ಬಾರೋ ಸಾಧಕರ ಕೇರಿಗೆ : ಒಂದಕ್ಷರ ಒತ್ತೆಯಿಟ್ಟ ಕವಿ…
Team Udayavani, Aug 11, 2020, 4:46 PM IST
ಋಣಂ ಕೃತ್ವಾ ಘೃತಂ ಪಿಬೇತ್ – ಇದು ಚಾರ್ವಾಕಮತ. ಸಾಲ ಮಾಡಿಯಾದರೂ ತುಪ್ಪ ತಿನ್ನು ಎಂಬುದು ಉಪದೇಶಕ್ಕೇನೋ ಚೆನ್ನಾಗಿ ಕೇಳಿಸುತ್ತದಾದರೂ, ವ್ಯವಹಾರಕ್ಕೆ ಸೂಕ್ತವಲ್ಲ. ಕೆಲವೊಮ್ಮೆ ಅನಿವಾರ್ಯವಾಗಿ ಸಾಲ ಮಾಡಬೇಕಾದ ಸಂದರ್ಭಗಳು ಬರುತ್ತವೆ. ಕಷ್ಟ ಬಂದಾಗ ಅಪಾತ್ರರ ಮುಂದೆಯೂ ಹಿಡಿಜೀವ ಮಾಡಿಕೊಂಡು ಕೈಯೊಡ್ಡುವ ಅನಿವಾರ್ಯತೆ. ಸಾಲ ಕೊಂಬುದಕ್ಕಿಂತ ಕಡಿಮೆ ಅವಮಾನದ ಕೆಲಸವೆಂದರೆ, ಒತ್ತೆ ಇಡುವುದು. ಧರ್ಮರಾಯ ತನ್ನ ಖಜಾನೆ, ರಾಜಧಾನಿ, ರಾಜ್ಯ, ಪ್ರಜೆಗಳು, ತಮ್ಮಂದಿರು ಮತ್ತು ಕೊನೆಗೆ ಪತ್ನಿಯನ್ನೂ ಒತ್ತೆಯಿಟ್ಟು ಪಗಡೆಯಾಡಿದ್ದು ಪ್ರಸಿದ್ಧವಷ್ಟೆ? ಭಾರವಿ ಎಂಬ ಸಂಸ್ಕೃತ ಕವಿ, ದುಡ್ಡಿನ ಅವಶ್ಯಕತೆ ಬಿದ್ದಾಗ ಒಂದು ಪದ್ಯ ಬರೆದು, ಅದನ್ನು ಒತ್ತೆಯಿಟ್ಟು ಸಾಲ ಪಡೆದಿದ್ದನಂತೆ. ಹಾಗೆಯೇ, ತನ್ನ ಸ್ವಂತದ ಅಮೂಲ್ಯ ಸಂಗತಿಯೊಂದನ್ನು ಒತ್ತೆ ಇಟ್ಟು ಸಾವಿರ ಹೊನ್ನ ನಾಣ್ಯಗಳನ್ನು ಸಂಪಾದಿಸಿದವನು ಕವಿ ರುದ್ರಭಟ್ಟ. 9ನೆಯ ಶತಮಾನದಲ್ಲಿ ಕಾಶ್ಮೀರದಲ್ಲಿದ್ದ ಮತ್ತು ಕಾವ್ಯಾಲಂಕಾರ ಎಂಬ ಲಕ್ಷಣಗ್ರಂಥವನ್ನು ಬರೆದ ಭಾಷಾಶಾಸ್ತ್ರಿಯೊಬ್ಬ; 12ನೆಯ ಶತಮಾನದಲ್ಲಿ ಕರ್ನಾಟಕದಲ್ಲಿದ್ದ ಮತ್ತು ಜಗನ್ನಾಥ ವಿಜಯ ಕಾವ್ಯವನ್ನು ಬರೆದ ಕವಿಯೊಬ್ಬ – ಇಬ್ಬರ ಹೆಸರಲ್ಲೂ ಈ ಒತ್ತೆಯ ಕಥೆ ಪ್ರಚಲಿತದಲ್ಲಿರುವುದರಿಂದ, ನಿಖರವಾಗಿ ಯಾರ ಜೀವನದಲ್ಲಿ ನಡೆದ್ದರೆಂದು ಹೇಳುವುದು ಕಷ್ಟವೇ.
