ಅವರಿಬ್ಬರು, ಜೊತೆಗೆ ಇನ್ನೊಬ್ಬರು
Team Udayavani, Jan 17, 2017, 3:45 AM IST
ನನಗೆ ಭಯವಾಗುತ್ತೆ!
ಅವಳು ಹಾಗೆ ಹೇಳಿದ ಕೂಡಲೇ ಅವನಿಗೆ ಅದು ಅಂಥ ದೊಡ್ಡ ವಿಷಯ ಅನ್ನಿಸಲಿಲ್ಲ. ಆದರೆ ಕ್ರಮೇಣ ಅವನು ಅವಳನ್ನೇ ನೋಡಿದ. ಯಾಕೆ ಇರಬಹುದು ಅಂತ ಒಂದೇ ಸಮನೆ ಹುಳ ಕೊರೆಯಿತು. ಅವಳು ಸಂಜೆ ಕೊನೆ ಬಸ್ಸು ಹತ್ತಿ ತಾವರೆಕೊಪ್ಪದಿಂದ ಶಿವಮೊಗ್ಗಕ್ಕೆ ಹೋಗೇಬಿಟ್ಟಳು. ಅವನು ಆಗ ತಾನೇ ಶಿವಮೊಗ್ಗದ ಮೊದಲ ವರ್ಷದ ಡಿಗ್ರಿ ಕಾಲೇಜಿನಲ್ಲಿ ಓದುತ್ತಿದ್ದ, ಅವಳು ಕೊನೆಯ ವರ್ಷದಲ್ಲಿದ್ದಳು. ಇಬ್ಬರಿಗೂ ವಯಸ್ಸಿನಲ್ಲಿ 2 ವರ್ಷ ಅಂತರ, ಅವನಿಗಿಂತ ಎರಡು ವರ್ಷ ಅವಳೇ ದೊಡ್ಡವಳು. ಅವರಿಬ್ಬರೂ ಶನಿವಾರ ತಾವರೆಕೊಪ್ಪಕ್ಕೆ ಬಂದಿದ್ದರು, ಹುಲಿ, ಸಿಂಹಗಳನ್ನು ನೋಡಿಕೊಂಡು ಸಂಜೆ ಹೋಗೋಣ, ಭಾನುವಾರ ತಮಗಿಬ್ಬರಿಗೂ ಬೇರೇನೋ ಕೆಲಸ ಇದೆ ಅಂತ ಭಾವಿಸಿದ್ದರು, ಆದರೆ ಸಂಜೆ ಆಗುವ ಹೊತ್ತಿಗೆ ಯಾಕೋ ಇಬ್ಬರಿಗೂ ತುಂಬ ಕಷ್ಟವಾಗಿತ್ತು ಜೊತೆಗೆ ಓಡಾಡುವುದಕ್ಕೆ.
ಅವಳು ಬಸ್ಸು ಹತ್ತುವ ಮೊದಲು ಹೇಳಿದ್ದೊಂದೇ ಮಾತು- ನನಗೆ ಭಯವಾಗುತ್ತೆ!
ಅವಳು ಹತ್ತಿ ಹೋದಮೇಲೆ ಅವನೂ ಹತ್ತಿ ತಾವರೆಕೊಪ್ಪದಿಂದ ಪರಾರಿಯಾಗಬೇಕಿತ್ತು. ಆದರೆ ಶಾಕ್ ಆಗಿ ಅಲ್ಲೇ ಕಟ್ಟೆ ಮೇಲೆ ಕುಳಿತೇ ಇದ್ದ. ಹಂಗಂದರೇನು? ಭಯ ಯಾಕೆ ಆಗಬೇಕು, ತಾನು ಅಷ್ಟೊಂದು ಭಯ ಪಡಿಸೋ ಪ್ರಾಣಿಯೇ, ಸಿಂಹಕ್ಕಿಂತ ಕ್ರೂರವೇ, ಹುಲಿಗಿಂತ ಉಗ್ರವೇ? ಈವರೆಗೆ ಇಲ್ಲದ ಭಯ, ಈ ಒಂದು ದಿನ ಕಳೆದ ಮೇಲೆ ಅವಳಿಗೆ ತನ್ನ ಮೇಲೆ ಹುಟ್ಟಿತೇ? ಅಥವಾ ಹುಟ್ಟಿದ ಭಯ, ಅವಳೊಳಗೇ ಬಹಳ ದಿನಗಳಿಂದ ಇದ್ದಿತ್ತೇ?
