ಟಾಪರ್ಸ್ ಟಾಕ್
Team Udayavani, Dec 31, 2019, 6:15 AM IST
ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವಲ್ಲ ಅಂತ ಜಿದ್ದಿಗೆ ಬಿದ್ದವರು ಈಸಲದ ಕೆಪಿಎಸ್‌ಸಿ ಪರೀಕ್ಷೆ ಬರೆದು ಗೆದ್ದಿದ್ದಾರೆ. ಈವರೆಗೂ ಕ್ಲರ್ಕ್ ಟೀಚರ್ ಆಗಿದ್ದವರು ಇದೀಗ ತಹಶೀಲ್ದಾರ್ ದರ್ಜೆಯ ಹುದ್ದೆಗಳನ್ನು ಅಲಂಕರಿಸಲಿದ್ದಾರೆ! ಇದೂ ಒಂಥರಾ ಕ್ರಿಕೆಟ್ ಇದ್ದಹಾಗೆ, ಗೆಲುವು ಒಂದೇ ಸಲ ಬಂದು ಅಂಗೈಯಲ್ಲಿ ಕೂರುವುದಿಲ್ಲ, ಆನ್‌ಫೀಲ್ಡ್, ಆಫ್ ಫೀಲ್ಡ್ ಬಹಳ ತಾಲೀಮು ಮಾಡಬೇಕು.. ವರ್ಷಾನುಗಟ್ಟಲೆ ಕೋಚಿಂಗ್, ಓದುವುದು, ಬರೆಯುವುದು, ಮಾದರಿ ಪರೀಕ್ಷೆಗಳನ್ನು ಎದುರಿಸುವುದು ಹೀಗೆಲ್ಲ ಮನಸ್ಸನ್ನು ಪರೀಕ್ಷೆಗೆ ಸಿದ್ಧ ಮಾಡಿಕೊಳ್ಳಬೇಕು. ಇದೇನು ಬಹಳ ಸುಲಭದ ಕೆಲಸವೇ? ಈ ಬಾರಿ ಕೆಪಿಎಸ್‌ಸ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಮೂವರು ತಮ್ಮ ಓದಿನ ಅನುಭವಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.
ಮೂರು ಗೆಲುವಿನ ಹಿಂದೆ, ಐದು ಯಶಸ್ಸು
1. ತಿಮ್ಮಣ್ಣ ಉಜ್ಜಿನಿ
ಕೆ.ಎ.ಎಸ್ ಪಾಸು ಮಾಡಿದ ರೀತಿಗಿಂತ, ನನ್ನ ಓದಿನ ಕತೆಯೇ ರೋಚಕವಾಗಿದೆ. ಅದನ್ನು ನಿಮಗೆ ಹೇಳ್ತೀನಿ ಕೇಳಿ. “ನೀನು ಓದುವುದಾದರೆ ವಿಜ್ಞಾನ ವಿಷಯವನ್ನೇ ತಗೋಬೇಕು’ ಅಪ್ಪ ಈ ರೀತಿ ಕಂಡೀಷನ್ ಹಾಕಿದ್ದರು. ಎಸ್‌ಎಸ್‌ಎಲ್‌ಸಿಯಲ್ಲಿ ಉಜ್ಜನಿ ಪರೀಕ್ಷಾ ಕೇಂದ್ರದಲ್ಲೇ ಅತಿ ಹೆಚ್ಚು ಅಂಕ ಪಡೆದವನು ನಾನು. ಅಪ್ಪನಿಗೆ, ಮಗನನ್ನು ಸೈನ್ಸ್ ಓದಿಸುತ್ತಿದ್ದೇನೆ ಅಂತ ಬೀಗಬೇಕು. ಅನ್ನೋ ಆಸೆ. ನನಗೋ, ಇಂಗ್ಲೀಷ್‌ನ ಭಯ. ಸರಿ, ಕಡೆಗೊಮ್ಮೆ, ಗುರು ಕೊಟ್ಟೂರೇಶ್ವರ ಕಾಲೇಜ್‌ಗೆ ಸೇರಿಸಿದರು.
