ಆನೆಯ ಪ್ರತ್ಯುಪಕಾರ
Team Udayavani, Jun 22, 2019, 5:00 AM IST
ಏಳರ ಹರೆಯದ ಪುಟ್ಟ ಬಾಲಕ ಇಶಾನ್. ಅದೊಂದು ದಿನ ಆಟ ಆಡುತ್ತಾ ದಟ್ಟ ಕಾಡೊಳಗೆ ಬಂಧಿಯಾದ. ಹುಲಿಯೊಂದು ಅವನನ್ನು ತಿನ್ನಲು ಹೊಂಚು ಹಾಕಿತು. ಅವನು ಹೇಗೆ ಅದರಿಂದ ತಪ್ಪಿಸಿಕೊಂಡ ಗೊತ್ತೇ?
ಅದು ಸುಂದರ ಊರು. ಪಕ್ಕದಲ್ಲಿ ದಟ್ಟ ಕಾಡಿತ್ತು. ಕಾಡಿನಲ್ಲಿ ಸಮೃದ್ಧ ನೀರು, ಆಹಾರ ದೊರೆಯುವ ಕಾರಣ ಪ್ರಾಣಿ- ಪಕ್ಷಿಗಳು ಊರಿಗೆ ಬಂದು ತೊಂದರೆ ಕೊಡುತ್ತಿರಲಿಲ್ಲ. ಜನರೂ ಅಷ್ಟೇ ಕಾಡಿನ ತಂಟೆಗೆ ಹೋಗದೆ, ಮರ ಕಡಿಯದೆ ತಮ್ಮಷ್ಟಕ್ಕೆ ತಾವು ಬದುಕುತ್ತಿದ್ದರು. ಆ ಊರಿನ ಕೊನೆಯಲ್ಲಿ ಕಾಡಂಚಿಗೆ ತಾಗಿಕೊಂಡಿರುವ ಮನೆ ರಾಮುವಿನದ್ದು. ಕೂಲಿ ಕೆಲಸ ಮಾಡುವ ಆತನದ್ದು ಪತ್ನಿ ಗಿರಿಜಾ ಮತ್ತು ಏಳು ವರ್ಷದ ಪುತ್ರ ಇಶಾನ್ ಒಳಗೊಂಡ ಪುಟ್ಟ ಕುಟುಂಬ. ಇದ್ದುದರಲ್ಲಿ ತೃಪ್ತಿ ಕಾಣುವ ಮನಸ್ಥಿತಿ ಅವರದ್ದು. ಹೀಗಾಗಿ ಆನಂದದಿಂದ ಬದುಕುತ್ತಿದ್ದರು.
ಮಳೆಗಾಲದ ಒಂದು ದಿನ. ರಾತ್ರಿ ಇಡೀ ಜೋರು ಮಳೆ ಬಂದು ಬೆಳಗಿನ ಜಾವ ಬಿಟ್ಟಿತ್ತು. ಅಂಗಳದ ಅಂಚಿನಲ್ಲಿ ಮಳೆ ನೀರು ಇಂಗಲು ಮಾಡಿದ್ದ ಹೊಂಡದಿಂದ ಶಬ್ದ ಕೇಳಿಸಲಾರಂಭಿಸಿತು. ರಾಮು ಕುತೂಹಲದಿಂದ ಅತ್ತ ಹೋಗಿ ನೋಡಿದ. ಹೊಂಡದ ಕೆಸರಿನಲ್ಲಿ ಆನೆ ಮರಿಯೊಂದು ಸಿಲುಕಿ ಹೊರಬರಲಾರದೆ ಒದ್ದಾಡುತ್ತಿತ್ತು. ತಾಯಿ ಆನೆ ದಡದಲ್ಲಿ ನಿಂತು ಸೊಂಡಿಲು ಚಾಚುತ್ತಿದ್ದರೂ ಕಾಲು ಕೆಸರಿನಲ್ಲಿ ಹುದುಗಿ ಹೋಗಿದ್ದರಿಂದ ಮರಿಗೆ ಮೇಲೆ ಏಳಲು ಸಾಧ್ಯವಾಗುತ್ತಿರಲಿಲ್ಲ. ತಾಯಿ-ಮರಿಯ ಒದ್ದಾಟ ಕಂಡು ರಾಮುಗೆ ಕನಿಕರ ಮೂಡಿತು.
