ನಿನ್ನ ಕಿರುಬೆರಳನ್ನು ಒಮ್ಮೆ ಮುಟ್ಟಬೇಕು!
Team Udayavani, Apr 24, 2018, 2:32 PM IST
ಹೇಳಬೇಕಾದ್ದನ್ನು ನಿನ್ನೆದುರಿಗೆ ಹೇಳುವ ಧೈರ್ಯ ಸಾಲದೆ ಈ ಪತ್ರ ಬರೆಯುತ್ತಿದ್ದೇನೆ. ಹಾಗಂತ ನನ್ನನ್ನು ಪುಕ್ಕಲು ಅಂತ ತೀರ್ಮಾನಿಸಬೇಡ. ನೀನು ಎದುರಿಗಿದ್ದಾಗ ಸಾವಿರ ಮಾತುಗಳನ್ನಾಡಬೇಕು ಅಂದುಕೊಂಡಿರುತ್ತೇನೆ. ಆದರೆ ಮಾತಾಡುವುದಿರಲಿ, ಬಹಳಷ್ಟು ಸಲ ಬಾಯಿ ಬಿಡೋಕೇ ಆಗುವುದಿಲ್ಲ.
ಹಾಯ್ ಮುದ್ದು , ಹೇಗಿದ್ದೀ? ಏನು ಮಾಡ್ತಾ ಇದ್ದೀ.. ಅಂತೆಲ್ಲಾ ನಾನು ಖಂಡಿತಾ ಕೇಳಲ್ಲ. ನೀನೇ ಹೇಳಿದ್ದಿ ಅಲ್ವಾ, ನಾನು ಯಾವತ್ತೂ ಚೆನ್ನಾಗಿರಿ¤àನಿ ಮತ್ತು ಏನೇ ಮಾಡ್ತಾ ಇದ್ರೂ ನಿನಗೋಸ್ಕರ ಫ್ರೀ ಆಗ್ತಿನಿ ಅಂತ. ನನಗೂ ಆ ಮಾತಲ್ಲಿ ವಿಪರೀತ ನಂಬಿಕೆ. ಇರಲಿ, ನಿನಗೂ ಈ ಪತ್ರ ನೋಡಿ ಖಂಡಿತಾ ಅಚ್ಚರಿ ಆಗಿರುತ್ತೆ. ನಿನಗೆ ಮಾತ್ರವಲ್ಲ, ನನಗೂ ಈ ಪತ್ರ ಬರೆಯುತ್ತಿರುವುದಕ್ಕೆ ಅಚ್ಚರಿ ಆಗುತ್ತಿದೆ. ಜೊತೆಗೆ ಸಣ್ಣಗೆ ನಗು ಕೂಡ ಬರುತ್ತಿದೆ.
ಹೇಳಬೇಕಾದ್ದನ್ನು ನಿನ್ನೆದುರಿಗೆ ಹೇಳುವ ಧೈರ್ಯ ಸಾಲದೆ ಈ ಪತ್ರ ಬರೆಯುತ್ತಿದ್ದೇನೆ. ಹಾಗಂತ ನನ್ನನ್ನು ಪುಕ್ಕಲು ಅಂತ ತೀರ್ಮಾನಿಸಬೇಡ. ನೀನು ಎದುರಿಗಿದ್ದಾಗ ಸಾವಿರ ಮಾತುಗಳನ್ನಾಡಬೇಕು ಅಂದುಕೊಂಡಿರುತ್ತೇನೆ. ಆದರೆ ಮಾತಾಡುವುದಿರಲಿ, ಬಹಳಷ್ಟು ಸಲ ಬಾಯಿ ಬಿಡೋಕೇ ಆಗುವುದಿಲ್ಲ. ಒಂದು ಮಾತು ಹೇಳಲಾ? ನನಗೆ ನೀನು ತುಂಬಾ ಡಿಫರೆಂಟ್ ಅಂತ ಅನ್ನಿಸ್ತೀಯ.
