ಬುದ್ಧಿ ಉಪಯೋಗಿಸಿ ಬಹುಮಾನ ಗಳಿಸಿದೆ!
Team Udayavani, Jun 5, 2018, 6:00 AM IST
1969ರ ಸಂಗತಿಯಿದು. ನಾನಾಗ ಎಸ್ಸೆಸ್ಸೆಲ್ಸಿ ಓದುತ್ತಿದ್ದೆ. ತಂದೆ ಹೊಟೇಲ್ ಉದ್ಯಮಿ. ನಾನೂ ಬಿಡುವಿದ್ದಾಗಲೆಲ್ಲ ಹೋಟೆಲಿಗೆ ಹೋಗಿ ಗಲ್ಲಾ ಪೆಟ್ಟಿಗೆ ಏರುತ್ತಿದ್ದೆ. ಊಟ, ಸಾಂಬಾರ್‌ನ ಕೂಪನ್‌ಗಳಿಂದ ಕೂಡಿದ್ದ ಬಿಲ್ ಬುಕ್‌ಗಳಿಗೆ ಸೀಲ್ ಹೊಡೆಯುವುದು, ಕಿರಾಣಿ ತರುವುದು, ಅಂಗಡಿ ಬಾಕಿಯನ್ನು ಸಂಜೆ ಕೊಟ್ಟು ಬರುವುದು ಮೊದಲಾದವು ನನ್ನ ಪಾಲಿನ ಸಣ್ಣ ಕೆಲಸಗಳು.
ಆಗ ಲಿಪ್ಟನ್ ಟೀ ಪುಡಿ ಕಂಪನಿಯವರ ಬ್ರೂಕ್‌ಬಾಂಡ್ ಚಹಾಪುಡಿ ಉತ್ಕೃಷ್ಟ ಸ್ವಾದದ್ದಾಗಿತ್ತು. ನಾವು ನಿತ್ಯ ಅದನ್ನೇ ಬಳಸುತ್ತಿದ್ದೆವು. ಒಮ್ಮೆ ಬ್ರೂಕ್‌ಬಾಂಡ್ ಕಂಪನಿಯವರು ಗ್ರಾಹಕರಿಗಾಗಿ ಒಂದು ಸ್ಪರ್ಧೆಯನ್ನಿಟ್ಟಿದ್ದರು. ಪ್ರವೇಶಪತ್ರದಲ್ಲಿ ವಿಶಿಷ್ಟ ಕೋನದಲ್ಲಿ ಗುರುತಿಸಲಾಗದಂತೆ ತೆಗೆದ ವಸ್ತುಗಳ ನಾಲ್ಕು ಫೋಟೋ ಕೊಟ್ಟಿದ್ದರು. ನಾವು ಮಾಡಬೇಕಾದದ್ದಿಷ್ಟೇ; ಆ ವಸ್ತುಗಳನ್ನು ಗುರುತಿಸಬೇಕು. ನಂತರ, ನಾನು ಬ್ರೂಕ್‌ಬಾಂಡ್ ಚಹಾವನ್ನೇ ಇಷ್ಟಪಡುತ್ತೇನೆ ಏಕೆಂದರೆ… ಈ ವಾಕ್ಯವನ್ನು ಕೇವಲ 10 ಶಬ್ದಗಳನ್ನು ಬಳಸಿ ಪೂರ್ಣ ಮಾಡಬೇಕು. ಉತ್ತಮ ರೀತಿಯಲ್ಲಿ ವರ್ಣಿಸಿದವರಿಗೆ ಬಹುಮಾನ. ಪ್ರಥಮ ಬಹುಮಾನ 5 ಸಾವಿರ, ದ್ವಿತೀಯ 3 ಸಾವಿರ, ತೃತೀಯ 1 ಸಾವಿರ. 25 ಸಮಾಧಾನಕರ ಬಹುಮಾನಗಳಿದ್ದವು.
