ಹೊಳೆದಿದ್ದು ನೀನು, ಉಳಿದಿದ್ದು ನಾನು!
Team Udayavani, Jul 24, 2018, 6:00 AM IST
ನೀನೊಂದು ಚಂದದ ನೆನಪು. ಒಮ್ಮೊಮ್ಮೆ ಮುಂಜಾನೆಯೋ, ಮುಸ್ಸಂಜೆಯೋ ಅರಿವೇ ಆಗದ, ಎರಡೂ ವ್ಯತ್ಯಾಸವೇ ಇಲ್ಲದ ಕೆಂಪು. ಕಾಯುವವನಿಗೆ ಸಾಯುವವರೆಗೆ ಮತ್ತೂಂದು ಆಯ್ಕೆಯೆಂಬುದಿಲ್ಲ. ಕಾಣದಿದ್ದರೂ ಕಾಡುವುದು ಪ್ರೀತಿ, ಹಾಡದಿದ್ದರೂ ಕೇಳುವುದು ಪ್ರೀತಿ.
ಮಾಯಗಾತಿ,
ನೀನು ಯಾವತ್ತಿದ್ದರೂ ಬಂದೇ ಬರುತ್ತೀಯ ಅನ್ನೋ ಒಂದೇ ಕಾರಣಕ್ಕೆ, ಕಾಯುವಿಕೆಯೆಂಬ ಬದುಕಿನ ಘಟ್ಟದಲ್ಲಿ ಬೇಸರವೆಂಬ ಪದಕ್ಕೆ ಜಾಗವೇ ಇಲ್ಲ. ನನ್ನೊಳಗಿನ ತುಂಬು ನಿರೀಕ್ಷೆ ಮುಗಿಯುವುದಿಲ್ಲ, ಹರಳುಗಟ್ಟಿದ ನಂಬಿಕೆ ಕರಗುವುದಿಲ್ಲ, ಬಣ್ಣ ಬಣ್ಣದ ಕನಸು ಮಾಸುವುದಿಲ್ಲ, ಮನದ ಬಾಗಿಲ ತೋರಣ ಒಣಗುವುದಿಲ್ಲ, ನೀ ಬರುವ ಹಾದಿಗೆ ನೆಟ್ಟ ಕಂಗಳು ಇನ್ನೆತ್ತಲೂ ಹೊರಳುವುದಿಲ್ಲ… ನಿನ್ನ ನೆನಪುಗಳ ಹೊಳೆಯಲ್ಲಿ ಮೀಯುವ ಮೀನು ನಾನು. ಆದರೆ, ಯಾಕೋ ನಿನಗೆ ನನ್ನ ನಿರೀಕ್ಷೆಗಳನ್ನು ಕೊಲ್ಲುವ ಹಠ. ನನ್ನ ನಂಬಿಕೆಯನ್ನು ಪರೀಕ್ಷಿಸುವ ಚಟ. ಕಾಯಿಸುವ ಆಟ ಆಡುವುದರಲ್ಲಿ ಯಾಕೆ ಇಷ್ಟೊಂದು ಖುಷಿ ಪಡುತ್ತಿದ್ದೀ? ನನ್ನ ಪ್ರೀತಿಯ ಆಳ ನೋಡುವ ಹಂಬಲವೇಕೆ ಹುಡುಗಿ?