ನಡೆದದ್ದಿಷ್ಟು: ರುದ್ರಭಟ್ಟ ಮಹಾವಿದ್ವಾಂಸ. ರಾಜನ ಆಸ್ಥಾನದಲ್ಲಿದ್ದು ಕಾಲಕಾಲಕ್ಕೆ ತನ್ನ ಪಾಂಡಿತ್ಯಕ್ಕೆ ತಕ್ಕ ಮನ್ನಣೆಯನ್ನು ಧನ-ಕನಕಗಳ ರೂಪದಲ್ಲಿ ಸಂಪಾದಿಸಿದವನು. ಅಷ್ಟಿದ್ದರೂ ಅದೊಂದು ಸಂದರ್ಭದಲ್ಲಿ, ಕವಿಗೆ ಸಾವಿರ ಹೊನ್ನಿನ ಅವಶ್ಯಕತೆ ಬಿತ್ತು. ಒಬ್ಬ ಸಾಹುಕಾರನಲ್ಲಿಗೆ ಹೋದ. ಸಾಲ ಪಡೆಯಬೇಕಾದರೆ ಏನನ್ನಾದರೂ ಒತ್ತೆ ಇಡಬೇಕಲ್ಲ? ಕವಿಯ ಜೀವನ ಆ ಸಂದರ್ಭದಲ್ಲಿ ಅದೆಷ್ಟು ದುರ್ಭರವಾಗಿತ್ತೆಂದರೆ, ಅಡವಿಡಲು ಯಾವೊಂದು ಅಮೂಲ್ಯ ಸಂಗತಿಯೂ ಕೈಯಲ್ಲಿರಲಿಲ್ಲ. ಸರಿ, ತನ್ನಿಂದ ಕೊಡಬಹುದಾದದ್ದನ್ನಷ್ಟೇ ಕೊಡೋಣ ಎಂದುಕೊಂಡ ರುದ್ರಭಟ್ಟ, ತನ್ನ ಹೆಸರಿನ ಮೂರನೆಯ ಅಕ್ಷರವನ್ನು ಒತ್ತೆಯಿಟ್ಟ! ಅರ್ಥಾತ್ ಭ ಎಂಬ ಅಕ್ಷರವನ್ನು ಸಾಹುಕಾರನಲ್ಲಿ ಒತ್ತೆಯಿಟ್ಟು ದುಡ್ಡು ಪಡೆದ. ಆ ದುಡ್ಡನ್ನು ಮರಳಿಸುವವರೆಗೂ ತಾನು ಕಾವ್ಯದಲ್ಲಾಗಲೀ ವ್ಯವಹಾರದಲ್ಲಾಗಲೀ ತನ್ನ ಹೆಸರಲ್ಲಿ ಆ ಅಕ್ಷರವನ್ನು ಬಳಸುವುದಿಲ್ಲವೆಂಬ ವಾಗ್ಧಾನವನ್ನೂ ಕೊಟ್ಟ! ಸ್ವಂತ ನಾಮಧೇಯದ ಮೇಲಿನ ಮೋಹ ಯಾರಿಗಿಲ್ಲ? ಇಂದಲ್ಲ ನಾಳೆ, ಆದಷ್ಟು ಶೀಘ್ರದಲ್ಲಿ ಸಾಲ ಮರುಪಾವತಿಯಾಗೇ ಆಗುತ್ತದೆ ಎಂದು ಸಾಲ ಕೊಟ್ಟವನು ಭಾವಿಸಿರಬೇಕು! ಒತ್ತೆ ಸ್ವೀಕೃತವಾಯಿತು; ಸಾಹುಕಾರನಿಂದ ಸಾವಿರ ಹೊನ್ನಿನ ಗಂಟು ಸಿಕ್ಕಿತು. ಅದಾಗಿ ಯಾವಾಗರುದ್ರಭಟ್ಟ ಆ ದುಡ್ಡನ್ನು ಮರಳಿಸಿ ಹೆಸರಿನ ಸ್ವಾಮ್ಯವನ್ನು ವಾಪಸು ಪಡೆದ ಎಂಬುದಕ್ಕೆ ಮಾತ್ರ ದಾಖಲೆ ಇಲ್ಲ. ಆತ ನಿಜವಾಗಿ ದುಡ್ಡನ್ನು ಮರಳಿಸಿದನೋ ಅಥವಾ ತನ್ನ ಪರಿಷ್ಕೃತ ಹೆಸರಲ್ಲೇ ತೃಪ್ತಿಪಟ್ಟು, ಸಾಲ ತೀರಿಸುವುದನ್ನು ಮರೆತು ಜೀವನ ಕಳೆದನೋ ಎಂಬುದೂ ತಿಳಿದಿಲ್ಲ. ಯಾಕೆಂದರೆ, ಕಾವ್ಯಾಲಂಕಾರ ಮತ್ತು ಜಗನ್ನಾಥ ವಿಜಯ – ಈ ಎರಡೂ ಕಾವ್ಯಗಳನ್ನು ಬರೆದವರೂ ತಮ್ಮನ್ನು ರುದ್ರಟ ಎಂದೇ ಹೇಳಿಕೊಂಡಿದ್ದಾರೆ!
-ರೋಹಿತ್ ಚಕ್ರತೀರ್ಥ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Bhairathi Ranagal Review: ರೋಣಾಪುರದ ರಣಬೇಟೆಗಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.