ಭೀಷ್ಮರು ಬೋಧಿಸಿದ ರಾಜಧರ್ಮ
Team Udayavani, Aug 31, 2017, 6:35 AM IST
ಕುರುಕ್ಷೇತ್ರ ಯುದ್ಧ ಮುಗಿಯಿತು. ಪಾಂಡವರು ಕೌರವರ ವಿರುದ್ಧದ ಯುದ್ಧದಲ್ಲಿ ವಿಜಯಿಗಳಾದರು. ಇದಾಗಿ ಒಂದು ತಿಂಗಳು ಪಾಂಡವರು ಗಂಗಾ ನದಿಯ ತೀರದಲ್ಲಿಯೇ ಇದ್ದರು. ಯುಧಿಷ್ಠಿರನಿಗೆ ಬಹಳ ತಳಮಳವಾಗುತ್ತಿತ್ತು. ತನಗೆ ರಾಜ್ಯ ಬೇಡ ಎನ್ನುವಷ್ಟು ಜಿಗುಪ್ಸೆಯಾಗುತ್ತಿತ್ತು. ಅವನ ತಮ್ಮಂದಿರೂ, ದ್ರೌಪದಿಯೂ, ಕೃಷ್ಣನೂ ಅವನಿಗೆ ಸಮಾಧಾನ ಹೇಳಿ ಸಿಂಹಾಸನವನ್ನೇರಲು ಒಪ್ಪಿಸಿದರು. ಬಹಳ ವೈಭವದಿಂದ ಅವನಿಗೆ ಪಟ್ಟಾಭಿಷೇಕವಾಯಿತು. ರಾಜ್ಯದ ಜನರು ಶ್ರೇಷ್ಠ ರಾಜನು ದೊರಕಿದನೆಂದು ಸಂತೋಷಪಟ್ಟರು.
ಒಂದುದಿನ ಬೆಳಗ್ಗೆ ಯುಧಿಷ್ಠಿರನು ಕೃಷ್ಣನನ್ನು ಕಂಡಾಗ ಅವನು ಚಿಂತೆಯಲ್ಲಿದ್ದ. ಈ ದುಗುಡಕ್ಕೆ ಕಾರಣವೇನು ಎಂದು ಕೇಳಿದರೆ ಶರಶಯೆಯಲ್ಲಿದ್ದ ಭೀಷ್ಮರನ್ನು ಕುರಿತು ಯೋಚಿಸುತ್ತಿದ್ದೇನೆ ಎಂದ. ಭೀಷ್ಮರಂಥ ಮಹಾನುಭಾವರ ಮಾರ್ಗದರ್ಶನ ಸಿಗುವುದು ಅಪರೂಪ. ಅವರು ಬದುಕಿದ್ದಾಗಲೇ ಅವರಿಂದ ರಾಜಧರ್ಮದ ಮಾರ್ಗದರ್ಶನ ಪಡೆಯಬೇಕೆಂದು ಕೃಷ್ಣನು ಯುಧಿಷ್ಠಿರನಿಗೆ ಹೇಳಿದ. ಇಬ್ಬರೂ ಭೀಷ್ಮರ ಬಳಿಗೆ ಹೋದರು. ಯುಧಿಷ್ಠಿರನಿಗೆ ಉಪದೇಶ ಮಾಡಬೇಕೆಂದು ಕೃಷ್ಣನು ಭೀಷ್ಮರನ್ನು ಪ್ರಾರ್ಥಿಸಿದ. ಅವರು ಒಪ್ಪಿ ಉಪದೇಶ ಮಾಡಿದರು.
