ನಿನ್ನನ್ನು ಕಂಡಾಕ್ಷಣ ಹಳೆಯ ಪ್ರೀತಿ ನೆನಪಾಗುತ್ತೆ!
Team Udayavani, Nov 28, 2017, 2:29 PM IST
ಆಕೆ ಮಾತಾಡಲಿಲ್ಲ, ಮೋಹಕವಾಗಿ ನಕ್ಕಳು. ಗುಲಾಬಿ ಬಣ್ಣದ ಚೂಡಿದಾರ್‌ನಲ್ಲಿ ಆಕೆಯೇ ಒಂದು ಗುಲಾಬಿಯಂತೆ ಕಂಡಳು. ನನ್ನ ಕಥೆ ಹೇಳಿಕೊಂಡೆ. ಮೌನವಾಗಿ ಕೇಳಿಸಿಕೊಂಡಳು. ಸಂಕಟ ತೋಡಿಕೊಂಡೆ, ಸಮಾಧಾನ ಹೇಳಿದಳು. ನಿನ್ನ ನೆನಪಾಗಿ ಕಣ್ಣೀರಾದೆ, ಕಂಬನಿ ಒರೆಸಿ ಕೈ ಹಿಡಿದು ನಡೆದಳು!
ದಕ್ಕದೇ ಹೋದ ಚೆಂಡು ಹೂವೆ,
ನೀನು ನನ್ನನ್ನು ತಿರಸ್ಕರಿಸಿದ್ದು ಯಾಕೆ? ಅದಕ್ಕೂ ಮೊದಲು ಹಠಕ್ಕೆ ಬಿದ್ದವಳಂತೆ ಪ್ರೀತಿಸಿದ್ದು ಯಾಕೆ? ಆರಂಭದಲ್ಲಿ ನನ್ನ ಒಂದೊಂದೇ ಗೆಲುವಿಗೆ ಕಾರಣಳಾದವಳು, ಕಡೆಗೆ ಅಷ್ಟೆತ್ತರದಿಂದ ಪ್ರಪಾತಕ್ಕೆ ನೂಕಿಬಿಟ್ಟೆಯಲ್ಲ, ಯಾಕೆ? ಕಳೆದ ಎಂಟು ವರ್ಷಗಳಿಂದ ಈ ಪ್ರಶ್ನೆಯನ್ನು ಮತ್ತೆ ಮತ್ತೆ ಕೇಳಿಕೊಳ್ತಾನೇ ಇದ್ದೀನಿ. ಉಹುಂ, ಉತ್ತರ ಸಿಗುತ್ತಿಲ್ಲ. “ಛೆ, ಛೆ, ನನ್ನ ಹುಡುಗಿ ಕೆಟ್ಟವಳಲ್ಲ. ಅವಳಿಗೆ ದುರಾಸೆಯಿಲ್ಲ. ನನ್ಮೆಲೆ ಅಪನಂಬಿಕೆಯಿಲ್ಲ. ಯಾವುದೋ ಒತ್ತಡಕ್ಕೆ ಸಿಲುಕಿ ಆಕೆ ಹೀಗೆಲ್ಲ ಮಾಡಿಬಿಟ್ಟಿದ್ದಾಳೆ’.. ಇಂಥ ಮಾತುಗಳನ್ನು ನನಗೆ ನಾನೇ ಹೇಳಿಕೊಳ್ತೀನಿ. ಆದ್ರೂ ಸಮಾಧಾನ ಸಿಗ್ತಾ ಇಲ್ಲ!
ಹೌದಲ್ವೇನೆ ಚಿತ್ರಾ? ನನ್ನ ಫಸ್ಟ್ಲವರ್ ನೀನು. ತುಂಬ ದೂರದವಳಲ್ಲ. ಸ್ವಂತ ಅತ್ತೆಯ ಮಗಳು. ಸ್ವಲ್ಪ ಬೆಳ್ಳಗಿದ್ದೆ. ಸ್ವಲ್ಪ ಕುಳ್ಳಗಿದ್ದೆ. ಉಹುಂ, ನೀನು ತೆಳ್ಳಗಿರಲೇ ಇಲ್ಲ. ಸಣ್ಣ ಡ್ರಮ್ಮಿನ ಹಾಗೆ ಡುಮ್ಮಿಯಾಗಿದ್ದೆ. ನಿಂಗೆ ಹೋಲಿಸಿ ನೋಡಿದ್ರೆ ನಾನೇ ಚೆನ್ನಾಗಿದ್ದೆ! ಚೆನ್ನಾಗಿ ಓದ್ತಾ ಇದ್ದೆ. ಮುದ್ದುದ್ದಾಗಿ ಬರೀತಿದ್ದೆ. ಪೆದ್ದು ಪೆದ್ದಾಗಿ ನಗ್ತಾ ಇದ್ದೆ. ಇವೆಲ್ಲದರ ಜತೆಗೇ ನಿನ್ನನ್ನು ಸುಮುಮ್ನೆ ಪ್ರೀತಿಸ್ತಾ ಇದ್ದೆ.
