ಮೇಷ್ಟ್ರನ್ನು ಕಾಡಿದವನಿಗೆ ಬದುಕು ಪಾಠ ಕಲಿಸಿತು!
Team Udayavani, May 23, 2017, 10:13 AM IST
ಪದವಿ ಪೂರ್ವ ಶಿಕ್ಷಣ ಮುಗಿಸಿ, ವಿಜ್ಞಾನ ಪದವಿ ಪಡೆ ಎಂದು ಆಸೆಪಟ್ಟ ಅಪ್ಪನಿಗಾಗಿ ಸಿರಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಮನಸ್ಸಿನಾಸೆಗೆ ವಿರುದ್ಧವಾಗಿ ಬಿಎಸ್ಸಿಗೆ ದಾಖಲಾಗಿ ಅಪ್ಪನನ್ನು ಸಂತೋಷಪಡಿಸಿದ್ದೂ ಆಗಿತ್ತು. ಆದರೆ ನನ್ನೊಟ್ಟಿಗೆ ಏಳೆಂಟು ವರ್ಷಗಳಿಂದ ಕ್ರಿಕೆಟ್ ಆಡುತ್ತಿದ್ದವರೆಲ್ಲಾ ಬಿ.ಎ ತರಗತಿಗಳಿಗೆ ದಾಖಲಾಗಿ ಒಂದೆರೆಡು ಅವಧಿಗಳನ್ನಷ್ಟೇ ಕ್ಲಾಸ್‌ರೂಮ್‌ಗಳಲ್ಲಿ ಕಳೆದು ಉಳಿದ ಅವಧಿಗಳನ್ನು ಕಾಲೇಜ್ ಎದುರಿನ ರಂಗಜ್ಜಿ ಹೋಟೆಲ್‌ನಲ್ಲಿ ಮೂರ್ನಾಲ್ಕು ಕಪ್ ಟೀ ಕುಡಿದು ಒಂದೆರೆಡು ಸಿಗರೇಟ್ ಕೊಂಡು ಅದನ್ನೇ ನಾಲ್ಕಾರು ಜನರೂ ಕೂಡಿ ಸಿಪ್ ಬೈ ಸಿಪ್ ಎಳೆಯುತ್ತಾ ಅಂದಿನ ಟಾಪ್ ಡ್ರೆಸ್ಡ್ ಹುಡ್ಗಿರ ಬಗ್ಗೆ ಪುಂಖಾನುಪುಂಖ ಕಾಮೆಂಟ್ ಮಾಡುತ್ತಿದ್ದರೆ, ನಾನು ಮಾತ್ರ ಮಧ್ಯಾಹ್ನದವರೆಗೂ ಕ್ಲಾಸ್ ಅಟೆಂಡ್ ಮಾಡಿ ಒಂದು ಗಂಟೆಯ ವಿರಾಮದ ಬಳಿಕ ಪುನಃ ಪ್ರಾಕ್ಟಿಕಲ್ ಕ್ಲಾಸ್ ಅಟೆಂಡ್ ಮಾಡಬೇಕಿತ್ತು. ಅದನ್ನೆಲ್ಲಾ ನೆನೆಸಿಕೊಂಡರೆ ಈಗಲೂ ಹೊಟ್ಟೆಗೆ ಹುಳಿ ಹಿಂಡಿದಂತಹ ಅನುಭವ..
