ನಿನ್ನ ಹೆಜ್ಜೆ ಗುರುತಲಿ, ಹೆಜ್ಜೇನು ಕಾಣುತಿವೆ!
Team Udayavani, Oct 3, 2017, 1:11 PM IST
ಬಹುಶಃ ನಿನ್ನ ಜೀವನದಲ್ಲಿ ನನ್ನ ಪಾತ್ರ ಅಷ್ಟೇ ಇತ್ತೇನೋ ಅನಿಸುತ್ತದೆ. ಇನ್ನೊಬ್ಬಳಿಗೆ ನಿನ್ನನ್ನು ಒಪ್ಪಿಸಲು ಮನಸ್ಸು ಒಪ್ಪುತ್ತಿಲ್ಲ. ಆದರೂ ಸಂದರ್ಭ ಹಾಗಿದೆ. ಕಾಲವೇ ನಮ್ಮ ವಿರುದ್ಧವಾಗಿ ಇರುವಾಗ ಏನೂ ಮಾಡಲು ಸಾಧ್ಯವಿಲ್ಲ.
ನಲ್ಮೆಯ ಗೆಳೆಯ,
ಬರೆಯಲು ಹೋದರೆ ಮನಸ್ಸು ಬಾರದು. ಮಾತನಾಡಲು ಪದಗಳೇ ಹೊರಡದು. ಮೌನವಾಗಿ ಮೂಕ ವೇದನೆ ಅನುಭವಿಸುತ್ತಿದೆ ಈ ಜೀವ. ನೀನಿರುವಾಗ ಸದಾ ಲವಲವಿಕೆಯಿಂದಿರುತ್ತಿದ್ದ ಮನಸ್ಸು ಈಗ ನಿಷ್ಚೇಷ್ಚಿತವಾಗಿ ಬಿದ್ದಿದೆ. ಹೌದು ಕಣೋ, ಮತ್ತೆಂದೂ ಖುಷಿಯ ಪ್ರಪಂಚಕ್ಕೆ ಮರಳದ ಸ್ಥಿತಿಗೆ ತಲುಪಿರುವೆ ನಾನು.
“ಪ್ರೀತಿ ಮಧುರ ತ್ಯಾಗ ಅಮರ’ ಎಂಬ ಮಾತು ಕೇಳಲು ಚಂದ. ನಿಜ ಜೀವನದಲ್ಲಿ ಅದನ್ನು ಅನುಸರಿಸುವುದು ಬಹಳ ಕಷ್ಟ. ಒಂದು ವೇಳೆ ಅದನ್ನೇ ಪಾಲಿಸಲು ಹೋದರೆ ನೋವು ಕಟ್ಟಿಟ್ಟ ಬುತ್ತಿ. ದುಃಖದ ಮಡುವಿನಲ್ಲಿಯೇ ನಿಲ್ಲುತ್ತದೆ ಜೀವನ. ಆಸೆ, ಆಕಾಂಕ್ಷೆ, ಕನಸುಗಳಿಗೆಲ್ಲಾ ನಿರಾಸೆಯೆಂಬ ಬೆಂಕಿ ಹೊತ್ತಿಸಿ ಸುಡುವುದೇ ತ್ಯಾಗದ ಪ್ರತೀಕ.
ಸುಟ್ಟ ಮೇಲೆ ಉಳಿಯುವುದು ಬೂದಿ ಮಾತ್ರ. ಅದಕ್ಕೆ ನಿರ್ದಿಷ್ಟ ನೆಲೆಯಿಲ್ಲ. ಗಾಳಿ ಬಂದ ಕಡೆ ತೂರಿ ಹೋಗುತ್ತದೆ. ಈಗ ನನ್ನ ಬದುಕು ಕೂಡಾ ಅದೇ ಥರ ಆಗಿಬಿಟ್ಟಿದೆ. ತ್ಯಾಗ ಮಾಡಲು ಹೋಗಿ ನೆಲೆಯಿಲ್ಲದ, ಅಲೆಮಾರಿ ಜೀವನವಾಗಿ ರೂಪುಗೊಂಡಿದೆ. ನೀನು ಮಾತಿಗೆ ಸಿಕ್ಕದಿದ್ರೂ ನನಗೆ ವಿಷಯ ಗೊತ್ತಾಗಿದೆ. ನಾವಿಬ್ಬರೂ ವಿರುದ್ಧ ದಿಕ್ಕಿಗೆ ನಡೆಯುವ ಸನ್ನಿವೇಶ ಎದುರಾಗಿದೆ.