ದ್ವಿತೀಯ ಪಿಯುಸಿ ಸೈನ್ಸ್ ರಿಸಲ್ಟ್ ಬಂತು. ನೋಡಿದರೆ, ನಾನು ಫೇಲ್ ಆಗಿದ್ದೆ! ಕ್ರಿಕೆಟ್‌ನಲ್ಲಿ ಏನಾದರೂ ಸಾಧಿಸಬೇಕೆಂಬ ನನ್ನ ಹುಚ್ಚಿಗೆ ಸಿಕ್ಕ ಬಹುಮಾನ ಇದು. ಓದದೇ ಫೇಲ್ ಆದದ್ದಲ್ಲ…. ಜಿn fಚcಠಿ ತುಂಬಾ ಓದಿಯೂ ಫೇಲಾಗಿದ್ದು. ಕನ್ನಡ ಮಾಧ್ಯಮದ ವಿದ್ಯಾರ್ಥಿಯಾದ ನನಗೆ, ಪಿಯುಸಿಯಲ್ಲಿ ಇಂಗ್ಲೀಷ್ ಬೋಧನೆ ಅರ್ಥವಾಗುತ್ತಲೇ ಇರಲಿಲ್ಲ.
ಹಾಗಂತ ನಾನು ಎದೆಗುಂದಲಿಲ್ಲ. ಬಿಡಲಿಲ್ಲ. ಎರಡನೇ ಸಲ ಪರೀಕ್ಷೆ ಬರೆದು, ಶೇ.73ರಷ್ಟು ಅಂಕ ಪಡೆದೆ. ಶೇ.60ರಷ್ಟು ಅಂಕ ಪಡೆದ ಗೆಳೆಯರೆಲ್ಲ ಎಂಜಿನಿಯರಿಂಗ್ ಸೇರಿ ಸಾಫ್ಟವೇರ್ ಆದರು. ಮನೆಯಲ್ಲಿ ಬಡತನ ಇದ್ದಿದ್ದರಿಂದ ನಾನು ಟಿಸಿಹೆಚ್ ಮಾಡಿ, ಶಿಕ್ಷಕನಾದೆ. ಅಷ್ಟಕ್ಕೇ ನನ್ನ ಮನಸ್ಸು ಸುಮ್ಮನಾಗಲಿಲ್ಲ. ನನಗಿಂತ ಕಡಿಮೆ ಅಂಕ ಪಡೆದ ಗೆಳೆಯರೆಲ್ಲಾ ಸಮಾಜದ ಕಣ್ಣಲ್ಲಿ ಹೀರೋ ಆಗಿಬಿಟ್ಟರಲ್ಲಾ, ನಾನೂ ಏನಾದರೂ ಮಾಡಬೇಕು ಅಂತ ಛಲ ಶುರುವಾಗಿದ್ದೇ ಅಲ್ಲಿಂದ.
ದೂರ ಶಿಕ್ಷಣದಲ್ಲಿ ಇಂಗ್ಲೀಷ್ ಮೇಜರ್‌ನಲ್ಲಿ ಬಿ. ಎ ಮುಗಿಸಿ, ಬಿ.ಎಡ್ ಮಾಡಲು ಫೀ ಕಟ್ಟಿದೆ. ಆಗ ಸ್ನೇಹಿತರು ಬಿ.ಎಡ್ ಮಾಡಿದರೆ 10 ವರ್ಷ ಆದರೂ ಪ್ರಮೋಷನ್ ಸಿಗಲ್ಲ ಅಂದರು. ಅರೆ, ಹಾಗಾದ್ರೆ ಬಿ.ಎಡ್ ಏಕೆ ಮಾಡಬೇಕು ಎಂದು ನಿರ್ಧರಿಸಿ ಕೆಎಎಸ್ ಪರೀಕ್ಷೆ ತೆಗೆದುಕೊಂಡೆ. 2011ರ ಕೆಎಎಸ್ ಪಟ್ಟಿಯಲ್ಲಿ ತಾಲೂಕ್ ಪಂಚಾಯಿತಿಯ ಸಿ.ಇ.ಒ ಆಗಿ ಸೆಲಕ್ಷನ್ ಆದೆ.