ನಾಲ್ಕಾರು ತಿಂಗಳಲ್ಲೇ ಬಿ.ಎಸ್ಸಿ ಕಲಿಕೆಯ ಯಾಂತ್ರಿಕ ಜೀವನ ಬೇಸರವೆನಿಸಿ, ಪಕ್ಕದ ಕಟ್ಟಡಗಳಲ್ಲೇ ನಡೆಯುತ್ತಿದ್ದ ಪ್ರಾಣ ಸ್ನೇಹಿತರ ಬಿ.ಎ. ತರಗತಿಗಳಿಗೆ ಹಾಜರಾಗಲು ಪ್ರಾರಂಭಿಸಿದ್ದೆ. ಭಾಷಾ ವಿಷಯಗಳಿಗೆ (ಕನ್ನಡ, ಇಂಗ್ಲಿಷ್, ಹಿಂದಿ) ಮಾತ್ರ ಅವರೊಟ್ಟಿಗೆ ಕ್ಲಾಸ್‌ಗಳಲ್ಲಿ ಕುಳಿತುಕೊಳ್ಳುತ್ತಿದ್ದೆ. ಇದೇ ಮುಂದುವರಿದು ಪ್ರತಿ ದಿನ ಅವರೊಟ್ಟಿಗೆ ಕುಳಿತು ಕ್ಲಾಸ್ ಕೇಳಲು ಪ್ರಾರಂಬಿಸಿದೆ. ಬರಬರುತ್ತಾ ಅದೇ ಅಭ್ಯಾಸವಾಯ್ತು. ಎಷ್ಟರಮಟ್ಟಿಗೆಯೆಂದರೆ ನಾನು ದಾಖಲಾಗಿರುವುದು ಬಿಎಸ್ಸಿಗೆ ಎಂಬುದೇ ನನಗೆ ಮರೆತು ಹೋಗುವಷ್ಟರ ಮಟ್ಟಿಗೆ! ಪ್ರಾರಂಭದಿಂದ ಕೊನೆಯ ತನಕವೂ ಅವರೊಂದಿಗೆ ಕಾಲಹರಣ ಮಾಡತೊಡಗಿದೆ.
ಹೀಗಿರುವಾಗ ಒಂದು ದಿನ ನಮ್ಮ ಕಾಲೇಜಿನ ಕಲಾ ವಿಭಾಗಕ್ಕೆ ಕಲ್ಲಪ್ಪ (ಹೆಸರು ಬದಲಿಸಲಾಗಿದೆ) ಎನ್ನುವ ಹೆಸರಿನ ಕನ್ನಡ ಉಪನ್ಯಾಸಕರೊಬ್ಬರು ಹೊಸದಾಗಿ ಬಂದಿರುವ ಸುದ್ದಿ ಕಾಲೇಜಿನ ತುಂಬೆಲ್ಲಾ ಹರಡಿತು. ವಯಸ್ಸು ಚಿಕ್ಕದಾಗಿದ್ದ ಅವರಿಗೆ ಅವರದೇ ವಯಸ್ಸಿನ ಕೆಲ ಹಳೇ ವಿದ್ಯಾರ್ಥಿಗಳು ರೇಗಿಸುತ್ತಿದ್ದರು. ಅದು ಎಷ್ಟರ ಮಟ್ಟಿಗೆಂದರೆ ಸತ್ಯ ಎಂಬ ಹೆಸರಿನ ಹಳೇ ವಿದ್ಯಾರ್ಥಿಯೊಬ್ಬ ಓಂ ಸತ್ಯ ಎಂದೇ ತನ್ನ ನಾಮಧೇಯವನ್ನು ಬದಲಿಸಿಕೊಂಡಿದ್ದ. ಅದು, ಆಗಷ್ಟೇ ಬಿಡುಗಡೆಯಾಗಿದ್ದ ಶಿವರಾಜ್‌ಕುಮಾರ್ ಅಭಿನಯದ “ಓಂ’ ಚಲನಚಿತ್ರದ ಪ್ರಭಾವವೆಂದು ಆಮೇಲೆಯೇ ನಮಗೆ ತಿಳಿದದ್ದು.
ಸತ್ಯ, ಕ್ಲಾಸ್‌ಗೆ ಅಟೆಂಡ್ ಆಗುತ್ತಿದ್ದುದ್ದೇ ಅಪರೂಪ. ಅವನು ಬಂದಿದ್ದಾನೆಂದರೆ ನಮ್ಮಂಥಾ ಹುಡುಗರಿಗೆ ಏನೋ ಒಂಥರಾ ಮಜಾ.. ಆದರೆ ಕಷ್ಟಪಟ್ಟು ಅಧ್ಯಯನ ನಡೆಸಿ ಮುಂದೆ ಬರಬೇಕೆನ್ನುವ ಹಂಬಲವಿದ್ದವರಿಗೆ ಮಾತ್ರ ಸತ್ಯನ ನಡತೆಗಳು ಸಿಂಹಸ್ವಪ್ನವಾಗಿದ್ದವು. ಏಕೆಂದರೆ, ಅವನು ಉಪನ್ಯಾಸಕರಿಗೆ ಪಾಠ ಮಾಡಲು ಅವಕಾಶ ಕೊಡದಂತೆ ಅವರನ್ನು ಕಾಡಿಸುತ್ತಿದ್ದ.
