ಮರಳಿ ಮಣ್ಣಿಗೆ
Team Udayavani, Jun 5, 2018, 6:00 AM IST
ಹುಟ್ಟಿದ ನೆಲವನ್ನು ಬಿಟ್ಟು, ಕರ್ಮಭೂಮಿಯಲ್ಲಿ ಜೀವಿಸುವಾಗ ಹಚ್ಚಹಸಿರಾದ ವಿರಹವೊಂದು ಎಲ್ಲರನ್ನೂ ಕಾಡುತ್ತದೆ. ಹುಟ್ಟೂರಿನ ಚಿತ್ರಗಳು, ಅಲ್ಲಿನ ಮೊದಲ ಮಳೆಯ ಮಣ್ಣಿನ ಘಮ, ಸ್ವತ್ಛಂದ ಹಸಿರಿನ ಸೆರಗು, ಅದರ ನೆರಳಿನ ತಂಪಿನಲ್ಲಿ ಓಡಾಡುವ ಸೊಗಸು, ಹಕ್ಕಿಗಳ ಚಿಲಿಪಿಲಿ… ನಗರದಲ್ಲಿ ಬಂದು ಕುಳಿತ ಮನಸ್ಸುಗಳು ಒಮ್ಮೆ ಮೈಮರೆಯಲು ಆ ಹಸಿರುನೆನಕೆಯೇ ಸಾಕು. ಕಂಪ್ಯೂಟರಿನ ಕೀಲಿಮಣೆ, ಕೈತುಂಬಾ ಸಂಬಳಗಳನ್ನೆಲ್ಲ ತೊರೆದು ಪರಿಸರದ ನಡುವೆ ಇದ್ದುಬಿಡೋಣವೆಂದು ಬುದ್ಧನಂತೆ ಹೊರಡುವುದಕ್ಕೆ ಅವರಿಗೆ ಕಾರಣವೂ ಬೇಕಿಲ್ಲ. “ವಿಶ್ವ ಪರಿಸರ’ದ ದಿನ ಈ ಘಳಿಗೆಯಲ್ಲಿ ನಗರದ ಬದುಕನ್ನು ತೊರೆದು, ನಿಸರ್ಗದ ನಡುವೆ ಧ್ಯಾನಸ್ಥರಾದವರನ್ನು ನಿಮ್ಮ ಮುಂದಿಡುತ್ತಿದ್ದೇವೆ…
ಪ್ರಜ್ಞಾ ಚೌಟ
ತೊರೆದ ಹುದ್ದೆ: ಸಾಕ್ಷ್ಯಚಿತ್ರ ನಿರ್ದೇಶಕಿ
“ನಿಮ್ಮ ಬದುಕಿಗೂ, ನನ್ನ ಬದುಕಿಗೂ ಇರುವ ವ್ಯತ್ಯಾಸ ಏನ್ ಗೊತ್ತಾ? ಸಿಟಿಯಲ್ಲಿ ನೀವೆಲ್ಲಾ ಬಾಕ್ಸ್‌ಗಳಲ್ಲಿ ಬದುಕ್ತಿದ್ದೀರಿ. ಕಡಿಮೆ ಜಾಗ, ಕಡಿಮೆ ಹಸಿರು, ಹೀಗೇ ಇರಬೇಕು, ಹೀಗೆ ಬದುಕಿದರೆ ಮಾತ್ರ ಚೆಂದ ಎಂಬ ಕೆಲವೊಂದಷ್ಟು ನಿಯಮಗಳು. ಲಂಡನ್‌ನಲ್ಲಿ ಓದುವಾಗ ನಾನೂ ಹೀಗೇ ಇದ್ದೆ. ಮನುಷ್ಯ ನಿರ್ಮಿತ ಇಕ್ಕಟ್ಟಾದ ಪ್ರಪಂಚದೊಳಗೆ ತೂರಿಕೊಂಡಿದ್ದೆ. ಆಮೇಲೆ ಓದು ಮುಗಿಯಿತು. ಭಾರತಕ್ಕೆ ಬಂದೆ. ಆನೆಗಳ ಬಗ್ಗೆ ತೀರದ ಕುತೂಹಲ ಮೂಡಿತು. ಆಸಕ್ತಿ, ಅಭಿರುಚಿಗಳ ಕಾರಣದಿಂದ ಬದುಕನ್ನೂ ಬದಲಿಸಿಕೊಂಡೆ. ಈಗ ನಾನಿರುವ ಜಗತ್ತು ನಿಮ್ಮಂತಿಲ್ಲ. ಅಲ್ಲಿ ಎಲ್ಲವೂ ಸ್ವತ್ಛಂದ. ಕಿಟಕಿ, ಬಾಗಿಲುಗಳೇ ಇಲ್ಲ. ಕಣ್ಣು ಹಾಯಿಸಿದಷ್ಟೂ ಹಸಿರು, ಒಳಗೆಳೆದುಕೊಂಡಷ್ಟೂ ಶುದ್ಧ ಗಾಳಿ… ನೆಮ್ಮದಿಯಾಗಿ ಬದುಕಲು ಇನ್ನೇನು ಬೇಕು?
