ಅರ್ಜುನನು ಪಾಶುಪತಾಸ್ತ್ರ ಪಡೆದ!
Team Udayavani, Jul 13, 2017, 11:11 AM IST
ಒಂದು ದಿನ ಯುಧಿಷ್ಠಿರನು ಅರ್ಜುನನನ್ನು, “ದುರ್ಯೋಧನನಿಗೆ ಭೀಷ್ಮರು, ದ್ರೋಣರು, ಅಶ್ವತ್ಥಾಮ, ಕೃಪ, ಕರ್ಣರಂತಹ ಮಹಾನ್ ಪರಾಕ್ರಮಿಗಳ ಬೆಂಬಲವಿದೆ. ಆತ ಅನೇಕ ರಾಜರನ್ನು ಒಲಿಸಿಕೊಂಡಿದ್ದಾನೆ. ನೀನು ತಪಸ್ಸು ಮಾಡಿ ದೇವತೆಗಳನ್ನು ಒಲಿಸಿಕೊಂಡು ದಿವ್ಯಾಸ್ತ್ರಗಳನ್ನು ಪಡೆದುಕೊಳ್ಳಬೇಕು. ಇಂದ್ರನಲ್ಲಿ ಹಲವು ದಿವ್ಯಾಸ್ತ್ರಗಳಿವೆ. ಅವನಿಂದ ಅವೆಲ್ಲವನ್ನೂ ಪಡೆದುಕೊಳ್ಳಬೇಕು’ ಎಂದು ಹೇಳಿದ. ಅಣ್ಣನ ಆದೇಶವನ್ನು ಪಾಲಿಸಲು ನಿರ್ಧರಿಸಿದ ಅರ್ಜುನನು ಬಿಲ್ಲು ಬತ್ತಳಿಕೆ ತೆಗೆದುಕೊಂಡು ಹಿಮಾಲಯವನ್ನು ದಾಟಿ ಇಂದ್ರಕೀಲ ಪರ್ವತವನ್ನು ಸೇರಿದ. ಅಲ್ಲಿ ಮೊದಲು ಇಂದ್ರನ ದರ್ಶನವಾಯಿತು. ಅವನು, “ಮೊದಲು ಶಿವನನ್ನು ಪ್ರತ್ಯಕ್ಷ ಮಾಡಿಕೋ. ಅನಂತರ ಸ್ವರ್ಗಕ್ಕೆ ಬರಲು ಸಾಧ್ಯವಾಗುತ್ತದೆ’ ಎಂದು ಹೇಳಿದ. ಅರ್ಜುನನು ಶಿವನನ್ನು ಕುರಿತು ಉಗ್ರ ತಪಸ್ಸನ್ನು ಪ್ರಾರಂಭಿಸಿದ.
ಕೆಲವು ದಿನಗಳ ನಂತರ ಶಿವನು ಕಿರಾತನ ವೇಷ ಧರಿಸಿ ಬಿಲ್ಲನ್ನು ಹಿಡಿದು ಹೊರಟ. ಪಾರ್ವತಿಯು ಕಿರಾತೆಯ ವೇಷದಲ್ಲಿ ಅವನೊಡನೆ ಹೊರಟಳು. ಅವರು ಅರ್ಜುನನ ಬಳಿ ಬಂದಾಗ ಕಾಡು ಹಂದಿಯೊಂದು ಅರ್ಜುನನ ಮೇಲೆ ಆಕ್ರಮಣ ಮಾಡುವುದರಲ್ಲಿತ್ತು. ಅರ್ಜುನನು ಬಾಣವನ್ನು ಹೊಡೆಯುವುದರಲ್ಲಿದ್ದ. ಶಿವನು, “ಈ ಮೃಗವನ್ನು ನಾನು ಅಟ್ಟಿಸಿಕೊಂಡು ಬಂದೆ, ನೀನು ಹೊಡೆಯಬೇಡ’ ಎನ್ನುತ್ತ ಬಾಣವನ್ನು ಹೂಡಿದ. ಅರ್ಜುನ ಈ ಮಾತಿಗೆ ಒಪ್ಪಲಿಲ್ಲ. ಒಂದೇ ವೇಳೆಗೆ ಇಬ್ಬರೂ ಬಾಣ ಪ್ರಯೋಗ ಮಾಡಿದರು. ಇಬ್ಬರ ಬಾಣಗಳೂ ಹಂದಿಯ ಶರೀರವನ್ನು ಹೊಕ್ಕವು. ಅದು ಸತ್ತು ಬಿದ್ದಿತು. ಅರ್ಜುನನು ಶಿವನಿಗೆ, “ಯಾರು ನೀನು? ನಾನು ಗುರಿ ಇಟ್ಟಿದ್ದಾಗ ನೀನೇಕೆ ಹೊಡೆದೆ? ನಿನಗೆ ಬುದ್ಧಿ ಕಲಿಸುತ್ತೇನೆ’ ಎಂದ. ಶಿವನು, “ಇದು ಅಟ್ಟಿಸಿಕೊಂಡು ಬಂದು ಗುರಿ ಇಟ್ಟ ಮೃಗ. ನೀನೇಕೆ ಹೊಡೆದೆ? ಬುದ್ಧಿ ಕಲಿಸುತ್ತೀಯಾ? ಕಲಿಸು’ ಎಂದ.