ಪತ್ನಿ, ಮಗನನ್ನು ಕರೆದು ಹಾರೆಯ ಸಹಾಯದಿಂದ ಕೆಸರು ಹೊರಗೆ ಹಾಕಿ ಸಾಹಸ ಮಾಡಿ ಆನೆ ಮರಿಯನ್ನು ಹೊಂಡದಿಂದ ಮೇಲೆತ್ತಿದರು. ಮರಿಯ ಕಾಲಿಗೆ ಗಾಯವಾಗಿತ್ತು. ಗಿರಿಜಾ ಒಂದೆರಡು ಮೂಲಿಕೆ ಅರೆದು ಹಚ್ಚಿದಳು. ತಾಯಿ ಆನೆ ಕೃತಜ್ಞತೆಯಿಂದ ಸೊಂಡಿಲು ಎತ್ತಿ ಮೂವರ ತಲೆ ಸವರಿತು. ಅನಂತರ ಮರಿಯನ್ನು ಕರೆದುಕೊಂಡು ಕಾಡಿನೊಳಗೆ ಹೊರಟು ಹೋಯಿತು.
ಸುಮಾರು ಆರು ತಿಂಗಳು ಕಳೆದಿರಬಹುದು. ಆ ದಿನ ಶಾಲೆಗೆ ರಜೆ ಇತ್ತು. ರಾಮು ಕೆಲಸಕ್ಕೆ ಹೋಗಿದ್ದ. ಗಿರಿಜಾ ಅಡುಗೆ ಕೆಲಸದಲ್ಲಿ ನಿರತಳಾಗಿದ್ದಳು. ಇಶಾನ್ ಆಡುತ್ತಾ ಕಾಡಿನೊಳಗೆ ಬಂದು ಬಿಟ್ಟ. ಹೊರ ಬರಲು ದಾರಿ ಸಿಗದೆ ಮತ್ತೂ ಮುಂದೆ ಹೋದ. ಹೀಗೆ ದಾರಿ ಹುಡುಕಿಕೊಂಡೇ ಕಾಡಿನ ಮಧ್ಯ ಭಾಗಕ್ಕೆ ತಲುಪಿದ್ದ. ದಟ್ಟ ಕಾಡದು. ಇನ್ನು ಎತ್ತ ಸಾಗಬೇಕೆಂದೇ ಇಶಾನ್‌ಗೆ ತಿಳಿಯದಾಯಿತು. ಪ್ರಾಣಿ- ಪಕ್ಷಿಗಳ ಕೂಗು, ಕತ್ತಲು, ದೈತ್ಯಾಕಾರದ ಮರ- ಇವೆಲ್ಲವೂ ಪುಟ್ಟ ಇಶಾನ್‌ನಲ್ಲಿ ಭಯ ಹುಟ್ಟಿಸುತ್ತಿದ್ದವು. ಮನೆ ಬಿಟ್ಟು ಅದಾಗಲೆ ನಾಲ್ಕು- ಐದು ಗಂಟೆ ಮೇಲಾಗಿತ್ತು. ಹಸಿವು ಬೇರೆ ಕಾಡುತ್ತಿತ್ತು. ಒಟ್ಟಿನಲ್ಲಿ ಇಶಾನ್ ಕಂಗಾಲಾಗಿದ್ದ. ಪುಟ್ಟ ತೊರೆಯೊಂದರ ಬಳಿ ದಾರಿ ತೋಚದೆ ಸುಸ್ತಾಗಿ ನಿಂತಿದ್ದ.
ಆಗಲೇ ಅಲ್ಲಿಗೆ ನೀರು ಕುಡಿಯಲು ಅಂದು ಇಶಾನ್ ಮನೆಯವರು ಕಾಪಾಡಿದ್ದ ಆನೆ ಮರಿ ಬಂತು. ಇಶಾನ್‌ನನ್ನೂ ಗುರುತು ಹಿಡಿದ ಅದು ಸಂಭ್ರಮದಿಂದ ದುಡು ದುಡು ಓಡಿಬಂದು ಸೊಂಡಿಲಿನಿಂದ ಇಶಾನ್‌ನನ್ನು ತಬ್ಬಿಕೊಂಡಿತು. ಅನೇಕ ದಿನಗಳ ಅನಂತರ ಸ್ನೇಹಿತನೊಬ್ಬ ಸಿಕ್ಕಷ್ಟೇ ಖುಷಿಯಾಗಿತ್ತು ಆ ಪುಟ್ಟ ಜೀವಕ್ಕೆ. ಇಶಾನ್‌ಗೂ ನೆಮ್ಮದಿ ಎನಿಸಿತು. ಅಪರಿಚಿತ ಸ್ಥಳದಲ್ಲಿ ನಮ್ಮವನೊಬ್ಬ ಸಿಕ್ಕಿದರೆ ಆಗುವ ನೆಮ್ಮದಿ ಭಾವವೇ ಅವನ ಮನದಲ್ಲೂ ಮೂಡಿತು.