ಶಿವಮೊಗ್ಗದ ದುರ್ಗಿ ಗುಡಿ ಮೂರನೇ ಕ್ರಾಸಿನ ಅವನೂ, ತಿಲಕ್ ನಗರದ ಅವಳೂ ಕಾಲೇಜಿನ ಮೊದಲು ಎಲ್ಲೂ ಭೇಟಿಯಾದ ನೆನಪಿಲ್ಲ. ಕಾಲೇಜಿನಲ್ಲಿ ಆಗಾಗ ಭಾಷಣ ಸ್ಪರ್ಧೆ ನಡೆವ ಪರಿಪಾಠ ಇತ್ತು. ಆ ಸಲ ಅದೇನು ಕಾಕತಾಳೀಯವೋ, ಅವರಿಬ್ಬರೂ ಕೋಮುವಾದದ ಬಗ್ಗೆ ಮಾತಾಡಿದ್ದರು. ಇಬ್ಬರ ನಿಲುವೂ ಒಂದೇ ಆಗಿತ್ತು. ಅವನಿಗೆ ಅವಳು ಮಾತಾಡಿದ್ದು, ಅವಳಿಗೆ ಅವನು ಮಾತಾಡಿದ್ದು ತುಂಬ ಹಿಡಿಸಿತ್ತು. ಇಬ್ಬರೂ ಒಂದು ಸಲ ಕ್ಯಾಂಟೀನ್‌ನಲ್ಲಿ ಪರಿಚಯ ಮಾಡಿಕೊಂಡರು, ಪರಿಚಯ ಆದಮೇಲೆ ಇವನು ಅವಳಿಗೆ ಅದ್ಯಾವುದೋ ಬುಕ್ಕು ಕೊಟ್ಟು, ಅವಳು ಅದ್ಯಾವುದೋ ಬ್ಲಾಗ್ ಓದಿಸಿ ಇಬ್ಬರ ಮಧ್ಯೆ ಮೊದಲು ಯಾವ ಪ್ರೀತಿಲೇಪವೂ ಇಲ್ಲದ ಸ್ನೇಹವೊಂದು ಬೆಳೆಯಿತು. ಆಮೇಲೆ ಇಬ್ಬರೂ ಅಂತರ್‌ಕಾಲೇಜು ಭಾಷಣ ಸ್ಪರ್ಧೆಗೆ ಒಟ್ಟಿಗೇ ಶಿವಮೊಗ್ಗ ವಿಶ್ವವಿದ್ಯಾಲಯಕ್ಕೆ ಹೋಗಿ ಬಂದರು. ಅದರಲ್ಲಿ ಅವಳು ಭಾಷಣ ಮಾಡಬೇಕಿತ್ತು, ಅವನು ಸುಮ್ಮನೆ ಅವಳಿಗೆ ಜೊತೆಯಾದ. ಅಲ್ಲಿಂದ ಬರುವಾಗ ಸಂಜೆಯಾಗಿದ್ದರಿಂದ ಅವಳ ಏರಿಯಾಕ್ಕೆ ಬಿಡುವುದಕ್ಕೆ ಮನೆತನಕ ಬಂದ, ಇಬ್ಬರ ಆ ಒಡನಾಟದಲ್ಲಿ ಒಂದು ವಿಚಿತ್ರ ಇರುಸುಮುರುಸು, ಮುಜುಗರ, ತಮ್ಮೊಳಗೇನೋ ಹುಟ್ಟಿದೆ ಎನ್ನುವ ಅನುಮಾನ, ಸ್ನೇಹಕ್ಕೆ ಮೀರಿದ ಬಂಧದ ಗುಟ್ಟು ಹುಟ್ಟಿತ್ತು.
