“ಆ… ಆ… ಆಕ್ಷೀ…’
Team Udayavani, May 30, 2019, 6:00 AM IST
ಮನೆಯೊಳಗಿಂದ ಅಜ್ಜ ಜೋರಾಗಿ ಗಲಾಟೆ ಮಾಡುತ್ತಿರುವುದು ಸಾನ್ವಿಗೆ ಕೇಳಿಸಿತು. ತನ್ನಲ್ಲೆ ಒಮ್ಮೆ ನಕ್ಕಳು ಸಾನ್ವಿ. ಅಜ್ಜ ಏನನ್ನೋ ಹುಡುಕುತ್ತಾಮನೆಯವರ ಮೇಲೆ ರೇಗುತ್ತಿದ್ದರು. “ರಾತ್ರಿ ಮಲಗುವಾಗ ನನ್ನ ಶರ್ಟ್ ಜೇಬಿನಲ್ಲಿದ್ದುದು ಈಗ ಹೇಗೆ ಮರೆಯಾಗುತ್ತೆ? ಅದಕ್ಕೇನು ರೆಕ್ಕೆ ಬಂದು ಹಾರಿಕೊಂಡು ಹೋಯಿತೆ?’ ಎಂದವರು ಗದರುತ್ತಿದ್ದರು…
ಸಾನ್ವಿ ಅಜ್ಜನನ್ನೇ ನೋಡುತ್ತಿದ್ದಳು. ಅಜ್ಜ ತಮ್ಮ ಜೇಬಿನಿಂದ ಒಂದು ಚಿಕ್ಕ ಡಬ್ಬ ತೆಗೆದರು. ಮುಚ್ಚಳ ತೆಗೆದರು. ಹೆಬ್ಬೆರಳು ಹಾಗು ತೋರುಬೆರಳನ್ನು ಡಬ್ಬದೊಳಗೆ ಹಾಕಿದರು. ಒಂದು ಚಿಟಿಕೆ ಕಂದು ಬಣ್ಣದ ಪುಡಿಯನ್ನು ತೆಗೆದರು. ಮೂಗಿನ ಎರಡೂ ಹೊಳ್ಳೆಗಳೊಳಗೆ ಉಸಿರೆಳೆಯುತ್ತ ಏರಿಸಿದರು. ಮೀಸೆಯ ಮೇಲೆ ಉದುರಿದ ಪುಡಿಯನ್ನು ಒರೆಸಿಕೊಂಡರು. ಶರಟಿನ ಮೇಲೆ ಬಿದ್ದುದನ್ನೆಲ್ಲ ಒರೆಸಿಕೊಂಡರು. ಘಾಟು ವಾಸನೆ ಸುತ್ತೆಲ್ಲ ಹರಡಿತು. ಸಾನ್ವಿ ಕೇಳಿದಳು, “ಅಜ್ಜ ಅದೇನು?’
‘ಓ ಇದಾ? ಇದು… ಇದು’ ಎಂದು ತಡವರಿಸಿದರು ಅಜ್ಜ.
“ವಾಸನೆ ಬರ್ತಾ ಇದೆ!’ಎಂದು ಹುಬ್ಬೇರಿಸಿದಳು ಸಾನ್ವಿ.
“ಇದು ನಶ್ಯ ಅಂತ. ಮಕ್ಕಳಿಗೆ ಇದೆಲ್ಲ ಬೇಡಮ್ಮ’
“ಮತ್ಯಾಕೆ ನೀವು ಸೇದುತ್ತಿದ್ದೀರಿ? ನಶ್ಯದ ವಾಸನೆ ಇಷ್ಟಾನಾ? ನನಗೂ ಒಮ್ಮೆ
ತೋರಿಸಿ’ ಎಂದು ದುಂಬಾಲು ಬಿಟ್ಟಳು ಸಾನ್ವಿ.
“ಹೇಳಿದೆನಲ್ಲ ಮಕ್ಕಳೆಲ್ಲ ಇದನ್ನು ಮುಟ್ಟಬಾರದು. ಕೆಟ್ಟದು ಇದು.’
