ಕಾರಲ್ಲಿ ಬಂದವರು ಕ್ಷಮೆ ಕೇಳಿದರು!
Team Udayavani, Jun 13, 2017, 10:13 AM IST
ಸರ್ಕಾರಿ ಶಾಲೆಗೆ ಶಿಕ್ಷಕಿಯಾಗಿ ಸೇರಲು ನೇಮಕಾತಿ ಪತ್ರ ಬಂದಾಗ, ಅಯ್ಯೋ, ಅದು ಮುಸಲ್ಮಾನರು ವಾಸಿಸುವ ಪ್ರದೇಶದಲ್ಲಿದೆ. ಅಲ್ಲಿ ಸೇರಬೇಡ ಎಂದು ನನ್ನ ಸ್ನೇಹಿತರು, ಆತ್ಮೀಯರು ಎಚ್ಚರಿಕೆ ನೀಡಿದರು ಆದರೂ ಅವರೆಲ್ಲರ ಉಪದೇಶಕ್ಕೆ ಕಿವಿಗೊಡದೆ ಧೈರ್ಯವಾಗಿ ಹೋಗಿ ಕೆಲಸಕ್ಕೆ ಸೇರಿಕೊಂಡೆ. ಆ ಶಾಲೆಯಲ್ಲಿದ್ದ ಮಕ್ಕಳ ಪೈಕಿ ಹೆಚ್ಚಿನವರು ಮುಸ್ಲಿಮರೇ ಆಗಿದ್ದರು. ನಾನಂತೂ ತುಂಬಾ ಜಾಗ್ರತೆಯಿಂದ ಅವರೊಡನೆ ವ್ಯವಹರಿಸುತ್ತಿದ್ದೆ.
ಹೀಗಿರುವಾಗ ಐದನೇ ತರಗತಿಯ ಒಬ್ಬ ಮುಸ್ಲಿಂ ವಿದ್ಯಾರ್ಥಿ ಮನೆಗೆಲಸ ಮಾಡುತ್ತಿರಲಿಲ್ಲ. ಹೇಳಿದ ಮಾತನ್ನು ಕೇಳುತ್ತಿರಲಿಲ್ಲ. ತೀರಾ ಉದ್ಧಟನಾಗಿದ್ದ. ಆಗಾಗ್ಗೆ ಶಾಲೆಯನ್ನೂ ತಪ್ಪಿಸುತ್ತಿದ್ದ. ಅವನನ್ನು ಸರಿದಾರಿಗೆ ತರಲು ಸಾಧ್ಯವಾಗದೆ, ಒಂದು ದಿನ ತಾಳ್ಮೆ ತಪ್ಪಿ, ಶಾಲೆಗೆ ತಡವಾಗಿ ಬಂದದ್ದಕ್ಕೆ ಆತನನ್ನು ಸ್ವಲ್ಪ ಹೊತ್ತು ಹೊರಗೆ ನಿಲ್ಲುವಂತೆ ಹೇಳಿದೆ. ಆದರೆ ಆ ಹುಡುಗ ತನ್ನ ಚೀಲ ತೆಗೆದುಕೊಂಡು ಸೀದಾ ಮನೆಯ ದಾರಿ ಹಿಡಿದದ್ದಲ್ಲದೇ ಮತ್ತೆ ಮೂರ್ನಾಲ್ಕು ದಿನ ಶಾಲೆಗೇ ಬರಲಿಲ್ಲ. ಆಗ ಮಾತ್ರ ನನಗೆ ದಿಗಿಲಾಯ್ತು. ನನ್ನ ಹಿತೈಷಿಗಳ ಮಾತು ನೆನಪಿಗೆ ಬಂದು ಮುಂದೆ ಏನಾಗುವುದೋ ಎಂದು ಆತಂಕದಿಂದ ಇದ್ದೆ. ಅದರಲ್ಲೂ ಆ ಹುಡುಗ ಆ ಊರಿನ ಶ್ರೀಮಂತರೊಬ್ಬರ ಮಗನೆಂದು ಕೇಳಿ, ಇನ್ನು ಏನೇನು ಸಮಸ್ಯೆ ಎದುರಿಸಬೇಕೋ ಎಂದು ಸದಾ ಯೋಚಿಸುತ್ತಿದ್ದ ನನ್ನ ಮನಸ್ಸೇ ಸರಿಯಿರಲಿಲ್ಲ. ಇಂಥ ಸಮಯದಲ್ಲಿ ನನ್ನ ಸಹ ಅಧ್ಯಾಪಕರೂ ಆ ಮಗುವಿನ ಬಗ್ಗೆ ಕಠಿಣ ನಿಲುವು ತಳೆದಿದ್ದು, ಅವನನ್ನು ಶಾಲೆಯಿಂದ ಹೊರಗೆ ಹಾಕಿ ಶಿಕ್ಷಿಸಿದ್ದು ಸರಿಯಲ್ಲ ಎಂಬರ್ಥದಲ್ಲಿ ಮಾತನಾಡಿ, ಮೊದಲೇ ಹೆದರಿದ್ದ ನನ್ನನ್ನು ಮತ್ತಷ್ಟು ಹೆದರುವಂತೆ ಮಾಡಿದರು.