ಈ ಖುಷಿ ಜಾಸ್ತಿ ದಿವಸ ಇರಲಿಲ್ಲ. ಏಕೆಂದರೆ, ಸೆಲೆಕ್ಷನ್ ಪಟ್ಟಿಯೇ ರದ್ದಾಯಿತು. ನನ್ನ ಆತ್ಮಾಭಿಮಾನ, ಹಣಕಾಸಿನ ಪರಿಸ್ಥಿತಿ ಬಿಗಡಾಯಿಸಿ, ಗಾಯದ ಮೇಲೆ ಬರೆ ಎಳೆದಂತಾಯಿತು. ನಾಲ್ಕೈದು ಲಕ್ಷ ಹಣ ಖರ್ಚಾಯ್ತು. ಮೊದಲೇ ಶಿಕ್ಷಕ. ಬೇರೆ ಆದಾಯವಿರಲಿಲ್ಲ. ಈ ರೀತಿ ಓದಲು ಸಾಲ ಮಾಡಿಕೊಂಡಿದ್ದನ್ನು ಕಂಡ ಕೆಲವರು ನಗಾಡಿದ್ದೂ ಉಂಟು. ಅವರ ಪ್ರಕಾರ ಇದು ತಿಮ್ಮಣ್ಣನ ಬದುಕಿನ ದೊಡ್ಡ ಸೋಲು. ನನಗೂ ಗೊತ್ತಿತ್ತು; ಮುಂದಿನ ದೊಡ್ಡ ಗೆಲುವಿಗೆ ಈ ಸೋಲು ಸಿಕ್ಕಿದೆ ಅಂತ. ಭಯಂಕರವಾಗಿ ಸೋಲಲು ಸಿದ್ದನಾಗುವವನಿಗೇ ಅದ್ಭುತ ಗೆಲುವು ಸಿಗುವುದು ಅಂತಾರಲ್ಲ, ಹಾಗೇ ನನ್ನ ಬದುಕು. ನಾನು ಹಾಗೆ ಸೋಲಲು ಸಿದ್ದನಾಗಿಯೇ 2014ರಲ್ಲಿ ಕೆಎಎಸ್ ಓದಲು ಕುಳಿತೆ. ನಾಲ್ಕೈದು ಸಾರಿ ಪ್ರಯತ್ನ ಪಟ್ಟೆ. ಮತ್ತೆ ಹಣ ಬೇಕಾಯಿತು. ನನ್ನ ಹೆಂಡತಿ ಸುಮ್ಮನೆ ಇರಲಿಲ್ಲ. ಕಿವಿಯಲ್ಲಿದ್ದ ಓಲೆ ಮಾರಿ ನನ್ನ ಕನಸಿಗೆ ನೀರೆರೆದಳು.2017ರಲ್ಲಿ ತಹಶೀಲ್ದಾರ್ ಹುದ್ದೆ ದಕ್ಕಿತು. ಈಗ ಮತ್ತೆ ಅಂತದೇ ಆ ಛಲದ ಫಲವಾಗಿ ಅಸಿಸ್ಟೆಂಟ್ ಕಮೀಷನರ್ ಹುದ್ದೆಗೆ ಆಯ್ಕೆಯಾಗಿರುವುದು.
ಮೊನ್ನೆ ಸಂದರ್ಶನದಲ್ಲಿ ಕೇಳಿದರು-“ನೀವು ಹೇಗೆ ಇಷ್ಟೊಂದು ಒತ್ತಡದ ನಡುವೆಯೂ ಓದಿ, ಪರೀಕ್ಷೆ ಬರೆದಿರಿ?’ ಅಂತ.
ಅದಕ್ಕೆ ನಾನು ಹೇಳಿದ್ದು-“ಎಷ್ಟೇ ಒತ್ತಡ ಇದ್ದರೂ, ದಿನಕ್ಕೆ ಎರಡು ತಾಸು ಓದಬೇಕು ಅಂತ ಹೇಳಿ ಕೊಟ್ಟಿದ್ದೇ ಶಿಕ್ಷಕ ಉದ್ಯೋಗ. ಹಾಗಾಗಿ, ಇನ್ನೂ ನಾಲ್ಕು ಕೆ.ಎ.ಎಸ್. ಪರೀಕ್ಷೆ ಬರೆಯುವ ಎನರ್ಜಿ ನನ್ನಲ್ಲಿ ಇದೆ…’ ಅಂತ.
ಛಲದ ಮುಂದೆ ಬಡತನ, ನೋವು, ಕಷ್ಟ ಇವ್ಯಾವೂ ಬಾಲ ಬಿಚ್ಚಲ್ಲ. ಬಿಚ್ಚಲು ಬಿಟ್ಟರೆ ಗುರಿ ಮುಟ್ಟಕ್ಕೆ ಆಗಲ್ಲ.