ನಾನು ಹುಟ್ಟಿದ್ದು ಘಾನಾದಲ್ಲಿ. ನನ್ನ ಅಪ್ಪ ಡಿ.ಕೆ. ಚೌಟ ಅವರು ಸುಮಾರು 30 ವರ್ಷ ಪಶ್ಚಿಮ ಆಫ್ರಿಕದಲ್ಲಿದ್ದರು. ಲಂಡನ್‌ನ ಯುನಿವರ್ಸಿಟಿಯಿಂದ ಆರ್ಕಿಯಾಲಜಿ ಮತ್ತು ಆಂಥಪಾಲಜಿಯಲ್ಲಿ (ಪುರಾತತ್ವ ಮತ್ತು ಮಾನವಶಾಸ್ತ್ರ) ಮಾಸ್ಟರ್ ಓದಿದ್ದೇನೆ. ಕಾಲೇಜಿನಲ್ಲಿ ಇದ್ದಾಗ ನಾನು ಆನೆಗಳ ಬಗ್ಗೆ ಜಾಸ್ತಿ ತಲೆ ಕೆಡಿಸಿಕೊಂಡಿರಲಿಲ್ಲ. ಹೃದಯದಲ್ಲಿ ಆನೆಗಳ ಹೆಜ್ಜೆ ಗುರುತು ಮೂಡಿದ್ದು ಭಾರತಕ್ಕೆ ವಾಪಸ್ ಬಂದ ಮೇಲೆ.
1993ರಲ್ಲಿ ಭಾರತಕ್ಕೆ ಬಂದ ಮೇಲೆ ಒಂದು ಡಾಕ್ಯುಮೆಂಟರಿಗಾಗಿ ವೈನಾಡು, ಕೇರಳದ ಆನೆ ಕ್ಯಾಂಪ್‌ಗ್ಳಲ್ಲಿ ವಾಸ್ತವ್ಯ ಹೂಡಿದ್ದೆ. ಮನುಷ್ಯ ಮತ್ತು ಆನೆಗಳ ಸಂಬಂಧದ ಬಗ್ಗೆ ಪದವಿಯಲ್ಲಿ ಓದಿದ್ದಕ್ಕೂ, ವಾಸ್ತವಕ್ಕೂ ತುಂಬಾ ಅಂತರ ಇದೆ ಅಂತ ಅರ್ಥವಾಯ್ತು. ವಿದೇಶಿಯರ ದೃಷ್ಟಿಕೋನದಲ್ಲಿ ವಿಷಯವನ್ನು ಅರ್ಥೈಸಿಕೊಳ್ಳುವುದಕ್ಕಿಂತ, ಮಾನವೀಯ ಕಂಗಳಿಂದ ಮಾವುತ ಮತ್ತು ಆನೆಗಳನ್ನು ನೋಡತೊಡಗಿದೆ. ಅಬ್ಟಾ, ಅಷ್ಟು ದೊಡ್ಡ ಗಾತ್ರದ ಪ್ರಾಣಿಯೊಂದಿಗಿನ ಮನುಷ್ಯನ ಸ್ನೇಹ ಅಮೇಝಿಂಗ್ ಅಂತನ್ನಿಸಿತು. ನನಗೇ ಗೊತ್ತಿಲ್ಲದೆ ಆನೆಗಳ ಜೊತೆ ಪ್ರೀತಿಯಲ್ಲಿ ಬಿದ್ದುಬಿಟ್ಟೆ. ಆದರೆ, ಆನೆ ಅಂದರೆ ಇಷ್ಟ ಅಂತ, ಮನೆಯಲ್ಲಿ ತಂದು ಸಾಕೋದಿಕ್ಕೆ ಸಾಧ್ಯವೇ? ಆನೆ ಹೇಗಿರುತ್ತದೆ ಅಂತ ವಿವರಿಸಲು ಹೊರಟ ಕುರುಡರ ಕಥೆ ಗೊತ್ತಲ್ವ? ಆನೆ ವಿಷಯದಲ್ಲಿ ನಾನೂ ಅಷ್ಟೇ ಕುರುಡಿಯಾಗಿದ್ದೆ. ಆನೆಗಳನ್ನು ಪಳಗಿಸುವ ಪುರಾತನ ಕಲೆಯನ್ನು ಕಲಿತರೆ ಹೇಗೆ ಅನ್ನಿಸಿತು. ಸರಿ, ಅಂಥ ಕಲಿಕೆಯನ್ನೂ ಶುರು ಮಾಡಿದೆ.
ಆನೆ ಪಳಗಿಸುವುದು ಅಷ್ಟು ಸುಲಭದ ವಿದ್ಯೆಯಲ್ಲ. ಯಾವುದೋ ಪುಸ್ತಕ ಓದಿ, ಡಾಕ್ಯುಮೆಂಟರಿ ನೋಡಿದ ಕೂಡಲೇ ಪ್ರಾಣಿಯ ಬಗ್ಗೆ ಅರ್ಥವಾಗುವುದಿಲ್ಲ. ವರ್ಷಾನುಗಟ್ಟಲೆ ಕಾಡುಗಳನ್ನು ಅಲೆದು, ಮಾವುತರ ಜೊತೆ ಒಡನಾಡಿ, ಆನೆಗಳ ಜೀವನಕ್ರಮ ಅಧ್ಯಯನ ಮಾಡಿದೆ. ಇಷ್ಟೆಲ್ಲಾ ಆಗುವಾಗ ನನಗೆ ಆನೆಗಳ ಮೇಲಿನ ಪ್ರೀತಿ ದುಪ್ಪಟ್ಟಾಗಿತ್ತು. ಮಡಿಕೇರಿಯ ಕುಶಾಲನಗರದ ಬಳಿ ಕಾಡನ್ನು ಖರೀದಿಸಿ ಆನೆಗಳಿಗಾಗಿ ಮನೆ ಕಟ್ಟಿದೆ. ಅದುವೇ “ಆನೆಮನೆ’.
