ವರ್ಷವಾದ್ರೂ ಸರಿ, ನಾನು ಕಾಯುತ್ತೇನೆ…
Team Udayavani, Apr 23, 2019, 6:00 AM IST
ಮನೆಯವರ ಮಾತು ಧಿಕ್ಕರಿಸಿ ನಿನ್ನನ್ನು ಪ್ರೀತಿಸಿದ್ದೇನೆ. ಗಡಿ ಕಾಯುವ ಸೈನಿಕ ನೀನು. ಇಡೀ ದೇಶವನ್ನೇ ಕಾಯುವ ನೀನು, ನನ್ನನ್ನು ಜೋಪಾನ ಮಾಡಲಾರೆಯಾ? ಅದೇ ನಂಬಿಕೆಯಲ್ಲಿ ನನ್ನ ಹೃದಯವನ್ನು ನಿನಗಾಗಿ ಮೀಸಲಿಟ್ಟಿದ್ದೇನೆ.
ಅಪ್ಪನ ಮಾತುಗಳನ್ನು ನಾನು ಕಿವಿಗೇ ಹಾಕಿಕೊಳ್ಳುತ್ತಿಲ್ಲ. ಅಮ್ಮನ ವರ್ತನೆಯನ್ನಂತೂ ಸಹಿಸಲಾಗುತ್ತಿಲ್ಲ. ನಾನು ಪ್ರೀತಿಸಿರುವುದು ಒಬ್ಬ ಯೋಧನನ್ನು. ಸೈನಿಕರು ಮೋಸ ಮಾಡುವುದಿಲ್ಲ ಅಂತ ಅವರಿಗೆ ಮನವರಿಕೆ ಮಾಡಲಾಗದೆ ಸೋತು ಕುಳಿತಿದ್ದೇನೆ. “ದೇಶ ದೇಶ ಅಂತ ಗಡಿಯಲ್ಲಿ ನಿಂತರೆ, ನಿನ್ನನ್ನು ಯಾರು ನೋಡಿಕೊಳ್ತಾರೆ? ಅದೂ ಅಲ್ಲದೆ, ಅವನ ಜೀವಕ್ಕಾದರೂ ಎಲ್ಲಿದೆ ಗ್ಯಾರಂಟಿ?’ ಅಂತ ಅವರು ಕೇಳುವಾಗ, ಹೃದಯಕ್ಕೆ ಬರೆ ಎಳೆದಂತಾಗುತ್ತೆ.
“ಗಂಡಿನ ಕಡೆಯವರೇ ಬಂದು ಮಾತಾಡಲಿ. ಆಮೇಲೆ ನೋಡೋಣ’ ಅಂತ ನಮ್ಮ ಮನೆಯವರು, “ಶ್ರೀಮಂತ ಮನೆಯ ಹೆಣ್ಣನ್ನೇ ತಂದು ಮಗನಿಗೆ ಮದುವೆ ಮಾಡುತ್ತೇನೆ’ ಅಂತ ನಿಮ್ಮ ಅಮ್ಮ… ಇವರಿಬ್ಬರ ಪ್ರತಿಷ್ಠೆ, ನಮ್ಮ ಪ್ರೀತಿಯ ಉಸಿರುಗಟ್ಟಿಸುತ್ತಿದೆ.
ಕಳೆದ ಬಾರಿ ರಜೆ ಮೇಲೆ ಊರಿಗೆ ಬಂದ ನೀನು, ನಮ್ಮ ಮದುವೆಯ ವಿಷಯವನ್ಯಾಕೆ ಮನೆಯವರೊಡನೆ ಚರ್ಚಿಸಲಿಲ್ಲ? ನನ್ನನ್ನು ಮದುವೆಯಾಗಲು ನಿಂಗೆ ಮನಸ್ಸಿಲ್ಲವಾ? ನಿನ್ನ ದೇಶಸೇವೆಗೆ ನಾನು ಅಡ್ಡಿಯಾಗುತ್ತೇನೆಂಬ ಭಯವಾ? ಅಥವಾ ನಿಮ್ಮಮ್ಮನ ಮಾತಿಗೆ ತಲೆಯಾಡಿಸಿಬಿಟ್ಟೆಯಾ? ನನಗಂತೂ ಒಂದೂ ತಿಳಿಯುತ್ತಿಲ್ಲ. ಆಕಾಶವೇ ತಲೆ ಮೇಲೆ ಬಿದ್ದ ಹಾಗಿದೆ ಇಲ್ಲಿ ನನ್ನ ಪರಿಸ್ಥಿತಿ.
ನಿನ್ನೊಂದಿಗೆ ಮಾತನಾಡಿ ಎಲ್ಲ ಗೊಂದಲಗಳನ್ನು ಪರಿಹರಿಸಿಕೊಳ್ಳೋಣ ಅಂದ್ರೆ, ನೀನು ಫೋನಿಗೇ ಸಿಗುತ್ತಿಲ್ಲ. ನನಗಾದರೂ ಹೇಗೆ ನೆಮ್ಮದಿಯಿಂದ ಇರಲು ಸಾಧ್ಯ? ಅದಕ್ಕೋಸ್ಕರ ಈ ಪತ್ರ ಬರೆಯುತ್ತಿದ್ದೇನೆ.
ಕೇಳಿಲ್ಲಿ, ನಾನು ಬಯಸಿದ್ದು ನಿನ್ನ ಪ್ರೀತಿಯನ್ನು ಮಾತ್ರ. ನಿನ್ನ ಬಾಳಲ್ಲಿ, ನಿನ್ನ ನೆರಳಲ್ಲಿ ಬಾಳುವ ಆಸೆ ನಂದು. ಹಾಗಂತ ನಿನ್ನ ದೇಶ ಸೇವೆಗೆ ಅಡ್ಡಿ ಮಾಡಲಾರೆ. ನೀನು ಸೈನಿಕನೆಂದು ತಿಳಿದ ಮೇಲೆ ತಾನೇ, ನಾನು ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದು. ವೈರಿಗಳ ಎದೆ ಸೀಳುವ ಬಲಶಾಲಿ ನೀನೆಂದು ಗೊತ್ತು. ಎಲ್ಲ ಕಷ್ಟಗಳನ್ನು ಜಯಿಸಿ ನನ್ನ ಬಳಿ ಬರುವೆ ಎಂಬ ನಂಬಿಕೆ ನನಗಿದೆ. ಪ್ರತಿದಿನ, ಪ್ರತಿಕ್ಷಣ ನಿನ್ನ ಕಾಯುವಿಕೆಯಲ್ಲಿ ಸಮಯ ಕಳೆಯುತ್ತಿರುವೆ.
ನೀನು ಬರುವುದು ದಿನವಾಗಲಿ, ತಿಂಗಳಾಗಲಿ, ವರ್ಷವಾಗಲಿ ನಾನು ಕಾಯುತ್ತೇನೆ. ಈ ಮಾತನ್ನು ಮರೆಯಬೇಡ.
ಇಂತಿ ನಿನ್ನ
ಬಿ. ಪಾಟೀಲ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.