ಕಲ್ಲಪ್ಪನವರು ಕಾಲೇಜಿಗೆ ಹೊಸಬರು ಎಂದು ತಿಳಿದು ಅವರಿಗೆ ತನ್ನ ಪರಿಚಯ ಮಾಡಲೆಂದೇ ಖುದ್ದು ಸತ್ಯನೇ ಕಾಲೇಜಿಗೆ ಆಗಮಿಸಿ ಗೇಟಿನ ಬಳಿಯೇ ನಿಂತುಕೊಂಡಿದ್ದ. ಸಮಯಕ್ಕೆ ಸರಿಯಾಗಿ ಕಲ್ಲಪ್ಪನವರು ಆಗಮಿಸಿದ್ದನ್ನು ಗಮನಿಸಿ ಅವರಿಗೆ ಚಮಕ್ ಕೊಡಲೆಂದು “ಸಾರ್ ನಮಸ್ಕಾರ’ ಎಂದ. ಅದನ್ನು ಗಮನಿಸದ ಕಲ್ಲಪ್ಪ ಹಾಗೇ ಮುಂದುವರೆಯುತ್ತಿದ್ದುದನ್ನು ಕಂಡ ಸತ್ಯ “ಏನ್ರೀ, ನಮಸ್ಕಾರ ಅಂದ್ರೂ ಹಾಗೇ ಹೊಂಟೀರಲ್ಲಾ?’ ಎಂದಾಗ ವಿಚಲಿತರಾದವರಂತೆ ಕಂಡ ಕಲ್ಲಪ್ಪನವರು “ಸಾರಿ..’ ಎಂದಷ್ಟೇ ಉತ್ತರಿಸಿ ಲಗುಬಗನೆ ನಡೆದುಹೋದರು.
ಸತ್ಯನೊಡನೆಯೇ ನಿಂತು ಇದನ್ನೆಲ್ಲಾ ನೋಡುತ್ತಿದ್ದ ನಮಗೆ ಸತ್ಯನ ಧೈರ್ಯ ನೋಡಿ ಪ್ರಶಂಸಿಸಬೇಕೋ ಅಥವಾ ಉಪನ್ಯಾಸಕರ ಫಜೀತಿಗೆ ಅನುಕಂಪಿಸಬೇಕೋ ತೋಚದೆ ಸುಮ್ಮನೆ ನಿಂತಿದ್ದೆವು.
ಸತ್ಯನ ಕೀಟಲೆ ಇಲ್ಲಿಗೇ ಮುಗಿಯಲಿಲ್ಲ. ಅಂದು ನಮಗಿದ್ದ ಮೊದಲ ತರಗತಿ ಕಲ್ಲಪ್ಪನವರದ್ದೇ ಎಂದು ತಿಳಿದು ಕ್ಲಾಸ್‌ರೂಮಿಗೂ ಬಂದು ಕಲ್ಲಪ್ಪನವರನ್ನು ಕಾಡಿಸಲಾರಂಭಿಸಿದ. ಉಪನ್ಯಾಸಕರು ಹಳೆಗನ್ನಡ ಪದ್ಯವೊಂದನ್ನು ನಿರರ್ಗಳವಾಗಿ ವಾಚಿಸುತ್ತಿದ್ದರು. ಮಧ್ಯದಲ್ಲಿ ಎದ್ದು ನಿಂತ ಸತ್ಯ, “ಸ್ವಾಮಿ, ನಿಮ್ಮ ಉಪನ್ಯಾಸವನ್ನು ನಮಗೆ ಅರ್ಥಮಾಡಿಕೊಳ್ಳಲಾಗುತ್ತಿಲ್ಲ. ದಯಮಾಡಿ ನಮಗೆ ಅರ್ಥವಾಗುವ ಭಾಷೆಯಲ್ಲಿ ಹೇಳುತ್ತೀರಾ?’ ಎಂದಾಗ ಹುಡುಗರೆಲ್ಲಾ ಹೋ.. ಎಂದು ಕೂಗಲಾರಂಬಿಸಿದರು. ಇಷ್ಟಾದರೂ ವಿಚಲಿತರಾಗದ ಕಲ್ಲಪ್ಪ”ಹಳೆಗನ್ನಡ ಪದ್ಯವನ್ನೇ ಹೊಸಗನ್ನಡ ರೂಪದಲ್ಲಿ ಸ್ಫಷ್ಟವಾಗಿ ಉಚ್ಚರಿಸಿ ಸ್ಪಷ್ಟ ವಿವರಣೆ ನೀಡಿದರು.