ಏಷ್ಯಾದ ಆನೆಗಳ ರಕ್ಷಣೆಗಾಗಿ ಶುರುವಾದ “ಆನೆಮನೆ’ ನನ್ನದೇ ಮನೆಯಾಯ್ತು. ಆನೆಗಳೇ ನನ್ನ ಕುಟುಂಬದ ಸದಸ್ಯರಾದವು. ಮನುಷ್ಯ ಬದುಕೋಕೆ ಅತೀ ಅಗತ್ಯ ಅನ್ನಿಸುವ ಯಾವ ಸೌಕರ್ಯಗಳೂ ಆ ಕಾಡಿನಲ್ಲಿ ಇರಲಿಲ್ಲ. ಆನೆಗಳನ್ನು ಪ್ರೀತಿಸೋದು, ಅವುಗಳನ್ನು ಪಳಗಿಸೋದು, ಅರ್ಥ ಮಾಡಿಕೊಳ್ಳೋದು, ಜಿಪಿಎಸ್ ಅಳವಡಿಸಿ ಚಲನವಲನಗಳನ್ನು ಗಮನಿಸೋದು, ಮಾವುತರಿಗೆ ತರಬೇತಿ ಕೊಡುವುದು, ಅವರ ಜೊತೆಗಿನ ಒಡನಾಟ… ಇದೇ ಜೀವನದ ಮುಖ್ಯ ಧ್ಯೇಯವಾಯಿತು. ಸಮುದ್ರ ನೋಡಿದ್ದೀರಲ್ವಾ? ಗಂಟೆಗಟ್ಟಲೆ ಸುಮ್ಮನೆ ಕುಳಿತು ದಿಟ್ಟಿಸಿದರೂ ಹೇಗೆ ಚೂರೂ ಬೇಜಾರಾಗುವುದಿಲ್ಲವೋ, ಹಾಗೇ ಈ ಆನೆಗಳ ಒಡನಾಟ. ಯಾವತ್ತಿಗೂ ನನ್ನಲ್ಲಿ ಬೇಸರ, ಭಯ ಹುಟ್ಟಿಸಿಯೇ ಇಲ್ಲ. ಪತಿ (ಫಿಲಿಫ್ ಗಾಟಿಯರ್) ಕೂಡ ಹಾಥಿ ಜೊತೆಗೆ ಸಾಥ್ ನೀಡಿದರು. ಹೀಗೆ ಬದುಕು ನೆಮ್ಮದಿಯಿಂದ ಸಾಗಿಕೊಂಡು ಬರುತ್ತಿದೆ.
350 ಕಿ.ಮೀ. ನಡೆದೇ ನಡೆದೆವು..!
2000ನೇ ಇಸವಿಯಲ್ಲಿ ನಾವು ಕಾಡಿನೊಳಗೊಂದು ಯಾತ್ರೆ ಹೊರಟಿದ್ದೆವು. ಬರ್ಮಾ ಮತ್ತು ಭಾರತದ ಗಡಿಯ ನಡುವೆ, ದಟ್ಟ ಕಾಡಿನೊಳಗೆ ಬರೋಬ್ಬರಿ 350 ಕಿ.ಮೀ. ಅನ್ನು ಕಾಲ್ನಡಿಗೆಯಲ್ಲಿಯೇ ಸವೆಸಿದೆವು. ಕಾಡಿನಲ್ಲಿ ಹಲವಾರು ವರ್ಷಗಳನ್ನು ಕಳೆದಿದ್ದರೂ, ಅಂಥ ದಟ್ಟ ಅಡವಿಯನ್ನು ನಾನು ನೋಡಿರಲಿಲ್ಲ. ಕತ್ತೆತ್ತಿದರೆ ಬರೀ ಹಸಿರು, ಹಿಮಾವೃತ ಪರ್ವತ ಶ್ರೇಣಿ! ಕಾಡಿನೊಳಗೇ ನಾವೇ ಹಾದಿ ಮಾಡಿಕೊಳ್ಳುತ್ತಾ, ರಾಶಿ ರಾಶಿ ಜಿಗಣೆಯ ಮೇಲೆಯೇ ಮಲಗಿಕೊಂಡು, ಕಾಡು ಪ್ರಾಣಿಗಳಿಂದ ತಪ್ಪಿಸಿಕೊಂಡು ವಾರಗಟ್ಟಲೆ ಕ್ರಮಿಸಿದ್ದೇವೆ. ಮೊಬೈಲ್ ಬಿಡಿ, ಸ್ಯಾಟಲೈಟ್ ಫೋನ್ ಕೂಡ ಇರಲಿಲ್ಲ. ಇಷ್ಟೆಲ್ಲಾ ನಡೆದಿದ್ದು ಯಾಕೆಂದರೆ, ಆನೆಗಳು ಬರ್ಮಾ ಮತ್ತು ಭಾರತದ ನಡುವೆ ವಲಸೆ ಹೋಗುತ್ತವೆಯೇ ಎಂದು ಅಧ್ಯಯನ ನಡೆಸಲು.