“ಮತ್ತೆ ನೀವು ಉಪಯೋಗಿಸುತ್ತಿದ್ದೀರ? ನಿಮಗೆ ಒಳ್ಳೆಯದೇ?’
“ಹೇಳಿದೆನಲ್ಲ ಸಾನ್ವಿ, ಮಕ್ಕಳು ಇದನ್ನು ಮುಟ್ಟಬಾರದು ಅಂತ’. “ಹಾಗಾದರೆ ನಿಮಗೇನೂ ಆಗೋದಿಲ್ಲವ?’
“ತಲೆ ಹರಟೆ ಮಾತಾಡಬೇಡ ಇಲ್ಲಿಂದ ಹೋಗು.’
ಸಾನ್ವಿಗೆ ಆಶ್ಚರ್ಯವಾಯಿತು. ಅಜ್ಜ ನಶ್ಯ ಏಕೆ ಸೇದುತ್ತಾರೆ? ಅದನ್ನು ಯಾವುದರಿಂದ ಮಾಡಿರುತ್ತಾರೆ? ಮಕ್ಕಳಿಗೆ ಅದು ಯಾಕೆ ಕೆಟ್ಟದು? ಅಜ್ಜನಿಗೆ ಯಾಕೆ ಕೆಟ್ಟದಲ್ಲ? ಎಂಬ ಹತ್ತಾರು ಪ್ರಶ್ನೆಗಳನ್ನು ತನಗೆ ತಾನೇ ಕೇಳಿಕೊಂಡಳು. ಉತ್ತರ ಪಡೆಯಲು ಅಜ್ಜಿಯ ಹತ್ತಿರ ಹೋದಳು. “ಅದು ನಶ್ಯ. ಹೊಗೆಸೊಪ್ಪಿನಿಂದ ಮಾಡಿರ್ತಾರೆ. ನಶ್ಯದ ಘಾಟಿನ ವಾಸನೆ ನಿಮ್ಮಜ್ಜನಿಗೆ ಇಷ್ಟ. ಮೂವತ್ತು ವರ್ಷದಿಂದ ಅಭ್ಯಾಸ ಮಾಡಿಕೊಂಡಿದ್ದಾರೆ.’
“ಅವರಿಗೆ ಸೇದಬೇಡಿ ಎಂದು ನೀನು ಹೇಳಲಿಲ್ಲವ?’
“ಅಯ್ಯೋ ನಿಮ್ಮಜ್ಜ ನನ್ನ ಮಾತು ಎಲ್ಲಿ ಕೇಳ್ತಾರೆ? ಹೊಗೆ ಸೊಪ್ಪು ಕೆಟ್ಟದ್ದು ಅಂತ ನಾನು ಅನೇಕ ಸಲ ಹೇಳಿದ್ದೇನೆ. ಹೊಗೆ ಸೊಪ್ಪಿನಿಂದಾನೇ ಅಲ್ವೆ ಬೀಡಿ ಸಿಗರೇಟು ಮಾಡೋದು. ನಶ್ಯಾನೂ ಕೆಟ್ಟದ್ದೇ. ನಿಮ್ಮಜ್ಜನ ಈ ಕೆಟ್ಟ ಚಟ ಬಿಡಿಸೋದಕ್ಕೆ ನನ್ನಿಂದಲಂತು ಆಗಲಿಲ್ಲ. ನೀನು ಹೇಳಿದರೆ ಏನಾದರೂ ಕೇಳಬಹುದೇನೊ.’ ಹೊಗೆಸೊಪ್ಪು ಕೆಟ್ಟದೆಂದು ಸಾನ್ವಿಗೆ ಅವಳ ಟೀಚರ್ ಶಾಲೆಯಲ್ಲಿ ಹೇಳಿದ್ದರು. ಹೊಗೆಸೊಪ್ಪಿನಿಂದ ಭಯಂಕರ ರೋಗಗಳು ಬರುವುದೆಂದೂ ತಿಳಿಸಿದ್ದರು. ಆದರೂ ಅಜ್ಜ ನಶ್ಯ ಸೇದುವ ಕೆಟ್ಟ ಅಭ್ಯಾಸ ಯಾಕೆ ಮಾಡಿಕೊಂಡಿದ್ದಾರೆ ಎಂದು ಯೋಚಿಸಿದಳು. ಅಜ್ಜನ ಕೆಟ್ಟ ಅಭ್ಯಾಸವನ್ನು ಹೇಗೆ ಬಿಡಿಸಬಹುದೆೆಂದು ಉಪಾಯ ಮಾಡಿದಳು.
