ಮನದ ಮಾತನ್ನು ಆ ದೇವರಲ್ಲಿ ಹೇಳಲಾಗಲೇ ಇಲ್ಲ…
Team Udayavani, Mar 10, 2020, 5:34 AM IST
“ನಿಮ್ಮಿಂದಾಗಿ ನಾನಿದ್ದೇನೆ ಸಾರ್…’ ಅಂದೆ. ಹೇಗೆ ಈ ಋಣ ತೀರಿಸಲಿ’ ಅಂತ ಕೈ ಮುಗಿದೆ. “ಮಗೂ, ನಿನ್ನ ಜಾಗದಲ್ಲಿ ಬೇರೆಯವರಿದ್ದರೂ ನಾನು ಇದನ್ನೇ ಮಾಡ್ತಿದ್ದೆ. ನೀನು ನಿನ್ನ ಕಾಲಮೇಲೆ ನಿಂತಾಗ ಎರಡುಮಕ್ಕಳಿಗೆ ಸಹಾಯ ಮಾಡು. ಆ ಚೈನ್ ಮುಂದುವರಿಯಲಿ’ ಅಂದರು.
ಜೀವನದಲ್ಲಿ ಎಲ್ಲವನ್ನು ನೆನಪಿನಲ್ಲಿಟ್ಟುಕೊಳ್ಳೋಕೆ ಆಗುತ್ತಾ? ಆಗಲ್ಲ. ಎಲ್ಲವನ್ನೂ ನೆನಪಿಟ್ಟುಕೊಂಡೆವು ಅಂತಿಟ್ಟುಕೊಳ್ಳಿ. ಆಗ ನಮ್ಮ ಕತೆ ಏನಾಗಬೇಡ! ಹಾಗೇನೆ, ಎಲ್ಲವನ್ನು ಮರೆಯೋಕೂ ಆಗಲ್ಲ. ಅದಕ್ಕೇ ಇರಬಹುದು ; ನೆನಪಿಡದಿದ್ದರೂ ಅಡ್ಡಿ ಇಲ್ಲ. ಮರೆಯದಿದ್ದರೆ ಸಾಕು ಅನ್ನೋದು! ಅಪೂರ್ವ ಅನ್ನಿಸುವಂಥ ಘಟನೆಗಳು ಬೇಕು ಅಂದಾಗ ತಲೆಗೆ ಬಂದರೆ ಸಾಕು ಅನ್ನೋದು.
ಇಂಥದೇ ಒಂದು ಘಟನೆ ನನ್ನ ಬದುಕಲ್ಲಿ ನೆನಪಾಗಿ ಹೆಪ್ಪುಗಟ್ಟಿದೆ. ನನ್ನ ಬದುಕಿಗೆ ಭದ್ರ ಬುನಾದಿ ಕೊಟ್ಟವರ ನೆರವು ನನ್ನ ಬದುಕಿನ ನೆನಪು ನಂದಾದೀಪದಂತೆ ಉರಿಯುತ್ತಲೇ ಇರುತ್ತದೆ.
ಆಗ ನಾನು ಡಿಗ್ರಿ ಎರಡನೆಯ ವರ್ಷದಲ್ಲಿದ್ದೆ. ಓದುವುದಕ್ಕೆ ಸಿಕ್ಕಾಪಟ್ಟೆ ಆಸಕ್ತಿ. ಆದರೆ, ಮುಂದಿನ ವಿದ್ಯಾಭ್ಯಾಸಕ್ಕೆ ಆರ್ಥಿಕ ಅಡಚಣೆ ಶುರುವಾಗಿತ್ತು. ಶಾಲೆಯಲ್ಲಿ “ಸಾರ್, ಇನ್ನು ನನಗೆ ಓದುವುದು ಅಸಾಧ್ಯ’ ಅಂತ ನನ್ನ ನೆಚ್ಚಿನ ಕನ್ನಡ ಅಧ್ಯಾಪಕರುಗಳಲ್ಲಿ ನಿವೇದಿಸಿದ್ದೆ. “ಇಲ್ಲಮ್ಮ, ನೀನು ಕಲೀತಿಯಾ ಬಿಡು’ ಅಂತಷ್ಟೇ ಅಧ್ಯಾಪಕರು ಅಂದಿದ್ದರು. ಇದು ಬರೀ ಸಮಾಧಾನದ ಮಾತು ಅಂದು ಕೊಂಡಿದ್ದೆ. ಅದು ಅಷ್ಟು ಗಟ್ಟಿಯಾದ ಅಡಿಪಾಯವೆಂದು ಗೊತ್ತಿರಲೇ ಇಲ್ಲ.