ಮರುದಿನ ಅವರಿಬ್ಬರ ಎದುರು ಬಂದ ಸೂರ್ಯನೂ ಹಳೆಯವನಾಗಿರಲಿಲ್ಲ, ಅವರಿಬ್ಬರ ಭೇಟಿಯೂ ಹಳೆಯದಾಗಿರಲಿಲ್ಲ. ಹಿಂದಿನ ಸಂಜೆ ಆಟೋದಲ್ಲಿ ಹೋಗುವಾಗ ಅವಳ ಮೈಯಿಂದ ಹೊರಟ ಒಂದು ಉನ್ಮತ್ತ ಪರಿಮಳ ಅವನ ಮೂಗನ್ನು ಹೊಕ್ಕು ಮೈಯೆಲ್ಲಾ ವ್ಯಾಪಿಸಿ ಗರಿಗೆದರಿದಂತಾಗಿದ್ದ ಒಳಗೊಳಗೇ.
ಇಬ್ಬರ ಸ್ನೇಹದ ಬೀದಿಯೊಳಗೆ ಅರಿಯದೇ ಪ್ರವೇಶವಿತ್ತ ಪ್ರೇಮವೆಂಬ ಅನಾಮಿಕ ದಾರಿಹೋಕನನ್ನು ಇಬ್ಬರೂ ಆದರಿಸಿದರು, ಸತ್ಕರಿಸಿದರು, ಅವಳು ಅವನನ್ನು ಪ್ರೀತಿಯ ಹುಡುಗನಾಗಿ ಸ್ವೀಕರಿಸಿದಳು, ಅವನು ಅವಳನ್ನೂ. ತನ್ನ ಮೊಬೈಲ್‌ನಲ್ಲಿ ಅವಳ ಫೋಟೋ ಸ್ಕ್ರೀನ್ ಸೇವರ್ ಆಯಿತು. ಅವನು ಕವಿತೆ ಬರೆದು ವಾಟ್ಸಪ್ ಮಾಡುತ್ತಿದ್ದ, ಅವಳು ಅದರ ಬಗ್ಗೆ ತನಗೇನನ್ನಿಸಿತೋ ಅದನ್ನು ಹೇಳುತ್ತಿದ್ದಳು.
ಆದರೂ ಇತ್ತೀಚೆಗೆ ಅವಳಾÂಕೋ ಮೊದಲಿನಂತಿಲ್ಲ. ಸುಮ್ಮನೆ ಸುಮ್ಮನೆ ಅವನ ಮೇಲೆ ರೇಗುತ್ತಾಳೆ, ತನಗಿಂತ ಅವನು ಚಿಕ್ಕವನೆನ್ನುವ ಕೀಳರಿಮೆ, ಜೊತೆ ಹೋಗುತ್ತಿದ್ದರೆ ಅವನನ್ನೇ ವಿಚಿತ್ರವಾಗಿ ನೋಡುತ್ತಿದ್ದಾರಲ್ಲಾ ಅಂತ ಶಂಕೆ, ಫೇಸ್‌ಬುಕ್‌ನಲ್ಲಿ ಅವನಿಗೇ ಜಾಸ್ತಿ ಸ್ನೇಹಿತರಿದ್ದಾರೆ ಅನ್ನುವ ಗಲಿಬಿಲಿ, ಅವನು ಮಾತಾಡಿದಷ್ಟೂ ಸಾಲದು, ಪ್ರೀತಿಯಿಂದಿದ್ದಷ್ಟೂ ಸಾಲದು. ಒಂದೊಂದು ದಿನ ಇಡೀ ದಿನ ಕ್ಯಾಂಟೀನ್‌ನಲ್ಲಿದ್ದರೂ ಕಾಲೇಜಿಗೆ ಹೋಗದೇ ಉಳಿದುಬಿಡುತ್ತಿದ್ದಳು, ಅವನು ಊಟಕ್ಕೆ ಕ್ಯಾಂಟೀನ್‌ಗೆ ಬರುವ ಹೊತ್ತಿಗೆ ಅವಳು ಮೆಲ್ಲ ಅಲ್ಲಿಂದ ಜಾರಿಕೊಳ್ಳುತ್ತಿದ್ದಳು. ಸಂಜೆ ಹೊತ್ತು ಕೂತು, ಸೂರ್ಯನ ಆಯಾಯದ ಕಿರಣಗಳನ್ನು ಮೈಮೇಲೆ ಇಬ್ಬರೂ ಹೊದ್ದುಕೊಳ್ಳದೇ ಉದಾಸೀನ ಸಂಜೆ ಕಂತುತ್ತಿತ್ತು. ಯಾಕೋ ಗೊತ್ತಿಲ್ಲ, ತಾವಿಬ್ಬರೂ ಸ್ನೇಹಿತರಾಗಿದ್ದಾಗಲೇ ಚೆನ್ನಾಗಿದ್ದೆವು, ಪ್ರೀತಿ ಹುಟ್ಟಿದ್ದು ಇಬ್ಬರಿಗೂ ಗೊತ್ತಾಗದೇ ಹೋಗಿರುತ್ತಿದ್ದರೇ ಚೆನ್ನಾಗಿತ್ತು ಅಂತ ಅನ್ನಿಸುತ್ತಿತ್ತು. ಲೈಬ್ರೆರಿಗೆ ಹೋಗಿ, ಪೇಪರ್‌ಗಳನ್ನು ಸುಮ್ಮನೆ ಬಿಡಿಸಿ ಅದರ ತುಂಬ ಪ್ರೀತಿಯ ಬಗ್ಗೆ ಯಾರ್ಯಾರು ಏನೇನು ಮಾತಾಡಿದ್ದಾರೆ ಅಂತ ಅವನು ಓದಿಕೊಂಡು ಬರುತ್ತಿದ್ದ, ಅವಳು ಯಾರ್ಯಾರು ಬ್ರೇಕಪ್ ಆದರು ಅಂತ ಓದಿಕೊಂಡು, ಅದಕ್ಕೆ ಏನೇನು ಕಾರಣಗಳಿವೆ ಅಂತ ಓದಿ ನಿಟ್ಟುಸಿರು ಬಿಟ್ಟು ಮನೆಗೆ ತೆರಳುತ್ತಿದ್ದಳು.
ಆ ಸಲ ರಾಕಿ ಹಬ್ಬ.
ಅವನು ಬಂದ, ಅವಳನ್ನು ಹುಡುಕಿಕೊಂಡೇ ಬಂದ. ಅವಳು ಅವನನ್ನೇ ಅಚ್ಚರಿಯಿಂದ ನೋಡಿದಳು, ಹಿಂದೆ ನೋಡಿದರೆ ಕ್ಲಾಸ್‌ಮೆಟ್‌ಗಳ ಹಿಂಡು, ಮುಂದೆ ನೋಡಿದರೆ ಬಿದ್ದುಕೊಂಡ ಕಾರಿಡಾರು. ಅವನು, ಈ ದಿನ, ಇಲ್ಲಿ ಯಾಕೆ ತನ್ನನ್ನು ಭೇಟಿ ಮಾಡೋದಕ್ಕೆ ಬರುತ್ತಿದ್ದಾನೆ ಅಂತ ಅವಳಿಗೆ ಕೊಂಚ ಗಾಬರಿಯೇ ಆಯ್ತು. ಅವನು ಅವಳನ್ನು ಹೆಚ್ಚುಕಮ್ಮಿ ಹಿಡಿದು ನಿಲ್ಲಿಸಿ ಹೇಳಿದ, “ಏನಾಯ್ತು ನಿಂಗೆ.. ಯಾಕೆ ಅವಾಯ್ಡ ಮಾಡ್ತೀಯಾ.. ಏನು ಮಾಡಿದೆ ನಾನು? ತಪ್ಪಾಗಿದ್ರೆ ಏನು ಅಂತಾದ್ರೂ ಹೇಳು.. ಮನಸ್ಸಲ್ಲೇನೋ ಇಟ್ಟುಕೊಂಡು ಕೊರಗಬೇಡ, ಹಿಂಗೆ ಕಾಡಬೇಡ..’