ಕಂಪ್ಯೂಟರ್ ಬಿಟ್ಟು ಕೃಷಿಯ ಫಾರ್ಮುಲಾ ಕಂಡುಕೊಂಡೆ…
– ದಿವಾಕರ್ ರೆಡ್ಡಿ, ಚಿಂತಾಮಣಿ
ತೊರೆದ ಹುದ್ದೆ: ಸಾಫ್ಟ್ವೇರ್ ಎಂಜಿನಿಯರ್
ನಾನು ಸುಮಾರು 15 ವರ್ಷಗಳ ಕಾಲ ಬೆಂಗಳೂರಿನಲ್ಲಿ ಎಂಜಿನಿಯರ್ ಆಗಿದ್ದೆ. ಸಂಬಳ ಚೆನ್ನಾಗಿತ್ತು. ಸಿಟಿಯಲ್ಲಿ ಎಲ್ಲ ಸೌಕರ್ಯವೂ ಇತ್ತು. ಆದರೆ, ನಾನು ಮೂಲತಃ ಕೃಷಿಕ ಕುಟುಂಬದವನಾಗಿದ್ದರಿಂದ, ಪರಿಸರದ ಬಗ್ಗೆ ಮೊದಲಿಂದಲೂ ಒಲವಿತ್ತು. ಆ ಸೆಳೆತ ಎಷ್ಟರ ಮಟ್ಟಿಗೆ ಎಂದರೆ, ಕೊನೆಗೂ ನಾನು ಕೈ ತುಂಬಾ ಸಂಬಳದ ಕೆಲಸ ಬಿಟ್ಟು ಊರಿಗೆ ಓಡಿಬಂದುಬಿಟ್ಟೆ!
ಚಿಂತಾಮಣಿಯ ಹೊರವಲಯದ ಊಲವಾಡಿ- ಕಾಗತಿ ಗ್ರಾಮಗಳ ನಡುವೆ 10 ಎಕರೆ ಜಮೀನು ಖರೀದಿಸಿದೆ. ಮೊದಮೊದಲಿಗೆ ಕೃಷಿಯಲ್ಲಿ ಅನುಭವವಿಲ್ಲದೆ ನಷ್ಟ ಅನುಭವಿಸುವಂತಾಗಿದ್ದು ಸುಳ್ಳಲ್ಲ. ನಂತರ ನಿಧಾನಕ್ಕೆ ಕೃಷಿಯ ಅಗತ್ಯಗಳನ್ನು ಅರಿತೆ.
ಒಂದೇ ಬೆಳೆಯನ್ನು ನಂಬದೆ, ಹೊಸಹೊಸ ಕೃಷಿ ವಿಧಾನವನ್ನು ಅಳವಡಿಸಿಕೊಳ್ಳತೊಡಗಿದೆ. ಈಗ ಸಮಗ್ರ ಕೃಷಿ ಪದ್ಧತಿಯಲ್ಲಿ ದಾಳಿಂಬೆಯನ್ನು ಪ್ರಮುಖ ವಾಣಿಜ್ಯ ಬೆಳೆಯಾಗಿ ಬೆಳೆಯುತ್ತಿದ್ದೇನೆ. ಇದಕ್ಕೆ ಪೂರಕವಾಗಿ ಹಸು ಸಾಕಣೆ, ಹೆಬ್ಬೇವು ಮತ್ತು ಲಿಂಬೆ ಬೆಳೆ ಇದೆ. ರಾಸಾಯನಿಕ ಗೊಬ್ಬರದ ಬಳಕೆಯನ್ನು ತುಂಬಾ ಕಡಿಮೆ ಮಾಡಿದ್ದೇನೆ. ಹಸುಗಳ ಮೈ ತೊಳೆದ, ಕೊಟ್ಟಿಗೆ ತೊಳೆದ ನೀರನ್ನೂ ವ್ಯರ್ಥ ಮಾಡದೆ, ಗಿಡಗಳಿಗೆ ಹಾಯಿಸುವ ವ್ಯವಸ್ಥೆಯಿದೆ. ಬೆಂಗಳೂರಿನ ಎಂಜಿನಿಯರ್‌ನ ಜೀವನಕ್ಕೂ, ಕೃಷಿಕನ ಜೀವನಕ್ಕೂ ಬಹಳ ವ್ಯತ್ಯಾಸವಿದೆ. ಕೈ ಕೆಸರಾಗದೆ ಇಲ್ಲಿ ಬಾಯಿಗೆ ಮೊಸರು ಸಿಗುವುದೇ ಇಲ್ಲ. ಸಾಂಪ್ರದಾಯಿಕ ರೀತಿಯಿಂದ ಹೊರಬಂದು ಹೊಸಹೊಸ ವಿಧಾನಗಳನ್ನು ಅಳವಡಿಸಿಕೊಂಡರೆ ಭೂಮಿತಾಯಿ ಖಂಡಿತಾ ಕೈ ಹಿಡಿಯುತ್ತಾಳೆ ಎಂಬುದಕ್ಕೆ ನಾನೇ ಉದಾಹರಣೆ. ಈಗ ಹಸಿರು ಪರಿಸರದಲ್ಲಿ ನಾನೂ ಹೂವಾಗಿ, ಆನಂದದಿಂದಿದ್ದೇನೆ.