ಭಾಷಣ ಸ್ಪರ್ಧೆಗೆ ಜಡ್ಜ್ ಆಗಿ ಬಂದಿದ್ದವರಲ್ಲಿ ಒಬ್ಬರು ನನ್ನ ಭಾಷಣ ಕೇಳಿದ್ದರು. ನಮ್ಮ ಮೇಷ್ಟ್ರು ಹೇಳಿದ ಕಷ್ಟ ಅರಿತರು. ಆ ಹುಡುಗಿಯ ವಿದ್ಯಾಭ್ಯಾಸದ ಹೊಣೆ ನನ್ನದೇ ಅಂತ ಜವಾಬ್ದಾರಿ ತಗೊಂಡರು. ಎರಡು ವರ್ಷಗಳ ಕಾಲ, ಪ್ರತಿ ತಿಂಗಳೂ ನನಗೆ ಹಣ ಕಳುಹಿಸಿಕೊಡುತ್ತಿದ್ದರು. ನನಗೆ ಅವರನ್ನ ನೋಡಬೇಕು. ಪಾದಕ್ಕೆ ವಂದಿಸಬೇಕು ಅನ್ನೋ ಆಸೆ. ಕನ್ನಡ ಮೇಷ್ಟ್ರಿಗೆ ಈ ಬಗ್ಗೆ ಹೇಳಿದಾಗ, “ನೀನು ಚೆನ್ನಾಗಿ ಓದು. ಅವರಿಗೆ ಅಷ್ಟೇ ಸಾಕು. ಸಮಯ ಬಂದಾಗ ಪರಿಚಯ ಮಾಡಿಸುತ್ತೇನೆ’ ಅನ್ನುತ್ತಿದ್ದರು. ಅವರು ಹೇಳಿದಂತೆ ಹಗಲು-ರಾತ್ರಿ ಓದಿದೆ. ಡಿಗ್ರಿಯಲ್ಲಿ ನಾನು ಡಿಸ್ಟಿಂಕ್ಷನ್‌ನಲ್ಲಿ ಪಾಸಾದೆ. ಕಲಿಯುವಾಗಲೇ ಮದುವೆ ನಿಶ್ಚಯವೂ ಆಯಿತು. ಆಗಲೂ, “ಸಾರ್ ಅವರನ್ನು ನೋಡಬೇಕಿತ್ತು’ ಅಂತ ಹಠಕ್ಕೆ ಬಿದ್ದಾಗ ಕನ್ನಡ ಮೇಷ್ಟ್ರು ನನಗೆ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿದವರು ಯಾರು ಗೊತ್ತಾ?ಅಂದರು. ನಾನು “ಗೊತ್ತಿಲ್ಲ’ ಅಂದೆ. “ಅವರೇ ಕೆನರಾ ಕಾಲೇಜಿನ ಪ್ರಿನ್ಸಿಪಾಲ್ ನಾಗರಾಜ್ ರಾವ್ ಜವಳಿ’ ಅಂತ ಹೇಳಿದರು.
