ಬೀಳ್ಕೊಡುಗೆ ಎಂಬ ದೀರ್ಘ ಬೇಸಿಗೆ ಕಾಲ
Team Udayavani, Mar 7, 2017, 3:45 AM IST
ಮೂರ್ನಾಲ್ಕು ವರ್ಷದ ನೆನಪುಗಳೆಲ್ಲಾ ಒಟ್ಟಿಗೇ ಎದುರುಗೊಂಡಾಗ ಮುಷ್ಟಿ ಗಾತ್ರದ ಹೃದಯ ಹೇಗೆ ತಾನೆ ಸಹಿಸೀತು? ಯಾರಲ್ಲಿ ಹೇಳಿಕೊಂಡೀತು ತಲ್ಲಣ ತಹತಹವ? ಒಂದೇ ಗೂಡಿನ ಹಕ್ಕಿಗಳಂತಿದ್ದವರು ಇಂದಿನಿಂದ ನಾನೊಂದು ತೀರ ನೀನೊಂದು ತೀರ. ಒಬ್ಬರ ಮುಖ ಮತ್ತೂಬ್ಬರು ನೋಡುವುದು ಯಾವ ಕಾಲಕ್ಕೋ?
ಮಾರ್ಚ್ ತಿಂಗಳು ಬಂದರೆ ಸಾಕು; ಬೇಸಿಗೆಯ ಜತೆಗೇ ಈ ಬೀಳ್ಕೊಡುಗೆ ಕಾರ್ಯಕ್ರಮವೂ ಬಂದು ಬಿಡುತ್ತದೆ. ನೆನ್ನೆ ಮೊನ್ನೆ ಕಾಲೇಜು ಸೇರಿದ ನೆನಪು ಹಸಿರಾಗಿರುವಾಗಲೇ ಬೀಳ್ಕೊಡುಗೆಯ ತಾಪ ಎದೆಗೆ ತಾಕಿ ಮನಸ್ಸು ಅಲ್ಲೋಲ ಕಲ್ಲೋಲ! ನೆನಪು, ಕನಸು, ಕನವರಿಕೆ, ಉಲ್ಲಾಸ, ಉತ್ಸಾಹ, ಆಯಾಸ, ನಿರಾಯಾಸ, ಬವಣೆ, ಚಿಮ್ಮುವ ನಗು, ಕಾಂತಿ, ಕ್ರಾಂತಿ, ಸೋಲು, ಗೆಲವು, ಕಚಗುಳಿ, ಆಕಳಿಕೆ, ಸೀನು, ಬೈಗುಳ, ಆಕಾಂಕ್ಷೆ, ಹೊಸತನ, ಪ್ರಯಾಣ, ಪ್ರಯಾಸ, ತೂಕಡಿಕೆ, ನೀರಡಿಕೆ, ಮೋಹ, ಸ್ವಾಹ… ಅಬ್ಟಾ, ಇಂಥಾ ಅನೇಕ ವಿಶೇಷಗಳನ್ನು ಒಟ್ಟುಗೂಡಿಸಿದಾಗ ಈ ಎದೆ ಬಿರಿವ ನೋವು ಬೀಳ್ಕೊಡುಗೆಯ ರೂಪದಲ್ಲಿ ಕೈ ಜಗ್ಗುತ್ತದೆ.
