ನಮ್ಮೊಳಗಿದೆ ಸಿಸಿ ಕ್ಯಾಮೆರಾ
Team Udayavani, May 16, 2017, 1:30 PM IST
ಹುಷಾರು, ಇಲ್ಲಿ ಎಲ್ಲವೂ ರೆಕಾರ್ಡ್ ಆಗ್ತಿದೆ. ಈಗ, ಡಿಗ್ರಿ ಮಾರ್ಕ್ಸ್ ಕಾರ್ಡ್‌ಗಳನ್ನು ನೋಡಿದರೆ ಸಾಕು. ನಾನು ಅಡ್ಡದಾರಿ ಹಿಡಿದು ಪಾಸಾದವನು ಎಂಬ ಕೀಳರಿಮೆ ವೈಭವ್ ಪಟೇಲನನ್ನು ಕಾಡುತ್ತಿದೆಯಂತೆ…
ಮಹಾಭಾರತದಲ್ಲಿ ಬರುವ ಒಂದು ಸಂದರ್ಭ: ವಿದ್ಯಾರ್ಥಿಗಳಾಗಿದ್ದವರು ರಾಜಕುಮಾರರು ಎಂದು ತಿಳಿದ ನಂತರವೂ, ಪಾಠ- ಪ್ರವಚನದ ವಿಷಯದಲ್ಲಿ ಆಚಾರ್ಯ ದ್ರೋಣರು ಕಠಿಣವಾಗಿದ್ದರು. ಹಿಂದಿನ ದಿನ ಹೇಳಿಕೊಟ್ಟ ಪಾಠವನ್ನು ಕಲಿತು ಒಪ್ಪಿಸಿದ ನಂತರವೇ ಹೊಸ ಪಾಠ ಆರಂಭಿಸುವುದು ಅವರ ಪಠ್ಯಕ್ರಮವಾಗಿತ್ತು. ಅದೊಂದು ಬೆಳಗ್ಗೆ, ಎಲ್ಲ ರಾಜಕುಮಾರರೂ ಪಾಠಶಾಲೆಗೆ ಬಂದರು. ಮೊದಲು ದ್ರೋಣರಿಗೆ ವಂದಿಸಿ, ನಂತರ ತಮ್ಮ ತಮ್ಮ ಸ್ಥಳಗಳಲ್ಲಿ ಆಸೀನರಾದರು. ದ್ರೋಣರು ಎಲ್ಲರನ್ನೂ ಉದ್ದೇಶಿಸಿ, ನಿನ್ನೆ ಹೇಳಿಕೊಟ್ಟ ಪಾಠವನ್ನು ಎಲ್ಲರೂ ಕಲಿತು ಬಂದಿದ್ದೀರಿ ತಾನೆ? ಎಂದು ಕೇಳಿದರು. “ಕಲಿತಿದ್ದೇವೆ ಆಚಾರ್ಯ’ -ಎಂಬ ಉತ್ತರ ಬಂತು. ದ್ರೋಣರು ನೆಮ್ಮದಿಯ ಭಾವದೊಂದಿಗೆ ಹೊಸಪಾಠ ಆರಂಭಿಸಬೇಕು. ಅಷ್ಟರಲ್ಲಿಯೇ ಧರ್ಮರಾಯ ಎದ್ದು ನಿಂತು ಮೆಲುದನಿಯಲ್ಲಿ ಆಚಾರ್ಯರೆ… ಎಂದ.
“ಯುಧಿಷ್ಠಿರಾ, ಏನು ನಿನ್ನ ಅನುಮಾನ?’ ದ್ರೋಣರು ಕೇಳಿದರು.
“ಆಚಾರ್ಯರೆ, ನಾನು ಇಡೀ ದಿನ ಪ್ರಯತ್ನ ಪಟ್ಟೆ. ಆದರೆ ನೀವು ಹೇಳಿಕೊಟ್ಟ ಪಾಠ ಕಲಿಯಲು ಸಾಧ್ಯವಾಗಲಿಲ್ಲ…’ ಧರ್ಮರಾಯನ ಈ ಮಾತಿಂದ ದ್ರೋಣರಿಗೆ ಅಚ್ಚರಿಯಾಯಿತು. ಬೆರಗಿನಿಂದಲೇ, ಹೌದಾ? ಉಳಿದವರೆಲ್ಲರೂಕಲಿತಿರುವಾಗ ನಿನಗೆ ಮಾತ್ರ ಅಷ್ಟೊಂದು ಕಷ್ಟ ಅನ್ನಿಸಿದ ಆ ಪಾಠವಾದರೂ ಏನು ಯುಧಿಷ್ಠಿರ? ಎಂದರು. “ಸದಾ ಪ್ರಾಮಾಣಿಕನಾಗಿರು’ ಎಂಬುದೇ ಆ ಪಾಠ, ಎಂದ ಯುಧಿಷ್ಠರ. ಆಗ ದ್ರೋಣರು, ಸುದೀರ್ಘ ನಿಟ್ಟುಸಿರಿನೊಂದಿಗೆ ಹೇಳಿದರು. ಹೌದು, ಪ್ರಾಮಾಣಿಕನಾಗಿರುವುದು ಕಷ್ಟ. ಪ್ರಾಮಾಣಿಕನಾಗಿ ಬಾಳುವುದು ಬಹಳ ಕಷ್ಟ….’
