ಚುಕುಬುಕು ಪ್ರೇಮಿ ವೇಟಿಂಗ್…
Team Udayavani, Oct 9, 2018, 6:00 AM IST
ಇದು ಬೆಂಗಾಲಿ ಪ್ರೇಮಿಯೊಬ್ಬನ ಕತೆ. ಎಂದೋ ರೈಲಲ್ಲಿ ನೋಡಿದ ಸುಂದರಿಗಾಗಿ, ನಿತ್ಯವೂ ಒಂದೇ ಟಿಶರ್ಟು ಧರಿಸಿ, 8 ಸಾವಿರ ಪೋಸ್ಟರುಗಳನ್ನು ಎಲ್ಲೆಡೆ ಅಂಟಿಸಿ, ಅದೇ ರೈಲಿನಲ್ಲಿಯೇ ಅವಳಿಗಾಗಿ ಕಾತರಿಸುತ್ತಿದ್ದಾನೆ. ಸಿಕ್ಕಳಾ ಆ ಸುಂದರಿ?
ಲವ್ ಎಟ್ ಫಸ್ಟ್ ಸೈಟ್ ಅನ್ನೋದೇ ಇದಕ್ಕೆ… ಮೊದಲ ನೋಟದಲ್ಲಿ, ಕಣ್ಣ ಚಿಪ್ಪೊಳಗೆ ಕುಳಿತುಬಿಟ್ಟ ಪ್ರೀತಿ ಯಾವತ್ತೂ ಕದಲುವುದಿಲ್ಲ. ಅದು ಕವಿತೆಯಾಗಿ, ಮುತ್ತಾಗಿ ಫಳಗುಟ್ಟುವ ಪುಳಕದ ಮುಂದೆ ಬೇರೇನೂ ಹೋಲಿಕೆಯೂ ಇಲ್ಲ. ನಿದ್ದೆ ಕದ್ದು, ಆ ಮುದ್ದು ಮುಖವೇ ಮತ್ತೆ ಮತ್ತೆ ಕಣ್ಣೆದುರು ಸರಿದಾಡಿ, ನಿಂತಲ್ಲಿ ನಿಲ್ಲಲಾಗದೇ, ಕೂತಲ್ಲಿ ಕೂರಲಾಗದೇ, ಏನೋ ಸಿಹಿಸಂಕಟ. ಆ ಪ್ರೀತಿ ದೇವತೆಯ ಹಿಂದೆಯೇ ಓಡಿಬಿಡೋಣ ಎನ್ನುವ ಹುಚ್ಚು.
ಕೋಲ್ಕತ್ತಾದ ಆ ಹುಡುಗನಿಗೆ ಹಿಡಿದಿರುವ ಹುಚ್ಚು ಕೂಡ ಅದೇ. ಟ್ರೈನಿನಲ್ಲಿ ಬರೋಬ್ಬರಿ 100 ದಿನಗಳ ಹಿಂದೆ ನೋಡಿದ ಹುಡುಗಿಗಾಗಿ ಅವನು ನಿತ್ಯವೂ ಚಡಪಡಿಸುತ್ತಿದ್ದಾನೆ. ಆಕೆ ಟ್ರೈನು ಹತ್ತಿದ ರೈಲ್ವೆ ಸ್ಟೇಷನ್ನಿನಲ್ಲಿ ದಿನವೂ ಆರೇಳು ಗಂಟೆ ಕಾಯುತ್ತಿದ್ದಾನೆ! ವಿಶ್ವಜಿತ್ ಪೋಡ್ಡಾರ್ ಎಂಬ 29 ವರ್ಷದ ಯುವಕ ಪ್ರೇಮತಪಸ್ವಿಯಂತೆ ಕಾಣಿಸುತ್ತಿದ್ದಾನೆ. ಪಶ್ಚಿಮ ಬಂಗಾಳದ ಪರಿಸರ ಇಲಾಖೆಯಲ್ಲಿ ಕೆಲಸದಲ್ಲಿರುವ ವಿಶ್ವಜಿತ್, ನಿತ್ಯವೂ ಹೌರಾ- ಕೊನ್ನಾಗರ್‌ಗೆ ಹೋಗುವ ರೈಲಿನಲ್ಲಿ ಪಯಣಿಸುತ್ತಿದ್ದವನು.
