ಎಲ್ಲೈತಕ್ಕಾ ನಿಮ್ಮ ಗಾಡಿ?
Team Udayavani, Jan 9, 2018, 12:02 PM IST
ತಂಗಿ ಚಿತ್ರಾ ಬೆಂಗಳೂರಿನಿಂದ ಫೋನು ಮಾಡಿ, “ಅಕ್ಕಾ, ಈ ಸಲ ಎಲ್ಲಿಗೂ ಕರಕೊಂಡು ಹೋಗಿಲ್ಲ, ಬರೀ ಮದುವೆಗಳಿಗೆ ಹೋಗಿ ಬಂದಿದ್ದೇ ಆಯ್ತು ಅಂತ ಯಜಮಾನ್ರ ಬಳಿ ಗಲಾಟೆ ಮಾಡಿದ್ದೆ. ಅದಕ್ಕೆ ಮೇಲುಕೋಟೆಗೆ ಹೋಗೋಣ ಅಂದಿದ್ದಾರೆ. “ನಾಳೆ ಬೇಗ ಹೊರಡ್ತೀವಿ. ನೀನೂ ಬಾ’ ಎಂದಳು. ನಾನು ಹೂಂ ಅಂದೆ. ಬೆಂಗಳೂರಿನಿಂದ ಮೇಲುಕೋಟೆಗೆ ನಾಲ್ಕು ತಾಸಿನ ಪ್ರಯಾಣ. ಮೈಸೂರು ರೋಡಿನ ಟ್ರಾಫಿಕ್ ಅನ್ನು ಬೇಧಿಸುತ್ತಾ, ಡ್ರೆ„ವಿಂಗ್‌ಗಿಂತಾ ಜಾಸ್ತಿ ಹಾರ್ನ್ ಮಾಡಿದ್ದೇ ಆಯ್ತು. ಅಂತೂ ಮೇಲುಕೋಟೆ ಚೆಲುವನಾರಾಯಣನ ದರ್ಶನ ಮಾಡಿ, ಸಂಜೆಯ ತನಕ ಅಲ್ಲಿ ಕಾಲ ಕಳೆದು ಬೆಂಗಳೂರಿಗೆ ವಾಪಸ್ ಹೊರಟೆವು. ಬೆಳಗ್ಗಿನಿಂದ ಬಿಸಿಲಿಗೆ ಬೆಂದಿದ್ದ ನಮಗೆ ಸಂಜೆಯ ಮೋಡ ಕವಿದ ತಂಪಾದ ವಾತಾವರಣ ಆಹ್ಲಾದ ನೀಡಿತು. ಒಂದು ಗಂಟೆ ಪ್ರಯಾಣದ ನಂತರ ಸಣ್ಣಗೆ ಹನಿಯಲು ಶುರು ಮಾಡಿತು. ಹಸಿವು ಎಂದು ಮಕ್ಕಳು ರಾಗ ಎಳೆದಾಗ, ಒಂದು ಹೋಟೆಲ್‌ನ ಮುಂದೆ ಕಾರು ನಿಲ್ಲಿಸಿದೆವು.
ಹೋಟೆಲ್‌ನಲ್ಲಿ ತಿಂಡಿ ತಿನ್ನುತ್ತಿದ್ದಾಗ ಮಳೆಯ ಆರ್ಭಟ ಜೋರಾಯಿತು. ಮಳೆ ಸುಮಾರು ಒಂದೂವರೆ ತಾಸು ಸತತವಾಗಿ ಸುರಿಯಿತು. ನಾವು ಹೋಟೆಲ್‌ನಲ್ಲೇ ಬಂಧಿಯಾಗಿದ್ದೆವು. ಆಗಲೇ ಮಬ್ಬುಗತ್ತಲು ಕವಿದಿತ್ತು. ಇನ್ನೇನು ಹೊರಡಬೇಕೆನ್ನುವಾಗ ಯಾರೋ ಆಸಾಮಿ, “ಈ ದಾರಿಯಲ್ಲಿ ಮರ ಬಿದ್ದು ದಾರಿ ಕಟ್ ಆಗಿದೆ. ಪಕ್ಕದಲ್ಲಿ ಮತ್ತೂಂದು ಮಣ್ಣಿನ ದಾರಿ ಇದೆ. ಆ ಕಡೆ ಹೋಗಿ, ಬೇಗ ಬೆಂಗಳೂರು ತಲುಪುತ್ತೀರಿ’ ಎಂದಿದ್ದಕ್ಕೆ ಪಕ್ಕದ ದಾರಿಯಲ್ಲಿ ಹೊರಟೆವು. ಸ್ವಲ್ಪ ದೂರಕ್ಕೆ ಅಲ್ಲಿ ಮತ್ತೆ ದಾರಿ ಕವಲು. ಯಾವ ಕಡೆ ಹೋಗಬೇಕೆಂದು ತಿಳಿಯಲಿಲ್ಲ. ಯಾರನ್ನಾದರೂ ಕೇಳ್ಳೋಣವೆಂದರೆ ಒಂದು ನರಪಿಳ್ಳೆಯೂ ಪತ್ತೆಯಿಲ್ಲ. ಬೀದಿ ದೀಪಗಳ ಬೆಳಕಿಲ್ಲದೆ, ಹಾಗೇ ಮುಂದೆ ಸಾಗಿದೆವು. ಒಂದು ಕಡೆ ಕೆಸರಿನ ಮಡುವಲ್ಲಿ ನಮ್ಮ ಕಾರು ಸಿಕ್ಕಿಹಾಕಿಕೊಂಡಿತು. ಎಷ್ಟೇ ಪ್ರಯತ್ನ ಮಾಡಿದರೂ ಕೆಸರಿನಿಂದ ಕಾರು ಮೇಲೇಳಲಿಲ್ಲ. ಕತ್ತಲ ರಾತ್ರಿಗೆ ಮಕ್ಕಳು ಹೆದರಿಬಿಟ್ಟವು, ನಮಗೆ ಹೆದರಿಕೆಯಾದರೂ ತೋರಿಸಿಕೊಳ್ಳುವಂತಿರಲಿಲ್ಲ. ನಾನೇ ಟಾರ್ಚ್ ಹಿಡಿದು ಧೈರ್ಯದಿಂದ ಸ್ವಲ್ಪ ಮುಂದೆ ನಡೆಯುತ್ತಾ ಹೋದೆ. ಮುಖ್ಯ ರಸ್ತೆ ಕಾಣಿಸಿ ಉಸಿರಾಡುವಂತಾಯಿತು. ಯಾರಾದರೂ ಕಣ್ಣಿಗೆ ಬೀಳುವವರೇನೋ ಎಂದು ಕಾದೆ. ಸ್ವಲ್ಪ ಹೊತ್ತಿಗೆ ಒಬ್ಬ ತರುಣ ಸೈಕಲ್ ಹೊಡೆಯುತ್ತಾ ಬಂದ. ತಕ್ಷಣ “ಏಯ್ ತಮ್ಮಾ’ ಎಂದು ಕೂಗಿ ಕರೆದೆ. ಅವನಿಗೆ ನಮ್ಮ ಪರಿಸ್ಥಿತಿ ವಿವರಿಸಿದೆ. ಅವನು ತಡಮಾಡದೆ ಯಾರಿಗೋ ಫೋನ್ ಮಾಡಿ ಟ್ರ್ಯಾಕ್ಟರ್ ಹಾಗೂ ಹಗ್ಗ ತರಲು ಹೇಳಿದ. ಅರ್ಧ ಗಂಟೆಯಲ್ಲಿ ಎಲ್ಲಿಂದಲೋ ಟ್ರ್ಯಾಕ್ಟರ್ ಬಂತು, ಅದರಲ್ಲಿ ನಾಲ್ಕು ತರುಣರು ಕುಳಿತಿದ್ದರು. ಅವರನ್ನು ನೋಡಿ ಎದೆ ಝಲ್ ಎಂದಿತು. ಮನಸ್ಸಿನಲ್ಲಿ ಕೆಟ್ಟ ಯೋಚನೆಗಳು ಮೂಡಿದವು. ಅಲ್ಲಿ ಇಲ್ಲಿ ಕೇಳಿದ, ಓದಿದ ಕಹಿ ಘಟನೆಗಳು ಮನಸ್ಸಿಗೆ ಮುತ್ತಿಗೆ ಹಾಕತೊಡಗಿದವು.
ನನ್ನ ಭಯ ಸುಳ್ಳಾಗುವಂತೆ ಅವರು “ಎಲ್ಲೆ„ತಕ್ಕಾ ನಿಮ್ಮ ಗಾಡಿ?’ ಎಂದು ಗಾಡಿ ಹತ್ರ ಸರಸರನೆ ಹೋದರು. ಟ್ರ್ಯಾಕ್ಟರ್‌ಗೆ ಹಗ್ಗ ಕಟ್ಟಿ, ಮತ್ತೂಂದೆಡೆ ಅದನ್ನು ಕಾರಿಗೆ ಕಟ್ಟಿ ಜೋರಾಗಿ ಟ್ರ್ಯಾಕ್ಟರ್ ಸ್ಟಾರ್ಟ್ ಮಾಡಿದರು. ಸ್ವಲ್ಪ ಪ್ರಯತ್ನದ ಬಳಿಕ ಕಾರು ಕೆಸರಿನಿಂದ ಮೇಲಕ್ಕೇರಿ ರಸ್ತೆಗೆ ಬಂತು. ಅಬ್ಟಾ! ಎಂದು ನಿಟ್ಟುಸಿರುಬಿಟ್ಟೆವು. ಯುವಕರಿಗೆ ಧನ್ಯವಾದ ಹೇಳಿ ಐನೂರು ರೂಪಾಯಿ ಕೊಟ್ಟೆವು. ಅವರದನ್ನು ತೆಗೆದುಕೊಂಡು ನಮಗೆ ದಾರಿ ತೋರಿಸಿ ಹೊರಟು ಹೋದರು. ಬೆಂಗಳೂರು ತಲುಪಿದ ಮೇಲೆಯೇ ಹೋದ ಜೀವ ಮರಳಿ ಬಂದದ್ದು. ಕಗ್ಗತ್ತಲಿನಲ್ಲಿ ಸೈಕಲ್ ಹೊಡೆದುಕೊಂಡು ಬಂದ ಆ ಪುಣ್ಯಾತ್ಮನನ್ನು ಬಹುಶಃ ಆ ಚೆಲುವ ನಾರಾಯಣನೇ ಕಳಿಸಿರಬೇಕು!
ನಳಿನಿ. ಟಿ. ಭೀಮಪ್ಪ, ಧಾರವಾಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ
ಅರಾಟೆ ಸೇತುವೆ: ಅಪಘಾತ ವಲಯ! ಬೆಳಕಿಲ್ಲ, ಸಿಗ್ನಲ್ ಲೈಟ್ ಉರಿಯುತ್ತಿಲ್ಲ!
Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ
Gundlupete: ಹುರುಳಿ ಕಾವಲು ಕಾಯುತ್ತಿದ್ದ ರೈತನ ಮೇಲೆ ಆನೆ ದಾಳಿ; ಕೈ ಕುತ್ತಿಗೆಗೆ ಗಾಯ
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.