ಅಪರಿಚಿತರಾಗಿ ಬಂದು ಪರಿಚಿತರಾಗಿ ಹೋಗುವ ಈ ಕಾಲಾವಧಿ ಅಪೂರ್ವ ಮತ್ತು ಮೋಹಕ. ನಿಮಗೆಲ್ಲಾ ನೆನಪಿರಬಹುದು, ಕಾಲೇಜಿಗೆ ಮೊದಲ ದಿನ ಎಂಟ್ರಿ ಕೊಟ್ಟಾಗ ಎದೆ ಢವ ಢವ, ಹಣೆಯಲ್ಲಿ ಭಯದ ನೆರಿಗೆಗಳು, ಅಂಗೈಯಲ್ಲಿ ಬೆವರ ತೇವ, ದೃಷ್ಟಿ ದಿಕ್ಕಾಪಾಲು, ಬುದ್ದಿ ಲೋ ಬ್ಯಾಟರಿ. ಮೊಲ ಹಿಡಿದು ಬೋನಿಗೆ ಹಾಕಿದ ಅನುಭವ. ದಿನಗಳೆದಂತೆ ಎಲ್ಲವೂ ಸರಿಯಾಗಿಬಿಡುತ್ತದೆ. ನೋಡಿಯೂ ನೋಡದಂತೆ ಹೋದವಳು ಹಾರ್ಟ್ ಬೀಟ… ಆಗಿಬಿಡುತ್ತಾಳೆ, ಪಕ್ಕದಲ್ಲಿ ಕುಳಿತವ ಕುಚುಕು ಗೆಳೆಯನಾಗಿಬಿಡುತ್ತಾನೆ, ಲೈಬ್ರರಿಯಲ್ಲಿ ಸಿಕ್ಕವರೆಲ್ಲಾ ಅಡ್ಡೆಯ ಮೆಂಬರ್‌ಗಳು, ಕ್ಯಾಂಟೀನಿನಲ್ಲಿ ಎದುರಾದವಳೇ ಅಮರಾ ಮಧುರಾ ರಾಗ ಮಾಲಿಕೆ! ಹೀಗಲ್ಲಾಕೂಡಿಕೊಂಡವರನ್ನು ಒಂದೇ ಏಟಿಗೆ ಛಿದ್ರಗೊಳಿಸಿಬಿಡುತ್ತದಲ್ಲಾ ಪಾಪಿ ಬೀಳ್ಕೊಡುಗೆ ಅಲಿಯಾಸ್ ಸೆಂಡ್ ಆಫ್! ಛೀ, ಅದು ಕ್ರೂರಿ, ನಿಷ್ಕರುಣಿ.
ಅಂದು ಎಲ್ಲರೂ ಹೊಸ ದಿರಿಸಿನೊಂದಿಗೆ ಕಾಲೇಜಿಗೆ ಬರುತ್ತೇವೆ. ಆಟೋಗ್ರಾಫ್ ಹಾಕುತ್ತೇವೆ, ಹಾಕಿಸಿಕೊಳ್ಳುತ್ತೇವೆ. ಸಿಹಿ ಹಂಚುತ್ತೇವೆ. ಅಳು- ನಗು ಎರಡೂ ಒಂದನ್ನೊಂದು ಸಂಧಿಸುವ ಸಂಕ್ರಮಣ. ಭಾವನೆಗಳಿಗೆ ಪದ ಜೋಡಿಸಿ ಹಾಡುತ್ತೇವೆ, ಹಾಡಿನಲ್ಲಿ ಇಷ್ಟು ದಿನ ಹೇಳದಿದ್ದದ್ದನ್ನು ಹೇಳಿ ಹಗುರಾಗುತ್ತೇವೆ. ಮಾತು ಎಷ್ಟು ಆಡಿದರೂ ಮುಗಿಯದ ಗಣಿ. ಮೌನಕ್ಕೆ ಜಾಗವೇ ಇಲ್ಲ. ನೋಟ, ಅಳು, ತಳಮಳ, ಕಂಪನ, ಸಂಕಟಗಳಿಗೆ ಲಗಾಮು ಕಳಚಿಕೊಂಡಿರುತ್ತದೆ. ಇಷ್ಟಕ್ಕೂ ಬೀಳ್ಕೊಡುಗೆಯ ದಿನ ಕಣ್ಣೀರು ಹಾಕದವರು ಯಾರಾದರೂ ಇದ್ದಾರೆಯೇ? ಮೂರ್ನಾಲ್ಕು ವರ್ಷದ ನೆನಪುಗಳೆಲ್ಲಾ ಒಟ್ಟಿಗೇ ಎದುರುಗೊಂಡಾಗ ಮುಷ್ಟಿ ಗಾತ್ರದ ಹೃದಯ ಹೇಗೆ ತಾನೆ ಸಹಿಸೀತು? ಯಾರಲ್ಲಿ ಹೇಳಿಕೊಂಡೀತು ತಲ್ಲಣ ತಹತಹವ? ಒಂದೇ ಗೂಡಿನ ಹಕ್ಕಿಗಳಂತಿದ್ದವರು ಇಂದಿನಿಂದ ನಾನೊಂದು ತೀರ ನೀನೊಂದು ತೀರ. ಒಬ್ಬರ ಮುಖ ಮತ್ತೂಬ್ಬರು ನೋಡುವುದು ಯಾವ ಕಾಲಕ್ಕೋ? ಗೊಂಬೆ ಆಡೊÕàನೇ ಹೇಳಬೇಕು.
