ಪ್ರೀತಿಯೊಂದೇ ನಾನು ಕೊಡುವ ಬರ್ತ್‌ಡೇ ಗಿಫ್ಟ್
Team Udayavani, Sep 11, 2018, 6:00 AM IST
ನಿನ್ನ ಚೆಲುವಿಗೆ, ನಗುವಿಗೆ, ಸಿರಿತನಕ್ಕೆ, ಮರುಳಾದವರು ಹಲವರು ಇರಬಹುದು. ಆದರೆ ನಿನ್ನ ಅಮಾಯಕತೆಗೆ, ನಿನ್ನ ನಿಷ್ಕಲ್ಮಶ ಹೃದಯಕ್ಕೆ ಶರಣಾದ ಹುಡುಗ ನಾನೊಬ್ಬನೇ.
ನನ್ನ ಮುದ್ದು ಗೌರಿಗೆ, ನನ್ನ ಜಗತ್ತಿನ ಸುಂದರಿಗೆ, ಗೆಳತಿಗೆ, ಆತ್ಮಬಂಧುವಿಗೆ, ನನ್ನ ಪಾಲಿನ ಮಮತೆಗೆ, ನನ್ನ ಬದುಕಿನ ಪ್ರತಿ ಕ್ಷಣಗಳನ್ನೂ ಸಾರ್ಥಕವಾಗಿಸಿದ ನನ್ನೊಲುಮೆಯ ಹುಡುಗಿಗೆ, ಛಲದಂಕಮಲ್ಲನಂಥ ಈ ಪ್ರೇಮಿಯು ಬರೆಯುತ್ತಿರುವ ನಾಲ್ಕನೆಯ ಪತ್ರವಿದು. ಮೊದಲ ಮೂರು ಪತ್ರಗಳಲ್ಲಿ ಕೇವಲ ನಿನ್ನೆಡೆಗಿನ ಆಕರ್ಷಣೆಯಿತ್ತು. ಆದರೆ ಈ ಪತ್ರ ಬರೆಯಲು ಕುಳಿತ ಈ ಹುಡುಗನ ಜೋಳಿಗೆಯಲ್ಲಿ ನಿನ್ನೆಡೆಗಿನ ಆಕರ್ಷಣೆಯ ಜೊತೆಗೆ ಆರಾಧನೆಯಿದೆ. ಜೊತೆಗೆ, ಎಂದೂ ಮುಗಿಯದ ಪ್ರೇಮವಿದೆ. ಹಳೆಯ ಹಾಡಿನಂಥ ಪ್ರೀತಿಯಿದೆ. ಜೊತೆಗೇ,ಎಲ್ಲಿ ನನ್ನ ಕಣ್ಣಿಗೂ ಕಾಣಿಸದಷ್ಟು ದೂರವಾಗಿ ಬಿಡುತ್ತೀಯೋ ಅನ್ನುವ ಸಣ್ಣ, ಕ್ಷಮಿಸು ದೊಡ್ಡ ತಲ್ಲಣವಿದೆ.
ಗೆಳತಿ, ಕೆಲವೊಂದು ಸಲ ನಮ್ಮ ಕಣ್ಣೆದುರಿಗಿರುವ ಪ್ರೀತಿ ಕಾಣಿಸುವುದಿಲ್ಲ. ಎಷ್ಟೋ ಬಾರಿ ನಾವೆಲ್ಲಾ, ಸಿರಿವಂತರ ಮನೆಯ ತಿಜೋರಿಗಳಲ್ಲಿ, ರೂಪವಂತರ ಎದೆಯ ಗೂಡುಗಳಲ್ಲಿ, ಪ್ರೀತಿ ಹುಡುಕಲು ಹೊರಟುಬಿಡುತ್ತೇವೆ. ಹಣದ ಋಣವಿಟ್ಟುಕೊಂಡು ಹುಟ್ಟಿಕೊಂಡ ಪ್ರೀತಿ ಪ್ರೇಮಗಳಿಗೆ ಹೆಚ್ಚಿನ ಆಯುಷ್ಯವಿರುವುದಿಲ್ಲ. ಒಂದು ಮುಷ್ಟಿ ಪ್ರೀತಿ, ನಮ್ಮ ಈ ಬದುಕನ್ನ ಸುಂದರವಾಗಿ ಕಳೆಯುವಂತೆ ಮಾಡಬಲ್ಲದು. ನಿನಗಾಗಿ ಇಂಥ ಸಾವಿರಾರು ಮುಷ್ಟಿ ಪ್ರೀತಿಯನ್ನ ಎದೆಯ ಗೂಡಿನಲ್ಲಿ ಬಚ್ಚಿಟ್ಟುಕೊಂಡು ಕುಳಿತಿದ್ದೇನೆ. ನೀನೊಪ್ಪಿವ ಮರುಕ್ಷಣವೇ ಎಲ್ಲ ಪ್ರೀತಿಯನ್ನೂ ನಿನ್ನ ಮಡಿಲಿಗೆ ಸುರಿದು ಈ ಬದುಕನ್ನ ಸಾರ್ಥಕವಾಗಿಸಿಕೊಳ್ಳುವ ಹಂಬಲವಿದೆ. ಒಮ್ಮೆಯೂ ನಿನ್ನ ಮುಂದೆ ಮಂಡಿಯೂರಿ ಕುಳಿತು ನಿನ್ನೆಡೆಗಿರುವ ಪ್ರೀತಿಯನ್ನ ಹೇಳಿಕೊಳ್ಳಲಾಗಲಿಲ್ಲವಲ್ಲ ಅಂದುಕೊಂಡು ಈ ಕ್ಷಣಕ್ಕೂ ಬೇಸರದಿಂದ ಚಡಪಡಿಸುತ್ತಿದ್ದೇನೆ.