ಸಮಾಧಾನವಾಗಲಿಲ್ಲವೆಂಬಂತೆ ತಲೆಯಾಡಿಸಿದ ಸತ್ಯ “ಮಹಾಪ್ರಭು.. ನನಗೆ ನಿಮ್ಮ ಬೋಧನೆ ತಿಳಿಯುತ್ತಿಲ್ಲ. ದಯಮಾಡಿ ನನ್ನನ್ನು ಹೊರಹೋಗಲು ಅನುಮತಿಸುವಿರಾ..?’ ಎಂದು ಛೇಡಿಸಿದ. ಕಲ್ಲಪ್ಪನವರು ಸಂಯಮದಿಂದಲೇ “ನೀವೇಕೆ ಹೊರಹೋಗುತ್ತೀರಿ ಸ್ವಾಮಿ? ನನಗಾದರೋ ಅದಾಗಲೇ ಬಹಳಷ್ಟು ಸಂಬಳ ಕೊಡುವ ನೌಕರಿ ಸಿಕ್ಕಿದೆ… ಪಾಪ, ನೀವಿನ್ನೂ ಓದಿ ಬದುಕನ್ನು ರೂಪಿಸಿಕೊಳ್ಳಬೇಕಾದವರು. ನೀವೇ ಕುಳಿತು ಕಲಿಯಿರಿ, ನಾನೇ ಹೊರಹೋಗುತ್ತೇನೆ’ ಎಂದುತ್ತರಿಸಿ ಅಲ್ಲಿಂದ ಹೊರನಡೆದರು. ಕ್ಷಣಮಾತ್ರಕ್ಕೆ ಕೆಲವರಿಗೆ ಸತ್ಯನ ನಡೆ ಮಜಾ ಕೊಟ್ಟಿದ್ದರೂ ತದನಂತರ ಹಲವರು ಒಟ್ಟಾಗಿ ಸೇರಿ ಸತ್ಯನನ್ನು ಚೆನ್ನಾಗಿಯೇ ದಬಾಯಿಸಿ ಇನ್ನೊಮ್ಮೆ ಕಲ್ಲಪ್ಪನವರ ತಂಟೆಗೆ ಬಾರದಂತೆ ಎಚ್ಚರಿಸಿದರು.
ಇಂದಿಗೂ ಸಿರಾ ಖಾಸಗಿ ಬಸ್ ಒಂದರಲ್ಲಿ ಕಂಡಕ್ಟರ್ ಕಾರ್ಯ ನಿರ್ವಹಿಸುತ್ತಿರುವ ಸತ್ಯನನ್ನು ಕಂಡಾಗಲೆಲ್ಲಾ ಕಲ್ಲಪ್ಪನವರು ಹದಿನೈದು ವರ್ಷಗಳ ಹಿಂದೆಯೇ ಹೇಳಿದ ಮಾತು ಸತ್ಯದಂತೆ ಭಾಸವಾಗುತ್ತಿರುತ್ತದೆ.
– ಪ.ನಾ.ಹಳ್ಳಿ. ಹರೀಶ್ ಕುಮಾರ್, ತುಮಕೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್
State Budget Meeting: ಇಂದಿನಿಂದ ಸಿಎಂ ಬಜೆಟ್ ಪೂರ್ವಭಾವಿ ಸರಣಿ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.