ಎಂದಿಗೆ ಬರುವೆಯೋ ತಿಳಿಯದೇ
ನನ್ನದೆ ಹೃದಯದ ಬಡಿತವೆ ನಿಂತಂತಾಗಿದೆ
ನಿರೀಕ್ಷೆಯ ತುದಿಯಲ್ಲೊಂದು ಕನಸಿದೆ. ಅದು ನೀ ಬಂದ ಕ್ಷಣಕ್ಕೆ ನನಸಾಗುತ್ತದೆ. ಅವತ್ತು ನನ್ನ ಎದೆಯೊಳಗಿನ ಹಣತೆ ದೀಪವಾಗುತ್ತದೆ. ನನ್ನ ಕಾಯುವಿಕೆಯ ಬೀದಿಗೆ ಸಂಭ್ರಮದ ತೇರು ಬಂದು ನಿಂತಿರುತ್ತದೆ. ನಿನ್ನ ಪುಟ್ಟ ಪಾದವನ್ನು ನನ್ನ ಒರಟು ಅಂಗೈಯಲ್ಲಿಟ್ಟು, ಆ ಮೃದುಲ ಗುಲಾಬಿ ಪಾದಗಳಿಗೆ ಸಾವಿರ ಹೂ ಮುತ್ತನಿತ್ತು ಸಂಭ್ರಮಿಸುತ್ತೇನೆ. ನನ್ನೊಳಗೆ ಇಂಥವೇ ನೂರಾರು ಪುಟ್ಟ ಪುಟ್ಟ ಕನಸುಗಳು ಒಬ್ಬಂಟಿಯಾಗಿ ಕಾಯುತ್ತಿವೆ. ಒಮ್ಮೊಮ್ಮೆ ಇದೆಲ್ಲಾ ಭಾವುಕ ಪ್ರಪಂಚದಲ್ಲಷ್ಟೇ ನಡೆಯುತ್ತಿರುವ ಭ್ರಮೆಯಂತೆ ಅನಿಸುತ್ತದೆ. ಜಗತ್ತಿನ ವಾಸ್ತವವೇ ಬೇರೆಯಿದೆಯೇನೋ ಅನಿಸುತ್ತದೆ. ಆದರೆ, ಬದುಕು ಅದೆಷ್ಟೇ ನಿರ್ಭಾವುಕ ಕಡಲೆನಿಸಿದರೂ, ಪ್ರೀತಿಯೆಂಬುದು ಅಲ್ಲೆಲ್ಲೋ ಇರುವ ಅನಾಮಿಕ ಪುಟ್ಟ ದ್ವೀಪದಂತೆ ಉಳಿದುಹೋಗುತ್ತದೆ.
ಈ ಪ್ರೀತಿಯ ಮಾಯೆ ನಗುವಾಗಲೂ ನೋವೆ
ಏಕಾಂತದ ಛಾಯೆ ಹಗಲಿರುಳು ಕಾಡಿದೆ
ಈ ಪಯಣದ ಹಾದಿಯಲ್ಲಿ ನಾನು ಸೋತರೂ ಗೆದ್ದರೂ ನೀನೊಂದು ಚಂದದ ನೆನಪು. ಒಮ್ಮೊಮ್ಮೆ ಮುಂಜಾನೆಯೋ, ಮುಸ್ಸಂಜೆಯೋ ಅರಿವೇ ಆಗದ, ಎರಡೂ ವ್ಯತ್ಯಾಸವೇ ಇಲ್ಲದ ಕೆಂಪು. ಕಾಯುವವನಿಗೆ ಸಾಯುವವರೆಗೆ ಮತ್ತೂಂದು ಆಯ್ಕೆಯೆಂಬುದಿಲ್ಲ. ಕಾಣದಿದ್ದರೂ ಕಾಡುವುದು ಪ್ರೀತಿ, ಹಾಡದಿದ್ದರೂ ಕೇಳುವುದು ಪ್ರೀತಿ. ಹೊಳೆದಿದ್ದು ನೀನು ಉಳಿದಿದ್ದು ನಾನು. ಈ ಬದುಕಿಗೆ ಉತ್ತರವೇ ಇಲ್ಲದ ಪ್ರಶ್ನೆ ನೀನು. ಪ್ರಶ್ನೆಯೇ ಉತ್ತರವೆಂದು ತಿಳಿದವನು ನಾನು. ನೀ ಬಂದರೂ, ಬಾರದಿದ್ದರೂ ನೀ ನದಿಯೆಂದು ತಿಳಿದ ಕಡಲು ನಾನು.
ನಿನ್ನ ಕಾಯುತ್ತಲೇ ಇರುವ
ಜೀವ ಮುಳ್ಳೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.