ಬಸ್ಸು ತಪ್ಪಿಸಿದ ಗೆಳತಿಗೆ..
Team Udayavani, Feb 6, 2018, 1:55 PM IST
ಇವತ್ತು ನೀನು ಕಾಣಿಸುತ್ತಿಲ್ಲ. ನಿನ್ನ ಆ ನಗು ಇಲ್ಲ ಎನ್ನೋ ಕಾರಣಕ್ಕಾಗಿಯೇ ನಾನು ನಾನಾಗಿಲ್ಲ ಎನ್ನಿಸುತ್ತಿದೆ. ಏನನ್ನೋ ಕಳೆದುಕೊಂಡಂತೆ ಭಾಸವಾಗುತ್ತಿದೆ. ಇವತ್ತು ಕೆಲಸಕ್ಕೆ ರಜೆ ಮಾಡಿಬಿಡಲಾ ಎಂದುಕೊಳ್ಳುತ್ತಿದ್ದೇನೆ.
ಹಾಯ್ ಬಸ್ಸಿನ ಗೆಳತಿ,
ಎಂದಿನಂತೆ ಸರಿಯಾಗಿ ಬೆಳಗ್ಗೆ ಒಂಬತ್ತು ಗಂಟೆಗೆ ಆಫೀಸಿಗೆ ಹೊರಟವನು ಮತ್ತದೇ ಮಾಮೂಲಿ ಬಸ್ಸು ಹತ್ತಿದ್ದೆ. ನಿನಗೆ ಗೊತ್ತಲ್ಲ? ನಾನು ಹತ್ತುವ ಬಸ್ಸು ಹೆಚ್ಚು ಕಡಿಮೆ ಖಾಲಿಯಾಗಿಯೇ ಇರುತ್ತದೆ. ನನಗಾಗಿಯೇ ಬಿಟ್ಟಿರುವರೇನೋ ಎನ್ನುವಂತೆ ಬಸ್ಸಿನ ಹಿಂಬಾಗಿಲಿನ ಪಕ್ಕದ ಎರಡನೇ ಸೀಟು ಸದಾ ಖಾಲಿಯಾಗಿಯೇ ಇರುತ್ತಿತ್ತು. ಇವತ್ತು ಕೂಡ ಖಾಲಿ ಇತ್ತು. ಸರಕ್ಕನೇ ಅಲ್ಲಿ ಕುಳಿತುಕೊಂಡವನ ಕಣ್ಣುಗಳು ಅಪ್ರಯತ್ನಪೂರ್ವಕವಾಗಿ ಡ್ರೆ„ವರ್‌ನ ಹಿಂಬದಿಯ ಎರಡನೇ ಸೀಟಿನ ಕಿಟಕಿಯ ಪಕ್ಕದ ಸೀಟಿನ ಬಳಿ ನೋಡಿದ್ದವು. ಅಲ್ಲಿ ನೀನು ಕಾಣಿಸಲಿಲ್ಲ..!
ಅದೇನಾಯೊ¤à ಗೊತ್ತಿಲ್ಲ .ಹಾವು ತುಳಿದವನಂತೆ ಚಂಗನೆ ಸೀಟಿನಿಂದ ಎಗರಿನಿಂತವನೇ ಆಚೆ ಈಚೆ, ಹಿಂದೆ ಮುಂದೆ ಅಂತೆಲ್ಲಾ ನಿನ್ನ ಮುದ್ದು ಮುಖ ನೋಡಲಿಕ್ಕಾಗಿ ಹುಡುಕಾಡಿದ್ದೆ. ಹಾಗೆ ನಾನು ಎದ್ದು ನಿಂತು ಹುಡುಕಾಡಿದ ಚೆಂದಕ್ಕೆ ಕಂಡಕ್ಟರ್ ನನ್ನ ಹತ್ತಿರ ಬಂದು “ಏನಾಯ್ತು ಮರಾಯೆÅ? ಏನಾದ್ರೂ ಮರೆತು ಬಂದ್ರಾ?’ಎಂದು ಕೇಳಿದ್ದ. ಅದೇಕೋ ಸಣ್ಣ ಅವಮಾನವಾದಂತೆನಿಸಿ ಸುಮ್ಮನೆ ಕುಳಿತುಕೊಂಡೆ. ಮತ್ತದೇ ಮಾಮೂಲಿ ನಿನ್ನ ಸೀಟಿನತ್ತ ದೃಷ್ಟಿ ಹರಿಸಿದ್ದೆ. ಸತ್ಯ ನೀನು ಕಾಣುತ್ತಿಲ್ಲ. ಹೌದು, ನೀನು ಬಂದಿರಲಿಲ್ಲ ಇವತ್ತು!