ಹಸಿರಿನ ಪಾಠ, ಹಾಕಿತು ಊಟ
– ಕೆ.ಜಿ. ಸುಧೀಂದ್ರ, ಬೆಂಗಳೂರು
ತೊರೆಯಲಿರುವ ಹುದ್ದೆ: ಎನ್‌ಜಿಒ ಕೆಲಸ
ನಾನು ಮೂಲತಃ ಬೆಂಗಳೂರಿನವನು. ಬಿಎಸ್ಸಿಯವರೆಗೂ ಬೆಂಗಳೂರಿನಲ್ಲಿಯೇ ಓದಿದ್ದು. ಪದವಿ ಮುಗಿಯುವವರೆಗೆ, ಹೊಲ- ಗದ್ದೆಯಲ್ಲಿ ಕೆಲಸ ಮಾಡುವುದಿರಲಿ, ಅದನ್ನು ಸರಿಯಾಗಿ ನೋಡಿಯೂ ಇರಲಿಲ್ಲ. ಬಹಳ ಹಿಂದೆ ನಮ್ಮ ಕುಟುಂಬದವರಿಗೂ ಜಮೀನು ಇತ್ತಂತೆ. ಆದರೆ, ವ್ಯವಸಾಯ ಬಿಟ್ಟು ನಾಲ್ಕೈದು ದಶಕಗಳೇ ಕಳೆದಿವೆ. ಓದು ಮುಗಿದ ನಂತರ ನಾನೊಂದು ಎನ್‌ಜಿಓದಲ್ಲಿ ಕೆಲಸಕ್ಕೆ ಸೇರಿಕೊಂಡೆ. ಅಲ್ಲಿ ನನ್ನ ಕೆಲಸ ಏನೆಂದರೆ, ಹಳ್ಳಿ ಹಳ್ಳಿಗಳಿಗೆ ಸಂಚರಿಸಿ ರೈತರಿಗೆ, ಕೃಷಿಯ ಹಾಗೂ ಪಶು ಸಂಗೋಪನೆಯ ಬಗ್ಗೆ ಮಾಹಿತಿ ನೀಡುವುದು. ವ್ಯವಸಾಯವನ್ನು ಉತ್ತಮ ಪಡಿಸುವ ವಿಧಾನಗಳ ಬಗ್ಗೆ ತಿಳಿಸಿ ಕೊಡುವುದು.
ಮೊದಲೇ ಹೇಳಿದ ಹಾಗೆ, ನನಗೆ ಕೃಷಿಯ ಬಗ್ಗೆ ಪ್ರ್ಯಾಕ್ಟಿಕಲ್ ಐಡಿಯಾ ಇರಲಿಲ್ಲ. ಆದರೆ, ರೈತರ ಒಡನಾಟದಲ್ಲಿ ಕೃಷಿಯ ಪ್ರಾಯೋಗಿಕ ಜ್ಞಾನ ಪಡೆದುಕೊಳ್ಳುತ್ತಾ ಬಂದೆ. ಹಳ್ಳಿಯ ಬದುಕಿನಲ್ಲಿ ನೆಮ್ಮದಿ ಇದೆ ಅಂತ ಅರ್ಥವಾಗಿತ್ತು. ನಾನೂ ಹೊಲ ಮಾಡಬೇಕು ಅಂತ ನಿಶ್ಚಯಿಸಿದೆ. 11 ವರ್ಷ ಬೇರೆ ಬೇರೆ ಹಳ್ಳಿಗಳಲ್ಲಿ ಕೆಲಸ ಮಾಡಿ ಬೆಂಗಳೂರಿಗೆ ವಾಪಸ್ ಬಂದೆ. ವ್ಯವಸಾಯದ ಕನಸಿಗೆ ನೀರೆರೆದು, ಈಗ 2 ವರ್ಷಗಳ ಹಿಂದೆ ನಂಜನಗೂಡು ತಾಲೂಕಿನ ಕೂಡ್ಲಾಪುರದ ಬಳಿ ಜಮೀನು ಖರೀದಿಸಿ, ರೈತನ ಬದುಕಿಗೆ ಕಾಲಿಟ್ಟೆ. ಕಡಿಮೆ ನೀರಾವರಿ ಜಾಗದಲ್ಲಿ ಅಲಸಂಡೆ, ತೊಗರಿ, ಕರಿಎಳ್ಳು, ಸಾಮೆ, ಸಜ್ಜೆ, ಹುರುಳಿ ಬೆಳೆಯುತ್ತಿದ್ದೇನೆ. ಈ ಮಳೆಗಾಲದಲ್ಲಿ ಪ್ಲಾಂಟೇಶನ್ ಬೆಳೆಸುವ ಯೋಜನೆಯಿದೆ. ಹಸಿರಿನ ಒಡನಾಟದಲ್ಲಿ ಸಿಗುವ ನೆಮ್ಮದಿ ಬೇರೆ ಎಲ್ಲೂ ಸಿಗುವುದಿಲ್ಲ. ಸದ್ಯದಲ್ಲಿಯೇ ಪೂರ್ಣಪ್ರಮಾಣದ ಕೃಷಿಕನಾಗುವ ನಿಟ್ಟಿನಲ್ಲಿ ಬೇಕಾದ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಳ್ಳುತ್ತಿದ್ದೇನೆ.