ಮತ್ತೆ ಸೇರುತ್ತೇವೆಂಬ ಸಣ್ಣ ಭರವಸೆಯೂ ಇಲ್ಲವಾಗಿದೆ. ಜನ್ಮ ನೀಡಿದವಳ ಮಾತಿಗೆ ಕಟ್ಟುಬಿದ್ದು ಒಲ್ಲದ ಮನಸ್ಸಿನಿಂದ ನೀನು ನನ್ನನ್ನು ತೊರೆದು ನಿಂತಿರುವೆ. ಹೌದು ತಾನೇ? ಖಾಲಿಯಿದ್ದ ಮನಸ್ಸನ್ನು ನಿನ್ನ ಪ್ರೀತಿಯ ಪಾಶದಿಂದ ಬಂಧಿಸಿ ಈಗ ಬರಿದು ಮಾಡಿ ಹೊರಟಿರುವೆ. ಕನಸು ಕಾಮನೆಗಳನ್ನು ಕೊಂದು ಏಕಾಂಗಿಯಾಗಿಸಿ, ನಡುನೀರಿನಲ್ಲಿ ಕೈಬಿಟ್ಟು ಹೊರಟಿರುವೆ. ಇದೆಂಥ ನ್ಯಾಯ?
ಅತ್ತ ಬದುಕಲು ಆಗದೇ, ಇತ್ತ ಸಾಯಲೂ ಆಗದೆ ಒದ್ದಾಡುವಂತಾಗಿದೆ ನನ್ನ ಪರಿಸ್ಥಿತಿ. ನಿನ್ನ ಅಗಲುವಿಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಬಹುಶಃ ನಿನ್ನ ಜೀವನದಲ್ಲಿ ನನ್ನ ಪಾತ್ರ ಅಷ್ಟೇ ಇತ್ತೇನೋ ಅನಿಸುತ್ತದೆ. ಇನ್ನೊಬ್ಬಳಿಗೆ ನಿನ್ನನ್ನು ಒಪ್ಪಿಸಲು ಮನಸ್ಸು ಒಪ್ಪುತ್ತಿಲ್ಲ. ಆದರೂ ಸಂದರ್ಭ ಹಾಗಿದೆ. ಕಾಲವೇ ನಮ್ಮ ವಿರುದ್ಧವಾಗಿ ಇರುವಾಗ ಏನೂ ಮಾಡಲು ಸಾಧ್ಯವಿಲ್ಲ.
ನೀ ನಡೆಯುವ ಹಾದಿಯಲ್ಲಿ ಸಂತೋಷ, ಸಂಭ್ರಮಗಳೇ ತುಂಬಿರಲಿ. ನೋವು, ನಿರಾಸೆ, ಅಳು ದುಃಖಗಳೆಲ್ಲಾ ನನ್ನ ಪಾಲಿಗಿರಲಿ. ನೀನಿಡುವ ಪ್ರತಿ ಹೆಜ್ಜೆಗೂ ನಲಿವಿನಿಂದ ತುಂಬಿದ ಜೀವನ ನಿನ್ನದಾಗಲಿ. ಸಂತೋಷವೆಂಬ ಕಡಲಿನಲ್ಲಿ ತೇಲುವ ಹಾಗೆ ಮಾಡಲಿ, ಆ ನಿನ್ನ ಹೊಸ ಸಂಗಾತಿ.
ಅವಳ ಪ್ರೇಮವೆಂಬ ಸಾಗರದಲ್ಲಿ ನಾನು, ನನ್ನ ನೆನಪುಗಳೆಲ್ಲಾ ಕೊಚ್ಚಿಕೊಂಡು ಹೋಗಲಿ. ಸದಾ ಸಂತಸದಿಂದ, ನಗುವಿನಿಂದ ತುಂಬಿದ ಸುಂದರ ಜೀವನ ನಿನ್ನದಾಗಲಿ ಎಂದು ದೇವರಲ್ಲಿ ಮೊರೆಯಿಡುವೆ. ನಿನ್ನ ನೆನಪುಗಳೇ, ನೀನು ಬಿಟ್ಟುಹೋದ ಹೆಜ್ಜೆ ಗುರುತುಗಳೇ ನನಗೆ ಸಾಕು…
ಯಾವಾಗಲೂ ನಿನ್ನವಳು: ನಾಗರತ್ನ ಮತ್ತಿಘಟ್ಟ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.