ನಾಲ್ಕೈದು ದಿನ ಕಳೆದರೂ ಆ ಹುಡುಗನ ಮನೆಯವರಿಂದ ಯಾವ ದೂರೂ ಬರಲಿಲ್ಲ. ಆದರೆ ಹುಡುಗನೂ ಶಾಲೆಗೆ ಬರಲಿಲ್ಲ. ಹೇಳಿ ಕೇಳಿ ಶ್ರೀಮಂತರ ಮಗನಲ್ಲವೇ? ಅವನನ್ನು ಬೇರೆ ಶಾಲೆಗೆ ಸೇರಿಸಿರಬಹುದು ಎಂದೇ ನಾನು ಯೋಚಿಸಿದೆ. ಹೀಗೆ ಅಂದುಕೊಂಡ ಮರುದಿನ ಶಾಲೆಯ ಮುಂದೆ ಬಂದು ನಿಂತ ಕಾರಿನಿಂದ ಆ ಹುಡುಗನೊಂದಿಗೆ ಇಳಿದ ವ್ಯಕ್ತಿಯನ್ನು ನೋಡಿ “ಅಯ್ಯೋ ಏನು ಆಪತ್ತು ಕಾದಿದೆಯೋ?’ ಎಂದು ಹೆದರಿದೆ. ನನ್ನೆದೆ ಡವಡವ ಹೊಡೆದುಕೊಳ್ಳುತ್ತಿತ್ತು. ಆಗಲೇ ಮುಖ್ಯೋಪಾಧ್ಯಾಯರಿಂದ ನನಗೆ ಕರೆ ಬಂತು. ಆದ್ದದಾಗಲಿ ದೇವರಿದ್ದಾನೆ ಎಂದುಕೊಂಡು ಹೆದರುತ್ತಾ ಬಂದ ನನ್ನನ್ನು ನೋಡಿ, ಆ ಮನುಷ್ಯ “ನಮಸ್ಕಾರ ಟೀಚರ್. ನನ್ನ ಮಗನನ್ನು ಕ್ಷಮಿಸಿ ಕ್ಲಾಸಿಗೆ ಸೇರಿಸಿಕೊಳ್ಳಿ’ ಎಂದು ವಿನಂತಿಸಿದಾಗ ಏನಾಗುವುದೋ ಎಂದು ಆತಂಕದಲ್ಲಿದ್ದ ನನಗೆ ಅವರ ಮಾತನ್ನು ನಂಬಲಿಕ್ಕಾಗಲಿಲ್ಲ. ಆಮೇಲೆ ತಿಳಿಯಿತು ವಿಷಯ. ಆ ಹುಡುಗ ದಿನಾಲೂ ಶಾಲೆಗೆಂದು ಹೊರಟು, ಎಲ್ಲಿಯಾದರೂ ಅಡಗಿ ಕುಳಿತು, ಶಾಲೆ ಬಿಡುವ ಸಮಯ ಮನೆಗೆ ಹೋಗುತ್ತಿದ್ದನಂತೆ. ಹಾಗಾಗಿ ಅವನು ಶಾಲೆಗೆ ಬಾರದ ವಿಚಾರ ಮನೆಯವರಿಗೆ ಗೊತ್ತಿರಲಿಲ್ಲ. ಇತರ ಮಕ್ಕಳಿಂದ ಶಾಲೆಗೆ ಹೋಗದ ವಿಚಾರ ತಿಳಿದು, ಅವರೇ ಮಗನನ್ನು ಶಾಲೆಗೆ ಕರೆತಂದಿದ್ದರು. ಅವನಿಂದ ಕ್ಷಮೆ ಕೇಳಿಸಿದ್ದಲ್ಲದೆ, ತಾವೂ ಕ್ಷಮೆ ಕೇಳಿದರು.
ಅವರ ವರ್ತನೆ ನನಗೆ ಅಚ್ಚರಿ ಮೂಡಿಸಿತು. ವಿದ್ಯೆ ಕಲಿಸುವ ಗುರುಗಳು ತಂದೆ ತಾಯಿಗೆ ಸಮಾನ ಎಂದು ಮಗನಿಗೆ ಬುದ್ಧಿ ಹೇಳಿ, ಇನ್ನು ಮುಂದೆ ಇಂತಹ ಪ್ರಸಂಗ ಆಗಬಾರದು ಎಂದು ಆ ಹುಡುಗನಿಗೆ ಎಚ್ಚರಿಕೆ ನೀಡಿದರು. ತಮ್ಮ ಮಕ್ಕಳು ಮಾಡಿದ್ದೇ ಸರಿ, ಅವರು ಹೇಳಿದ್ದೇ ವೇದವಾಕ್ಯ ಎಂದು ನಂಬುವ; ಅದರಲ್ಲೂ ಪ್ರಾಥಮಿಕ ಶಾಲೆಯ ಶಿಕ್ಷಕರೆಂದರೆ ಮೂಗು ಮುರಿಯುವ ಜನರಿರುವ ಈಗಿನ ಕಾಲದಲ್ಲಿ, ಆಗರ್ಭ ಶ್ರೀಮಂತರಾದ ಆ ಮುಸ್ಲಿಂ ಬಾಂಧವರ ವ್ಯಕ್ತಿತ್ವವನ್ನು ನಾನೆಂದೂ ಮರೆಯಲಾರೆ. ನನ್ನ ಅಧ್ಯಾಪಕ ವೃತ್ತಿಯ ಆರಂಭದಲ್ಲಿ ನಡೆದ ಘಟನೆ ಇಂದಿಗೂ ನೆನಪಾಗಿ ಉಳಿದಿದೆ. ನನ್ನ ಜೀವನದ ಸವಿ ನೆನಪಾಗಿ ಉಳಿದಿದೆ.
– ಸಾವಿತ್ರಿಹೊಳ್ಳ ಕಟೀಲು, ಬೆಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.