ಒಂದು ಮಾತು: ನೇರವಾಗಿ ಹೇಳಿಕೊಳ್ಳಲಾಗದ ಅಸಹಾಯಕತೆಯಿಂದ ಈ ಪತ್ರದ ಮೂಲಕ ನಿನ್ನೊಂದಿಗೆ ಮಾತನಾಡುತ್ತಿದ್ದೇನೆ. ಪ್ರತಿ ಕ್ಷಣವೂ ನಿನ್ನ ಬಗ್ಗೆಯೇ ಯೋಚಿಸುತ್ತ, ನಿನ್ನ ಒಳಿತನ್ನೇ ಬಯಸುತ್ತ, ಆಗಾಗ ನಿನ್ನ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಾ, ಕೇವಲ ನಿನ್ನನ್ನೇ ಧ್ಯಾನಿಸುತ್ತ ಬದುಕ್ತಾ ಇರುವ ಹುಡುಗ. “ನೀನು ನನಗಿಷ್ಟ’ ಅನ್ನುವ ಆರೂವರೆ ಅಕ್ಷರಗಳ ಮಾತಿರಲಿ, “ಐ ಲವ್ ಯೂ’ ಎಂಬ ಮೂರೇ ಪದಗಳನ್ನೂ ಹೇಳಿಕೊಳ್ಳಲಾಗದೇ ಇರುವ ಹೇಡಿಯಂಥ ಹುಡುಗ ಮತ್ತೆ ನಿನಗೆ ಸಿಗುವುದಿಲ್ಲ, ಸಿಗಬಾರದು ಕೂಡ. ನಿನ್ನ ಚೆಲುವಿಗೆ, ನಗುವಿಗೆ, ಸಿರಿತನಕ್ಕೆ ಮರುಳಾದವರು ಹಲವರು ಇರಬಹುದು, ಆದರೆ ನಿನ್ನ ಅಮಾಯಕತೆಗೆ, ನಿನ್ನ ನಿಷ್ಕಲ್ಮಶ ಹೃದಯಕ್ಕೆ ಶರಣಾದ ಹುಡುಗ ನಾನೊಬ್ಬನೇ .
ಈ ಹೇಡಿ ಹುಡುಗನ ಈ ಪತ್ರವನ್ನ ಓದಿ ಏನಂದುಕೊಳ್ಳುತ್ತೀಯೋ ಅನ್ನುವ ಭಯದಲ್ಲಿ ಕೈ ನಡುಗುತ್ತಿದೆ. ಇನ್ನೈದು ದಿನದಲ್ಲಿ ನಿನ್ನ ಹುಟ್ಟುಹಬ್ಬ. ನಿನಗೇನು ಉಡುಗೊರೆ ಕೊಡಬಲ್ಲೆ ಅನ್ನುವುದನ್ನ ಇನ್ನೂ ನಿರ್ಧರಿಸಲಾಗಿಲ್ಲ. ಐದು ದಿನವಲ್ಲ, ಇನ್ನೈದು ಜನ್ಮಗಳು ಕಳೆದರೂ ಅಷ್ಟೆ, ಈ ಬಡಪಾಯಿ ಹುಡುಗ ನಿಷ್ಕಲ್ಮಶ ಪ್ರೀತಿ ಮತ್ತು ನಿನಗೊಂದು ಸುಂದರ ಬದುಕನ್ನ ಉಡುಗೊರೆಯನ್ನಾಗಿ ಮಾತ್ರ ಕೊಡಬಲ್ಲ. ಅದಕ್ಕಿಂತ ಹೆಚ್ಚಿನದನ್ನೇನು ಕೊಡಲಿ?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.