“ನೀನೇ ರಾಜಕುಮಾರ…’ ಹಾಡು ಹುಟ್ಟಿದ ಕತೆ
Team Udayavani, Oct 10, 2017, 10:54 AM IST
ಏಕಾ ಏಕಿ ಲಕ್ಷಾಂತರ ಕನ್ನಡಿಗರು ಕನ್ನೇರಮಡಗು ಗ್ರಾಮದ ಕುರಿತು ಮಾತಾಡತೊಡಗಿದ್ದರು. ಅಷ್ಟು ಮಂದಿ ಇದುವರೆಗೆ ತಾವು ಕೇಳಿಯೇ ಇಲ್ಲದ ಆ ಗ್ರಾಮದ ಕುರಿತು ಮಾತಾಡೋದಕ್ಕೆ ಒಂದು ಕಾರಣವಿತ್ತು. ಕನ್ನೇರಮಡು, ಗಂಗಾವತಿಯಲ್ಲಿರುವ ಕುಗ್ರಾಮ. ಅಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಹಾಡಿದ್ದ ಹಾಡೊಂದು ಯೂಟ್ಯೂಬ್‌ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಪುನೀತ್ ಅಭಿನಯದ “ರಾಜಕುಮಾರ’ ಸಿನಿಮಾದ “ನೀನೇ ರಾಜಕುಮಾರ’ ಹಾಡಿನ ತಾಳಕ್ಕೆ ಬೇರೆಯದೇ ಗೀತೆಯನ್ನು ಮಕ್ಕಳು ಮುದ್ದು ಮುದ್ದಾಗಿ ಹಾಡಿದ್ದರು. ಆ ಹಾಡನ್ನು ಬರೆದಿದ್ದು ಸುರೇಶ್ ಕಂಬಳಿ. ಅವರು ಕೊಪ್ಪಳ ಜಿಲ್ಲೆಯ ಗಬ್ಬೂರು ಗ್ರಾಮದಲ್ಲಿ ಶಿಕ್ಷಕರು. ಅಂದಹಾಗೆ ಸುರೇಶ್, ಡಾ. ರಾಜ್‌ಕುಮಾರ್ ಅಭಿಮಾನಿ. ಅವರಿಲ್ಲಿ “ನೀನೇ ರಾಜಕುಮಾರ’ ಹೊಸ ಹಾಡು ಹುಟ್ಟಿದ ಸಮಯವನ್ನು ಇಲ್ಲಿ ಹಂಚಿಕೊಂಡಿದ್ದಾರೆ.
ನಮ್ ಕಡೆ ಮರಾಠಿ, ತೆಲುಗು ಪ್ರಭಾವ ಜಾಸ್ತಿ. ಮಕ್ಕಳು ಬರದೇ ಕನ್ನಡ ಶಾಲೆಗಳನ್ನು ಮುಚ್ಚುವಂಥ ಪರಿಸ್ಥಿತಿ ಇಲ್ಲಿದೆ. ಮಕ್ಕಳು ಶಾಲೆಯಿಂದ ಡ್ರಾಪ್‌ಔಟ್ ಆಗೋದನ್ನು ತಪ್ಪಿಸಲು ನಾವು ಶಿಕ್ಷಕರು ನಾನಾ ಕಸರತ್ತುಗಳನ್ನು ಮಾಡುತ್ತಿದ್ದೇವೆ. ಆ ಸಂದರ್ಭದಲ್ಲಿ ನನಗೆ ಹೊಳೆ ದಿ ದ್ದೇ, ಹಾಡಿನ ಸಿ.ಡಿ. ಮಾಡೋ ಐಡಿಯಾ. ಅದಕ್ಕಾಗಿ ಬರೆದಿದ್ದೇ, “ರಾಜಕುಮಾರ ಹಾಡು’! ಈ ಹಾಡನ್ನು ಬರೆಯಲು ಸುಮಾರು ಎರಡು ದಿನ ತೆಗೆದು ಕೊಂಡಿದ್ದೆ. ಬೈಕಿನಲ್ಲಿ ಹಿಂಬದಿ ಕುಳಿತು, ಶಾಲೆಯಲ್ಲಿ ಬಿಡುವಿನ ವೇಳೆಯಲ್ಲಿ ಮತ್ತು ರಾತ್ರಿ ಮಲಗುವ ಮುನ್ನ ಹೀಗೆ ಎಲ್ಲೆಂದರಲ್ಲಿ ಚೂರು ಚೂರೇ ಬರೆದು ಪೂರ್ತಿ ಮಾಡಿದ ಹಾಡದು. ಅಂದಹಾಗೆ, ಇದೇ ರೀತಿ ಒಟ್ಟು 10 ಹಾಡುಗಳನ್ನು ಬರೆದಿದ್ದೇನೆ. ಎಲ್ಲವಕ್ಕೂ ಹಳೆಯ ಚಿತ್ರಗೀತೆಗಳೇ ಸ್ಫೂರ್ತಿ. “ನೀನೇ ರಾಜಕುಮಾರ’ ಒಂದೇ ಹೊಸದು. ಅವೆಲ್ಲವನ್ನೂ ಸೇರಿಸಿ ಒಂದು ಸಿ.ಡಿ. ಮಾಡಿದೆವು. ಶಿಕ್ಷಕ ಮಿತ್ರರಾದ ರೇವಣ್ಣ ಕೋಳೂರು ದನಿ ನೀಡಿದರು. ಈ ಹಾಡುಗಳನ್ನ ನಮ್ಮ ಶಾಲೆಯಲ್ಲಿ ಹಾಡಿಸುತ್ತಿದ್ದೆವು. ಮಕ್ಕಳ ವಿದ್ಯಾರ್ಜನೆಗೆ ಸಹಾಯ ಮಾಡುವ ಬೆಂಗಳೂರಿನ ಸದೃಶ್ಯಂ ಸಂಸ್ಥೆಯವರು ನಮ್ಮ ಕೆಲಸಕ್ಕೆ ಮೆಚ್ಚುಗೆ ಸೂಚಿಸಿದ್ದೇ ಅಲ್ಲದೇ, ನಮ್ಮ ಕೆಲಸವನ್ನು ಉನ್ನತ ಶಿಕ್ಷಣಾಧಿಕಾರಿಗಳ ಗಮನಕ್ಕೂ ತಂದರು. ಯೂಟ್ಯೂಬ್ ವಿಡಿಯೋ ಐಡಿಯಾ ಕೂಡ ಅವರದೇ. ಹೀಗೆ ನಮ್ಮ ಚಿಕ್ಕ ಶ್ರಮ ರಾಜ್ಯಾದ್ಯಂತ ತಲುಪುವಂತಾಯಿತು.