ಬಹಳಷ್ಟು ಸಲ ಇದೊಂದು ಪಕ್ಕಾ ಹುಚ್ಚು ಹುಡುಗಿ ಅಂತಾನೂ ಅಂದೊಡಿದ್ದೇನೆ. ಆದರೂ ಆ ಹುಚ್ಚು ಹುಡುಗಿಯೇ ನನಗೆ ಯಾವತ್ತೂ ಇಷ್ಟ. ಆದರೂ ಕೇಳುತ್ತೀನಿ; ನೀನ್ಯಾಕೆ ಹೀಗೆ? ನೀನು ಎಲ್ಲರಂತಲ್ಲ. ನಿಮ್ಮ ಜೊತೆ ತುಂಬಾ ಮಾತನಾಡಲಿಕ್ಕಿದೆ ಎನ್ನುತ್ತೀಯ, ಕಾಲ್ ಮಾಡಿದರೆ ಮತ್ತೆ ಮತ್ತೆ .. ಏನಾದ್ರೂ ಹೇಳಿ ಅಲಾ ಅನ್ನುತ್ತೀಯಾ? ನಾನೋ ಮೊದಲೇ ನಿನ್ನೆದುರು ಸಂಕೋಚದ ಮುದ್ದೆ.
ನಿನ್ನ ಧ್ವನಿ ನನಗೆ ತುಂಬಾ ಅಂದ್ರೆ ತುಂಬಾ ಇಷ್ಟ. “ಮತ್ತೇ ಏನಾದ್ರೂ ಹೇಳಿ ಅಲಾ!’ ಎನ್ನುವ ನಿನ್ನ ಮಾಧುರ್ಯದ ಶೈಲಿಗೆ ನಾನು ಪ್ರತೀ ಸಲ ಅಡ್ಡಡ್ಡ ಬಿದ್ದು ಹೋಗುತ್ತೇನೆ. ಹಾಗೆ ನೋಡಿದರೆ ನೀನು ಪರಿಚಯವಾಗಿ ಪ್ರಾಯಶಃ ತಿಂಗಳಷ್ಟೇ ಕಳೆದಿದೆ. ನಾವಿಬ್ಬರೂ ಫೋನಿನಲ್ಲಿ ಲೆಕ್ಕ ಹಾಕಿದರೆ ಬರೋಬ್ಬರಿ 126 ಗಂಟೆ ಕಳೆದಿರಬಹುದು. ಆದರೆ ಅದು ಯಾವುದಕ್ಕೂ ಸಾಲುತ್ತಿಲ್ಲ ಅನ್ನಿಸ್ತಿದೆ.
ಅಷ್ಟಕ್ಕೂ ಅಷ್ಟೊಂದು ಹೊತ್ತು ಮಾತನಾಡಿದ್ದಾದರೂ ಏನು ಎನ್ನುವುದು ನನಗೆ ಈ ಹೊತ್ತಿಗೂ ನೆನಪಾಗುತ್ತಿಲ್ಲ. ಆದರೆ ನಿನ್ನೊಂದಿಗೆ ಮಾತಾಡುತ್ತಿದ್ದ ಆ ಕ್ಷಣಗಳಲ್ಲಿ ಮಾತ್ರ ನಾನು ಅದ್ಭುತ ಎನ್ನಿಸುವಂಥ ರೊಮಾಂಚಕತೆಗೆ ಒಳಪಡುತ್ತಿದ್ದೆ. ಅದೊಂದು ಹೇಳತೀರದ ಹೇಳಲಾಗದ ರಮ್ಯ ಭಾವ. ಕಳೆದ ಶನಿವಾರ ಆಂಜನೇಯ ದೇವಸ್ಥಾನದ ಹೊರಗಡೆ ನಾವಿಬ್ಬರೂ ಅಕಸ್ಮಾತ್ತಾಗಿ ಭೇಟಿಯಾಗಿದ್ದನ್ನು ಯಾವತ್ತೂ ಮರೆಯಲಾರೆ.