**
ಈಗ ಇದ್ದಕ್ಕಿದ್ದಂತೆಯೇ ಮಹಾಭಾರತವನ್ನು, ಧರ್ಮರಾಯನನ್ನು ನೆನಪು ಮಾಡಿಕೊಳ್ಳುವುದಕ್ಕೆ ಕಾರಣನಾಗಿರುವವನು ವೈಭವ ಪಟೇಲ್ ಎಂಬ ಯುವಕ. ಈತ ಮುಂಬಯಿಯವನು. ಎಂಜಿನಿಯರಿಂಗ್ ಪದವೀಧರ. 26 ವರ್ಷದ ಈ ಪಟೇಲನ ಮಾತೇ ಈಗ ಚರ್ಚೆಗೆ ವಸ್ತುವಾಗಿದೆ. ಸಮಸ್ಯೆಯಾಗಿಯೂ ಕಾಡತೊಡಗಿದೆ.
ಏನಾಗಿದೆಯೆಂದರೆ, ಎಂಜಿನಿಯರಿಂಗ್‌ನ ಮೊದಲ ವರ್ಷದಲ್ಲಿ, ಅಂದರೆ 2011ರಲ್ಲಿ ಈ ಪಟೇಲ ಪರೀಕ್ಷೆಯಲ್ಲಿ ಚೆನ್ನಾಗಿ ಬರೆದಿರಲಿಲ್ಲವಂತೆ. ಫೇಲ್ ಆಗಿಬಿಡ್ತೇನೆ ಅನ್ನಿಸಿದಾಗ, ಯೂನಿವರ್ಸಿಟಿಯ ಮುಖ್ಯ ಅಧಿಕಾರಿಯೊಬ್ಬರಿಗೆ 20 ಸಾವಿರ ಲಂಚ ಕೊಟ್ಟು, ನನ್ನ ಮಾರ್ಕ್ಸ್ ಕಾರ್ಡ್ ತಿದ್ದಿ ಜಾಸ್ತಿ ಅಂಕಗಳು ಸಿಗುವಂತೆ ಮಾಡಿ ಎಂದು ವಿನಂತಿಸಿದನಂತೆ. ಕಾಸು ಕೈ ಸೇರಿದ ಮೇಲೆ ಮಾತಿಗೆ ತಪ್ಪುವುದುಂಟೆ? ಆ ಅಧಿಕಾರಿ ಹಾಗೆಯೇ ಮಾಡಿದ್ದಾನೆ. ಮುಂದಿನ ವರ್ಷಗಳಲ್ಲಿ ವೈಭವ್ ಪಟೇಲನ ಡಿಗ್ರಿ ಮುಗಿದಿದೆ.
ಈಗ, ಡಿಗ್ರಿ ಮಾರ್ಕ್ಸ್ ಕಾರ್ಡ್‌ಗಳನ್ನು ನೋಡಿದರೆ ಸಾಕು. ನಾನು ಅಡ್ಡದಾರಿ ಹಿಡಿದು ಪಾಸಾದವನು ಎಂಬ ಕೀಳರಿಮೆ ವೈಭವ್ ಪಟೇಲನನ್ನು ಕಾಡುತ್ತಿದೆಯಂತೆ. ಈ ಮಾನಸಿಕ ಹಿಂಸೆಯಿಂದ ಪಾರಾಗಬೇಕು ಎಂದುಕೊಂಡ ಆತ, ತನ್ನ ಮನದ ತಳಮಳವನ್ನೆಲ್ಲ ಯೂನಿವರ್ಸಿಟಿಯ ಕುಲಪತಿಗಳ ಎದುರೇ ಹೇಳಿಕೊಂಡಿದ್ದಾನೆ. ನನ್ನ ಡಿಗ್ರಿ ಸರ್ಟಿಫಿಕೇಟ್‌ನ ವಾಪಸ್ ತಗೊಳ್ಳಿ ಎಂದೂ ಕೋರಿದ್ದಾನೆ. ಹಾಗೆಲ್ಲಾ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಕುಲಪತಿಗಳು ಹೇಳಿದರೆ, ಸೀದಾ ಹೈಕೋರ್ಟ್‌ಗೆ ಅರ್ಜಿ ಹಾಕಿ, ಮೈ ಲಾರ್ಡ್, ನನ್ನ ಮನವಿ… ಕೇಳಿ, ಕೇಳಿ, ಕೇಳೀ… ಎಂದು ಮನವಿ ಮಾಡಿಕೊಂಡಿದ್ದಾನೆ. ಅವನ ಪ್ರಾಮಾಣಿಕತೆಯನ್ನು ಮೆಚ್ಚಿಕೊಂಡಿರುವ ಹೈಕೋರ್ಟ್, ಅಂಕಪಟ್ಟಿಯನ್ನು ವಾಪಸ್ ಪಡೆಯುವ ಅಥವಾ ಪಡೆಯದಿರುವ ವಿಷಯವಾಗಿ ಕುಲಪತಿಗಳ ತೀರ್ಮಾನವೇ ಅಂತಿಮ ಎಂದು ಪಟೇಲನ ಅರ್ಜಿಯನ್ನು ವಜಾ ಮಾಡಿದೆ.
