ಜಾತಿ ಏಕೆ ಭೂಮಿ ಮೇಲಿದೆ?
Team Udayavani, Sep 26, 2017, 11:49 AM IST
ನೀನು ನನಗಾಗಿ ಕಾಲೇಜಿಗೆ ತರುತ್ತಿದ್ದ ಮೊಸರನ್ನ, ನೀನು ಬರೆದು ಕೊಡುತ್ತಿದ್ದ ಅಸೈನ್‌ಮೆಂಟ್, ನನ್ನ ಎದೆಯನ್ನು ಗುದ್ದಿ ಮಾಡುತ್ತಿದ್ದ ಕುಚೇಷ್ಟೆ, ಸಾಂತ್ವನ, ಸಮುದ್ರದ ಮರಳಿನಲ್ಲಿ ಬರೆಯುತ್ತಿದ್ದ ನನ್ನ ಹೆಸರು, ಎಲ್ಲವೂ ನೆನಪು ಮಾತ್ರ. ಮನೆಯಿಂದ ಬರುವಾಗ ನೀನು ತರುತ್ತಿದ್ದ ತುಪ್ಪ, ಅಪ್ಪೆ ಮಿಡಿಯ ಉಪ್ಪಿನಕಾಯಿ, ಕೆಂಪು ಬಾಳೆ ಹಣ್ಣು ನನಗೆ ಮತ್ತೆ ಸಿಗಲಿಕ್ಕಿಲ್ಲ ಅಲ್ವಾ?
ಗೆಳತಿ,
ನನ್ನನ್ನು ಬಿಟ್ಟು ಹೋದ ಕಾಲ ಮರೆಯಾಗಿ ನೀ ಮತ್ತೆ ಬರಬಹುದೆಂಬ ಆಸೆ ಮೂಡುತ್ತಿದೆ. ನಿನ್ನ ಬರುವಿಕೆಗಾಗಿ ಕಾಯುತ್ತಿರುವ ಮನಸ್ಸು ಪದೇಪದೆ ಆಸೆಯ ಆಕಾಶಕ್ಕೆ ಕೈ ಚಾಚುತ್ತಲೇ ಇದೆ. ನೀನು ಹೋದ ಕ್ಷಣದಿಂದ, ನನ್ನ ಪ್ರತಿದಿನದ ಬದುಕು ನಿನ್ನ ನೆನಪುಗಳಿಂದ ಆರಂಭವಾಗಿ, ನಿನ್ನ ನೆನಪಿನೊಂದಿಗೇ ಮುಕ್ತಾಯವಾಗುತ್ತಿದೆ.
ಅಜ್ಜಿ ಮನೆಯಲ್ಲಿ ಇದ್ದು, ಕಾಲೇಜು ಕಲಿಯಲು ಮಲೆನಾಡಿನಿಂದ ಕರಾವಳಿಗೆ ಬಂದವಳು ನೀನು. ಮೊದಲ ದಿನ ಕಾಲೇಜಿಗೆ ಹೋಗುವಾಗ ಬಸ್ಸಿನಲ್ಲಿ ಪರಿಚಯವಾದ ನಮ್ಮಿಬ್ಬರ ಸ್ನೇಹ ಬಹಳ ಬೇಗ ಗಾಢವಾಯಿತು. ನಿನ್ನ ಮೌನದಲ್ಲಿ ಎದ್ದು ಕಾಣುವ ಆ ಮುಗ್ಧತೆ, ಗಾಳಿಯಲ್ಲಿ ಹಾರುವ ನಿನ್ನ ಆ ಕೂದಲುಗಳು, ನೀನು ಮಾತನಾಡುವ ಆ ಕನ್ನಡ, ನಿನ್ನ ನವಿಲಿನ ನಡಿಗೆ, ನನ್ನ ಮನಸ್ಸಿನಲ್ಲಿ ಪ್ರೀತಿಯ ಭಾವನೆ ಮೂಡಿಸಿತ್ತು. ಆದರೆ, ಅದನ್ನು ನಿನ್ನ ಬಳಿ ಹೇಳಿಕೊಳ್ಳಲಾಗದೆ ಚಡಪಡಿಸುತ್ತಿದ್ದೆ.
ನೀನು ನನಗಾಗಿ ಕಾಲೇಜಿಗೆ ತರುತ್ತಿದ್ದ ಮೊಸರನ್ನ , ನೀನು ಬರೆದು ಕೊಡುತ್ತಿದ್ದ ಅಸೈನ್‌ಮೆಂಟ…, ನನ್ನ ಎದೆಯನ್ನು ಗುದ್ದಿ ಮಾಡುತ್ತಿದ್ದ ಕುಚೇಷ್ಟೆ, ಬೇಸರದಲ್ಲಿನ ಸಾಂತ್ವನ, ಸಮುದ್ರದ ಮರಳಿನಲ್ಲಿ ಬರೆಯುತ್ತಿದ್ದ ನನ್ನ ಹೆಸರು, ಎಲ್ಲವೂ ನೆನಪು ಮಾತ್ರ.
ಬಸ್ಸಿನ ಮೇಲೆ ಮೀನು ಮಾರುವವಳು ಮೀನು ಬುಟ್ಟಿ ಹಾಕಿದರೆ, ನೀನು ಪಡುತ್ತಿದ್ದ ಸಂಕಟ ಈಗಲೂ ನನಗೆ ನಗು ತರಿಸುತ್ತದೆ.