ಜುಲೈನ ಜಿಟಿಜಿಟಿ ಮಳೆಯ ಅದೊಂದು ಸಂಜೆ. ಅಪ್ಪ- ಅಮ್ಮನೊಂದಿಗೆ ದುಂಡುಮಲ್ಲಿಗೆಯಂಥ ಚೆಲುವೆ, ಕೊನ್ನಾಗರ್ ಸ್ಟೇಷನ್ನಿನಲ್ಲಿ ಹತ್ತಿಕೊಂಡಳು. ಟ್ರೈನ್ ಬಹಳ ರಶ್Ï ಇತ್ತು. ಕಂಬಿ ಹಿಡಿದು ನಿಂತಿದ್ದ ವಿಶ್ವಜಿತ್‌ನ ಬಾಜೂವಿನಲ್ಲೇ ಅವಳೂ ನಿಂತಳು. ಮುಂಗುರುಳನ್ನು ಸರಿಸುತ್ತಾ, ಚೆಂದುಟಿಯಲ್ಲಿ ನಗುತ್ತಾ, ಕಾಡಿಬಿಟ್ಟಳು ವಿಶ್ವನನ್ನು. ಕೆಲ ನಿಮಿಷಗಳ ಪಯಣದಲ್ಲಿ ಅವಳ ಮೇಲೆ ಪ್ರೀತಿಯೂ ಉಕ್ಕಿತು. “ನಿನ್ನ ಹೆಸರೇನು?’ ಅಂತ ಕೇಳಿಯೇಬಿಡೋಣ ಅಂತ ಹತ್ತಾರು ಸಲ ಅನ್ನಿಸಿದರೂ, ಧೈರ್ಯ ಸಾಲದಾಗಿ, ಆ ಮಳೆಯಲ್ಲೂ ಸಣ್ಣದಾಗಿ ಬೆವರುತ್ತಿದ್ದ. ಪಕ್ಕದಲ್ಲೇ ಅಪ್ಪ- ಅಮ್ಮ ನಿಂತಿದ್ದರಿಂದ ಕಣ್ಣಲ್ಲೇ ಮಾತಾಡಿಸಿದ. ಅವಳಿಗೆ ಅದು ಕೇಳಿಸದಾಯಿತು. ಪ್ರತಿಯಾಗಿ ನಕ್ಕಿದ್ದಳಷ್ಟೇ. ತಂದೆಯೊಂದಿಗೆ ಹರಟೆಯಲ್ಲಿದ್ದಾಗ ಆಕೆಯ ಮಾತುಗಳಿಂದ ಇವನಿಗೆ ಸುಳಿವು ಸಿಕ್ಕಿದ್ದು, ಅವಳ ಮನೆ ಕೊನ್ನಾಗರ್‌ನಲ್ಲಿ ಇರೋದು ಅಂತಷ್ಟೇ. ಕಡೇಕ್ಷಣದಲ್ಲಿ ಮೊಬೈಲ್ ನಂಬರ್ ಕೇಳಿಯೇಬಿಡೋಣ ಅಂತನ್ನಿಸಿ, ಮುನ್ನುಗ್ಗಿದ್ದನಾದರೂ, ಸಹಪಯಣಿಗರಾರೋ ಕೈ ಅಡ್ಡ ಹಿಡಿದು, ಆ ಪ್ರಯತ್ನಕ್ಕೂ ಕಲ್ಲುಬಿದ್ದಿತ್ತು. ಆ ಸುಂದರಿ ಇಳಿದಿದ್ದು ಬ್ಯಾಲ್ಲಿ ಎಂಬಲ್ಲಿ.
