ಜಗತ್ತು ಈ ಶಾಲೆಯಲ್ಲಿ…
Team Udayavani, Dec 17, 2019, 6:11 AM IST
ಈ ಶಾಲೆಗೆ ಬಂದರೆ ಇಡೀ ಜಗತ್ತು ಇದರೊಳಗೇ ಇದೆಯೇನೋ ಅನಿಸುತ್ತದೆ. ವಿದ್ಯಾರ್ಥಿಗಳು ಶಾಲೆಗೆ ಬಂದು ಕೂತರೆ ಸಾಕು, ಕಣ್ಣ ಮುಂದೆ ಪಾಠ ನಡೆಯುತ್ತಿರುತ್ತದೆ. ಅದು ಹೇಗೆ ಅಂದಿರಾ? ಇಡೀ ಶಾಲೆಯ ಗೋಡೆಗಳು ಯಾವುದೂ ಖಾಲಿ ಇಲ್ಲ. ಎಲ್ಲ ಕಡೆ ಮಕ್ಕಳಿಗೆ ಬೇಕಾದ ಮಾಹಿತಿ ಅಂಟಿಸಲಾಗಿದೆ. ಇದೊಂದು ವೈವಿಧ್ಯಮಯ ಸರ್ಕಾರಿ ಶಾಲೆ.
ನಮ್ಮ ರಾಷ್ಟ್ರೀಯ ಆಟ-ಹಾಕಿ, ಕನ್ನಡದ ಮೊದಲ ಶಾಸನ-ಹಲ್ಮಿಡಿ. ನಮ್ಮ ರಾಷ್ಟ್ರೀಯ ಮರ -ಆಲದಮರ. ಜ್ಞಾನ ಪೀಠ ಪ್ರಶಸ್ತಿ ವಿಜೇತರು ಯಾರ್ಯಾರು? ರಬಕವಿ-ಬನಹಟ್ಟಿ ತಾಲ್ಲೂಕಿನ ಹಿಪ್ಪರಗಿ ಸರಕಾರಿ ಕನ್ನಡ ಕಿರಿಯ ಪ್ರಾಥಮಿಕ ಎಸ್. ಎಸ್. ಖಾನಗೌಡರ ತೋಟದ ಶಾಲೆಗೆ ಬಂದರೆ, ಇಂಥ ಮಾಹಿತಿಯ ಕಣಜವೇ ತೆರೆದುಕೊಳ್ಳುತ್ತದೆ. ಶಾಲೆಯಲ್ಲಿ ಇಂಥ ಮಾಹಿತಿ ಎಲ್ಲಿದೆ ಅಂದಿರಾ? ಶಾಲೆಯ ಎಲ್ಲ ಗೋಡೆಗಳ ಮೇಲೂ ಇದೆ. ವಿದ್ಯಾರ್ಥಿಗಳು ಶಾಲೆಗೆ ಬಂದು ಸುಮ್ಮನೆ ಕೂತರೂ, ಕಣ್ಣ ಮುಂದೆ ಪಾಠ ನಡೆಯುತ್ತಿರುತ್ತದೆ.
ಪುಸ್ತಕ ತೆಗೆದು ಓದಬೇಕಿಲ್ಲ: ಕಣ್ಣಿಟ್ಟ ಕಡೆಯೆಲ್ಲ ಬರೀ ಇಂಥದೇ ಮಾಹಿತಿ. ಯಾವ ಕಡೆಗೆ ಕಣ್ಣು ತಿರುಗಿಸಿದರೂ ಅಲ್ಲೆಲ್ಲಾ ಜ್ಞಾನಾರ್ಜನೆ. ಹೀಗಾಗಿ, ಶಾಲೆಯ ಯಾವ ಗೋಡೆಗಳೂ ಖಾಲಿ ಇಲ್ಲ. ಅಲ್ಲಿ ಪಠ್ಯಕ್ಕೆ ಸಂಬಂಧಪಟ್ಟ ಎಲ್ಲ ವಿಷಯಗಳನ್ನೂ ಬರೆಯಲಾಗಿದೆ. ಇವೆಲ್ಲವುಗಳನ್ನು ಇಲ್ಲಿಯ ವಿದ್ಯಾರ್ಥಿಗಳು ಪ್ರತಿನಿತ್ಯ ಓದುತ್ತಾರೆ. ಪಠ್ಯದ ಜೊತೆಗೆ ಸಾಮಾನ್ಯ ಜ್ಞಾನಕ್ಕೂ ಸಾಕಷ್ಟು ಮಹತ್ವವನ್ನು ನೀಡುತ್ತಿದ್ದಾರೆ. ಈ ಶಾಲೆಯಲ್ಲಿ 39 ವಿದ್ಯಾರ್ಥಿಗಳಿದ್ದಾರೆ.