ಓದಿದ್ದು…
ಬೆಳಗ್ಗೆ 6ರಿಂದ 10 ಗಂಟೆ – ಕರೆಂಟ್ ಅಫೇರ್ಸ, ಸುದ್ದಿ ಪತ್ರಿಕೆ ಓದು
ಸಂಜೆ 5ರಿಂದ 11 ಗಂಟೆ- ಸಿಲಬಸ್ ಪೇಪರ್ ಅಧ್ಯಯನ, ಇತಿಹಾಸ, ಆಪ್ಷನಲ್
ಬರೆಯುತ್ತಲೇ ಓದುವುದು ರೂಢಿ
ಮಾದರಿ ಪರೀಕ್ಷೆಗಳನ್ನು ಎದುರಿಸಿಲ್ಲ
ಒಂದು ಗೆಲುವಿನ ಹಿಂದೆ ಎರಡು ಸೋಲು
ಶ್ವೇತ ಬೀಡಿಕರ್
ಸೋಲೇ ಗೆಲುವಿನ ಮೆಟ್ಟಿಲು ಅಂತಾರಲ್ಲ. ಹಾಗೇ ಈ ಗೆಲುವು. ಈಗಾಗಲೇ ನಾನು ಕೆ.ಪಿ.ಎಸ್.ಸಿ ಪರೀಕ್ಷೆಯಲ್ಲಿ ಎರಡು ಸಲ ಫೇಲಾಗಿದ್ದೀನಿ. ಆ ಸೋಲು ಇದೆಯಲ್ಲ, ಅದೇ ಈ ಭಾರಿ ಗೆಲ್ಲಲೇಬೇಕು, ಮುಂದಡಿ ಇಡಲೇಬೇಕು ಅಂತ ಛಲ ಮೂಡಿಸಿದ್ದು. ಪ್ರತಿ ಹೆಜ್ಜೆ ಇಡುವಾಗಲೂ ಸೋಲೇ ನನ್ನ ಬೆನ್ನ ಹಿಂದೆ ನಿಂತು ಗೆಲುವಿಗೆ ಪ್ರೋತ್ಸಾಹಿಸುತ್ತಿತ್ತು. ಕಳೆದ ಪರೀಕ್ಷೆಯಲ್ಲಿ ಏನೇನು ತಪ್ಪು ಮಾಡಿದ್ದೀನಿ ಅನ್ನೋ ಪಟ್ಟಿ ಇಟ್ಟುಕೊಂಡೇ ಈ ಬಾರಿ ಪರೀಕ್ಷೆ ಎದುರಿಸಲು ಸಿದ್ಧಳಾದೆ. ಆದರೆ, ಎಲ್ಲೂ ಆತ್ಮವಿಶ್ವಾಸ ಕಳೆದು ಕೊಳ್ಳಲಿಲ್ಲ. ಬಿದ್ದಾಗ ಮಲಗಬಾರದು, ಮತ್ತೆ ಎದ್ದು ಓಡಾಡಲು ಶುರು ಮಾಡಬೇಕು ಅಂತ ಹೇಳಿಕೊಟ್ಟಿದ್ದೇ ಆ ಎರಡು ಸೋಲುಗಳು.
ಏನಾದರು ಮಾಡಿ ಪರೀಕ್ಷೆ ಪಾಸು ಮಾಡಲೇಬೇಕು ಅಂತ ತೀರ್ಮಾನ ಮಾಡಿದಾಗ-ಕಳೆದ ಪರೀಕ್ಷೆಯಲ್ಲಿ ಮಾಡಿದ ತಪ್ಪುಗಳನ್ನು ಹುಡುಕಾಡಲು ಶುರುಮಾಡಿದೆ. ನಾನು ಎಡವಿದ್ದು ಪ್ರಿಲಿಮ್ಸ್‌ನಲ್ಲಿ. ವೇಗವಿಲ್ಲದ ಬರವಣಿಗೆಯಲ್ಲಿ, ವಿಚಾರ ಗೊತ್ತಿದ್ದರೂ ಮಂಡಿಸುವ ರೀತಿಯಲ್ಲಿ. ಎಲ್ಲವನ್ನೂ ತಿಳಿದೇ ಈ ಭಾರಿ ಪರೀಕ್ಷೆ ಎದುರಿಸಿದ್ದು. ಅಂದರೆ, ಆತ್ಮಾವಲೋಕನ ಬಹಳ ಮುಖ್ಯ.
ನನ್ನ ಗೆಲುವಿನ ಮೊದಲು ಗುರು ಅದೇ.