ಐಟಿಗಿಂತ ಮೇಟಿ ಮೇಲು
– ಸಂತೋಷ್ ಸಿಂಗ್
ತೊರೆದ ಹುದ್ದೆ: ಸಾಫ್ಟ್ವೇರ್ ಎಂಜಿನಿಯರ್
“2009ರವರೆಗೆ ನಾನೊಬ್ಬ ಮಾಮೂಲಿ ಎಂಜಿನಿಯರ್ ಆಗಿದ್ದೆ. ಎಲ್ಲರಂತೆ ವಾರದಲ್ಲಿ 5 ದಿನ ದುಡಿದು, ವೀಕೆಂಡ್‌ನಲ್ಲಿ ಕೊಡಗು, ಚಿಕ್ಕಮಗಳೂರು, ಜಂಗಲ್ ಸಫಾರಿ ಅಂತ ಕಾಡು ಸುತ್ತಲು ಹೊರಡುತ್ತಿದ್ದೆ. ಅಲ್ಲಿನ ಸ್ವತ್ಛ ಪರಿಸರ ತುಂಬಾ ಇಷ್ಟವಾಗ್ತಾ ಇತ್ತು. ಇಲ್ಲಿಯೇ ಜೀವನಪರ್ಯಂತ ಕಳೆದುಬಿಡೋಣ ಅಂತ ಮನಸ್ಸು ಹೇಳುತ್ತಿತ್ತು. ಆದರೆ, ಏನು ಮಾಡೋದು? ಸೋಮವಾರ ಆಫೀಸ್‌ಗೆ ಹೋಗಲೇಬೇಕಿತ್ತು. ಹೀಗೆ “ಮಂಡೆ ಬ್ಲೂ’ ಅನುಭವಿಸುತ್ತಲೇ 10 ವರ್ಷ ಐಟಿ ಕ್ಷೇತ್ರದಲ್ಲಿ ದುಡಿದೆ. ಅಷ್ಟಕ್ಕೇ ಕಾರ್ಪೋರೇಟ್ ಜೀವನ ಸಾಕೆನಿಸಿಬಿಟ್ಟಿತ್ತು.
ಕೃಷಿ, ಪರಿಸರದ ಕಡೆಗೆ ಹೊರಳುವ ಆಸೆ ನನ್ನೊಳಗೆ ಮತ್ತೆ ಮತ್ತೆ ಪುಟಿಯುತ್ತಿತ್ತು. ಆದರೆ, ಬದುಕಲು ಹಣ ಬೇಕು ತಾನೇ? ಪರಿಸರದ ಮಧ್ಯೆ ಇದ್ದುಕೊಂಡೇ ಆದಾಯ ಗಳಿಸುವ ಮಾರ್ಗ ಯಾವುದು ಅಂತ ಹುಡುಕತೊಡಗಿದೆ. ಹೈನುಗಾರಿಕೆ ಮಾಡಿ ಜೀವನ ನಡೆಸಬಹುದು ಅಂತ ಅನ್ನಿಸಿತು. ಅದೇ ಧೈರ್ಯದಲ್ಲಿ 2009ರಲ್ಲಿ ಕೆಲಸ ಬಿಟ್ಟೆ. ಹೈನುಗಾರಿಕೆಯಲ್ಲಿ ತೊಡಗಿರುವ ರೈತರ ಜೊತೆ ಸಂವಾದ ನಡೆಸಿ ಪ್ರಾಥಮಿಕ ಜ್ಞಾನ ಸಂಪಾದಿಸಿದೆ. ಹೈನುಗಾರಿಕೆಯನ್ನು ಲಾಭದಾಯಕ ಉದ್ದಿಮೆಯನ್ನಾಗಿ ನಡೆಸುವ ಬಗ್ಗೆ “ನ್ಯಾಷನಲ್ ಡೇರಿ ರಿಸರ್ಚ್ ಇನ್ಸ್‌ಟಿಟ್ಯೂಟ್’ನಲ್ಲಿ ತರಬೇತಿಯನ್ನೂ ತೆಗೆದುಕೊಂಡೆ. ಕೊನೆಗೆ 2010ರಲ್ಲಿ, 3 ಹಸುಗಳನ್ನಿಟ್ಟುಕೊಂಡು, ದೊಡ್ಡಬಳ್ಳಾಪುರದ ಬಳಿಯ ಹಳ್ಳಿಯಲ್ಲಿ “ಅಮೃತ ಡೇರಿ ಫಾರ್ಮ್’ ಅನ್ನು ಶುರು ಮಾಡಿದೆ. ಮೊದಲ ಮೂರು ವರ್ಷ ಹಾಲು ಉತ್ಪಾದನೆಯಲ್ಲಿ ತೊಡಗಿದ್ದೆ. ಈಗ ಕರು ಸಾಕಣೆ ಮಾಡುತ್ತಿದ್ದೇನೆ. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶದಿಂದ 5-6 ತಿಂಗಳ ಕರುಗಳನ್ನು ತಂದು, ಪೋಷಿಸಿ ಮಾರುತ್ತಿದ್ದೇವೆ. ಜೊತೆಗೆ ಹೈನುಗಾರಿಕೆಯಲ್ಲಿ ಆಸಕ್ತಿಯುಳ್ಳವರಿಗೆ ತರಬೇತಿಯನ್ನೂ ಕೊಡುತ್ತೇವೆ. ಮನಸ್ಸಿಟ್ಟು ದುಡಿದರೆ ಇಲ್ಲಿ ಚೆನ್ನಾಗಿ ಲಾಭ ಮಾಡಬಹುದು. ಎಂಜಿನಿಯರ್ ಆಗಿದ್ದಾಗ ಎಷ್ಟು ನೆಮ್ಮದಿಯಾಗಿದ್ದೆನೋ, ಅದಕ್ಕಿಂತ ನೂರುಪಟ್ಟು ಜಾಸ್ತಿ ನೆಮ್ಮದಿ ಇದೆ. ವಾರಪೂರ್ತಿ ಕೆಲಸ ಮಾಡಿದರೂ, “ಮಂಡೆ ಬ್ಲೂ’ನ ತಲೆಬಿಸಿಯಿಲ್ಲ!