ಅವರು ನಮ್ಮ ದೇಶದ ರಾಜ್ಯಗಳು, ಅವುಗಳ ರಾಜಧಾನಿ, ಕರ್ನಾಟಕದ ಜಿಲ್ಲೆಗಳು, ಸಂವಿಧಾನದ ಮೂಲಭೂತ ಹಕ್ಕುಗಳು, ಎಂಟು ಗ್ರಹಗಳು, ವಿಭಕ್ತಿ ಪ್ರತ್ಯಯಗಳು, ಸಂಬೋ ಧನೆಗಳು, ಧರ್ಮ ಮತ್ತು ಪೂಜೆ ಮಾಡುವ ಸ್ಥಳಗಳು, ಜ್ಞಾನಪೀಠ ಪ್ರಶಸ್ತಿ ವಿಜೇತ ಕನ್ನಡದ ಸಾಹಿತಿಗಳು, ನೊಬೆಲ್ ಪ್ರಶಸ್ತಿ ಪಡೆದ ಭಾರತೀಯರು, ಇಂಗ್ಲಿಷ್‌ನ ಪ್ರಶ್ನಾರ್ಥಕ ಶಬ್ದಗಳು, ಶಾಲೆಯಲ್ಲಿ ಆಚರಿಸುವ ಪ್ರಮುಖ ದಿನಾಚರಣೆಗಳು, ಉಸಿರಾಟ, ಜೀರ್ಣ ಕ್ರಿಯೆ, ವಿಸರ್ಜನೆಯ ಕ್ರಿಯೆಯಲ್ಲಿ ಬರುವ ಅಂಗಗಳು…
ಹೀಗೆ, ಬದುಕಿಗೆ ಬೇಕಾದ, ಓದಿಗೆ ಅಗತ್ಯವಾದ ಎಲ್ಲವನ್ನೂ ಪಟ ಪಟನೆ ಹೇಳುತ್ತಾರೆ. ಎಲ್ಲಕ್ಕಿಂತ ಮುಖ್ಯ ಸಂಗತಿ ಎಂದರೆ, ಈ ಎಲ್ಲ ವಿಷಯಗಳು ಒಂದರಿಂದ ಐದನೆಯ ತರಗತಿಯ ವಿದ್ಯಾರ್ಥಿಗಳ ತನಕ ಎಲ್ಲರಿಗೂ ಗೊತ್ತು. ಸಾಮಾನ್ಯವಾಗಿ ಶಾಲೆ ಎಂದರೆ ಅಲ್ಲಿ ವರ್ಣಮಾಲೆಗಳು, ಅದನ್ನು ಎ ಫಾರ್ ಆ್ಯಪಲ್, ಬಿ ಫಾರ್ ಬಾಲ್, ಜೆಡ್ ಫಾರ್ ಝಿಬ್ರಾ ಎಂದು ಹೇಳಿದರೇ ವಿದ್ಯಾ ಬದುಕು ಸಂಪನ್ನವಾಗುವುದು ಅನ್ನೋ ಮಟ್ಟಿಗೆ ನಂಬಿದ್ದೇವೆ.