ನಾನು ಅಂಚೆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದೀನಿ. ನಮ್ಮ ಇಲಾಖೆಯಿಂದಲೇ ಸುಮಾರು ಜನ ಕೆ.ಪಿ.ಎಸ್.ಸಿ ಪರೀಕ್ಷೆ ಬರೆದು ಆಯ್ಕೆಯಾಗಿದ್ದಾರೆ. ಇದೂ ಕೂಡ ನನ್ನ ಸ್ಫೂರ್ತಿಯ, ಪ್ರಯತ್ನದ ಹಿಂದಿನ ಶಕ್ತಿ. ಹೀಗೆ, 2014ರಲ್ಲಿ ಪಾಸಾದ ಒಂದಷ್ಟು ಜನರು ನನಗೆ ಮಾರ್ಗದರ್ಶನ ಮಾಡಿದ್ದು ಬಹಳ ಉಪಯೋಗಕ್ಕೆ ಬಂತು. ಮೊದಲೇ ಪ್ರಿಲಿಮ್ಸ್ ಕಡೆ ಗಮನ ಕೊಟ್ಟಿದ್ದಕ್ಕೇ 175 ಅಂಕ ಗಳಿಸಲು ಸಾಧ್ಯವಾಗಿದ್ದು. ನಮ್ಮದು ನಾಲ್ಕೈದು ಹುಡುಗಿಯರ ಗುಂಪಿದೆ. ಇದರಲ್ಲಿ ನಮ್ಮ ಗೈಡ್ ಕೂಡ ಇದ್ದಾರೆ. ಈ ಪರೀಕ್ಷೆಯಲ್ಲಿ ವೇಗ ಬಹಳ ಮುಖ್ಯ. ಪ್ರಶ್ನೆಗಳನ್ನು ನಿಖರವಾಗಿ ಎಷ್ಟು ನಿಮಿಷಕ್ಕೆ ಮುಗಿಸುತ್ತೇವೆ ಅನ್ನೋದರ ಮೇಲೆ ಅಂಕಗಳು ನಿರ್ಧಾರವಾಗುತ್ತವೆ. ವೇಗ ಚೆನ್ನಾಗಿರಬೇಕು ಅಂದರೆ ನಾವು ಜೀರ್ಣಿಸಿಕೊಂಡ ವಿಷಯಗಳನ್ನು ಸರಿಯಾಗಿ, ಸ್ಪುಟವಾಗಿ ಮಂಡಿಸಬೇಕು. ಅದಕ್ಕೆ ಅಕ್ಷರಗಳು ಸುಂದರವಾಗಿರಬೇಕು. ಉದ್ವೇಗ ಇದ್ದರೆ, ವಿಚಾರ ಹೇಳುವ ಆತುರ ಇದ್ದರೆ ಅಕ್ಷರಗಳು ಚೆನ್ನಾಗಿ ಮೂಡುವುದಿಲ್ಲ. ಹೀಗಾಗಿ, ಬಹಳ ಪ್ರಶಾಂತ ಮನೋಸ್ಥಿತಿಯಲ್ಲಿಯೇ ಪರೀಕ್ಷೆ ಬರೆಯಬೇಕು. ಇದು ಒಂದೇ ಬಾರಿಗೆ ಆಗದ ಮಾತು. ಮೊದಲ ಬಾರಿ ಪರೀಕ್ಷೆ ಬರೆದಾಗ ಎದುರಾದ ಇಂಥ ಎಲ್ಲ ಸಮಸ್ಯೆಗಳನ್ನೂ ಮೀರಲು ಪ್ರಯತ್ನ ಪಟ್ಟೆ. ವಿಚಾರ ಗೊತ್ತಿದ್ದರೂ, ತಲೆಯ ಮೇಲೆ ಕೂರುತ್ತಿದ್ದ ಸಮಯವನ್ನು ಮೀರುವುದಕ್ಕೆ ಆಗುತ್ತಿರಲಿಲ್ಲ. ಟೈಂ ಮ್ಯಾನೇಜ್ ಮಾಡುತ್ತಲೇ ಚೆನ್ನಾಗಿ ಬರೆಯುವುದಕ್ಕೂ ಗಮನ ಕೊಟ್ಟಿದ್ದೆ. ದಿನಂಪ್ರತಿ ಮೂರು ಗಂಟೆಗಳ ಕಾಲ ಬರೆಯುತ್ತಿದ್ದೆ. ಅದನ್ನು ಗೈಡ್‌ಗೆ ಕಳುಹಿಸುತ್ತಿದ್ದೆ. ಅವರು ಹುಡುಕಿದ ತಪ್ಪುಗಳನ್ನು ಸರಿ ಮಾಡಿಕೊಳ್ಳುತ್ತಿದ್ದೆ. ಹೀಗೆ, ಬರೆಯುತ್ತಲೇ ಕಣ್ಣ ಮುಂದಿನ ಓಡುವ ಸಮಯವನ್ನು ಬರವಣಿಗೆ ವೇಗಕ್ಕೆ ಹೊಂದಿಸಿಕೊಳ್ಳುವುದನ್ನು ಕಲಿತೆ.