ಈ ಮಾತಿನಿಂದ ಸಿಟ್ಟಿಗೆದ್ದ ಅರ್ಜುನನು ಶಿವನ ಮೇಲೆ ಬಾಣಗಳನ್ನು ಪ್ರಯೋಗಿಸಿದ. ಶಿವನಿಗೆ ಏನೂ ಆಗಲಿಲ್ಲ. ಅರ್ಜುನನಿಗೆ ಆಶ್ಚರ್ಯವಾಯಿತು. ಮತ್ತೆ ಮತ್ತೆ ಬಾಣಗಳನ್ನು ಬಿಟ್ಟ. ಅಗ್ನಿದೇವನು ಯಾವಾಗಲೂ ಬರಿದಾಗದ ಬತ್ತಳಿಕೆಯನ್ನು ಅರ್ಜುನನಿಗೆ ಅನುಗ್ರಹಿಸಿದ್ದ. ಈಗ ಅದೂ ಬರಿದಾಯಿತು. ಶಿವನನ್ನು ಬಿಲ್ಲಿನಿಂದ ಹೊಡೆಯಲು ಹೋದರೆ ಶಿವನು ಬಿಲ್ಲನ್ನೇ ಕಿತ್ತುಕೊಂಡ. ಇಬ್ಬರೂ ಹೊಡೆದಾಡಿದರು; ಶಿವನ ಪೆಟ್ಟುಗಳನ್ನು ತಡೆಯಲಾರದೆ ಅರ್ಜುನನು ಕೆಳಗೆ ಬಿದ್ದ. ಆಗ ಶಿವನು ನಿಜರೂಪದಲ್ಲಿ ಕಾಣಿಸಿಕೊಂಡು ಅರ್ಜುನನ ಸಾಮರ್ಥ್ಯವನ್ನು ಹೊಗಳಿದ. ಅವನ ಬತ್ತಳಿಕೆಯನ್ನೂ, ಗಾಂಢೀವ ಧನುಸ್ಸನ್ನೂ ಹಿಂದಿರುಗಿಸಿ, ಪಾಶುಪತಾಸ್ತ್ರವನ್ನೂ ಅನುಗ್ರಹಿಸಿ ಮಾಯವಾದ.
ಅನಂತರ ಇಂದ್ರ, ಯಮ, ಕುಬೇರ ಮತ್ತು ವರುಣ ಬಂದರು. ಕುಬೇರನು ಅಂತರ್ಧಾನಾಸ್ತ್ರವನ್ನೂ, ಯಮನು ದಂಡಾಸ್ತ್ರವನ್ನೂ, ವರುಣನು ವಾರುಣಾಸ್ತ್ರವನ್ನೂ ಕೊಟ್ಟರು. ಇಂದ್ರನು ತನ್ನ ಲೋಕಕ್ಕೆ ಹೋಗಿ ಮಾತಲಿಯೊಂದಿಗೆ ತನ್ನ ರಥವನ್ನು ಕಳುಹಿಸಿದ. ಅರ್ಜುನನು ಇಂದ್ರಲೋಕಕ್ಕೆ ಆ ರಥದಲ್ಲಿ ಹೋದ. ಇಂದ್ರನು ಅವನನ್ನು ಬಹು ಪ್ರೀತಿಯಿಂದ ಕಂಡು ಅವನಿಗೆ ಮಹಾಸ್ತ್ರಗಳನ್ನು ಕೊಟ್ಟ. ಚಿತ್ರಸೇನ ಎಂಬ ಗಂಧರ್ವನು ಅರ್ಜುನನಿಗೆ ಸಂಗೀತ ಮತ್ತು ನೃತ್ಯಗಳನ್ನು ಕಲಿಸಿದ. ಆನಂತರದಲ್ಲಿ ಅರ್ಜುನನು ಇಂದ್ರಲೋಕದಲ್ಲಿ ಐದು ವರ್ಷಗಳ ಕಾಲ ಇದ್ದು, ನಂತರ ಹಸ್ತಿನಾವತಿಗೆ ಮರಳಿ ಬಂದ.
ಪ್ರೊ. ಎಲ್. ಎನ್ ಶೇಷಗಿರಿರಾವ್ ಅವರ “ಕಿರಿಯರ ಭಾಗವತ’ ಪುಸ್ತಕದಿಂದ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kitchen appliance: ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!
Bigg Boss: ಫಿನಾಲೆಗೂ ಮುನ್ನ ವಾರದ ಮಧ್ಯದಲ್ಲೇ ಎಲಿಮಿನೇಷನ್; ಹೊರಗೆ ಹೋದದ್ದು ಇವರೇ
Champions Trophy: ರಾಹುಲ್, ಶಮಿ, ಜಡೇಜಾ ಸ್ಥಾನ ಪಡೆಯುವುದು ಅನುಮಾನ
Kinnigoli: ಕೃತಕ ನೆರೆ ಸಮಸ್ಯೆಗೆ ಪರಿಹಾರ
Mangaluru: ಗುಜ್ಜರಕೆರೆ ನೀರು ಬಳಕೆ ಯೋಗ್ಯವಲ್ಲ; ಪ್ರಯೋಗಾಲಯ ವರದಿಯಿಂದ ಮತ್ತೆ ಸಾಬೀತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.