ಅಂದು ಭಾನುವಾರ. ಸಾನ್ವಿ ಬೇಗ ಎದ್ದು ಮನೆಯಂಗಳದ ಗಿಡಗಳಿಗೆ ನೀರು ಹಾಕುತ್ತಿದ್ದಳು. ಮನೆಯೊಳಗಿಂದ ಅಜ್ಜ ಜೋರಾಗಿ ಗಲಾಟೆ ಮಾಡುತ್ತಿರುವುದು ಸಾನ್ವಿಗೆ ಕೇಳಿಸಿತು. ತನ್ನಲ್ಲೆ ಒಮ್ಮೆ ನಕ್ಕಳು ಸಾನ್ವಿ. ಅಜ್ಜನ ಗಲಾಟೆ ಜೋರಾದಂತಿತ್ತು. ಅವರು ಮನೆಯವರನ್ನೆಲ್ಲ ಎಬ್ಬಿಸಿ ಗಲಾಟೆ ಮಾಡುತ್ತಿದ್ದರು. ಗಿಡಗಳಿಗೆ ನೀರು ಹಾಕುವುದನ್ನು ನಿಲ್ಲಿಸಿ ಸಾನ್ವಿ ಬಾಗಿಲಲ್ಲಿ ಕಾಣಿಸಿಕೊಂಡಳು. ಅಜ್ಜ ಏನನ್ನೋ ಹುಡುಕುತ್ತಿದ್ದರು. ಎಲ್ಲರ ಮೇಲೂ ರೇಗುತ್ತಿದ್ದರು. “ರಾತ್ರಿ ಮಲಗುವಾಗ ನನ್ನ ಶರ್ಟ್ ಜೇಬಿನಲ್ಲಿದ್ದುದು ಈಗ ಹೇಗೆ ಮರೆಯಾಗುತ್ತೆ? ಅದಕ್ಕೇನು ರೆಕ್ಕೆ ಬಂದು ಹಾರಿಕೊಂಡು ಹೋಯಿತೆ? ಈಗ ಅದು ನನ್ನ ಶರ್ಟ್ ಜೇಬಿನಲ್ಲಿಲ್ಲ.’ “ಅಯ್ಯೋ ಸರಿಯಾಗಿ ಹುಡುಕಿ. ಅಲ್ಲೇ ಎಲ್ಲೋ ಇಟ್ಟಿರಬೇಕು. ಎಲ್ಲಿ ಹೋಗುತ್ತೆ ನಿಮ್ಮ ಡಬ್ಬಿ. ಇನ್ಯಾರಿಗೆ ಬೇಕು ಅದು ಈ ಮನೇಲಿ. ಸರಿಯಾಗಿ ಹುಡುಕಿ.’
“ಹುಡುಕಿದೆ ಅಂದೆನಲ್ಲ. ಬೆಳಗ್ಗೆದ್ದು ಮೂಗಿಗೆ ನಶ್ಯ ಏರಿಸದೆ ಇದ್ದರೆ ನನಗೆ ಬಹಳ ಸಿಟ್ಟು ಬರತ್ತೆ.’ ಸಾನ್ವಿಗೆ ಅರ್ಥವಾಯಿತು, ಅಜ್ಜ ತಮ್ಮ ನಶ್ಯದ ಡಬ್ಬಿ ಹುಡುಕುತ್ತಿದ್ದಾರೆಂದು.