ಪಾತರಗಿತ್ತಿ ಪಕ್ಕ, ನಿಂತಿದ್ದೇನೆ ಅಕ್ಕಾ…
– ಸಮ್ಮಿಲನ್ ಶೆಟ್ಟಿ, ಬೆಳುವಾಯಿ
ತೊರೆದ ಹುದ್ದೆ: ಉಪನ್ಯಾಸಕ
ಪರಿಸರ ಅಂದರೆ ಕೇವಲ ಮನುಷ್ಯ, ಪ್ರಾಣಿ, ಮರಗಿಡಗಳಷ್ಟೇ ಅಲ್ಲ. ಚಿಟ್ಟೆಯಂಥ ಸಣ್ಣ ಜೀವಿಗಳೂ ಜೀವಜಾಲದ ದೊಡ್ಡ ಭಾಗ. ಅವುಗಳ ಸಂರಕ್ಷಣೆಯೂ ನಮ್ಮದೇ ಹೊಣೆ. ಮಂಗಳೂರು ಮಹಾನಗರಿಯಿಂದ ಉಪನ್ಯಾಸಕ ಹುದ್ದೆ ತೊರೆದು ಬರುವಾಗ ನನ್ನನ್ನು ಅತೀವವಾಗಿ ಸೆಳೆದಿದ್ದು ಚಿಟ್ಟೆಗಳು. ಅದಕ್ಕಾಗಿ ಮಂಗಳೂರು ತಾಲೂಕಿನ ಬೆಳುವಾಯಿಯಲ್ಲಿ ಚಿಟ್ಟೆ ಪಾರ್ಕ್ ತೆರೆದಿದ್ದೇನೆ. ಮೊದಲಿನಿಂದಲೂ ನಾನು ಪ್ರಕೃತಿಯ ಆರಾಧಕ. ಆದರೆ, ಚಿಟ್ಟೆಗಳ ಬಗ್ಗೆ ವಿಶೇಷವಾಗಿ ಆಸಕ್ತಿ ಮೂಡಿದ್ದು ಬಿಎಸ್ಸಿಯಲ್ಲಿದ್ದಾಗ. ನಮ್ಮ ಎಚ್‌ಓಡಿ, ಚಿಟ್ಟೆಗಳ ಬಗ್ಗೆ ಒಂದು ಪ್ರಾಜೆಕ್ಟ್ ಮಾಡಲು ಹೇಳಿದ್ದರು. ಆ ಪ್ರಾಜೆಕ್ಟ್ ಮುಗಿಯುವಾಗ ಚಿಟ್ಟೆಗಳ ರಂಗು ಮನಸ್ಸಿಗೆ ಅಂಟಿತ್ತು. ಬಣ್ಣಬಣ್ಣದ, ಆಕರ್ಷಕ ಚಿಟ್ಟೆಗಳ ಬಗ್ಗೆ ಹೆಚ್ಚೆಚ್ಚು ತಿಳಿದುಕೊಳ್ಳುವ ಕುತೂಹಲ ಬೆಳೆಯಿತು. ಸುತ್ತಮುತ್ತ ಇರುವ ವಿವಿಧ ಪ್ರಭೇದದ ಚಿಟ್ಟೆಗಳನ್ನು ಗುರುತಿಸಿ, ಫೋಟೊಗ್ರಫಿ ಮಾಡಿ ರೆಕಾರ್ಡ್ ಮಾಡತೊಡಗಿದೆ. ಚಿಟ್ಟೆಗಳ ಕುರಿತಾದ ಮಾಹಿತಿ ಕಲೆ ಹಾಕತೊಡಗಿದೆ. 2010ರಲ್ಲಿ ಐಸಾಕ್ ಡೇವಿಡ್ ಕೆಮಿಕರ್‌ರ “ದಿ ಬುಕ್ ಆಫ್ ಇಂಡಿಯನ್ ಬಟರ್‌ಫ್ಲೈಸ್’ ಎಂಬ ಪುಸ್ತಕ ಓದಿದೆ. ಅದರಲ್ಲಿ ಅವರು, ಚಿಟ್ಟೆಗಳ ಸಂರಕ್ಷಣೆಯನ್ನು ಹೇಗೆ ಮತ್ತು ಯಾಕೆ ಮಾಡಬೇಕು ಅಂತ ವಿವರಿಸಿದ್ದರು. ಚಿಟ್ಟೆ ಪಾರ್ಕ್ ಸ್ಥಾಪಿಸಲು ಅದು ನನಗೆ ಪ್ರೇರಣೆಯಾಯ್ತು.
