ತಂಗಾಳಿಯಾಗಿ ಬಂದವಳು ಬಿರುಗಾಳಿಯಾಗಿ ಹೋದೆಯೇಕೆ?
Team Udayavani, May 23, 2017, 10:43 AM IST
ಹಾಯ್ ಮೈ ಡಿಯರ್ ಸ್ವೀಟ್ ಹಾರ್ಟ್…
ನಿನಗೆ ನಾನೀಗ ಬಿಲ್‌ಕುಲ್ಲಾಗಿ ಬೇಡವಾಗಿರೋನು. ಕಣ್ಮುಚ್ಚಿ ಕಣ್ಣಬಿಟ್ಟರೂ ನೀನೇ… ಕಣ್‌ಬಿಟ್ಟು ಕಣ್ ಮುಚ್ಚಿದರೂ ನೀನೇ… ನೆನಪಿನ ಬುತ್ತಿಯಲ್ಲಿ ಬರೀ ನಿನದೇ ನೆನಪು ಕಣೆ. ಸಂತಸ, ಸಂಭ್ರಮ, ಸಡಗರ ಎಲ್ಲವೂ ಒಟ್ಟೊಟ್ಟಿಗೆ ತುಂಬಿ ತುಳುಕಾಡುತ್ತಿದ್ದ ನನ್ನ ಹೃದಯದ ಕಪಾಟಿನಲ್ಲಿ ನೀ ನನ್ನ ತೊರೆದಾಗಿನಿಂದ ಉಳಿದಿರೋದು ಮೌನವೊಂದೇ. ನೀನಂದು ಹಚ್ಚಿದ ಹಣತೆಯೂ ಆರಿದೆ. ನೀನಂದು ಗಟ್ಟಿಯಾಗಿ ತಬ್ಬಿಕೊಂಡು ನೀಡಿದ ಸಿಹಿಮುತ್ತು ಇಂದೇತಕೋ ಕಹಿಯಾಗುತ್ತಿದೆ. ನೀನಂದು ನನ್ನ ಕೈ ಮೇಲೆ ಕೈ ಇಟ್ಟು ಮಾಡಿದ ಆಣೆ ಪ್ರಮಾಣಗಳು ನೆನೆಗುದಿಗೆ ಬಿದ್ದು ಉಪಯೋಗಕ್ಕೆ ಬಾರದಾಗಿವೆ.
ನನ್ನ ಪತ್ರವಾಗಿರೋ ಪ್ರೀತಿಗೆ ನೀನು ಮುನ್ನುಡಿಯೂ ಆಗಲಿಲ್ಲ… ಬೆನ್ನುಡಿಯೂ ಆಗಲಿಲ್ಲ… ಬದುಕು ಕಟ್ಟಿಕೊಳ್ಳುವ ಆತುರದಲ್ಲಿ ನೀನು ಎಲ್ಲವನ್ನೂ ಮರೆತುಹೋದೆ. ಕಡಲ ತೀರದಲ್ಲಿ ಕುಳಿತು ಅಲೆಗಳನ್ನು ಲೆಕ್ಕಿಸುವ ಖಾಯಂ ಕೆಲಸವನ್ನು ಕೇಳದೇ ಹೋದರೂ ಕೊಟ್ಟು ಹೋದೆ. ರಾತ್ರಿಯ ಬಾನಂಗಳದಲ್ಲಿ ಫಳಫಳನೆ ಹೊಳೆಯುವ ನಕ್ಷತ್ರಗಳ ತಿಳಿ ಬೆಳಕಿನಲ್ಲಿ ಕಣ್ಣೀರ ಹನಿ ಹರಿಸುವ ಭಾವುಕ ಲೋಕಕ್ಕೆ ದಬ್ಬಿ ಹೋದೆ. ಇಷ್ಟು ದಿನ ಜೊತೆಗಿದ್ದು ಈಗ ಕೊಂಚವೂ ಕನಿಕರ ತೋರದೇ ಕಗ್ಗತ್ತಲಲ್ಲಿ ನನ್ನನ್ನು ಒಂಟಿಯಾಗಿ ಬಿಟ್ಟು ದೂರ ಹೋದೆ.