“ಸಾನ್ವಿ ಪುಟ್ಟ, ನೀನು ನೋಡಿದ್ದಿಯೇನಮ್ಮ ಅಜ್ಜನ ನಶ್ಯದ ಡಬ್ಬ?’ಎಂದು ಅಜ್ಜಿ ಸಾನ್ವಿಯನ್ನು ಕೇಳಿದರು.
“ಅಯ್ಯೋ ನನಗೇನೂ ಗೊತ್ತಿಲ್ಲ. ಅವತ್ತು ಅಜ್ಜನನ್ನು ಕೇಳಿದೆ. ಅದನ್ನು ಮಕ್ಕಳು ಮುಟ್ಟಬಾರದು ಎಂದಿದ್ದರು. ನಾನೇಕೆ ಮುಟ್ಟಲಿ ಅದನ್ನು?!’
“ಛೇ ಮತ್ತೆಲ್ಲಿ ಹೋಯಿತು? ಇಟ್ಟ ಜಾಗದಲ್ಲಿ ವಸ್ತುಗಳು ಇರಲ್ಲ ಅಂದರೆ ಏನರ್ಥ?’ಎಂದು ಅಜ್ಜ ಮತ್ತೂಮ್ಮೆ ಗುಡುಗಿದರು
“ಅಜ್ಜ, ನಶ್ಯದ ಡಬ್ಬಿ ಹುಡುಕ್ತಿದ್ದೀರ?’
“ಹೂನಮ್ಮ’
“ನಶ್ಯಾನ ಹೊಗೆಸೊಪ್ಪಿನಿಂದ ಮಾಡ್ತಾರಂತೆ. ಹೊಗೆಸೊಪ್ಪು ತುಂಬ ಕೆಟ್ಟದಂತೆ. ಅದರ ಪುಡಿಯೇ ನಶ್ಯ ಅಂತೆ. ಕೆಟ್ಟದಾಗಿದ್ದರೆ ಬಿಟ್ಟು ಬಿಡಬಹುದಲ್ಲ.’
ಈಗ ಅಜ್ಜ ಸಾನ್ವಿಯನ್ನೇ ದುರುಗುಟ್ಟಿ ನೋಡಿದರು. ಇಷ್ಟೆಲ್ಲ ಮಾತಾಡುತ್ತಿದ್ದಾಳಲ್ಲ ಎಂದು ಅನುಮಾನ ಕೂಡ ಬಂದಿತು. ಸಾನ್ವಿ ಕೂಡ ತುಂಟ ನಗೆ ಬೀರಿದಳು. ಅಜ್ಜನಿಗೆ ಸ್ಪಷ್ಟವಾಯಿತು. ನಶ್ಯದ ಡಬ್ಬಿ ಮರೆಯಾಗುವುದರಲ್ಲಿ ಸಾನ್ವಿಯ ಪಾತ್ರ ಇದೆ ಎಂದು. ಪ್ರೀತಿಯಿಂದಲೇ ಕೇಳಿದರು, “ಸಾನ್ವಿ ಪುಟ್ಟಿà ನನ್ನ ನಶ್ಯದ ಡಬ್ಬ ಎಲ್ಲಿಟ್ಟಿದ್ದೀಯ ಹೇಳು? ಪ್ಲೀಸ್’
“ಅಯ್ಯೋ ನಂಗೊತ್ತಿಲ್ಲಪ್ಪ. ನಾನು ನೋಡ್ತಾ ಇದ್ದ ಹಾಗೆ ಗುಬ್ಬಿಮರಿ ನಶ್ಯದ ಡಬ್ಬಿ ತೆಗೊಂಡು ಅದರ ಗೂಡಿನಲ್ಲಿಟ್ಟಿತು.’