ಅವಳಿಗೆ ಪೆಚ್ಚಾಯಿತು, ಹಿಗೆ ನೇರಾನೇರ ನುಗ್ಗಿ, ಪ್ರಶ್ನೆಯನ್ನು ಹಿಡಿದು ಇರಿದುಬಿಡಬಹುದು ಅಂತ ಅವಳಿಗೆ ಕಲ್ಪನೆಯೂ ಇರಲಿಲ್ಲ.
ಅವನು ಅವಳ ಕೈಗೆ ರಾಕಿ ಕೊಟ್ಟ. ಅವಳು ಕತ್ತೆತ್ತಿ ಅವನವರೆಗೆ ನೋಡಿದಳು.
“ನಿಂಗೆ ಈ ಪ್ರೀತಿ ಬೇಡ, ಸ್ನೇಹ ಬೇಡ ಅಂದ್ರೆ ಬೇಡ.. ಈ ರಾಕಿ ಕಟ್ಟು, ತಮ್ಮನ ಥರ ಇದಿºಡ್ತೀನಿ.. ಕೊನೇಪಕ್ಷ ನೀನ್ ಚೆನ್ನಾಗಿ ಇರ್ತೀಯಲ್ಲ.. ಅಷ್ಟು ಸಾಕು..’
ಅವಳಿಗೆ ರಕ್ಷಣೆಗೆ ಏನೂ ಇರಲಿಲ್ಲ. ತನ್ನ ಬಗ್ಗೆ ತನಗೇ ಅಸಹ್ಯವಾಯಿತು. ತಾನೇಕೆ ಇದನ್ನೆಲ್ಲಾ ಮಾಡುತ್ತಿದ್ದೇನೆ, ಅವನನ್ನು ಕಂಡರೆ ಅತಿಯಾದ ವ್ಯಾಮೋಹ, ಅದು ತನ್ನಿಂದ ಏನೇನೆಲ್ಲಾ ಮಾಡಿಸುತ್ತಿದೆ. ವಯಸ್ಸಿನಲ್ಲಿ ಅವನಿಗಿಂತ ದೊಡ್ಡವಳು ಅನ್ನುವ ಒಂದು ಕಾಂಪ್ಲೆಕ್ಸಿನ ಕೈಗೆ ಇಡೀ ಎಂಟು ತಿಂಗಳ ಒಡನಾಟವನ್ನು ಕೊಟ್ಟು, ಹೊರಟೆ ನಾನು ಅಂತ ಯಾಕೆ ಅವನಿಂದ ಓಡುತ್ತಿರುವೆ, ಈ ಓಟ ಇಬ್ಬರಿಗೂ ಸುಸ್ತು ವಿನಃ ಬೇರೆ ಉಪಯೋಗವಿಲ್ಲ. ಅವಳು ಕೂಡಲೇ ಸಾರಿ ಕೇಳಿದಳು, ರಾಕಿ ಕಿತ್ತೆಸೆದಳು. ಇಬ್ಬರ ಕಣ್ಣಂಚಲ್ಲೂ ಒದ್ದೆ ಗೆರೆಯೊಂದು ಮೂಡಿತ್ತು.
ಅದಾದಮೇಲೆ ತಾವರೆಕೊಪ್ಪ, ಇಡೀ ದಿವಸ ತಾವರೆಕೊಪ್ಪದ ಹುಲಿ, ಸಿಂಹ, ಕೆಂಪು ಮಣ್ಣು ರಸ್ತೆ, ಅರೆವಾಸಿ ಒಣಗಿ ನಿಂತ ಬಿದಿರಿನ ಮುಳ್ಳು, ಅವಳು ಮತ್ತು ಅವನು. ಇಬ್ಬರ ಪ್ರಯಾಣದ ಕೊನೆಗೆ ಭಯವಾಗುತ್ತೆ ಅಂತ ಹೇಳಿ ಮುರಿದುಕೊಂಡ ಒಂದು ಸಂಬಂಧ.
