ನನ್ನ ಹೃದಯದಲ್ಲಿ ನೀನು ಸದಾ ಇರ್ತೀಯ…
Team Udayavani, Jun 18, 2019, 5:00 AM IST
ಒಂದು ಮಾತು ನಿನಗೆ ಗೊತ್ತಿರಲಿ ರಚ್ಚು; ಮದುವೆಯ ಆಸೆ ಕೈ ಬಿಟ್ಟಿದ್ದರೂ ನಿನ್ನ ಮೇಲಿರುವ ಪ್ರೀತಿ ಮಾತ್ರ ಯಾವತ್ತೂ ಕಡಿಮೆಯಾಗುವುದಿಲ್ಲ. ಈ ಹೊತ್ತಿಗೂ ಹೃದಯ ನೀನೇ ಬೇಕೆಂದು ಬಯಸುತ್ತಿದೆ.
ಹಾಯ್ ರಚ್ಚು ,
ಹೀಗೆ ಕರೆದರೆ ನಿನಗೆ ಇಷ್ಟವಾಗುವುದಿಲ್ಲ ಅಂತ ನಂಗೊತ್ತು. ನಿನ್ನ ಸ್ನೇಹಿತರೆಲ್ಲಾ ನಿನ್ನನ್ನು “ರಚ್ಚು’ ಅಂತಲೇ ಕರೆಯೋದಲ್ವಾ? ಆದರೆ, ನಾನು ಕರೆದಾಗ ಮಾತ್ರ ನೀನು ಬೇಸರ ಮಾಡಿಕೊಳ್ಳುವ ಕಾರಣವೇನಂತ ಗೊತ್ತಾಗ್ತಿಲ್ಲ…
ನಾನು ಚಿಕ್ಕಂದಿನಿಂದಲೂ ನಿನ್ನನ್ನು ಬಲ್ಲೆ. ಗದ್ದೆಯ ಬಯಲಿನಲ್ಲಿ ನೀನು ಸಣ್ಣ ಹುಡುಗರ ಜೊತೆ ಸೇರಿಕೊಂಡು ಕ್ರಿಕೆಟ್ ಆಡುತ್ತಿರುವಾಗ, ಥೇಟ್ ಹುಡುಗರ ಹಾಗೆಯೇ ಬೌಲಿಂಗ್, ಫೀಲ್ಡಿಂಗ್ ಮಾಡುವುದನ್ನು ಕಣ್ಣರಳಿಸಿ ನಿಂತು ನೋಡಿದ್ದು ನೆನಪಿದೆ. ಅದೇಕೋ ನಿನ್ನ ಆ ಸ್ವಭಾವ ಬಹಳ ಇಷ್ಟವಾಗಿಬಿಟ್ಟಿತ್ತು. ಅವತ್ತು ನಿನ್ಮೆàಲೆ ಪ್ರೀತಿ ಹುಟ್ಟದಿದ್ದರೂ, ನಿನ್ನ ಜೊತೆ ಸ್ನೇಹ ಮಾಡಬೇಕು ಅಂತ ಮನಸು ಬಯಸಿತ್ತು. ನೀನು ಬೌಂಡರಿ ಬಾರಿಸಿದ ಜೋಶ್‌ನಲ್ಲಿ ಬ್ಯಾಟ್ ಎತ್ತಿ ಬೌಲರ್‌ನ ಕಡೆ ಜಂಭದಿಂದ ನೋಡಿದ ರೀತಿ, ತಲೆ ಅಲ್ಲಾಡಿಸುತ್ತಾ ಮಾತಾಡುವಾಗ ನಿನ್ನ ಬಾಬ್ ಕೂದಲು ಆಚೀಚೆ ಹಾರಾಡುತ್ತಿದ್ದ ಪರಿ ಪದೇ ಪದೆ ಕಾಡುತ್ತಿತ್ತು.
ಮತ್ತೆ ನೀನು ಕಾಣಿಸಿದ್ದು ಊರ ಜಾತ್ರೆಯಲ್ಲಿ. ನೀನು ಅಮ್ಮನ ಜೊತೆಯಲ್ಲಿ ದೇವರಿಗೆ ಕೈ ಮುಗಿಯುವುದನ್ನು ನೋಡಿದ್ದೆ. ಅವತ್ತು ನೀನು ಪ್ಯಾಂಟ್ ಮೇಲೊಂದು ಚಂದನೆಯ ಚೌಕಗಳುಳ್ಳ ಕಪ್ಪು-ಬಿಳಿ ಬಣ್ಣದ ಅಂಗಿ ಧರಿಸಿದ್ದೆ. ನೀನು ಗಂಭೀರವಾಗಿ ಭಕ್ತಿಯಿಂದ ದೇವರಿಗೆ ಪ್ರದಕ್ಷಿಣೆ ಹಾಕುತ್ತಿದ್ದರೆ, ನಾನು ಅದು ದೇವಸ್ಥಾನವೆಂಬುದನ್ನೂ ಮರೆತು ನಿನ್ನನ್ನೇ ನೋಡುತ್ತಾ ನಿಂತುಬಿಟ್ಟಿದ್ದೆ. ಅದೇಕೋ ಗೊತ್ತಿಲ್ಲ, ನೀನು ಒಂಥರಾ ಇಷ್ಟ ಆಗತೊಡಗಿದ್ದೆ. ನಿನ್ನಲ್ಲಿ ಏನೋ ಸ್ಪೆಷಲ್ ಇದೆ ಅಂತನ್ನಿಸತೊಡಗಿತ್ತು.