ಮನುಷ್ಯರ ವಾಸನೆ ಗ್ರಹಿಸಿ ಅತ್ತ ಬಂದ ಹುಲಿಗೆ ಇಶಾನ್ ಕಣ್ಣಿಗೆ ಬಿದ್ದ. ಅವನ ಮೇಲೆರಗಲು ಪೊದೆಯ ಹಿಂದೆ ಅಡಗಿ ಕುಳಿತು ಸ್ವಲ್ಪ ಹೊತ್ತಿನಿಂದ ಹೊಂಚು ಹಾಕುತ್ತಿತ್ತು. ಇಶಾನ್ ಒಬ್ಬನೇ ಇದ್ದಿದ್ದು ಹುಲಿಗೆ ಸಮಾಧಾನ ತಂದಿತ್ತು. ಆದರೆ ಇದ್ದಕ್ಕಿದ್ದಂತೆ ಆನೆ ಮರಿ ಇಶಾನ್‌ಗೆ ಅಂಟಿಕೊಂಡಿದ್ದು ನೋಡಿ ಅದಕ್ಕೆ ಕೋಪ ಬಂತು. ಅಸಹನೆಯಿಂದ ಪೊದೆಯಿಂದ ಆಚೆ ಬಂತು. ದೈತ್ಯ ವ್ಯಾಘ್ರನನ್ನು ನೋಡಿ ಇಶಾನ್ ಬೆಚ್ಚಿಬಿದ್ದ. ಅದು ಒಂದೊಂದೇ ಹೆಜ್ಜೆ ಇಟ್ಟು ಮುಂದೆ ಬರತೊಡಗಿತು. ಆನೆ ಮರಿಗೂ ಬೃಹತ್ ಹುಲಿಯೊಂದಿಗೆ ಹೋರಾಡಲು ಸಾಧ್ಯವಿಲ್ಲ ಎನಿಸಿ ಸೊಂಡಿಲು ಮೇಲೆತ್ತಿ ಳಿಟ್ಟಿತ್ತು.
ಅಲ್ಲೇ ಹತ್ತಿರದಲ್ಲಿ ಸೊಪ್ಪು ತಿನ್ನುತ್ತಿದ್ದ ತಾಯಿ ಆನೆಗೆ ಮರಿಯ ಅಪಾಯದ ಕೂಗು ಕೇಳಿಸಿ ಓಡಿ ಬಂತು. ತನ್ನ ಮರಿಯೊಂದಿಗಿದ್ದ ಇಶಾನ್‌ನನ್ನು ನೋಡಿ ಅದಕ್ಕೆ ಸಂತಸವಾಯಿತು. ತತ್‌ಕ್ಷಣ ಅದಕ್ಕೆ ಮುಂದೆ ಇದ್ದ ಹುಲಿ ಕಾಣಿಸಿತು. ಮುಂದಕ್ಕೆ ಧಾವಿಸಿದ ಆನೆ ತನ್ನ ಸೊಂಡಿಲು ಚಾಚಿ ಹುಲಿಯನ್ನು ಬಿಗಿದು ದೂರಕ್ಕೆ ಎಸೆಯಿತು. ತರಚಿದ ಗಾಯವಾದ ಹುಲಿ ನೋವಿನಿಂದ ನರಳಿ ಕಾಡಿನ ಮಧ್ಯೆ ಓಡಿ ಹೋಯಿತು.
ಆನೆಗೆ ಇಶಾನ್‌ನ ಮುಖ ನೋಡಿ ಅವನ ಪರಿಸ್ಥಿತಿ ಅರ್ಥವಾಯಿತು. ಅವನು ಹಸಿದಿದ್ದಾನೆಂದು ಗ್ರಹಿಸಿ ಒಂದಷ್ಟು ಹಣ್ಣುಗಳನ್ನು ತಂದು ಗುಡ್ಡೆ ಹಾಕಿತು. ಅದನ್ನು ತಿಂದು ನೀರು ಕುಡಿದ ಇಶಾನ್‌ಗೆ ಹೋದ ಜೀವ ಬಂದಂತಾಯಿತು. ಅನಂತರ ಅವನನ್ನು ಬೆನ್ನ ಮೇಲೆ ಕುಳ್ಳಿರಿಸಿ ಆನೆ ತನ್ನ ಮರಿಯೊಂದಿಗೆ ಊರಿನ ಕಡೆ ಹೆಜ್ಜೆ ಹಾಕಿತು.
ಇತ್ತ ಇಶಾನ್ ಕಾಣದೆ ರಾಮು ಮತ್ತು ಗಿರಿಜಾ ಕಂಗಾಲಾಗಿ ಕುಳಿತಿದ್ದರು. ಆನೆಯೊಂದಿಗೆ ಮಗ ಬಂದಿದ್ದು ನೋಡಿ ಅವರಿಗೆ ಸಮಾಧಾನವಾಯಿತು. ಆನೆಯನ್ನು ತಬ್ಬಿ ಕೃತಜ್ಞತೆ ಸಲ್ಲಿಸಿದರು.
- ರಮೇಶ್ ಬಳ್ಳಮೂಲೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.