ಫಕೀರನೊಬ್ಬನ ಪ್ರೇಮಪತ್ರ
Team Udayavani, Dec 5, 2017, 1:39 PM IST
ನಾನಷ್ಟೇ ಅಲ್ಲ; ಘಮ್ಮೆನ್ನುವ ಕಾಫಿ, ಜೀಕುವ ಉಯ್ನಾಲೆ, ಎದೆಯೊಳಗಿನ ಹಾಡು, ಬೀಸಿ ಬರುವ ತಂಗಾಳಿ…ಇವೆಲ್ಲವೂ ನಿನ್ನ ನಿರೀಕ್ಷೆಯಲ್ಲಿಯೇ ಇವೆ…
ಹೇಗಿದ್ದೀಯಾ ಜಾಯ್,
ಮುಂಜಾನೆಯ ಸವಿಗನಸಿನಲ್ಲಿ, ಮಧ್ಯಾಹ್ನದ ಉರಿ ಬಿಸಿಲಿನಲ್ಲಿ, ಇಳಿಸಂಜೆಯ ತಂಪಿನಲ್ಲಿ ತಪ್ಪದೇ ನೆನಪಾಗುವ ನೀನು, ಒಮ್ಮೊಮ್ಮೆ ನನ್ನನ್ನು ಇಡೀ ರಾತ್ರಿ ಜಾಗರದ ಜೀವವಾಗಿಸಿ ಬಿಡುತ್ತೀಯ ಕಣೆ. ನಿನ್ನೆ ಅಪರಾತ್ರಿಯಲ್ಲಿ ಇದ್ದಕ್ಕಿದ್ದಂತೆ, ಮಳೆ ಶುರುವಾಗುವುದಕ್ಕೂ ನಂಗೆ ಎಚ್ಚರಾಗುವುದಕ್ಕೂ ಸರಿ ಹೋಯಿತು!
ಮನೆ ಬಾಗಿಲು ತೆರೆದು ನಿಂತವನನ್ನು ಬಂದು ಆವರಿಸಿದ ತಂಗಾಳಿಯ ಅಪ್ಪುಗೆಯಲ್ಲಿ ಇದ್ದದ್ದು ನಿನ್ನದೇ ನೆನಪು. ನೇರ ಅಡುಗೆಮನೆಗೆ ಹೋಗಿ ಸಕ್ಕರೆಯಿಲ್ಲದ ಘಮ್ಮನೆಯ ಕಾಫಿ ಮಾಡಿಕೊಂಡು, ಟೆರೇಸಿಗೆ ಹೋಗಿ, ಉಯ್ನಾಲೆ ಮೇಲೆ ಕೂತವನು ಒಂದೊಂದೇ ಗುಟುಕು ಕಾಫಿ ಕುಡಿಯುತ್ತಾ ಕುಳಿತೆ. ಉಯ್ನಾಲೆಯ ಸಣ್ಣ ಜೀಕು, ಹದವಾಗಿ ಬೀಳುತ್ತಿದ್ದ ಮಳೆ… ಮನದೊಳಗೆ ಹೀಗೊಂದು ಹಾಡು ಗುನುಗಿಕೊಂಡೆ.
ಋತುಮಾನವೆ ಹೀಗಿರುವಾಗ
ಸವಿಭಾವಕೆ ಎಲ್ಲಿದೆ ಕೊರತೆ
ಖುಷಿಯಿಂದಲೆ ಸಾಗಿದೆ ಈಗ
ಕುಶಲೋಪರಿ ನಿನ್ನಯ ಕುರಿತೆ
ಇಂಥ ಸಮಯದಲ್ಲಿ, ಪಕ್ಕದಲ್ಲಿ ನೀನಿರಬೇಕಿತ್ತು ಅಂತ ತೀವ್ರವಾಗಿ ಅನಿಸಿದ್ದು ಸುಳ್ಳಲ್ಲ. ಇದ್ದಿದ್ದರೆ ಹೂವೊಂದನ್ನು ಎತ್ತಿಕೊಂಡಷ್ಟೇ ಹಗುರವಾಗಿ ನಿನ್ನನ್ನು ಎತ್ತಿ ಅಪ್ಪಿ, ಹಣೆಗೊಂದು ಹೂ ಮುತ್ತನಿಡುತ್ತಿದ್ದೆ. ಬಾಕಿ ಉಳಿಸಿಕೊಂಡಿದ್ದ ಅಷ್ಟೂ ಮಾತುಗಳನ್ನು ಒಂದೇ ಉಸಿರಿಗೆ ಆಡುತ್ತಿದ್ದೆ. ನಿನ್ನನ್ನು ಎದುರಿಗೆ ಕೂರಿಸಿಕೊಂಡು ನಿನ್ನದೇ ಒಂದು ಮುದ್ದಾದ ಚಿತ್ರ ಬರೆದುಕೊಡುತ್ತಿದ್ದೆ.