ಪ್ರಾಯಶಃ ನಿನಗೆ ಗೊತ್ತಿರಬಹುದು, ನಿನ್ನನ್ನು ನಾನು ಇವತ್ತು ಅದೆಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎನ್ನುವುದು. ದಿನವೂ ಇದೇ ಸಮಯಕ್ಕೆ ಬಸ್ಸು ಹತ್ತಿ ಕುಳಿತೊಡನೆ ನಿನ್ನ ಕಡೆ ನೋಡುತ್ತಿದ್ದೆ. ಅದೇ ಸಮಯಕ್ಕೆ ಸರಿಯಾಗಿ ನೀನೂ ನಿಧಾನವಾಗಿ ಕತ್ತನ್ನು ತಿರುಗಿಸಿ ಒಮ್ಮೆ ಮಾತ್ರ ಹೌದೋ ಅಲ್ಲವೋ ಎನ್ನುವಂತೆ ನೋಡಿ ಪರಿಚಯದ ನಗುವೊಂದನ್ನು ಬೀರುತ್ತಿದ್ದೆ. ಹಾಗೆ ನಕ್ಕಾಗೆಲ್ಲಾ ನನ್ನೆದೆಯಲ್ಲಿ ಮಲ್ಲಿಗೆ ಅರಳುತಿತ್ತು. ನಿಜ ಕಣೆ. ಮಲ್ಲಿಗೆಯನ್ನು ಪೋಣಿಸಿಟ್ಟ ರೀತಿ ಕಾಣುತ್ತಿದ್ದ ನಿನ್ನ ಪುಟ್ಟ ಪುಟ್ಟ ಹಲ್ಲುಗಳ ಶುಭ್ರತೆ ಅದೆಂಥದೋ ಸೆಳೆತವನ್ನು ನನ್ನಲ್ಲಿ ಮೂಡಿಸಿತ್ತು. ಮತ್ತಷ್ಟು ನೋಡುವಾ ಎನ್ನುವಷ್ಟರಲ್ಲೇ ನೀನು ತಿರುಗಿ ಬಿಟ್ಟಿರುತ್ತಿದ್ದೆ. ಮತ್ತೂಂದು ಸ್ಟಾಪು ಬಂದಾಗ ನೀನು ತಪ್ಪದೇ ತಿರುಗಿ ನೋಡುತ್ತಿದ್ದೆ. ನಾನು ಮತ್ತೆ ಖುಷಿಯಾಗುತ್ತಿದ್ದೆ.ಹಾಗೆ ಹಾದು ಹೋಗುವ ಬರೋಬ್ಬರಿ ಎಂಟು ಸ್ಟಾಪುಗಳಲ್ಲಿಯೂ ನೀನು ಎಂಟು ಬಾರಿ ತಿರುಗಿ ನೋಡಿ ನಗು ಚೆಲ್ಲುತ್ತಿದ್ದರೆ ನಾನು ಅದೆಲ್ಲಿ ಕಳೆದುಹೋಗುತ್ತಿದ್ದೆನೋ ನನಗೆ ತಿಳಿದಿಲ್ಲ.
ಒಂದು ಸತ್ಯ ಹೇಳುತ್ತೀನಿ ಕೇಳು. ನೀನು ಪ್ರತೀದಿನವೂ ಜಡೆಯನ್ನು ನೀಟಾಗಿ ಹೆಣೆದು ಅದಕ್ಕೊಂದು ಪುಟ್ಟ ಮಲ್ಲಿಗೆಯ ದಂಡೆಯನ್ನು ಮುಡಿದು ಬರುತ್ತಿದ್ದೆಯಲ್ಲಾ, ಆಗೆಲ್ಲಾ ಅದೆಷ್ಟೋ ಬಾರೀ ಕೇಳಬೇಕೆನಿಸಿತ್ತು.. .ನಿನಗೆ ಈ ಜಡೆ ಹಾಕಿದವರಾರು? ಆ ಹೂವು ನಿಮ್ಮ ಮನೆಯಲ್ಲೇ ಬೆಳೆದದ್ದಾ? ಹೀಗೆ ಕೇಳುವ ನೆವದಲ್ಲಿ ನಿನ್ನ ಪರಿಚಯ ಮಾಡಿಕೊಳ್ಳಬಹುದಲ್ಲಾ ಅಂದೆಲ್ಲಾ ಆಲೋಚಿಸಿದ್ದೆ. ಕಳೆದ ಆರು ತಿಂಗಳಿನಿಂದ ಆ ಮಾತುಗಳು ಮನಸ್ಸಿನಲ್ಲಿ ಮೂಡಿದ್ದವೇ ಹೊರತು ತುಟಿಯಿಂದಾಚೆ ಬರಲೇ ಇಲ್ಲ.