ನನ್ನ ಬದುಕಿನಲ್ಲಿ ನೀನು ಸದ್ದಿಲ್ಲದೆ ಸರಿದು ಹೋಗಿರುವೆ. ಬರಿದಾಗಿದ್ದ ಬಾಳಲ್ಲಿ ತಂಗಾಳಿಯಂತೆ ಬಂದು ಬಿರುಗಾಳಿಯಾಗಿ ಹೋದೆ. ನೀನೇತಕೆ ನನ್ನನ್ನು ತೊರೆದು ದೂರ ಸರಿದೆ ಎನ್ನುವ ಘೋರ ಪ್ರಶ್ನೆಯೊಂದಕ್ಕೆ ಉತ್ತರವೆಂದಿಗೂ ಸಿಗಲಾರದೆಂದು ಈ ಹುಚ್ಚು ಮನಸ್ಸಿಗೆ ಈಗ ಮನವರಿಕೆಯಾಗಿದೆ. ನಿನ್ನನ್ನು ಪ್ರೀತಿಸುವ ಯೋಗ್ಯತೆಯೂ ನನಗಿಲ್ಲ. ನಿನ್ನೊಂದಿಗೆ ಪ್ರೀತಿ ಹಂಚಿಕೊಳ್ಳುವ ಪಾಲುದಾರಿಕೆಯನ್ನು ಕಳೆದುಕೊಂಡಿರುವೆ.
ಆದರೆ ನಿನ್ನನ್ನು ಕಣ್ತುಂಬ ನೋಡಿ…. ಮನಸ್ ತುಂಬ ತುಂಬಿಕೊಳ್ಳಬೇಕೆಂಬ ಬಯಕೆ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಎಲ್ಲೇ ಇರು…. ಹೇಗೇ ಇರು… ಎಂದೆಂದಿಗೂ ನಗುನಗುತ್ತಾ ನೂರು ಕಾಲ ಸುಖವಾಗಿರೆಂದು ತುಂಬು ಹೃದಯದಿಂದ ಹಾರೈಸುತ್ತೇನೆ. ನಿನಗೆ ನಾನು ಬೇಡವಾಗಿರೋನು… ಇನ್ನುಮುಂದೆ ಕನಸು ಮನಸಲ್ಲೂ ನನ್ನನ್ನು ನೆನಪಿಸಿಕೊಳ್ಳಬೇಡ.
ಇಂತಿ ನಿನ್ನ ಸುಖಾಭಿಲಾಷಿ
– ರಂಗನಾಥ ಎಸ್. ಗುಡಿಮನಿ, ಬಾಗಲಕೋಟ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಭಾರತಾಂಬೆಗೆ ಅವಮಾನ; ಕರ್ನಾಟಕ ವಿಶ್ವವಿದ್ಯಾಲಯದಿಂದ ಪಠ್ಯ ಹಿಂದಕ್ಕೆ
ಮೀಟರ್ ಬಡ್ಡಿ: ಯಾದಗಿರಿಯಲ್ಲಿ ಹಲ್ಲೆಗೊಳಗಾಗಿದ್ದ ಯುವಕ ಬಲಿ
BBK11: ಈ ಇಬ್ಬರ ಪೈಕಿ ಒಬ್ಬರು ಬಿಗ್ ಬಾಸ್ ಟ್ರೋಫಿ ಗೆಲ್ಲೋದು ಪಕ್ಕಾ?: ಹೇಗಿದೆ ಟ್ರೆಂಡ್
ಪೆರ್ಡೂರು ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ರಾಮಚಂದ್ರ ಐತಾಳ ವಿಧಿವಶ
ಮೈಕ್ರೋ ಫೈನಾನ್ಸ್ ಕಿರುಕುಳ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ: ಜಾರಕಿಹೊಳಿ