ನೀನು ಅಮ್ಮನನ್ನು ಹುಡುಕಿ ಅಲ್ಲಿಗೆ ಬಂದಿದ್ದೆ. ನಾನು ದೇವಸ್ಥಾನದ ಪಕ್ಕದ ಗಂಗಣ್ಣನ ಅಂಗಡಿಯಲ್ಲಿ ಖರೀದಿಗಾಗಿ ಬಂದಿದ್ದೆ. ಅಕಸ್ಮಾತಾಗಿ ಎದುರೆದುರು ಬಂದಾಗ ಅರೆಕ್ಷಣ ನಾನು ಬೆಚ್ಚಿದ್ದೆ. ಆದರೆ ನಿನ್ನ ಮುಖದಲ್ಲರಳಿದ ಪ್ರೀತಿಯ ನಗು ನನ್ನೆಲ್ಲಾ ಹೆದರಿಕೆಯನ್ನು ಮರೆಸಿಬಿಟ್ಟಿತ್ತು. ನಾನು ನಕ್ಕಿದ್ದೆ. ಬಹು ಕಾಲದ ಸ್ನೇಹಿತರಂತೆ ಉಭಯ ಕುಶಲೋಪರಿ ನಡೆಸಿದ್ದೆವು ನಾವು.
ನಿನಗ್ಗೊತ್ತಾ? ನಿನ್ನಂತ ಚಂದದ ಹುಡುಗಿಯ ಜೊತೆ ಮಾತನಾಡುತ್ತಿದ್ದರೆ ಗಂಗಣ್ಣ ನಮ್ಮನ್ನೇ ಕದ್ದು ಕದ್ದು ನೋಡುತ್ತಿದ್ದ. ನನಗೆ ಒಳಗೊಳಗೆ ಒಂಥರಾ ಹೆಮ್ಮೆ ಎನಿಸುತಿತ್ತು! ಹಾಗೆ ಆ ದಿನ ಮಾತಾಡುವಾಗ ನೀನು, “ನೋಡಿ, ಇದೇನು ನಿಮ್ಮ ಕಿವಿಯ ಹತ್ತಿರ ಹುಳ ಇದೆ’ ಎಂದು ಹೇಳುತ್ತಲೇ ನಿನ್ನ ಕಿರುಬೆರಳನ್ನು ಹಾಗೇ ಕಿವಿಯ ಹತ್ತಿರ ತಂದು ಸ್ಪರ್ಶಿಸಿದ್ದೆಯಲ್ಲಾ.. ಆ ಕ್ಷಣದಲ್ಲಿ ಒಮ್ಮೆಗೆ ಮಿಂಚು ಹೊಡೆದಂಥ ಪುಳಕ ನನಗಾಗಿತ್ತು. ಹುಳ-ಬಿತ್ತೋ ಅಲ್ಲೇ ಇತ್ತೋ ಗೊತ್ತಿಲ್ಲ.
ಆದರೆ ನಾನಂತೂ ಮತ್ತಷ್ಟು ಪ್ರೀತಿಯೊಳಕ್ಕೆ ಬಿದ್ದಿದ್ದೆ. ಆವತ್ತಿನಿಂದ ಹೊಸದೊಂದು ಸಣ್ಣ ಆಸೆ ಹುಟ್ಟಿಕೊಂಡು ಬಿಟ್ಟಿದೆ. ಆದಷ್ಟು ಬೇಗ ಒಮ್ಮೆಯಾದರೂ ನಿನ್ನ ಬಲಗೈ ಕಿರುಬೆರಳನ್ನು ಹಿಡಿದು ನಿನಗೊಂದು ಥ್ಯಾಂಕ್ಸ್ ಹೇಳಬೇಕು… ಅದೊಂದು ಕ್ಷಣಕ್ಕಾಗಿ ಇನ್ನಿಲ್ಲದಂತೆ ಕಾಯುತ್ತಿದ್ದೇನೆ. ಅದೊಂದನ್ನು ಬಿಟ್ಟು ಖಂಡಿತ ಬೇರೇನೂ ಕೇಳಲಾರೆ. ಒಂದೇ ಒಂದು ಸಲ ಅದೇ ಜಗಲಿಯ ಬಳಿ ಬರ್ತೀಯಾ? ಪ್ಲೀಸ್.
ಇಂತಿ ನಿನ್ನ ಪ್ರೀತಿಯ ಹುಡುಗ
ನರೇಂದ್ರ ಎಸ್. ಗಂಗೊಳ್ಳಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.