ಇಲ್ಲ ಚಿತ್ರಾ, ನೀನು ತಿರಸ್ಕರಿಸಬಹುದು ಅನ್ನೋ ಸಣ್ಣ ಕಲ್ಪನೆ ಕೂಡ ನಂಗಿರ್ಲಿಲ್ಲ. ನನ್ನ ಡೈರಿಯ ಪ್ರತಿ ಪುಟದಲ್ಲೂ “ಐ ಲವ್ ಯೂ ಚಿತ್ರಾ’ ಅಂತ ಬರೀತಿದ್ದೆನಲ್ಲ, ಆಗ ಚೂರೂ ಹೆದರಿಕೆ ಆಗ್ತಿರಲಿಲ್ಲ. ನನ್ನ ಪ್ರೀತಿಯನ್ನ, ಅದರ ರೀತಿಯನ್ನ ಕರೆಕ್ಟಾಗಿ ಆರು ತಿಂಗಳು ಒಪ್ಪಿಕೊಂಡವಳು ನೀನು. ಆಸೆಗಳ ಬಲೂನು ಊದಿ ಆಕಾಶಕ್ಕೆ ಬಿಟ್ಟವಳೂ ನೀನೇ. ಅಂಥ ನೀನು ಅದೊಂದು ದಿನ ನನ್ನೆದುರು ನಿಂತೆ. ಕಂಗಳಲ್ಲಿ ಬೆಳಕಿರಲಿಲ್ಲ. ಮೊಗದಲ್ಲಿ ನಗೆಯಿರಲಿಲ್ಲ. ಮಾತಿನಲ್ಲಿ ಸೌಜನ್ಯ, ಅನುಕಂಪ, ಸಂಕೋಚ, ಸಂತಾಪ, ಪ್ರೀತಿ, ಕರುಣೆ ಉಹುಂ, ಈ ಯಾವುದೂ ಇರಲಿಲ್ಲ. ಮೇಸ್ಟ್ರಿಗೆ ಪಾಠ ಒಪ್ಪಿಸುವಂತೆ ನೀನು ಹೇಳಿಬಿಟ್ಟೆ- “ಕೇಳು ಸುಧೀ, ಅಪ್ಪಂಗೆ ನೀನು
ಇಷ್ಟವಾಗಿಲ್ಲ. ಅಮ್ಮ ನಿನ್ನನ್ನು ಒಪ್ತಾ ಇಲ್ಲ. ಅವರನ್ನು ಧಿಕ್ಕರಿಸಿ ನಡೆಯೋಕೆ ನಂಗೂ ಸಾಧ್ಯವಿಲ್ಲ. ಪ್ಲೀಸ್ ಕಣೋ, ನನ್ನನ್ನು ಮರೆತುಬಿಡು’….
ಈ ಬದುಕಿಂದ ನೀನು ಎದ್ದು ಹೋದೆಯಲ್ಲ ಚಿತ್ರಾ, ಅವತ್ತು ದುಃಖವಾದದ್ದು ನಿಜ. ಜೋರಾಗಿ ಅಳಬೇಕು ಅನಿಸಿದ್ದು ನಿಜ. ಸತ್ತು ಹೋಗಬೇಕು ಅನಿಸಿದ್ದೂ ನಿಜ. ಆದ್ರೆ ಡಿಯರ್, ಒಂದೇ ದಿನದ ನಂತರ ಆ ನಿರ್ಧಾರ ಬದಲಾಗಿತ್ತು. “ಇಲ್ಲ, ನಾನು ಸೋಲಬಾರದು. ನೋವಲ್ಲಿ ನರಳಬಾರದು. ಅವಳ ನೆನಪಲ್ಲೇ ಮೀಯಬಾರದು. ಅವಳೆದುರೇ ಎದ್ದು ನಿಲ್ಲಬೇಕು. ಅವಳಿಗಿಂತ ಚೆಂದದ ಹುಡುಗಿಯ ಹೆಗಲು ಮುಟ್ಟಬೇಕು. ಅವಳೊಂದಿಗೇ ಬದುಕು ಕಟ್ಟಬೇಕು…’ ನಾನು ಇಂಥ ಕನಸುಗಳ ಮೈದಾನದಲ್ಲಿ ನಡೆಯುತ್ತಿದ್ದಾಗಲೇ ಆ ಹುಡುಗಿ ಕಾಣಿಸಿಬಿಟ್ಟಳು.