ಅವತ್ತು ರಾತ್ರಿ ಇಡೀ ವಿಶ್ವಜಿತ್ ನಿದ್ದೆ ಮಾಡಲಿಲ್ಲ. ಮರುದಿನ ಅದೇ ಸಮಯದಲ್ಲಿ ಅದೇ ರೈಲನ್ನೇ ಹತ್ತಿದ್ದ. ಅವಳು ಕಾಣಿಸಲಿಲ್ಲ. ಮರುದಿನ, ಮರುವಾರ, ಹತ್ತು ದಿನಗಳವರೆಗೂ ಆ ರೈಲನ್ನೇ ನಂಬಿಕೊಂಡು ಬಂದರೂ, ಅವಳು ಬರದೇ ಇದ್ದುದನ್ನು ನೋಡಿ, ಬೇಸರಗೊಂಡ ವಿಶ್ವಜಿತ್. ಆಗ ಹೊಳೆದಿದ್ದೇ ಪೋಸ್ಟರ್ ಐಡಿಯಾ!
ಆರಂಭದಲ್ಲಿ ಬರೋಬ್ಬರಿ 4000 ಪೋಸ್ಟರ್‌ಗಳನ್ನು ಮಾಡಿ, “ಕೊನ್ನಾಗರ್ ಕೌನ್’ ಎಂಬ ಶೀರ್ಷಿಕೆಯಲ್ಲಿ ಕೊನ್ನಾಗರ್ ರೈಲ್ವೆ ಸ್ಪೇಶನ್ನಿನ ಸುತ್ತಮುತ್ತ ಎಲ್ಲೆಡೆ ಅಂಟಿಸಿದ. ಕೊನ್ನಾಗರ್ ಕೌನ್ ಅಂದರೆ, “ಕೊನ್ನಾಗರದ ವಧು’ ಅಂತ ಅರ್ಥ. ಆ ಪೋಸ್ಟರ್‌ನಲ್ಲಿ ತನ್ನದೊಂದು ಫೋಟೋ ಹಾಕಿ, ಮೊಬೈಲ್ ನಂಬರ್ ಅನ್ನೂ ಮುದ್ರಿಸಿದ್ದ. ಸಾಲದ್ದಕ್ಕೆ 6.30 ನಿಮಿಷದ ಪುಟ್ಟ ವಿಡಿಯೋ ಮಾಡಿ, “ಓ ಕನಸಿನ ರಾಣಿಯೇ… ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ. ನೀನು ಒಪ್ಪುವುದಾದರೆ ಇದೇ ಕೊನ್ನಾಗರ್ ರೈಲ್ವೆ ಸ್ಟೇಷನ್ನಿನಲ್ಲೇ ಭೇಟಿ ಆಗೋಣ. ಅವತ್ತು ನೀ ನೋಡಿದ ಕೆಂಪು ಟೀಶರ್ಟಿನಲ್ಲೇ ಇರುತ್ತೇನೆ’ ಎನ್ನುತ್ತಾ ಆ ವಿಡಿಯೋದಲ್ಲಿ ಮಾತು ಮುಗಿಸಿದ್ದ. ಅದು ಕೂಡ ಯೂಟ್ಯೂಬ್, ವಾಟ್ಸಾéಪ್, ಫೇಸ್‌ಬುಕ್‌ನಲ್ಲಿ ಹರಿದಾಡಿ ವೈರಲ್ ಆಯಿತೇ ಹೊರತು, ಆ ಹುಡುಗಿ ಸಿಗಲೇ ಇಲ್ಲ.