ಸತತ, ನಾಲ್ಕು ತಿಂಗಳ ಕಾಲ ಹೀಗೆ ಮಾಡಿದ್ದೇನೆ. ಬೆರಳುಗಳು ಪಳಗಿದವು. ಮನೆಯಲ್ಲಿ ಕೂಡ ಪರೀಕ್ಷೆಯ ವಾತಾವರವಣವೇ ಇರಬೇಕು ಅಂತ ವಾರಕ್ಕೆ ಒಂದು ಸಾರಿ, ಎಕ್ಸಾಮ್ ಸ್ಥಿತಿಯನ್ನು ಮರುಸೃಷ್ಟಿ ಮಾಡಿ, ಮೂರು ಗಂಟೆಗಳಲ್ಲಿ ಜನರಲ್ ಸ್ಟಡೀಸ್‌ನ 25 ಪ್ರಶ್ನೆಗಳನ್ನು 5-6 ನಿಮಿಷಕ್ಕೆ ಒಂದರಂತೆ ಭಾಗ ಮಾಡಿಕೊಂಡು ಉತ್ತರಿಸುತ್ತಿದ್ದೆ. ಆಗ ಒಂದಷ್ಟು ಭಯ ಕಡಿಮೆಯಾಯಿತು.
ಓದುತ್ತಾ ಓದುತ್ತಾ ಸಿಲಬಸ್ ಜಾಸ್ತಿಯಾಗುತ್ತದೆ. ಆಗ ಮೊದಲು ಓದಿದ ವಿಷಯಗಳು ನೆನಪಿಂದ ಮರೆಯಾಗಬಹುದು. ಹಾಗಾಗಿ, ಹಳೆ ಪ್ರಶ್ನೆ ಪತ್ರಿಕೆಗಳನ್ನು ಹುಡುಕಿ, ತಂದು ಉತ್ತರ ಬರೆಯುತ್ತಿದ್ದೆ. ವಾರಕ್ಕೆ ಒಂದು ದಿವಸ ಕಡ್ಡಾಯವಾಗಿ ರಿವಿಷನ್ ಮಾಡುತ್ತಿದ್ದೆ. ಮುಖ್ಯವಾದ ವಿಷಯಗಳು ಶೀಟ್‌ನಲ್ಲಿ ಬರೆದುಕೊಳ್ಳುತ್ತಿದ್ದೆ. ಅದನ್ನು ನೋಡಿದರೆ ಇಡೀ ಘಟನೆಗಳು ನೆನಪಿಗೆ ಬರುವಂತೆ. ಮೂರು ತಿಂಗಳಿಗೆ ಎಲ್ಲ ಸಿಲಬಸ್ ಕವರ್ ಆಯ್ತು. ರಿವಿಷನ್ ಮಾಡುತ್ತಿದ್ದುದರಿಂದ ವಿಷಯಗಳು ಮರೆತು ಹೋಗುತ್ತಿರಲಿಲ್ಲ. ಹೀಗಾಗಿ, ಪರೀಕ್ಷೆಯ ಸಮಯದಲ್ಲಿ ಮತ್ತೆ ಗಡಿಬಿಡಿಯಾಗಿ ಓದುವ ಅಗತ್ಯ ಬೀಳಲಿಲ್ಲ. ಈ ಪರೀಕ್ಷೆಯಲ್ಲಿ ಕರೆಂಟ್ ಅಫೇರ್ಸ್ ಬಹಳ ಮುಖ್ಯ. ಇದಕ್ಕಾಗಿಯೇ ಪ್ರತಿದಿನ ನಾಲ್ಕೈದು ಪತ್ರಿಕೆಗಳನ್ನು ಓದುತ್ತಿದ್ದೆ. ಬಹಳ ಮುಖ್ಯ ಅನಿಸಿದ್ದನ್ನು ನೋಟ್ಸ್ ಮಾಡಿಕೊಳ್ಳುತ್ತಿದ್ದೆ. ಹೀಗೆ, ಪರೀಕ್ಷೆಯನ್ನೇ ಸವಾಲಾಗಿ ತೆಗೆದು ಕೊಂಡು, ದಿನಕ್ಕೆ 10-12 ಗಂಟೆಗಳ ಕಾಲ ಓದಿದ್ದರಿಂದಲೇ ಗೆಲುವು ನನ್ನದಾಗಿದ್ದು.