ಅದಾಗಿ ತಿಂಗಳೆರಡು ಕಳೆದಿತ್ತು ಅಷ್ಟೆ. ಒಂದು ದಿನ ನೀನು ನಮ್ಮ ಆಫೀಸ್‌ನಲ್ಲಿ ಹಾಜರ್! ನೀನು ನನ್ನ ಆಫೀಸಿನಲ್ಲಿಯೇ ಕೆಲಸ ಗಿಟ್ಟಿಸಿಕೊಂಡಿದ್ದೆ. ಅದೂ ನನ್ನ ಜ್ಯೂನಿಯರ್ ಆಗಿ. ಅವತ್ತಿನ ಸಂತೋಷವನ್ನು ಹೇಗೆ ಹೇಳಲಿ ನಾನು? ನನಗೆ ಗೊತ್ತಿದ್ದನ್ನೆಲ್ಲ ನಿನಗೆ ಕಲಿಸತೊಡಗಿದೆ. ಕೆಲಸದಲ್ಲಿ ಸ್ವಲ್ಪ ಅಸಡ್ಡೆ ತೋರಿಸಿದರೂ ಸಹಿಸದ ನಾನು, ಆಗಾಗ ನಿನ್ನನ್ನು ಸಣ್ಣಗೆ ಗದರಿದ್ದಿದೆ. ಅದೊಂದು ದಿನ ಎಲ್ಲರೆದುರು ಜೋರಾಗಿಯೇ ನಿನ್ನನ್ನು ಬೈದಾಗ, ನಿನ್ನ ಕಣ್ಣಂಚಿನಲ್ಲಿ ನೀರಾಡಿದ್ದನ್ನು ನೋಡಿದೆ. ಅವತ್ತಿಡೀ ನನ್ನ ಕಡೆ ನೋಡಿಯೂ ನೋಡದಂತೆ ಇದ್ದುಬಿಟ್ಟೆಯಲ್ಲ, ಹೃದಯ ಚೂರಾಗಿತ್ತು. ಮರುದಿನ ಮತ್ತೆ ಎಂದಿನಂತೆ ನೀನು ಮಾತನಾಡಿದಾಗಲೇ ನನಗೆ ಸಮಾಧಾನ ಆಗಿದ್ದು.
ಆ ಘಟನೆ ನಮ್ಮಿಬ್ಬರನ್ನು ಮತ್ತಷ್ಟು ಹತ್ತಿರವಾಗಿಸಿತು. ನೀನು ನಮ್ಮ ಮನೆಗೂ ಬಂದು, ಅಮ್ಮನೊಂದಿಗೆ ಚಂದಗೆ ಮಾತನಾಡಿ ಹೋಗುತ್ತಿದ್ದೆ. ಆಗೆಲ್ಲಾ ನನಗೆ ಒಳಗೊಳಗೇ ತುಂಬಾ ಖುಷಿ ಎನಿಸುತ್ತಿತ್ತು. ಅರಿವಿಲ್ಲದೆಯೇ ನಮ್ಮಿಬ್ಬರ ನಡುವೆ ಪ್ರೀತಿ ಬೆಳೆಯಿತು. ಪರಸ್ಪರ ಹೇಳಿಕೊಂಡಿದ್ದೂ ಆಯ್ತು. ಎಲ್ಲವೂ ಚೆನ್ನಾಗಿಯೇ ಇತ್ತು ಎನ್ನುವಷ್ಟರಲ್ಲಿ ನೀನು ಇಲ್ಲಿಂದ ಬೇರೆ ಆಫೀಸಿಗೆ ಕೆಲಸಕ್ಕೆ ಸೇರಿಬಿಟ್ಟೆ. ನಾನಿರುವ ಪರಿಸ್ಥಿತಿಯಲ್ಲಿ ಅದನ್ನು ಬೇಡವೆನ್ನಲೂ ಸಾಧ್ಯವಿರಲಿಲ್ಲ. ಅದೇಕೋ ನೀನು ಇಲ್ಲಿಂದ ಹೋದಮೇಲೆ ನಮ್ಮಿಬ್ಬರ ಜೀವನದಲ್ಲಿಯೂ ಅನಿರೀಕ್ಷಿತ ತಿರುವುಗಳು ಸಂಭವಿಸಿ ಮದುವೆಯಾಗುವ ಆಸೆ ಕೈಬಿಡಬೇಕಾಗಿ ಬಂತು.
ಆದರೆ, ಒಂದು ಮಾತು ನಿನಗೆ ಗೊತ್ತಿರಲಿ ರಚ್ಚು; ಮದುವೆಯ ಆಸೆ ಕೈ ಬಿಟ್ಟಿದ್ದರೂ ನಿನ್ನ ಮೇಲಿರುವ ಪ್ರೀತಿ ಮಾತ್ರ ಯಾವತ್ತೂ ಕಡಿಮೆಯಾಗುವುದಿಲ್ಲ. ಈ ಹೊತ್ತಿಗೂ ಹೃದಯ ನೀನೇ ಬೇಕೆಂದು ಬಯಸುತ್ತಿದೆ. ಆದರೆ ಮುಂದೆಂದೂ ನೀನು ಸಿಗುವುದಿಲ್ಲ ಎನ್ನುವುದು ಖಾತ್ರಿಯಾಗಿದೆ. ಒಂದಂತೂ ಸತ್ಯ: ಈ ಪುಟ್ಟ ಹೃದಯದಲ್ಲಿ ನೀನು ಯಾವತ್ತೂ ಇದ್ದೇ ಇರುತ್ತೀಯ. ಸಾಧ್ಯವಾದರೆ ಒಮ್ಮೆ ಸಿಗೋಣ… ಪ್ಲೀಸ್ .
ಇತೀ ನಿನ್ನ
ನರೇಂದ್ರ ಎಸ್. ಗಂಗೊಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.