ಆದರೆ, ಈ ಶಾಲೆಯ ಮಕ್ಕಳಿಗೆ ಎ ಫಾರ್ ಅಂದರೆ ಏನು? ಅಂತ ಕೇಳಿ, ಎ ಫಾರ್ ರಾಣಿ ಅಬ್ಬಕ್ಕ ದೇವಿ ಅಂತಾರೆ, ಬಿ ಫಾರ್ ಭಗತ್‌ಸಿಂಗ್, ಎಂ ಫಾರ್ ಮಹಾತ್ಮಾ ಗಾಂಧಿ ಮತ್ತು ಜೆಡ್ ಫಾರ್ ಜೀನತ್ ಮಹಲ್ ಹೀಗೆ ಪ್ರತಿ ಅಕ್ಷರಕ್ಕೆ ಒಬ್ಬ ಸ್ವಾತಂತ್ರ ಹೋರಾಟಗಾರರ ಹೆಸರುಗಳನ್ನು ಮಕ್ಕಳು ಹೇಳುವಾಗ, ಕೇಳುಗರಿಗೆ ರೋಮಾಂಚನವಾಗುತ್ತದೆ.
ಎಟಿಎಂ ಇದೆ: ಈ ಶಾಲೆಯಲ್ಲಿ ಮಾದರಿ ಎಟಿಎಂ ಯಂತ್ರವನ್ನು ನಿರ್ಮಾಣ ಮಾಡಲಾಗಿದೆ. ವಿದ್ಯಾರ್ಥಿನಿ ಪರಿಯಾನ್ ಗದ್ಯಾಳ ವಿದ್ಯಾರ್ಥಿಗಳಿಗೆ, ಶಾಲೆಗೆ ಬಂದ ಗಣ್ಯರಿಗೆ ಮತ್ತು ಗ್ರಾಮಸ್ಥರಿಗೆ ಮಾದರಿ ಎಟಿಎಂ ಮೂಲಕ ಹಣವನ್ನು ಪಡೆಯುವ ವಿಧಾನವನ್ನು ವಿವರಿಸುತ್ತಾಳೆ. ಇಲ್ಲಿ ಪಡೆದ ಜ್ಞಾನದಿಂದಾಗಿಯೇ ಅನೇಕ ಗ್ರಾಮಸ್ಥರು ಈಗ ಹಿಪ್ಪರಗಿಯಲ್ಲಿ ಎಟಿಎಂನಿಂದ ಹಣವನ್ನು ಪಡೆದುಕೊಳ್ಳುತ್ತಿದ್ದಾರೆ.
ಈ ಶಾಲೆಯ ಮಕ್ಕಳು ಕಲಿಕೆಯಲ್ಲಿ ಇಷ್ಟೆಲ್ಲಾ ಮುಂದೆ ಬರುವುದಕ್ಕೆ ಶಿಕ್ಷಕ ಶಿವಪ್ರಸಾದ ಯಾದವಾಡರು ಕಾರಣ. ಅವರು 2015ರಲ್ಲಿ ಈ ಶಾಲೆಗೆ ಬಂದರು. 2016 ರ ಏಪ್ರಿಲ್ ಮತ್ತು ಮೇ ತಿಂಗಳ ಬೇಸಿಗೆ ರಜೆಯಲ್ಲಿ ಸುಮ್ಮನೆ ಕೂರಲಿಲ್ಲ. ಪಠ್ಯದಲ್ಲಿರುವ ಎಲ್ಲ ವಿಷಯಗಳನ್ನು ಬರೆದು, ಅದನ್ನು ಶಾಲೆಯ ಗೋಡೆಗಳ ಮೇಲೆ ಅಂಟಿಸಿದರು. ಗೋಡೆಗಳು, ಕಿಟಕಿಯ ಹಿಂಬದಿ, ಬಾಗಿಲಿನ ಹಿಂಬದಿ, ಮೇಲ್ಛಾವಣಿಯಲ್ಲಿರುವ ಪಿಲ್ಲರ್‌ಗಳ ಮೇಲೆಯೂ ಅನೇಕ ವಿಷಯಗಳನ್ನು ನೇತು ಹಾಕಿದರು.