ಅಂದಹಾಗೇ ಇಷ್ಟೆಲ್ಲ ಅಧ್ಯಯನ ಮಾಡಲು ನಮ್ಮ ಊರು ಕೊಪ್ಪಳದಿಂದ ಧಾರವಾಡಕ್ಕೆ ಬಂದು ರೂಮ್ ಮಾಡಿಕೊಂಡೆ .ಕೆಲಸಕ್ಕೆ 6 ತಿಂಗಳ ರಜೆ ಹಾಕಿ. ಕೆ.ಪಿ.ಎಸ್.ಸಿ ಪರೀಕ್ಷೆ ಬರೆಯುವುದನ್ನು ಉಸಿರಾಗಿಸಿಕೊಂಡಿದ್ದರಿಂದಲೇ ಇವತ್ತು ಒಳ್ಳೆ ಹುದ್ದೆ ಸಿಕ್ಕಿದೆ. ಸೋಲು, ಪ್ರತಿಯೊಬ್ಬರ ಬದುಕಲ್ಲಿಯೂ ಬಹಳ ಮುಖ್ಯ. ಗೆಲುವು ತಂದು ಕೊಡದ ಆತ್ಮವಿಶ್ವಾಸವನ್ನು ಸೋಲು ಕೊಡುತ್ತದೆ.
ಓದಿದ್ದು…
ಬೆಳಗ್ಗೆ 6ರಿಂದ 11 ಗಂಟೆ ಸಾಮಾನ್ಯ ಓದು.
12 ರಿಂದ 2 ಗಂಟೆ. ಕರೆಂಟ್ ಅಫೇರ್ಸ್.
4ರಿಂದ 7 ರೈಟಿಂಗ್ ಪ್ರಾಕ್ಟೀಸ್.
ವಾರದಲ್ಲಿ ಒಂದು ದಿನ ರಿವಿಷನ್.
ಮಾದರಿ ಪರೀಕ್ಷೆ
ಒಂದು ಗೆಲುವು, ಒಂದು ಸೋಲು
ಅರ್ಜುನ್ ಒಡೆಯರ್
ನಾನು ಓದಿದ್ದು ಎಂಜಿನಿಯರಿಂಗ್. ಖಾಸಗಿ ಕಂಪೆನಿಯಲ್ಲಿ ಒಂದು ವರ್ಷ ಎಂಜಿನಿಯರ್ ಆಗಿ ಕೆಲಸ ಮಾಡಿದೆ. ಅದ್ಯಾಕೋ ಬೇಡ ಅನಿಸಿತು. ತಕ್ಷಣ ಮೈಸೂರಲ್ಲಿ ಕೋಚಿಂಗ್ ಕ್ಲಾಸಿಗೆ ಸೇರಿದೆ, ಆಮೇಲೆ ನಾನೇ ಕೋಚಿಂಗ್ ಕ್ಲಾಸಿನ ಇನ್‌ಸ್ಟ್ರಕ್ಟರ್ ಆದೆ. ಕಳೆದ ಬಾರಿ ಅಂದರೆ, 2014ರಲ್ಲೂ ಪರೀಕ್ಷೆ ಬರೆದಿದ್ದೆ. ಬಹಳ ನಿರಾಸೆ ಆಯಿತು. ಆಗ ಕೇವಲ ನಾಲ್ಕೂವರೆ ಮಾರ್ಕ್Õ ಕಡಿಮೆ ಬಂದು ಒಳ್ಳೆ ಅವಕಾಶ ತಪ್ಪಿಹೋಯಿತು. ತಪ್ಪು ತಪ್ಪೇ ಬಿಡಿ. ಆಗ ಏನು ಓದಬೇಕು, ಹೇಗೆ ಓದಬೇಕು, ಪ್ರಶ್ನೆ ಉತ್ತರ ಹೇಗೆ ಕೊಡಬೇಕು, ಬರೆಯುವಾಗ ವಿಷಯ ಹೇಗೆ ಮಂಡಿಸಬೇಕು, ಶುರು ಮಾಡುವುದು, ಉಪಸಂಹಾರ ಹೇಗೆ ಇದ್ಯಾವುದೂ ತಿಳಿದಿರಲಿಲ್ಲ. ಈ ಸಲ ಎಲ್ಲವನ್ನೂ ತಿಳಿದೇ ಅಖಾಡಕ್ಕೆ ಇಳಿದಿದ್ದೆ. ಹೀಗಾಗಿ, ಗೆಲುವು ಗ್ಯಾರಂಟಿ ಆಯ್ತು.
