್ತಿಕೊಂಡಿತು.
ವೆಂಕಟೇಶ ಚಾಗಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.