ಅವರಾ! ನನ್ನ ಬಾಯಿಯಿಂದ ಉದ್ಘಾರ. ಅವರ ಬಗ್ಗೆ ತುಂಬಾ ಕೇಳಿದ್ದೆ.ಆದರೆ, ನನ್ನ ಜೀವನಕ್ಕೆ ಈ ರೀತಿ ಅವರು ಸಹಾಯ ಮಾಡುವರೆಂದು ಅಂದುಕೊಂಡಿರಲೇ ಇಲ್ಲ. ಅಲ್ಲಿಂದಲೇ ನೇರವಾಗಿ ಅವರ ಬಳಿ ಹೋಗಿದ್ದೆ. ಅವರನ್ನು ಕಂಡಕೂಡಲೇ ಭಾವುಕಳಾಗಿ ಮಾತು ಹೊರಡದೆ ನಮಸ್ಕರಿಸಿದ್ದೆ. “ನಿಮ್ಮಿಂದಾಗಿ ನಾನಿದ್ದೇನೆ ಸಾರ್…’ ಅಂದೆ. ಹೇಗೆ ಈ ಋಣ ತೀರಿಸಲಿ’ ಅಂತ ಕೈ ಮುಗಿದೆ. “ಮಗೂ, ನಿನ್ನ ಜಾಗದಲ್ಲಿ ಬೇರೆಯವರಿದ್ದರೂ ನಾನು ಇದನ್ನೇ ಮಾಡ್ತಿದ್ದೆ. ನೀನು ನಿನ್ನ ಕಾಲಮೇಲೆ ನಿಂತಾಗ ಎರಡುಮಕ್ಕಳಿಗೆ ಸಹಾಯ ಮಾಡು. ಆ ಚೈನ್ ಮುಂದುವರಿಯಲಿ’ ಅಂದರು. ಅವರು ಹೇಳಿದ್ದು ನನ್ನ ಕನಸೂ ಕೂಡ ಆಗಿತ್ತು. ಆದರೆ ಅದು ನನಸಾಗಲು ನನಗೆ ಹಲವು ಕಮಿಟ್‌ಮೆಂಟ್‌ಗಳು ಬಾಕಿ ಇದ್ದವು. ಅವರನ್ನು ಎರಡು ಸಾರಿ ಭೇಟಿ ಆದಾಗಲೂ, “ನನ್ನ ಕನಸು ನನಸಾಗಲು ಇನ್ನೆಷ್ಟು ನಾ ಕಾಯಬೇಕು ?’ ಅಂದಿದ್ದೆ. ಆಗತ್ತೆ ಇರು…ಸ್ವಲ್ಪ ಸಮಯ ಕಾಯಿ ಅದಕ್ಕೂ ಸಮಯ ಬರಬೇಕು…’ ಅಂತ ಸಮಾಧಾನ ಮಾಡಿದ್ದರು.
ಒಂದಷ್ಟು ವರ್ಷದ ನಂತರ ಜವಳಿ ಸಾರ್ ಹೇಳಿದಂತೆ, ನಾನು ಒಂದಷ್ಟು ಜನಕ್ಕೆ ನೆರವಾದೆ. ಈ ನನಸನ್ನು ಅವರಿಗೆ ಹೇಳಲೇಬೆಕೆಂದು, ಅವರಿಗೆ ನನಗಿಂತ ಹೆಚ್ಚು ಖುಷಿಯಾಗುತ್ತದೆ ಎಂದೂ ಅವರ ಊರಿಗೆ ನೋಡಲು ಹೊರಟರೇ… ಅವರು ತೀರಿಕೊಂಡ ಸುದ್ದಿ ಬಂದು ಕುಸಿದು ಬೀಳುವಂತಾಯಿತು. ಕಣ್ಣ ಮುಂದೆ ನನ್ನ ಸಂಕಷ್ಟಕ್ಕೆ ಬೆನ್ನಿಗೆ ನಿಂತ ಅವರ ನೆರವು, ಅವರು ಆಡಿದ ಮಾತುಗಳು, ವ್ಯಕಿತ್ವ ಎಲ್ಲವೂ ಬಂದು ಹೋಗುತ್ತದೆ.
ಸಾರ್, ನೀವು ಹೇಳಿದ್ದ ಮಾತು ನನ್ನ ಕನಸು ನನಸಾದಾಗ ನೀವಿಲ್ಲ. ಋಣ ಈ ಜನುಮದಲ್ಲಿ ತೀರಿಸಲುಂಟೇ…
ಕೇಳಿಸಲಾಗದ ಈ ಮಾತನ್ನು ನಿಮಗೆ ಹೇಗೆ ತಲಪಿಸಲಿ…?
ನೆನಪೇ ಹೀಗೆ ಕಾಡುತ್ತಿದೆ.
-ರಜನಿ ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.