ತಾವರೆಕೊಪ್ಪದಿಂದ ಯಾವುದೋ ಲಾರಿ ಹಿಡಿದು ದುರ್ಗಿ ಗುಡಿಯ ಮನೆ ಸೇರಿಕೊಂಡ ಅವನಿಗೆ ಇನ್ನೆಂದೂ ಅವಳನ್ನು ತಾನು ಭೇಟಿ ಆಗಲಾರೆ ಅನ್ನಿಸಿತು, ಭೇಟಿ ಮಾಡಿದರೂ ಇಬ್ಬರ ಮಧ್ಯೆ ಬೆಳೆದ ಭಯದ ಬಳ್ಳಿಯನ್ನು ಕಿತ್ತೂಗೆಯಲಾರೆ ಅನ್ನಿಸಿತು. ಅದಾದ ಮೇಲೆ ಇಲ್ಲಿವರೆಗೆ ಇಬ್ಬರೂ ಹತ್ತೆಂಟು ಸಲವಾದರೂ ಎದುರಾಬದರಾ ಬಂದಿರಬಹುದು. ಮತ್ತೆ ಮತ್ತೆ ಇಬ್ಬರ ಮಧ್ಯೆ ಭಯದ ಪ್ರಶ್ನೆ ಎದುರಾಗಿದೆ. ಇಬ್ಬರೂ ಆ ಪ್ರಶ್ನೆಯನ್ನು ಬೆಕ್ಕಿನಂತೆ ಎದೆಗವಚಿ ಹಿಡಿದು ಮುಂದೆ ಸಾಗಿದ್ದಾರೆ.
ಆ ಬೆಕ್ಕು ಪಂಜು ತೆರೆದು ಪರಚಿದ ಗಾಯ ಎದೆಯನ್ನು ಇನ್ ಸ್ಟಾಲ್‌ಮೆಂಟ್‌ನಲ್ಲಿ ನೋಯಿಸುತ್ತಿದೆ.
ಫಿಲವ್‌ಸಫಿ
ಈ ಪ್ರೀತಿ ಅನ್ನೋದು ಖಾಯಿಲೆಯೂ ಹೌದು ಔಷಧವೂ ಹೌದು. ಖಾಯಿಲೆಯನ್ನೇ ಔಷಧವೆಂದು ಸೇವಿಸಿದರೆ ಅದಕ್ಕೆ ನೂರೆಂಟು ಸೈಡ್ ಎಫೆಕ್ಟ್. ಹಾಗಾಗಿ ಪ್ರೀತಿ ಎಷ್ಟು ಪ್ರಮಾಣದಲ್ಲಿದ್ದರೆ ಔಷಧ, ಯಾವ ಮಟ್ಟವನ್ನು ಮೀರಿದರೆ ಖಾಯಿಲೆ ಅನ್ನುವುದು ಅವರವರಿಗೆ ಅರಿವಿರಬೇಕು. ಅವಳಿಗಿದ್ದ ಭಯ, ನೀವು ಲವ್ ಮಾಡುವಾಗಲೂ ಬಂದಿರಬಹುದಾದ ಭಯ. ಬಿಟ್ಟು ಹೋಗುವ ಭಯ, ಪ್ರೀತಿ ಕಮ್ಮಿ ಆಗುವ ಭಯ, ಜಾತಿಯ ಭಯ, ಕೋಮಿನ ಭಯ, ಹೆತ್ತವರ ಭಯ, ಕಳಕೊಳ್ಳುವ ಭಯ, ಅತಿ ಅವಲಂಬನೆಯ ಭಯ, ಕೀಳರಿಮೆಯಲ್ಲಿ ಹುಟ್ಟಿದ ಭಯ, ವಯಸ್ಸಿನ ಅಂತರದ ಭಯ.
ಇವರಿಬ್ಬರನ್ನೂ ದೂರ ಮಾಡಿದ ಆ ಅವ್ಯಕ್ತ ಭಯ, ಔಷಧವೇ ಖಾಯಿಲೆಯಾಗಿ ಪರಿಣಮಿಸಿದ ದುರಂತ.
– ವಿಕಾಸ್ ನೇಗಿಲೋಣಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.