***
ಹೌದು, ನಮ್ಮೊಳಗೂ ಒಬ್ಬ ಧರ್ಮರಾಯನಿದ್ದಾನೆ. ವೈಭವ್ ಪಟೇಲನೂ ಇದ್ದಾನೆ. ನ್ಯಾಯವೇ ದೇವರು, ಸತ್ಯವೇ ದೇವರು ಎಂಬ ಮಾತನ್ನು ನಾವೆಲ್ಲಾ ಓದಿದ್ದೇವೆ, ಕೇಳಿದ್ದೇವೆ ಎಂಬುದು ನಿಜ. ಆದರೆ ಅದನ್ನು ಪಾಲಿಸಬೇಕೆಂಬ ಸಂದರ್ಭ ಬಂದಾಗ ತುಂಬ ಸಹಜ ಅನ್ನುವಂತೆ ಹಿಂದೇಟು ಹಾಕುತ್ತೇವೆ. ಗುರಿ ಸಾಧಿಸಿದರೆ ಸಾಕು : ಹಿಡಿದ ಕೆಲಸದಲ್ಲಿ ಯಶಸ್ಸು ಕಂಡರೆ ಸಾಕು ಎಂಬ ಅವಸರದಲ್ಲಿ ಅಡ್ಡದಾರಿ ಹಿಡಿದಿರುತ್ತೇವೆ. ಹಾಗಾಗಿ, ನಮ್ಮಲ್ಲಿ ಹೆಚ್ಚಿನವರ ಮಾರ್ಕ್ಸ್ ಕಾರ್ಡುಗಳ ಹಿಂದೆ, ನೌಕರಿ ಪಡೆದಿರುವುದರ ಹಿಂದೆ, ನಾವು ಯಾವುದೋ ಅವಸರದಲ್ಲಿ ಸಣ್ಣದೊಂದು “ತಪ್ಪು’ ಮಾಡಿರುವುದು ಮನಸ್ಸಿನ ಆಳದಲ್ಲೆಲ್ಲೋ ರೆಕಾರ್ಡ್ ಆಗಿರುತ್ತದೆ. ಅದು ಆಗೊಮ್ಮೆ ಈಗೊಮ್ಮೆ ನಮ್ಮ ಅಂತರಾತ್ಮವನ್ನು ಚುಚ್ಚಿ ಎಚ್ಚರಿಸುತ್ತಲೇ ಇರುತ್ತದೆ. ಅಂಥ ಸಂದರ್ಭದಲ್ಲೆಲ್ಲ ನಾವು ಮೌನದ ಮೊರೆ ಹೋಗುತ್ತೇವೆ. ನಮ್ಮೊಳಗಿನ ಯುಧಿಷ್ಠರನ ಮಾತು ನಮಗೆ ಕೇಳಿಸದಂತೆ ಮಾಡಿಬಿಡುತ್ತೇವೆ.
ಉಹುಂ, ಹಾಗಾಗಬಾರದು. ಒಂದು ಅಂಕಪಟ್ಟಿಯನ್ನು, ನೇಮಕಾತಿಯ ಆದೇಶವನ್ನು, ಮನೆ ಖರೀದಿ ಪತ್ರವನ್ನು, ಒಂದು ಪ್ರಶಸ್ತಿಯನ್ನು, ಸಾವಿರ ಮಂದಿಯ ಮುಂದೆ ಧೈರ್ಯದಿಂದ, ಹೆಮ್ಮೆಯಿಂದ ಹಿಡಿದು ನಿಲ್ಲುವ ಛಾತಿ ನಮ್ಮದಾಗಬೇಕು. ಅಂಥದೊಂದು ಬದಲಾವಣೆ ಎಲ್ಲೆಡೆಯೂ ಕಾಣಲಿ. ನಮ್ಮೊಳಗಿನ ಯುಧಿಷ್ಠರ ನಿರ್ಭಿಡೆಯಿಂದ ಮಾತಾಡಲಿ…
– ಗೀತಾಂಜಲಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ ಸಂಪುಟ
laws: ಕಠಿಣ ಕಾಯ್ದೆ ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.