ಕೊಡೆಯ ಕೆಳಗೆ ನಮ್ಮಿಬ್ಬರ ಆ ನಡೆ…
Team Udayavani, Aug 6, 2019, 5:00 AM IST
ಈಗಲೂ ಅಷ್ಟೇ; ನಿನ್ನ ಭೇಟಿಗೆಂದು ಹೊರಡುವ ಮುನ್ನ, ದೇವರೇ ಪ್ಲೀಸ್ ಮಳೆ ಬರಲಿ, ಜೊತೆಗೆ ಅವಳು ಕೊಡೆ ಮರೆತು ಬರಲಿ ಎಂದು ಪ್ರಾರ್ಥಿಸುತ್ತೇನೆ.
ಅಂದು ನಾವಿಬ್ಬರೂ ಭೇಟಿಯಾಗುತ್ತೇವೆಂಬ ಸಣ್ಣ ನಿರೀಕ್ಷೆಯೂ ಇರಲಿಲ್ಲ. ಎಲ್ಲಿಗೋ ಹೊರಟಿದ್ದ ನಾನು, ನನ್ನ ದಾರಿಯನ್ನು ನಿನ್ನೆಡೆಗೆ ತಿರುಗಿಸಲು, ನಿನ್ನ ಸಣ್ಣ ಆಹ್ವಾನವಷ್ಟೇ ಸಾಕಾಗಿತ್ತು. ಅದು ಹೇಳಿ ಕೇಳಿ ಮಳೆಗಾಲ. ಮಳೆಯ ಬಿರುಸಿಗೆ, ರಸ್ತೆಯಲ್ಲಿದ್ದ ವಾಹನಗಳು ಏದುಸಿರು ಬಿಡುತ್ತಾ ಇಷ್ಟಿಷ್ಟೇ ಮುಂದಕ್ಕೆ ಸಾಗುತ್ತಿದ್ದವು. ಆ ಟ್ರಾಫಿಕ್ ಜಾಮಿನ ಸಿಕ್ಕಿನಿಂದ ಬಿಡಿಸಿಕೊಂಡು ತಲುಪುವಷ್ಟರಲ್ಲಿ ಉಸ್ಸಪ್ಪಾ ಎಂದೆನಿಸಿದರೂ, ನಿನ್ನನ್ನು ನೋಡುತ್ತಿದ್ದಂತೆ ಆ ಆಯಾಸವೆಲ್ಲಾ ಮಂಗಮಾಯ.
ಆ ಬೀದಿಯಲ್ಲಿ ನಾವು ಮಾತಿನ ಮಳೆಗೆರೆಯುತ್ತಾ ಸಾಗುತ್ತಿದ್ದರೆ, ಮಳೆ ತಾನು ಸುರಿಯುವುದನ್ನೇ ಮರೆತು ಬಿಟ್ಟಿತ್ತು ! ಕೊನೆಗೆ, ಅದಕ್ಕೂ ನಮ್ಮ ಜೊತೆಗೆ ಹೆಜ್ಜೆ ಹಾಕಬೇಕೆಂಬ ಬಯಕೆ ಅತಿಯಾಗಿ ನಮ್ಮನ್ನು ಹಿಂಬಾಲಿಸಿಯೇ ಬಿಟ್ಟಿತು. ಮಾತುಗಳ ಮಳೆಯಲ್ಲಿ ಆಗಲೇ ತೊಯ್ದು ಹೋಗಿದ್ದ ನಮಗೆ, ಇನ್ನು ಈ ಮಳೆಯಲ್ಲೂ ನೆನೆದರೆ ನೆಗಡಿಯಾದೀತೇನೋ ಎಂಬ ಭಯದಿಂದ ಕೊಡೆ ಅರಳಿಸೋಣವೆಂದರೆ ಅಂದು, ನೀ ಕೊಡೆಯನ್ನೇ ತಂದಿರಲಿಲ್ಲ. “ಅಯ್ಯೋ ತಂದಿಲ್ಲ, ಪಿ.ಜಿಯಲ್ಲೇ ಮರೆತು ಬಂದಿದ್ದೇನೆ’ ಎಂದು ಹೇಳುತ್ತಿರಬೇಕಾದರೆ ನನಗೇ ಅರಿವಿಲ್ಲದಂತೆ, ಕೊಡೆಗೂ ಮುಂಚಿತವಾಗಿ ನನ್ನ ಮನಸ್ಸು ಅರಳಿ ನಿಂತಿತು!