ಈಗ ಅವಳನ್ನು ನೋಡದೇ, 100 ದಿನಗಳಾಗಿವೆ ವಿಶ್ವಜಿತ್‌ಗೆ. ಮತ್ತೆ 4000 ಪೋಸ್ಟರ್‌ಗಳನ್ನು ಮಾಡಿ, ಕೊನ್ನಾಗರ್‌ನ ಸುತ್ತಮುತ್ತಲಿನ ಕಾಂಪೌಂಡುಗಳ ಮೇಲೆ ಅಂಟಿಸಿದ್ದಾನೆ. ಅವಳಿಗೆ ಸಲೀಸಾಗಿ ಗುರುತು ಸಿಗಲಿಯೆಂದು, ಅಂದು ಧರಿಸಿದ ಟಿಶರ್ಟನ್ನೇ ನಿತ್ಯವೂ ಧರಿಸಿ, ರೈಲಿನಲ್ಲಿ ಪಯಣಿಸುತ್ತಲೇ ಇದ್ದಾನೆ. ಕಚೇರಿಗೆ ಹೋದ ಮೇಲೆ ಅದನ್ನು ಬದಲಿಸುತ್ತಾನೆ. ಡ್ನೂಟಿ ಮುಗಿಸಿ, ಕೊನ್ನಾಗರ್ ಸ್ಟೇಷನ್ನಿನಲ್ಲಿ ಇಳಿದು, ಅಲ್ಲಿ ರಾತ್ರಿ ಆಗುವವರೆಗೂ ಕಾಯುತ್ತಾನೆ. ಈ ಪ್ರೇಮಿಯ ಕೂಗು ಅವಳಿಗೆ ತಲುಪುತ್ತಲೇ ಇಲ್ಲ.
“ನನ್ನ ಈ ಪ್ರೀತಿಯನ್ನು ಕಂಡು ಮನೆಯಲ್ಲೆಲ್ಲ ಹುಚ್ಚಾ ಎನ್ನುತ್ತಾರೆ. ರೈಲ್ವೆ ಪೊಲೀಸರು, ಹೋಗಾಚೆ ಎಂದು ಲಾಠಿ ರುಚಿ ಕೊಟ್ಟು, ಓಡಿಸಿದ್ದಾರೆ. ಕೆಲವು ಸಲ ಇದೇ ಸ್ಟೇಶನ್ನಿನಲ್ಲಿಯೇ ಉಳಿದು, ಬೆಳಕು ಕಂಡಿದ್ದೇನೆ. ನಾನು ಆ ಹುಡುಗಿಗೆ ಕೆಟ್ಟ ಹೆಸರು ತರಲು ಇಷ್ಟಪಡುವುದಿಲ್ಲ. ನನ್ನ ಹೃದಯದ ಮಾತುಗಳು ಅವಳನ್ನು ತಲುಪಬೇಕು. ಹಾಗೆ ತಲುಪುವವರೆಗೂ ನಾನು ತಪಸ್ಸಿನಂತೆ ಅವಳನ್ನು ಕಾಯುತ್ತೇನೆ. ಧ್ಯಾನಿಸುತ್ತೇನೆ. ಗೊತ್ತು, ಒಂದಲ್ಲಾ ಒಂದು ದಿನ ಅವಳು ಪ್ರತ್ಯಕ್ಷಳಾಗುತ್ತಾಳೆ… ಕಾರಣ, ಅವಳು ನನ್ನ ಪಾಲಿಗೆ ಪ್ರೇಮದೇವತೆ’ ಎಂದು ಆಕೆಯನ್ನು ನೆನೆದು ವಿಶ್ವಜಿತ್, ಇನ್ನಾವುದೋ ರೈಲನ್ನು ಕಾಯುತ್ತಿದ್ದಾನೆ.
ಇಳಿದಳಾ ಅವಳು? ಇಲ್ಲಾ… ಮುಂದಿನ ಟ್ರೈನ್ ನೋಡೋಣ… ಈ ಪ್ರೀತಿಯ ಧ್ಯಾನಕ್ಕೆ ದಣಿವೆಂಬುದಿಲ್ಲ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.