ಸುಳ್ಳೇಕೆ? ಈಕೆ ನಿನಗಿಂತ ಬೆಳ್ಳಗಿದ್ದಳು, ಕುಳ್ಳಗಿದ್ದಳು ಮತ್ತು ತೆಳ್ಳಗಿದ್ದಳು. ಮೊದಲ ನೋಟಕ್ಕೇ ಇಷ್ಟವಾದಳು. ಮೂರನೇ ದಿನ ಮತ್ತೆ ಸಿಕ್ಕಾಗ ನಾನು ಹೇಳಿಯೇ ಬಿಟ್ಟೆ – “ಹುಡುಗೀ, ಐ ಲವ್ ಯೂ’. ಆಕೆ ಮಾತಾಡಲಿಲ್ಲ, ಮೋಹಕವಾಗಿ ನಕ್ಕಳು. ಗುಲಾಬಿ ಬಣ್ಣದ ಚೂಡಿದಾರ್‌ನಲ್ಲಿ ಆಕೆಯೇ ಒಂದು ಗುಲಾಬಿಯಂತೆ ಕಂಡಳು. ನನ್ನ ಕಥೆ ಹೇಳಿಕೊಂಡೆ. ಮೌನವಾಗಿ ಕೇಳಿಸಿಕೊಂಡಳು. ಸಂಕಟ ತೋಡಿಕೊಂಡೆ, ಸಮಾಧಾನ ಹೇಳಿದಳು. ನಿನ್ನ ನೆನಪಾಗಿ ಕಣ್ಣೀರಾದೆ, ಕಂಬನಿ ಒರೆಸಿ ಕೈ ಹಿಡಿದು ನಡೆದಳು!
ಈಗ, ನಾವು ನೆಮ್ಮದಿಯಿಂದಿದೀವಿ. ನಿಮ್ಮಷ್ಟು ಶ್ರೀಮಂತರಾಗಿಲ್ಲ. ತುಂಬ ಬಡತನದಲ್ಲೂ ಬದುಕ್ತಾ ಇಲ್ಲ. ನೀನೇ ನೋಡಿದೆಯಲ್ಲ ಮೊನ್ನೆ? ನಾನೀಗ ಸ್ವಲ್ಪ ದಪ್ಪಗಾಗಿದ್ದೇನೆ. ಒಂದಿಷ್ಟು ತಲೆಗೂದಲು ಉದುರಿವೆ. ಗಡ್ಡದಲ್ಲಿ ನಾಕಾರು ಬಿಳಿಕೂದಲು ನುಸುಳಿವೆ.
ಆಗೊಮ್ಮೆ, ಈಗೊಮ್ಮೆ ಮದುವೆಗಳಲ್ಲೋ, ಹುಟ್ಟು ಹಬ್ಬದ ಪಾರ್ಟಿಯಲ್ಲೋ, ಯಾರದೋ ಎಂಗೇಜ್‌ಮೆಂಟ್‌ನಲ್ಲೋ ನೀನು ಕಾಣಿಸಿಕೊಳ್ತೀಯ. ಮೊದಲಿನಂತೆಯೇ ಮಾತಾಡಿಸ್ತೀಯ ನಿಜ. ಆದ್ರೆ, ನಿನ್ನೆದುರು ನಿಂತಾಕ್ಷಣ ನಂಗೆ ಹಳೆಯ ಪ್ರೀತಿಯೇ ನೆನಪಾಗಿ ಬಿಡುತ್ತೆ. ಇನ್ನೊಂದ್ಸಲ “ಐ ಲವ್ ಯೂ’ ಅಂದುಬಿಡಬೇಕು ಅಂತ ಆಸೆಯಾಗಿಬಿಡುತ್ತೆ !
ಹೌದು ಚಿತ್ರಾ, ಇದೇ ಸತ್ಯ. ಎಷ್ಟೋ ದೂರದಲ್ಲಿರುವ ನಿನ್ನುಸಿರು ಈಗಲೂ ನನ್ನೆದೆಗೆ ಮೆತ್ತಿಕೊಂಡಿದೆ. ನಾವು ಹಿಂದೆಂದೋ ಆಡಿದ ಮಾತು ಮಂದಗಾಳಿಯಂತೆ ಕೇಳುತ್ತಲೇ ಇದೆ. ನಟ್ಟಿರುಳು ಮಳೆಯ ಸದ್ದಿನಂತೆ ಆ ಕ್ಷಣಗಳ ನೆನಪು ಬರುತ್ತಲೇ ಇದೆ. ನಾನು, ಆ ನೆನಪುಗಳ ಮಧ್ಯೆಯೇ ಸುಖೀಸುತ್ತಾ ನಿದ್ದೆ ಬಾರದ ರಾತ್ರಿಗಳನ್ನು ಕಳೆಯುತ್ತಿದ್ದೇನೆ. ಆದರೂ ಸುಖವಾಗಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದೇನೆ!
ಇದು, ಈವಾಗಿನ ನನ್ನ ಪಾಡು. ಹೇಳು, ನೀನು ಹೇಗಿದ್ದೀ?
ಇಂತಿ ನಿನ್ನ, ಹಳೆಯ ಗೆಳೆಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್, ಟ್ರಾಫಿಕ್ ಜಾಮ್
Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು
Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು
Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!
Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.