ದಿನವೂ ನೀನು, ನನ್ನ ಸ್ಟಾಪ್ ಬರುವ ಮೊದಲೇ ಕೆಳಗಿಳಿಯುತ್ತಿದ್ದೆ. ಮತ್ತೆರಡು ಸ್ಟಾಪು ದಾಟಿದರೆ ನನ್ನ ಆಫೀಸು. ನಿನಗದು ಗೊತ್ತಿದೆಯಾ?.. ನನಗೆ ಗೊತ್ತಿಲ್ಲ. ಆದರೆ ಹಾಗೆ ಪ್ರತೀ ಸಾರಿ ಇಳಿಯುವ ಮುನ್ನ ಮತ್ತದೇ ಮಲ್ಲಿಗೆಯ ನಗೆ ಬೀರಲು ನೀನು ಮರೆಯುತ್ತಿರಲಿಲ್ಲ. ಆಗೆಲ್ಲಾ ನನ್ನಲ್ಲಿ ಅದೆಂಥದೋ ಪುಳಕ. ಅದೊಂದು ನಗು ಸಾಕಿತ್ತು ನನಗೆ. ಅವತ್ತಿಡೀ ನಾನು ಹ್ಯಾಪಿಯೋ ಹ್ಯಾಪಿ. ಆಫೀಸಿನಲ್ಲೂ ನನಗೆ ಅದೇ ಪ್ರಶಂಸೆ. “ಏನು ಮರಾಯೆÅ ಯಾವತ್ತೂ ಖುಷಿಯಾಗಿರಿ¤àರಲ್ಲಾ’ ಅಂತ. ಅದಕ್ಕೆ ಕಾರಣ ಮಾತ್ರ ನೀನೇ ಆಗಿದ್ದೆ ಎನ್ನುವುದನ್ನು ಅವರಿಗೆ ಹೇಗೆ ಹೇಳಲು ಸಾಧ್ಯವಿತ್ತು ಹೇಳು!
ಇವತ್ತು ನೀನು ಕಾಣಿಸುತ್ತಿಲ್ಲ. ನಿನ್ನ ಆ ನಗು ಇಲ್ಲ ಎನ್ನೋ ಕಾರಣಕ್ಕಾಗಿಯೇ ನಾನು ನಾನಾಗಿಲ್ಲ ಎನ್ನಿಸುತ್ತಿದೆ. ಏನನ್ನೋ ಕಳೆದುಕೊಂಡಂತೆ ಭಾಸವಾಗುತ್ತಿದೆ. ಇವತ್ತು ಕೆಲಸಕ್ಕೆ ರಜೆ ಮಾಡಿಬಿಡಲಾ ಎಂದುಕೊಳ್ಳುತ್ತಿದ್ದೇನೆ. ಇಷ್ಟು ದಿನಗಳಲ್ಲಿ ನಿನ್ನನ್ನು ಒಮ್ಮೆಯಾದರೂ ಮಾತನಾಡಿಸಲು ಪ್ರಯತ್ನ ಪಟ್ಟಿದ್ದಿದ್ದರೆ ಈ ಹೊತ್ತು ನಿನ್ನ ಮೊಬೈಲ್ ನಂಬರಾದರೂ ನನ್ನ ಬಳಿ ಇರುತಿತ್ತು. ಫೋನು ಮಾಡಿ ನೀನ್ಯಾಕೆ ಬಂದಿಲ್ಲ ಎಂದು ತಿಳಿದುಕೊಳ್ಳಬಹುದಿತ್ತಲ್ಲಾ ಅಂತನ್ನಿಸುತ್ತಿದೆ. ಯಾರನ್ನಾದರೂ ಕೇಳ್ಳೋಣ ಎಂದರೆ ಯಾರೂ ಗೊತ್ತಿಲ್ಲ. ಅಷ್ಟಕ್ಕೂ ಏನಂತ ಕೇಳಲಿ ಅನ್ನೋದು ತಿಳಿಯುತ್ತಿಲ್ಲ…
ಗೆಳತಿ, ನೀನು ಚೆನ್ನಾಗಿಯೇ ಇದ್ದೀಯ ಎನ್ನೋ ನಂಬಿಕೆ ನನ್ನದು. ನಾಳೆ ಬರುತ್ತೀಯಲ್ಲ? ಆಗ ನಿನ್ನನ್ನು ಖಂಡಿತ ಮಾತನಾಡಿಸುತ್ತೇನೆ. ನಿನ್ನ ಕಣ್ಣಲ್ಲಿ ಕಣ್ಣಿಟ್ಟು ನನ್ನ ಸ್ನೇಹವನ್ನು ಬಿಚ್ಚಿಡುತ್ತೇನೆ. ಮಾತನಾಡಲು ಬಹಳಷ್ಟು ಇದೆ. ಹಾಗಾಗಿ ಬಾರದೇ ಇರಬೇಡ.
ಇತಿ ನಿನ್ನ ಸಹಪಯಣಿಗ
-ನರೇಂದ್ರ ಎಸ್. ಗಂಗೊಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳಿವು..
Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Loksabha:ಕಾಂಗ್ರೆಸ್ ಅಂಬೇಡ್ಕರ್ ಗೆ ಹಲವು ಬಾರಿ ಅವಮಾನ ಮಾಡಿದೆ: ಪ್ರಧಾನಿ ಮೋದಿ ತಿರುಗೇಟು
ತೀವ್ರ ಸ್ವರೂಪ ಪಡೆದ ಅತಿಥಿ ಶಿಕ್ಷಕರ ಪ್ರತಿಭಟನೆ; ಶಿಕ್ಷಕ ಅಸ್ವಸ್ಥ, ಆಸ್ಪತ್ರಗೆ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.