ಅವಳು ಸಖತ್ತು ಡ್ರೆಸ್ ಮಾಡಿಕೊಂಡು, ಇವನು ಟ್ರಿಮ್ಮಾಗಿ ಬಂದಿದ್ದರೂ ಅಲ್ಲೇನೇ ಘಟಿಸಿದರೂ ಅದು ಅಲ್ಪಾಯು. ಉಳಿಯಲು ಸಾಧ್ಯವಿಲ್ಲ. ಆದರೂ ಬದುಕಿನೆಡೆಗಿನ ಕಡು ಮೋಹಿಗಳಲ್ಲವೆ ನಾವು! ಸಾಯುವಾಗಲೂ ಹುಲ್ಲು ಕಡ್ಡಿ ಹಿಡಿದುಕೊಂಡುಬಿಡುತ್ತೇವೆ.
ಅವಳು ಮತ್ತೆ ಮತ್ತೆ ತಿರುಗಿ ನೋಡುತ್ತಾಳೆ, ಇವನು ಕಣ್ಣಲ್ಲೇ ಅಸಹಾಯಕತೆ ಹೊರಹಾಕುತ್ತಾನೆ. ಅವಳು ಏನನ್ನೋ ಹೇಳ ಬಯಸುತ್ತಾಳೆ, ಇವನು ಮೌನದಲ್ಲಿ ಮಹಾಕಾವ್ಯ ಬರೆದು ಬಿಸಾಕುತ್ತಾನೆ. ಅವಳು ದೀರ್ಘವಾಗಿ ಉಸಿರು ಚೆಲ್ಲಿ ತಲೆ ತಗ್ಗಿಸುತ್ತಾಳೆ, ಇವನು- ಓ ನನ್ನ ಚೇತನ ಆಗು ನೀ ಅನಿಕೇತನವಾಗುತ್ತಾನೆ. ಅವಳ ಕೆನ್ನೆಯ ಮೇಲಿನ ನಿಂತ ಕಣ್ಣೀರ ಹನಿಯೊಳಗೆ ಕೋಟಿ ಕನಸುಗಳು ಕರಗುತ್ತಿವೆ, ಇವನ ಎದೆ ಬಡಿತ ಇಮ್ಮಡಿಯಾಗಿ ಆಮೂಲಾಗ್ರ ಪ್ರಳಯ ಸಂಭವಿಸುತ್ತದೆ.
ಇದೇ ಅಲ್ಲವೇ ಬೀಳ್ಕೊಡುಗೆ ಎಲ್ಲರಿಗೂ ಕೊಡುವ ಕೊಡುಗೆ?! ಕಾರಣ ಇದು ಬೇಸಿಗೆ. ಅಂದಹಾಗೆ, ಬೀಳ್ಕೊಡುಗೆ ಎಂಬುದು ಹೀಗೆ ಬಂದು ಹಾಗೆ ಹೋಗುವ ಮಾಮೂಲಿ ಬೇಸಿಗೆಯಲ್ಲ, ನೆನಪಿರಲಿ.
– ಕಂಡಕ್ಟರ್ ಸೋಮು, ಎಡೆಯೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.