ನಾನು ಆ ವೇಳೆಗೆ ವಾಚಕರ ಪತ್ರ, ಕವನ, ಚುಟುಕು, ಮಕ್ಕಳ ಕಥೆ ಬರೆದು ಪುಡಿ ಲೇಖಕನೆನಿಸಿದ್ದೆ. ಅಲ್ಲದೇ ಇಂಥ ಸ್ಪರ್ಧೆಗಳೆಂದರೆ ನನಗೆ ಅಚ್ಚುಮೆಚ್ಚು. ಏನಾದರಾಗಲಿ, ಒಂದು ಕೈ ನೋಡಿಯೇ ಬಿಡೋಣವೆಂದು ಪ್ರವೇಶಪತ್ರ ಹಿಡಿದು ಕುಳಿತೆ. ಫೊಟೋಗಳನ್ನು ಗುರುತಿಸಿದೆ. ಚಹಾಪುಡಿಯನ್ನು ವರ್ಣಿಸಲು ತಡಕಾಡಿ ಕೊನೆಗೂ 10 ಪದಗಳ ಪುಂಜವನ್ನು ತುಂಬಿ ಅಂಚೆಯ ಮೂಲಕ ಮದ್ರಾಸಿಗೆ ಕಳಿಸಿದೆ.
ಒಂದು ತಿಂಗಳ ನಂತರ ಫಲಿತಾಂಶ ಕೈಯಲ್ಲಿ ಹಿಡಿದು ಚಹಾಪುಡಿ ಕಂಪನಿಯ ಆಫೀಸರ್ ಅವರೇ ಹೋಟೆಲಿಗೆ ಬಂದರು, “ಶಂಕರರಾಯರೇ, ನಿಮ್ಮ ಮಗನಿಗೆ 2ನೇ ಬಹುಮಾನವಾಗಿ 3000 ರೂಪಾಯಿ ಬಂದಿದೆ’ ಎಂದರು!
ಅಪ್ಪ ಖುಷ್! ನಾನು ಫುಲ್‌ಖುಷ್! ನಾನಂತೂ ಖಂಡಿತ ಇದನ್ನು ನಿರೀಕ್ಷಿಸಿರಲಿಲ್ಲ. ದಕ್ಷಿಣದ ನಾಲ್ಕು ರಾಜ್ಯಗಳಿಗೆ ಮಾತ್ರ ನಿಗದಿಯಾಗಿದ್ದ ಆ ಸ್ಪರ್ಧೆಯಲ್ಲಿ ನನಗೆ 2ನೇ ಬಹುಮಾನ! ಅದೂ 3000 ರೂ. 1969ರ ಸಂದರ್ಭದಲ್ಲಿನ 3 ಸಾವಿರ ರೂ. ಇಂದಿನ ಒಂದು ಲಕ್ಷಕ್ಕೆ ಸಮ.
ತಂದೆಯವರು ಆ ಹಣವನ್ನು ನನ್ನ ಕೈಗಿತ್ತರು. ಪ್ರಶ್ನಾರ್ಥಕವಾಗಿ ಅವರೆಡೆ ನೋಡಿದೆ. “ಇದು ನಿನ್ನ ಶ್ರಮದ ದುಡಿಮೆಯ ಹಣ. ನಿನಗೇ ಸೇರಿದ್ದು. ಇದನ್ನು ನಿನ್ನ ಪ್ರಥಮ ಸಂಬಳ ಎಂದುಕೋ…’ ಎಂದರು. ಅವರ ಮಾತಿನಿಂದ ಒಮ್ಮೆ ರೋಮಾಂಚಿತನಾದೆ. ನಿಜ! ಅದು ನನ್ನ ಮೊದಲ ಸಂಪಾದನೆಯಾಗಿತ್ತು. ಇಂದು ನಾನು ನನ್ನ ಕಾರ್ಮಿಕರಿಗೆ ಸಂಬಳ ಕೊಡುವಾಗಲೆಲ್ಲ ಆ ಮೂರು ಸಾವಿರ ನೆನಪಾಗುತ್ತದೆ.
ಕೆ. ಶ್ರೀನಿವಾಸ ರಾವ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಫೆ.21ರಂದು ತೆರೆಗೆ ಬರಲಿದೆ ʼವಿಷ್ಣು ಪ್ರಿಯಾʼ
Bajpe ಪ.ಪಂ.ನಿಂದ ಕುಡಿಯುವ ನೀರು ಪೂರೈಕೆಗೆ ಹೊಸ ಚಿಂತನೆ; ಹೊಸ ಬೋರ್‌ವೆಲ್‌ಗೆ ಸೌರ ಪಂಪ್
Mannagudda: ಗಡ್ಡೆ ಗೆಣಸು ಸೊಪ್ಪುಗಳಿಗೆ ರಾಜ ಮರ್ಯಾದೆ!
Cosmetic surgery:ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಭಾರತೀಯ ಜನಸಮುದಾಯದ ಮೇಲೆ ಪರಿಣಾಮ
Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್ ಸಿಗೋದು ಕಷ್ಟ – ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.