ಯಾದವಾಡ ಇದಕ್ಕಿಂತ ಮೊದಲು ಜಮಖಂಡಿ ತಾಲ್ಲೂಕಿನ ಅಡಿಹುಡಿ ಶಾಲೆಯಲ್ಲಿ ಇಂಥ ಹತ್ತಾರು ಪ್ರಯೋಗಗಳನ್ನು ಮಾಡಿದ್ದರು. ಇದು ಯಶಸ್ವಿ ಕೂಡಾ ಆಗಿತ್ತು. ಈಗ ವಿಭಿನ್ನ ಪ್ರಯತ್ನವನ್ನು ಹಿಪ್ಪರಗಿ ಶಾಲೆಯಲ್ಲಿ ಆರಂಭಿಸಿ ಗಮನ ಸೆಳೆದಿದ್ದಾರೆ. ಇವರಿಗೆ ಜಿಲ್ಲಾ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಮತ್ತು ಜಮಖಂಡಿಯ ಗವಿಮಠ ಪ್ರತಿಷ್ಠಾನವು ನೀಡುವ ಗುರು ಶ್ರೇಷ್ಠ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ತಾವು ಏನೇ ಮಾಡಿದರೂ “ಮುಖ್ಯ ಶಿಕ್ಷಕ ಉಮೇಶ ಗಂಜ್ಯಾಳ.
ಸಿಆರ್‌ಪಿ ಪ್ರಶಾಂತ ಹೊಸಮನಿ ಮತ್ತು ಶಾಲಾ ಅಭಿವೃದ್ಧಿಯ ಮಂಡಳಿಯ ಸದಸ್ಯರ ಪ್ರೋತ್ಸಾಹದಿಂದಾಗಿ ಶಾಲೆಯಲ್ಲಿ ಹೊಸ ರೀತಿಯ ಯೋಜನೆಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಾಯಿತು’ ಎನ್ನುತ್ತಾರೆ ಶಿವಪ್ರಸಾದ ಯಾದವಾಡ. ಈ ಶಾಲೆಯನ್ನು ಎರೆಭೂಮಿ ತೋಟದಲ್ಲಿ ಕಟ್ಟಿರುವುದರಿಂದ ಶಾಲಾ ಕಟ್ಟಡ ಕುಸಿಯುತ್ತಿದೆ. ಗೋಡೆಗಳು ಬಿರುಕು ಬಿಟ್ಟಿವೆ ಅನ್ನೋ ಆತಂಕವೂ ಇದೆ. ಎಲ್ಲ ನ್ಯೂನತೆಗಳನ್ನು ಮರೆತು ಓದಿನ ಕಡೆ ಗಮನಹಸಿದ್ದಾರೆ.
ಜ್ಞಾನ ಅಗತ್ಯ: ವಿದ್ಯಾರ್ಥಿಗಳಿಗೆ ಪ್ರೀತಿಯಿಂದ ಮತ್ತು ಅವರ ಜೊತೆಗೆ ಒಂದಾಗಿ ಕಲಿಸುವವರೇ ನಿಜವಾದ ಶಿಕ್ಷಕ. ಶಿಕ್ಷಕರು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನವನ್ನು ನೀಡಬೇಕು. ವಿದ್ಯಾರ್ಥಿಗಳ ಬೆಳವಣಿಗೆಯಲ್ಲಿ ಪ್ರಾಥಮಿಕ ಹಂತದಲ್ಲಿಯ ಓದು ಬಹಳಷ್ಟು ಮುಖ್ಯವಾಗಿರುತ್ತದೆ. ಅಂತಹ ಕೆಲಸವನ್ನು ಹಿಪ್ಪರಗಿ ಖಾನಗೌಡರ ಶಾಲೆಯ ಶಿಕ್ಷಕರು ಮಾಡುತ್ತಿರುವುದು ಸಂತಸದ ವಿಷಯ ಎನ್ನುತ್ತಾರೆ ಉಪನ್ಯಾಸಕ ಪೊ. ಕೆ. ಎಚ್. ಸಿನ್ನೂರ. ಸರಕಾರಿ ಶಾಲೆ ಎಂದರೆ ಮೂಗು ಮುರಿಯುವ ಇಂದಿನ ದಿನಮಾನಗಳಲ್ಲಿ, ಪ್ರಯೋಗಾತ್ಮಕ ಹಾಗೂ ಗುಣಾತ್ಮಕ ಶಿಕ್ಷಣವನ್ನು ನೀಡುವುದರ ಮೂಲಕ ಹೀಗೂ ಮಾಡಲು ಸಾಧ್ಯ ಅಂತ ತೋರಿಸಿದೆ ಗೌಡರ ತೋಟದ ಶಾಲೆ.