ಈ ರೀತಿ ಸೋಲಿನ ಬೆನ್ನಿಗೇ ಬರುವ ಗೆಲುವು ಬಹಳ ಗಟ್ಟಿ. ಹಾಗೆಯೇ ಮಜಾ ಕೂಡ. ನನ್ನ ಈ ಪ್ರಯತ್ನಕ್ಕೆ. ಶ್ರೀಧರಮೂರ್ತಿ, ಎಚ್.ಕೆ. ಭಟ್. ಧ್ರುವಕುಮಾರ್ ಅವರ ಮಾರ್ಗದರ್ಶನ ಸಿಕ್ಕಿತು. ಅಪ್ಪ ಈಗಿಲ್ಲ. ಆದರೆ, ಅವರು ಹೇಳಿ ಕೊಟ್ಟ ಪಾಠ, ತೋರಿದ ದಾರಿಯಲ್ಲಿ ನಡೆದದ್ದಕ್ಕೇ ಟಾಪರ್ ಆಗಿದ್ದು. ಕಳೆದ ಎರಡು ವರ್ಷದಿಂದ ಓದುವುದು, ಪರೀಕ್ಷೆ ಬರೆಯುವುದೇ ಜೀವನ ಅಂತ ಆಗಿತ್ತು. ಇನ್ನೂ ಪರೀಕ್ಷೆ 6 ತಿಂಗಳಿದೆ ಅಂದಾಗ 6 ಗಂಟೆಗಳ ಕಾಲ, ಪರೀಕ್ಷೇ ಮೂರು ತಿಂಗಳಿದೆ ಅಂದಾಗ ದಿನಕ್ಕೆ 12 ಗಂಟೆಗಳ ಕಾಲ ಓದುತ್ತಿದ್ದೆ.
ವರ್ಷವಿಡೀ ಪೂರ್ವಭಾವಿ ಪರೀಕ್ಷೆಗಳನ್ನು ಎದುರಿಸಿ, ಎದುರಿಸಿ ಹೇಗಾಗಿತ್ತು ಅಂದರೆ ಪರೀಕ್ಷೆ ಅಂದರೆ ನಿರಾಂತಕವಾಗಿ ಬರೆಯುವ ಮನೋಬಲ ರೂಢಿಸಿಕೊಂಡಿದ್ದೆ. ಆದರೆ, ಪರೀಕ್ಷೆಯ ದಿನ ಸ್ವಲ್ಪ ಟೆನÒನ್ ಅಂತೂ ಇತ್ತು. ಇದಕ್ಕೆ ಕಾರಣ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿರುವ ಸಮಯ ಪ್ರಜ್ಞೆ. ಇದರ ಕೊರತೆ ಆದರೆ ಒತ್ತಡ ಜಾಸ್ತಿಯಾಗುತ್ತದೆ. ಹೀಗಾದಾಗ, ಓದಿದ್ದು ಮರೆತು ಹೋಗಬಹುದು ಇಲ್ಲವೇ ಗೊಂದಲ ಉಂಟಾಗಬಹುದು. ಇದ್ಯಾವುದಕ್ಕೂ ನಾನು ಅವಕಾಶ ಮಾಡಿಕೊಡಲೇ ಇಲ್ಲ. ಓದಿದ್ದನ್ನು ಅರಗಿಸಿಕೊಂಡು, ಪ್ರಸ್ತುತ ಪಡಿಸುವ ಬಗೆ ತಿಳಿದಿದ್ದೆ. ಈ ಸಲ ಏನಾದರೂ ಮಾಡಿ, ಪಾಸ್ ಮಾಡಿ ಹುದ್ದೆ ಗಳಿಸ ಬೇಕು ಅಂತಲೇ ಇಷ್ಟೆಲ್ಲ ಪ್ರಯತ್ನ ಮಾಡಿದೆ. ಅದಕ್ಕೆ ತಕ್ಕ ಫಲ ಸಿಕ್ಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.