ಸೆಮಿಸ್ಟರ್ ಪರೀಕ್ಷೆ ಮುಗಿಸಿ ನೀನು ಮನೆಗೆ ಹೋದಾಗ ಅನುಕ್ಷಣವೂ ನಿನ್ನ ಸಂದೇಶಕ್ಕಾಗಿ, ತಾಯಿಗಾಗಿ ಹಂಬಲಿಸುವ ಮಗುವಿನಂತೆ ಕಾದಿರುತ್ತಿದ್ದೆ. ಮನೆಯಿಂದ ಬರುವಾಗ ನೀನು ತರುತ್ತಿದ್ದ ತುಪ್ಪ, ಅಪ್ಪೆ ಮಿಡಿಯ ಉಪ್ಪಿನ ಕಾಯಿ, ಕೆಂಪು ಬಾಳೆ ಹಣ್ಣು ನನಗೆ ಮತ್ತೆ ಸಿಗಲಿಕ್ಕಿಲ್ಲ ಅಲ್ವಾ? ಇವೆಲ್ಲವೂ ನಿನ್ನೆ ಮೊನ್ನೆಯಷ್ಟೆ ಕಳೆದು ಹೋದಂತೆ ಕಾಡುತ್ತಿದೆ.
ಪದವಿಯ ಕೊನೆಯ ಪರೀಕ್ಷೆ ಮುಗಿಸಿ, “ನಾಳೆ ಊರಿಗೆ ಹೊರಡುವೆ’ ಎಂದಾಗ ಮನಸ್ಸಿಲ್ಲದ ಮನಸ್ಸಿನಲ್ಲಿ ನಿನ್ನನ್ನು ಬಸ್ ಹತ್ತಿಸಿದೆ. ಬಸ್ ಹೊರಡುವಾಗ ಕಿಟಕಿಯಲ್ಲಿ ನೀನು ಒಂದು ಪತ್ರ ಕೊಟ್ಟು ಟಾಟಾ ಮಾಡಿದಾಗ ನನ್ನ ಪಾಲಿಗೆ ಅಂದು ದೀಪಾವಳಿ. ಆದರೆ, ಅದು ಕ್ಷಣಿಕ, ಆ ಪತ್ರದಲ್ಲಿ “ನಮ್ಮಿಬ್ಬರದು ಬೇರೆ ಬೇರೆ ಜಾತಿ ಕಣೋ, ಸಾರಿ ಕಣೋ ನನ್ನನ್ನು ಕ್ಷಮಿಸು’ ಎಂಬ ಸಾಲುಗಳನ್ನು ಓದಿದಾಗ ಮನಸ್ಸೆಂಬ ಸಮುದ್ರಕ್ಕೆ ದೊಡ್ಡ ಅಲೆಯೊಂದು ಅಪ್ಪಳಿಸಿ ನನ್ನನ್ನು ಹಿಂಡಿ ಹಿಪ್ಪೆ ಮಾಡಿದವು.
ಅಂದು ರಾತ್ರಿ ಮನೆಗೆ ಬಂದಾಗ, ನನ್ನ ದುಃಖ, ನೋವು, ಸಂಕಟಗಳ ಆಳ ಎಷ್ಟು ಎನ್ನುವುದು ಗೊತ್ತಿದ್ದಿದ್ದು, ನಾ ಮಲಗುವ ಹಾಸಿಗೆಗೆ, ತಲೆ ದಿಂಬಿಗೆ ಮಾತ್ರ. ಬಾಡಿಹೋದ ಪ್ರೀತಿ ಬಳ್ಳಿಯ ಮುಳ್ಳೊಂದು ಮನಸ್ಸಿನಲ್ಲಿ ನಾಟಿ ಚುಚ್ಚುತ್ತಲಿದೆ. ಮುಳ್ಳಿನ ಮೇಲೆ ಅರಳಿದ ಹೂಗಳ ಸೌಂದರ್ಯ, ಆ ಸುವಾಸನೆ, ನೀನು ಉಳಿಸಿಹೋದ ನೆನಪುಗಳು, ಮನ ಕೆರಳಿಸುವ ಭಾವನೆಗಳು ಬದುಕಲು ಬಿಡಲಾರೆಯೆನ್ನುತ್ತಲಿವೆ.
ಇಷ್ಟೆಲ್ಲಾ ಸೆಳೆತಕ್ಕೆ ಕಾರಣವಾಗಿ ಈಗ ಹೇಗಾದರೂ ದೂರಾದೆ ಗೆಳತಿ? ಬಹುಶಃ ನೆನಪುಗಳೇ ಹೀಗೆ ಅನಿಸುತ್ತದೆ. ಬೇಡವೆಂದರೂ ಮತ್ತೆ ಮತ್ತೆ ಮರುಕಳಿಸುತ್ತವೆ. ಇನ್ನು ಮುಂದೆ ನನ್ನೊಂದಿಗೆ ಇರುವುದು ನನ್ನ ಏಕಾಂತ ಮತ್ತು ನಿನ್ನ ನೆನಪುಗಳು ಮಾತ್ರ.
ಮಿಸ್ ಯು ಗೆಳತಿ
ಹರೀಶ ಟಿ. ಗೌಡ, ಅಂಕೋಲಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.