ವಚನಪ್ರಿಯರು: ಮಕ್ಕಳು ತಲೆಯಲ್ಲಿ ಇಟ್ಟುಕೊಂಡ ಜ್ಞಾನ ಎಷ್ಟು? ಅವರಿಗೆ ಇದನ್ನೆಲ್ಲ ಹೇಳಿಕೊಡಬೇಕು? ಇವೆಲ್ಲ ತಿಳಿಯುವುದಕ್ಕಾಗಿಯೇ ತಿಂಗಳ ಮೊದಲ ಶನಿವಾರ ಮಕ್ಕಳಿಂದ ವಚನ, ಎರಡನೆ ಶನಿವಾರ ಮಗ್ಗಿ, ಮೂರನೆ ಶನಿವಾರ ಶುದ್ಧ ಬರಹ, ನಾಲ್ಕನೆಯ ಶನಿವಾರ ಚಿತ್ರಕಲೆ ಮತ್ತು ನೀತಿ ಕತೆಗಳನ್ನು ಹೇಳುವ ಸ್ಪರ್ಧೆಗಳನ್ನು ಹಮ್ಮಿಕೊಳ್ಳುತ್ತಾರೆ. ಪ್ರತಿ ಗುರುವಾರ ಸಾಮಾನ್ಯ ಜ್ಞಾನದ ಕುರಿತು ಹೇಳಿಕೊಡುತ್ತಾರೆ.
ತಿಂಗಳ ಕೊನೆಯ ಗುರುವಾರದಂದು ಸಾಮಾನ್ಯ ಜ್ಞಾನದ ಪರೀಕ್ಷೆ ನಡೆಯುತ್ತದೆ. ಪ್ರತಿಯೊಂದು ವರ್ಗದ ವಿದ್ಯಾರ್ಥಿಗಳಿಗೆ ಆಯಾ ಪಠ್ಯ ಪುಸ್ತಕದಲ್ಲಿನ ಪಾಠಗಳನ್ನು ನಾಟಕಗಳ ಮೂಲಕ ತಿಳಿಸುವುದು ಶಾಲೆಯ ವೈವಿಧ್ಯತೆಯಲ್ಲಿ ಒಂದು. ಇದರಿಂದಾಗಿ ವಿದ್ಯಾರ್ಥಿಗಳಿಗೆ ವಿಚಾರಗಳು ನೇರವಾಗಿ ತಲೆಗೆ ಹೋಗುತ್ತವೆ. ಈ ಶಾಲೆಯಲ್ಲಿ ರಶ್ಮಿತಾ ಬಬಲೇಶ್ವರ ಎಂಬ ವಿದ್ಯಾರ್ಥಿನಿ ಇದ್ದಾಳೆ. ಆಕೆ 40ಕ್ಕೂ ಹೆಚ್ಚು ಶರಣರ ವಚನಗಳನ್ನು ಹಾಡುತ್ತಾಳೆ. ಶಾಲೆಯ ಶಿಕ್ಷಕರ ಪರಿಶ್ರಮಕ್ಕೆ ಇದು ಸಾಕ್ಷಿ.
* ಕಿರಣ ಶ್ರೀಶೈಲ ಆಳಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.