ಈಗ ಹಲವಾರು ಜಿಲ್ಲೆಗಳ ಶಾಲೆಗಳಲ್ಲಿ ಆ ಹಾಡನ್ನು ಪ್ರಾರ್ಥನೆ ಗೀತೆ ಥರ ಹಾಡಿಸುತ್ತಿದ್ದಾರೆ. ಶಿಕ್ಷಕರೇ ಫೋನ್ ಮಾಡಿ ಧನ್ಯವಾದ ತಿಳಿಸುತ್ತಿದ್ದಾರೆ. “ರಾಜಕುಮಾರ’ ಸಿನಿಮಾದ ನಿರ್ದೇಶಕ ಸಂತೋಷ್ ಆನಂದರಾಮ್ ಅವರು ಮೆಚ್ಚುಗೆ ಸೂಚಿಸಿದ ಸಂತಸ ಒಂದೆಡೆಯಾದರೆ, ನನಗೆ ತುಂಬಾ ಖುಷಿ ನೀಡಿದ ಸಂಗತಿಯೆಂದರೆ, ಅಪ್ಪು ಅವರು ನಮ್ಮ ಹಾಡನ್ನು ಶೇರ್ ಮಾಡಿದ್ದು. ಅಂದಹಾಗೆ, ನಾನು ಡಾ. ರಾಜ್ ಮತ್ತು ಅಪ್ಪು ಅವರ ಅಭಿಮಾನಿ. “ಬಂಗಾರದ ಪಂಜರ’ ಮತ್ತು “ಮಿಲನ’ ಸಿನಿಮಾಗಳನ್ನು ಎಷ್ಟು ಸಲ ನೋಡಿದ್ದೀನೋ ಲೆಕ್ಕವಿಲ್ಲ. ಮಾರ್ಕೆಟ್ ಮಾಡೋ ಉದ್ದೇಶದಿಂದ ಆ ಹಾಡು ಬರೆದದ್ದಲ್ಲ. ನಾನು ಶಾಲೆಗೆ ಹೋಗುತ್ತಿದ್ದ ದಿನಗಳಲ್ಲಿ ಬರೀ ಐದೋ ಆರೋ ವಿದ್ಯಾರ್ಥಿಗಳಿರುತ್ತಿದ್ದರು. ಮನೆಯಲ್ಲಿ ಕೂಲಿ ಮಾಡಿ ಜೀವನ ಸಾಗಿಸಬೇಕಾದ ಪರಿಸ್ಥಿತಿಯಿತ್ತು. ನಾನೂ ಕೂಲಿ ಮಾಡಿ ಪುಸ್ತಕ, ಪೆನ್ಸಿಲ್ಲುಗಳನ್ನು ಹೊಂದಿಸುತ್ತಿದ್ದೆ. ಅಂಥ ಕಷ್ಟದ ಪರಿಸ್ಥಿತಿಯಿಂದ ಬಂದಿರುವ ನಾನು ಈ ದಿನ ಮೂರು ಹೊತ್ತು ಊಟ, ತಲೆ ಮೇಲೆ ಸೂರು, ನೆಮ್ಮದಿಯ ನಿದ್ದೆ ಮಾಡುತ್ತಿದ್ದೇನೆಂದರೆ ಅದಕ್ಕೆ ಕಾರಣ ನನ್ನ ಶಿಕ್ಷಣ. ಆವತ್ತು ನಾನು ಕೂಲಿ ಮಾಡದೆ ಓದದೇ ಇರುತ್ತಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ. ಅದಕ್ಕೇ ಈಗಿನ ಮಕ್ಕಳು ಶಾಲೆ ಬಿಡೋದನ್ನು ನೋಡಿದರೆ ಬೇಸರವಾಗುತ್ತೆ. ಇವೆಲ್ಲಾ ನೋವು ಸೇರಿ ಆಗಿದ್ದು ಆ ಹಾಡು.
ಹವನ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.