ಹೇಳು ಎಲ್ಲಿರುವೆ, ಮನ ಕಾಡಿದ ರೂಪಸಿಯೆ…
Team Udayavani, Sep 12, 2017, 7:15 AM IST
ಅದೊಂದು ದಿನ ಕಾಲೇಜಿನಿಂದ ಮನೆಯ ಕಡೆ ಹೊರಟಿ¨ªೆ. ತಿರುವುಮುರುವಿನ ಆ ದಾರಿಯಲ್ಲಿ ಒಬ್ಬ ಹುಡುಗಿ ಕಾಲೇಜಿನ ಕಡೆ ಹೊರಟಿದ್ದಳು. ನೋಡಿದ ತಕ್ಷಣವೇ ಅವಳಲ್ಲಿ ಅದೇನೋ ಆಕರ್ಷಣೆ ಕಂಡೆ. ಅವಳ ಸೌಂದರ್ಯವನ್ನು ಹೊಗಳಲು ನಿಘಂಟಿನ ಪದಗಳು ಸಾಲದು. ಕೋಲಿ¾ಂಚಿನಂಥ ಬೆಳಕನ್ನು ಹೊತ್ತೇ ಅವಳು ನಡೆಯುತ್ತಿರುವಂತೆ ಕಾಣಿಸುತ್ತಿತ್ತು. ಅವಳು ನನ್ನೆದುರಿಗೆ ನಡೆದು ಹೋಗುವಾಗ ನನ್ನ ಕಣ್ಣಿನ ರೆಪ್ಪೆಗಳು ಬಡಿಯಲು ಮನಸು ಮಾಡದೇ ಅವಳನ್ನೇ ನೋಡಲು ಬಯಸಿದಾಗ ಅದೇನೋ ರೋಮಾಂಚನ. ಅವಳು ನನ್ನ ಕಡೆ ಒಂದು ಬಾರಿಯೂ ನೋಡದೆ ತನ್ನ ಪಾಡಿಗೆ ತಾನು ಹೊರಟು ಹೋದಳು. ಅವಳ ಗುಂಗಿನಲ್ಲಿಯೇ ಮನೆ ತಲುಪಿದೆ. ಈ ದಿನ ಎಂದಿನಂತೆ ಸಾಮಾನ್ಯ ದಿನವೆನಿಸಲಿಲ್ಲ.
ಮರುದಿನ ಬೇಗ ಎದ್ದು ತುಂಬಾ ಲವಲವಿಕೆಯಿಂದ ಕಾಲೇಜಿಗೆ ಹೋಗಲು ಸಿದ್ಧನಾದೆ. ಅದೇನೋ ಹುಮ್ಮಸ್ಸು , ಹೊಸ ನಿರೀಕ್ಷೆಯಿಂದ ಕಾಲೇಜಿನ ಹಾದಿ ಹಿಡಿದೆ. ನಿನ್ನೆ ನೋಡಿದ ಆ ಹುಡುಗಿಯ ನೆನಪು ಸರ್ರನೆ ಕಣ್ಣ ಮುಂದೆ ಹಾದುಹೋಯಿತು. ಅವಳನ್ನು ಮತ್ತೆ ನೋಡಬೇಕೆನ್ನುವ ಬಯಕೆಯಿಂದ ಆ ರಸ್ತೆ ಬಿಟ್ಟು ಕದಲಲು ಮನಸ್ಸೇ ಆಗಲಿಲ್ಲ. ಕಾಲೇಜಿಗೆ ತಡವಾಗುತ್ತದೆ ಎನ್ನುವ ಪರಿವೆಯೇ ಇಲ್ಲದೆ ನನ್ನ ಕಾಲುಗಳು ಮುಂದೆ ಹೆಜ್ಜೆ ಇರಿಸದೆ ನಿಂತುಬಿಟ್ಟವು. ಕೆಲ ಸಮಯದ ಬಳಿಕ ನನ್ನ ನಿರೀಕ್ಷೆಯಂತೆ ಆ ಮುದ್ದು ಮೊಗದ ಹುಡುಗಿಯ ಆಗಮನವಾಯಿತು. ಅವಳ ಒಂದೊಂದು ಹೆಜ್ಜೆಯೂ ನನಗೆ ನೂರೊಂದು ನಮೂನೆಯ ಖುಷಿ ನೀಡಿತು. ಇಂದು ನಿನ್ನೆಗಿಂತ ತುಂಬಾ ವಿಭಿನ್ನವಾಗಿತ್ತು. ಏಕೆಂದರೆ ಅವಳ ನೋಟ ನನ್ನ ಮೇಲೆ ಬಿತ್ತು. ಕಿವಿಯಲ್ಲಿ ಹಾಕಿರುವ ಮೊಬೈಲಿನ ಕರ್ಣವಾಣಿಯನ್ನು ಸರಿಪಡಿಸಿಕೊಳ್ಳುವಂತೆ ನಟಿಸಿ ನನ್ನ ಕಣ್ಣಿನಲ್ಲಿ ತನ್ನ ನೋಟ ಸೇರಿಸಿದಾಗ ಸ್ವರ್ಗವೇ ಧರೆಗಿಳಿದ ಅನುಭವ. ಆ ಖುಷಿಯಲ್ಲಿ ನಾನು ಗಾಳಿಯಲ್ಲಿ ತೇಲಿ ಹೋದೆ. ಕೇವಲ ನೋಟದಲ್ಲೇ ಇಷ್ಟು ರೋಮಾಂಚನವಾಗುತ್ತದೆ ಎಂದು ನಾನು ಊಹೆ ಕೂಡ ಮಾಡಿರಲಿಲ್ಲ. ದಿನವೂ ಅದೇ ನೋಟ, ಕಣ್ಣು ಕಣ್ಣುಗಳ ಸಂಭಾಷಣೆಯಲ್ಲಿಯೇ ಒಂದು ವಾರ ಕಳೆಯಿತು. ಆದರೂ ಅವಳು ಯಾರು? ಅವಳ ಹೆಸರೇನು? ಅಂತ ಗೊತ್ತಾಗಲಿಲ್ಲ.
ಅನುದಿನವೂ ಕಣ್ಣಂಚಿನಲ್ಲಿಯೇ ಪ್ರೇಮಸಿಂಚನ ಸಿಂಪಡಿಸಿ ಪುಳಕ ನೀಡುತ್ತಿದ್ದ ಆ ಹುಡುಗಿ, ಕೆಲದಿನಗಳ ನಂತರ ಕಾಣಿಸಲಿಲ್ಲ. ದಿನವೂ ಅವಳಿಗಾಗಿ ಕಾಯುವುದು ಸಾಮಾನ್ಯವಾಯಿತು. ಅವಳ ದರ್ಶನಕ್ಕೆ ಹಪತಪಿಸಿ ಮನಸ್ಸು ನೋವಿನ ಕಡೆ ಜಾರಿತು. ನೋಟದಲ್ಲಿಯೇ ಪರಿಚಯವಾಗಿದ್ದ ಅವಳು ನನ್ನ ದಿನಚರಿಯನ್ನೇ ಬದಲಿಸಿದ್ದಳು. ಅವಳು ನಗುವಿನ ಬಾಣವನ್ನು ನನ್ನೆದೆಗೆ ಹೂಡಿ ಕಚಗುಳಿ ಇಟ್ಟ ಪ್ರಸಂಗವನ್ನು ಮರೆಯಲಾಗದೆ ಅವಳ ಆಗಮನದ ನಿರೀಕ್ಷೆಯಲ್ಲೇ ಕಾಯುತ್ತಿದ್ದೇನೆ.
– ಬಿ.ಎಲ್. ಶಿವರಾಜ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.