ಪ್ರತಿ ಚಿಟ್ಟೆಗೂ, ಮೊಟ್ಟೆ ಇಡಲು ಪ್ರತ್ಯೇಕವಾದ ಹೋಸ್ಟ್ ಪ್ಲಾಂಟ್ ಇರುತ್ತದೆ. ಉದಾ: ಲಿಂಬೆಗಿಡದಲ್ಲಿ 5 ಪ್ರಭೇದದ, ಕರಿಬೇವಿನ ಗಿಡದಲ್ಲಿ 2 ಬಗೆಯ ಚಿಟ್ಟೆಗಳು ಮೊಟ್ಟೆ ಇಡುತ್ತವೆ. ಆ ಗಿಡಗಳನ್ನು ಬೆಳೆಸಿದರೆ ಮಾತ್ರ ಆ ಚಿಟ್ಟೆಗಳ ಸಂತತಿ ಬೆಳೆಯುತ್ತದೆ. ಹಾಗಾಗಿ 2011ರಿಂದ ಚಿಟ್ಟೆಗಳಿಗೆ ಬೇಕಾದ ಗಿಡಗಳನ್ನು ಸಂರಕ್ಷಿಸಿ, ಬೆಳೆಸಲು ಶುರುಮಾಡಿದೆ. 2013ರ ವೇಳೆಗೆ ಸುಮಾರು ಏಳು ಎಕರೆ ವಿಸ್ತೀರ್ಣದಲ್ಲಿ ಸಮ್ಮಿಲನ್ ಶೆಟ್ಟಿàಸ್ ಚಿಟ್ಟೆ ಪಾರ್ಕ್ ಸ್ಥಾಪನೆಯಾಯ್ತು. ಐಸಾಕ್ ಕೆಮಿಕರ್ ಅವರೇ ಬಂದು ಉದ್ಘಾಟಿಸಿದರು. ಅಂದರೆ ಇದು, ಚಿಟ್ಟೆಗಳನ್ನು ಗಾಜಿನ ಬಾಕ್ಸ್‌ನಲ್ಲಿ ಇಡುವಂಥ ಪಾರ್ಕ್ ಅಲ್ಲ. ಚಿಟ್ಟೆಗಳು ಸ್ವತ್ಛಂದವಾಗಿ ಹಾರಾಡಿಕೊಂಡು ಇರುತ್ತವೆ. ಅವುಗಳ ಬೆಳವಣಿಗೆ ಮತ್ತು ವಂಶಾಭಿವೃದ್ಧಿಗೆ ಬೇಕಾದ ನೈಸರ್ಗಿಕ ಪರಿಸರ ಇಲ್ಲಿದೆ. ನಮ್ಮ ದೇಶದಲ್ಲಿ ಒಟ್ಟು 1200 ಪ್ರಭೇದಗಳನ್ನು ಗುರುತಿಸಲಾಗಿದೆ. ಅದರಲ್ಲಿ 339 ಪ್ರಭೇದದ ಚಿಟ್ಟೆಗಳು ಪಶ್ಚಿಮ ಘಟ್ಟಗಳಲ್ಲಿವೆ. 148 ಪ್ರಭೇದದ ಚಿಟ್ಟೆಗಳು ನಮ್ಮ ಪಾರ್ಕ್‌ನಲ್ಲಿ ರೆಕಾರ್ಡ್ ಆಗಿವೆ.
ಜೂನ್- ನವೆಂಬರ್‌ವರೆಗೆ ಚಿಟ್ಟೆ ಸೀಸನ್ ಇರುತ್ತದೆ. ಆಗ ನಾವು, ಚಿಟ್ಟೆಯ ಜೀವನಕ್ರಮದ ಬಗೆಗಿನ ವಿಡಿಯೊ, ಪ್ರಾತ್ಯಕ್ಷಿಕೆ ತೋರಿಸುತ್ತೇವೆ. ಪಾರ್ಕ್‌ನಲ್ಲಿ ಸುತ್ತಾಡಿ ಚಿಟ್ಟೆಗಳನ್ನು ನೋಡಿ ಆನಂದಿಸಬಹುದು. ಚಿಟ್ಟೆ ಸಂರಕ್ಷಣೆಯ ಪ್ರಾಮುಖ್ಯತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಪಾರ್ಕ್‌ನ ಉದ್ದೇಶ.
ನಾನು ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಐದು ವರ್ಷ ಉಪನ್ಯಾಸಕನಾಗಿದ್ದೆ. ಎರಡು ವರ್ಷಗಳ ಹಿಂದೆ ಕೆಲಸ ಬಿಟ್ಟು, ಪೂರ್ಣ ಪ್ರಮಾಣದಲ್ಲಿ ಚಿಟ್ಟೆ ಪಾರ್ಕ್‌ನಲ್ಲಿ ತೊಡಗಿಸಿಕೊಂಡಿದ್ದೇನೆ. ಚಿಟ್ಟೆಗಳ ಸಂರಕ್ಷಣೆಯ ಬಗ್ಗೆ ಇನ್ನೂ ಹೆಚ್ಚೆಚ್ಚು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶವಿದೆ. ನನ್ನ ಪಾರ್ಕಿನ ಕುರಿತ ಸವಿವರ www.butterflyparkbelvai.com ವೆಬ್‌ಸೈಟ್‌ನಲ್ಲಿದೆ.
ಪ್ರಿಯಾಂಕ ಎನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ullala: ಉಚ್ಚಿಲದ ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!
BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?
Mike Tyson: ವಿದಾಯದ ಸುಳಿವು ನೀಡಿದ ಬಾಕ್ಸಿಂಗ್ ದಿಗ್ಗಜ ಮೈಕ್ ಟೈಸನ್
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.