ಹನಿ ಮಳೆ, ತಂಪು ಗಾಳಿ, ಮೋಡ ಕವಿದ ಮಬ್ಬೆಳಕಿನ ಅಲಂಕಾರದೊಂದಿಗೆ ಒಂದೇ ಕೊಡೆಯ ಅಡಿಯಲ್ಲಿ ಜೊತೆ ಜೊತೆಯಾಗಿ ಮುಂದಡಿ ಇಡುತ್ತಿದ್ದರೆ ರೋಮಾಂಚನ. ಇಂಥ ಆಸೆ ಕಂಠಪೂರ್ತಿ ಇದ್ದರೂನೂ, ಕೊಡೆಯನ್ನು ನಿನಗೇ ಕೊಟ್ಟು, ನಾನು ಹಾಗೇ ನಡೆದುಕೊಂಡು ಬರುತ್ತೇನೆ ಎಂತ ಹೇಳುವ ಮೂಲಕ, ನಿನ್ನ ದೃಷ್ಟಿಯಲ್ಲಿ ನಾನು ತೀರಾ ಸಂಭಾವಿತ ಎಂದೆನಿಸಿಕೊಳ್ಳಲು ಪ್ರಯತ್ನಿಸಿದ್ದೆ. ” ನೀನು ನನ್ನ ಮಳೆಯಲ್ಲಿ ನೆನೆಯಲು ಬಿಡದೇ, ಒಳ ಕರೆದೇ ಕರೆಯುತ್ತೀಯಾ’ ಎಂಬ ನನ್ನ ಬಲವಾದ ವಿಶ್ವಾಸ ಹುಸಿಯಾಗಲಿಲ್ಲ.
ಹಾಗಂತ, ಅದೇನೂ ನಾವು ಎಂದೂ ಸಾಗದ ಬೀದಿಏನಲ್ಲ. ಆದರೆ ಒಂದೇ ಕೊಡೆಯ ಕೆಳಗೆ, ನಿನ್ನೊಂದಿಗೆ ಹೆಜ್ಜೆ ಹಾಕುತ್ತಾ ಸಾಗುವಾಗ ಸುತ್ತಲೂ ಕಣ್ಣು ಹಾಯಿಸುತ್ತಿದ್ದರೆ ಎಲ್ಲವೂ ನವನವೀನ.
ಅದೇ ಮೊದಲ ಬಾರಿಗೆ ನಾವು ಮೈಗೆ ಮೈ ಸೋಕುವಷ್ಟು ಹತ್ತಿರ ನಿಂತು ಅಷ್ಟು ದೂರ ಕ್ರಮಿಸಿದ್ದು ಮತ್ತು ಹತ್ತಿರವಿದ್ದಿದ್ದಕ್ಕೇ ಇರಬೇಕು ಆ ದಾರಿಯ ದೂರ ಅರಿವಿಗೇ ಬಂದಿರಲಿಲ್ಲ.
ಎಷ್ಟು ದೂರ ಆದರೂ ಸರಿ, ನಡೆಯುತ್ತೇವೆ ಎಂಬ ಆ ಕ್ಷಣದ ಹುಮ್ಮಸ್ಸಿನಲ್ಲಿ ಹೆಜ್ಜೆ ಹಾಕಿ ದಾರಿ ತಪ್ಪಿ, ತುಸು ಪೀಕಲಾಟಕ್ಕೆ ಒಳಗಾದದ್ದು ಇಂದಿಗೂ ಒಂದು ಪಾಠವೇ. ಕೊನೆಗೆ ನಮ್ಮ ನಮ್ಮ ಹಾದಿ ಹಿಡಿದು ಹೊರಡುವಾಗ ಮಳೆ ನಿಂತಿತ್ತು, ಅರಳಿದ ಕೊಡೆ ಮುದುಡಿತ್ತು,
ಅದರೊಂದಿಗೆ ಮನಸ್ಸೂ ಕೂಡಾ!
ಈಗಲೂ ಅಷ್ಟೇ; ನಿನ್ನ ಭೇಟಿಗೆಂದು ಹೊರಡುವ ಮುನ್ನ, ದೇವರೇ ಪ್ಲೀಸ್ ಮಳೆ ಬರಲಿ, ಜೊತೆಗೆ ಅವಳು ಕೊಡೆ ಮರೆತು ಬರಲಿ ಎಂದು ಪ್ರಾರ್ಥಿಸುತ್ತೇನೆ. ಹಾಗಾದರೂ, ಸಣ್ಣಗೆ ಸುರಿಯುವ ಮಳೆಯಲ್ಲಿ , ಒಂಟಿ ಕೊಡೆಯ ಕೆಳಗೆ ಒಟ್ಟೊಟ್ಟಿಗೆ ನಿಲ್ಲುವ ಅನುಭೂತಿಯನ್ನು ಮತ್ತೂಮ್ಮೆ ದಕ್ಕಿಸಿಕೊಳ್ಳುವ ಹಿತವಾದ ಹಪಾಹಪಿಯದು.
– ಸಂದೇಶ್ ಎಚ್ ನಾಯ್ಕ…, ಹಕ್ಲಾಡಿ, ಕುಂದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.