ನಿನ್ನನ್ನು ಗೋಳು ಹೊಯ್ದುಕೊಳ್ಳಲು ಕವಿತೆ ಓದುತ್ತಿದ್ದೆ. ನಿನ್ನನ್ನು ಪುಳಕಗೊಳಿಸಲು ಎದೆಯ ಭಾವವೆಲ್ಲವನ್ನೂ ಹಾಡಾಗಿಸಿ, ಅನುರಾಗದ ಬುತ್ತಿಯಿಂದ ಕೈತುತ್ತು ನೀಡಬೇಕು ಗೆಳತೀ, ಬೇಡೆನ್ನ ಬೇಡ, ತುಸುದೂರ ಜತೆಯಾಗಿ ನಡೆಯಬೇಕು ಎಂದು ಹಾಡುತ್ತಿದ್ದೆ. ಅಷ್ಟೇ ಅಲ್ಲ; ಅದಕ್ಕೆ ನೀನೇನಾದ್ರೂ ಒಪ್ಪದೇ ಹೋಗಿದ್ದರೆ, ಆ ಸುರಿವ ಮಳೆ, ನುಗ್ಗಿ ಬರುವ ಇರುಚಲು ಹನಿಯನ್ನು ಲೆಕ್ಕಿಸದೆ ನಿನ್ನೆದುರು ಮಂಡಿಯೂರಿ ಕೂತೇ ಬಿಡುತ್ತಿದ್ದೆ.
ಹೌದು. ಮನದೊಳಗಿನ ಸಾವಿರ ಅಲೆಗಳ ಸಾಗರಕ್ಕೆ ತೀರ ನೀನು. ಒಲವ ದೇವಳದ ಸಾಲು ಸಾಲು ಹಣತೆಗಳ ಲಕ್ಷದೀಪೋತ್ಸವದ ದೀಪ ನೀನು. ನನ್ನೊಳಗಿನ ಜೀವನ ಪ್ರೀತಿಯ ಕಾರಣ ನೀನು. ಬದುಕಿನ ತಲೆಬಾಗಿಲ ತೋರಣ ನೀನು. ಒಳಮನೆಯ ಸಂಭ್ರಮದ ಕಲರವ ನೀನು. ಯಾವತ್ತಾದರೂ ನನ್ನ ಕನಸನ್ನು ನನಸು ಮಾಡುತ್ತಿಯಲ್ಲವಾ ಹುಡುಗೀ?
ಮಳೆ ಬರುವ ಸಾವಿರ ಅಪರಾತ್ರಿಗಳಲ್ಲಿ ನಿನ್ನ ಹಾಜರಿಗಾಗಿ ಕಾಯುತ್ತಲೇ ಇರುತ್ತೇನೆ. ನನ್ನೊಂದಿಗೆ ಘಂ ಎನ್ನುವ ಕಾಫಿ, ಜೀಕುವ ಉಯ್ನಾಲೆ , ಎದೆಯೊಳಗೆ ಕದಲುವ ಹಾಡು, ಬೀಸಿ ಬರುವ ಗಾಳಿ… ಎಲ್ಲವೂ ನಿನ್ನ ಬರುವಿಕೆಗಾಗಿ ಕಾಯುತ್ತಾ ಕುಳಿತಿವೆ. ಬರುತ್ತೀಯಲ್ಲವಾ ಜಾಯ…? ಲವ್ ಯೂ.
ಅಪರಾತ್ರಿಯ ಫಕೀರ
ಜೀವ ಮುಳ್ಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.