“ಕೊಟ್ಟುಬಿಡಮ್ಮ ಪುಟ್ಟಿ’
“ಅಜ್ಜ ನಿಮಗೆ ನಿಮ್ಮ ನಶ್ಯದ ಡಬ್ಬಿ ಬೇಕಾದರೆ ನನಗೆ ಒಂದು ಪ್ರಾಮಿಸ್ ಮಾಡಿ. ಇನ್ನು ಮೇಲೆ ನಶ್ಯ ಸೇದೋದಿಲ್ಲ ಅಂತ.’ ಅಜ್ಜ ಮತ್ತೂಮ್ಮೆ ಸಾನ್ವಿಯನ್ನು ದುರುಗುಟ್ಟಿ ನೋಡಿದರು. ತುಂಟ ಕಿರುನಗೆಯನ್ನು ಬೀರುತ್ತಿದ್ದಳು ಸಾನ್ವಿ. ಮನೆಯವರೆಲ್ಲ ಅಲ್ಲಿ ಸೇರಿದ್ದರು. “ಪ್ರಾಮಿಸ್ ಪುಟ್ಟಿ. ಒಂದು ಬಾರಿ ನಶÂ ಸೇದಿ ಆಮೇಲೆ ಡಬ್ಬಿಯನ್ನೇ ಎಸೆದು ಬಿಡುತ್ತೇನೆ.’
“ಆಯ್ತು ಪ್ರಾಮಿಸ್ ಅಂದ್ರೆ ಪ್ರಾಮಿಸ್ ಅಜ್ಜ’ ಎನ್ನುತ್ತ ಸಾನ್ವಿ ಓಡಿಹೋಗಿ ಟೀಪಾಯಿ ಹಿಂದೆ ತಾನು ಅಡಗಿಸಿದ್ದ ನಶ್ಯದ ಡಬ್ಬಿಯನ್ನು ಎತ್ತಿಕೊಂಡು ಬಂದಳು. ಅಜ್ಜ ಅವಳ ಹಿಂದೆ ಓಡಿದರು. ಅಜ್ಜ ತನ್ನ ಹಿಂದೆ ಬರುವುದನ್ನು ಕಂಡ ಸಾನ್ವಿ ನಶ್ಯದ ಡಬ್ಬಿ ಹಿಡಿದು ಮುಂದೋಡಿದಳು. ಓಡುತ್ತಲೇ ನಶ್ಯದ ಡಬ್ಬಿಯ ಮುಚ್ಚಳ ತೆರೆದುಕೊಂಡುಬಿಟ್ಟಿತು. ಓಡಿದ ರಭಸಕ್ಕೆ ನಶ್ಯವೆಲ್ಲ ಗಾಳಿಯಲ್ಲಿ ಹಾರಿ ಸುತ್ತಲೂ ಚದುರಿತು. ಸಾನ್ವಿ “ಆ… ಆ… ಆಕ್ಷೀ…’ ಎಂದು ಜೋರಾಗಿ ಸೀನಿದಳು. ಕಣ್ಣು ಮೂಗಿನಿಂದ ನೀರು ಬಂದಿತು. ಗಾಳಿಯಲ್ಲಿ ಹರಡಿದ್ದ ನಶ್ಯದ ಘಾಟಿಗೆ ಮನೆಯವರೆಲ್ಲ “ಆ… ಆ… ಆಕ್ಷೀ…’ ಎಂದು ಸೀನಿದರು.
ಅಜ್ಜನ ಕೈಗೆ ನಶ್ಯದ ಡಬ್ಬಿ ಸಿಕ್ಕಿತು. ಅದರಲ್ಲಿ ಒಂದು ಬಾರಿ ಸೇದಲು ಆಗುವಷ್ಟು ಮಾತ್ರ ಚಿಟಿಕೆ ನಶ್ಯ ಉಳಿದಿತ್ತು. ಅದನ್ನು ಸೇದಿ ಕೊಟ್ಟ ಮಾತಿನಂತೆ ಮನೆಯಿಂದಾಚೆ ನಶ್ಯದ ಡಬ್ಬಿಯನ್ನು ಅಜ್ಜ ಎಸೆದು ಸಾನ್ವಿಯತ್ತ ನಗೆ ಬೀರಿದರು. ಸಾನ್ವಿ ಮತ್ತೂಮ್ಮೆ “ಆ… ಆ… ಆಕ್ಷೀ..’ ಎಂದು ಸೀನಿದಳು.
– ಮತ್ತೂರು ಸುಬ್ಬಣ್ಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.