“ರಾಜನು ದೇವತೆಗಳಲ್ಲಿಯೂ, ಬ್ರಾಹ್ಮಣರಲ್ಲಿಯೂ ಭಕ್ತಿಯಿಂದ ನಡೆದುಕೊಳ್ಳಬೇಕು. ಅವನಲ್ಲಿ ದಯೆ ಇರಬೇಕು. ಆದರೆ ಅವನು ತೀರಾ ಮೃದುವಾಗಬಾರದು. ಗರ್ವಿಷ್ಠರನ್ನೂ, ದುಷ್ಟರನ್ನೂ ನಿಗ್ರಹಿಸಬೇಕು. ರಾಜನಿಗೆ ಪ್ರಜೆಗಳನ್ನು ಚೆನ್ನಾಗಿ ಪಾಲಿಸುವುದೇ ಪರಮಧರ್ಮ. ಧೈರ್ಯಶಾಲಿಗಳೂ ಸಜ್ಜನರೂ, ಒಳ್ಳೆಯವರನ್ನೇ ಸ್ನೇಹಿತರಾಗಿ ಹೊಂದಿರುವವರೂ, ವಿದ್ಯಾವಂತರೂ ಲೋಕಾನುಭವ ಉಳ್ಳವರೂ ಆದವರನ್ನೇ ಮಂತ್ರಿಗಳನ್ನಾಗಿ ಆರಿಸಿಕೊಳ್ಳಬೇಕು. ಅನಿವಾರ್ಯವಾದಾಗ ಮಾತ್ರ ಯುದ್ಧ ಮಾಡಬೇಕು. ಶೀಲ ಮುಖ್ಯ. ಶೀಲ ಕೆಟ್ಟರೆ, ಬಲ ಸಂಪತ್ತು ಎಲ್ಲವೂ ದೂರವಾಗುತ್ತವೆ. ಅಪಾಯ ಬರುವುದಕ್ಕೆ ಮೊದಲೇ ಅದನ್ನು ನಿರೀಕ್ಷಿಸಿ ಏನು ಮಾಡಬೇಕೆಂದು ಯೋಚಿಸಬೇಕು. ಶತ್ರುಗಳು ಮೃದುವಾಗಿ ಮಾತನಾಡಿದ ಮಾತ್ರಕ್ಕೆ ಅವರನ್ನು ನಂಬಬಾರದು. ಏನೇ ಆಗಲಿ, ಮನುಷ್ಯನು ಕೃತಘ್ನನಾಗಬಾರದು. ಒಳ್ಳೆಯದೆಂದು ಕಂಡ ಕೆಲಸವನ್ನು ಕೂಡಲೇ ಮಾಡಿಬಿಡಬೇಕು. ತ್ಯಾಗವಿಲ್ಲದೆ ಸುಖವಿಲ್ಲ. ರಾಗದ್ವೇಷಗಳನು, ಭಯಲೋಭಗಳನ್ನು ಚಿಂತೆ -ಮೋಹಗಳನ್ನು ಬಿಟ್ಟವನು ಚಿಂತೆ ಇಲ್ಲದೆ ಸುಖವಾಗಿರುತ್ತಾನೆ…’ ಹೀಗೆ ಭೀಷ್ಮರು ಯುಧಿಷ್ಠಿರನಿಗೆ ರಾಜಧರ್ಮವನ್ನೂ ಮನುಷ್ಯನು ಬದುಕಬೇಕಾದ ರೀತಿಯನ್ನೂ ತಿಳಿಸಿಕೊಟ್ಟರು.
ಉತ್ತರಾಯಣ ಹುಟ್ಟಿದ ಕೂಡಲೇ ಯುಧಿಷ್ಠಿರ, ಪಾಂಡವರು, ವಿಧುರ, ಧೃತರಾಷ್ಟ್ರ, ಕೃಷ್ಣ, ಗಾಂಧಾರಿ, ಕುಂತಿ ಎಲ್ಲರೂ ಭೀಷ್ಮರ ಬಳಿಗೆ ಬಂದರು. ಅವರು ಧೃತರಾಷ್ಟ್ರನಿಗೆ ಸಮಾಧಾನ ಹೇಳಿದರು. ಕೃಷ್ಣನಿಗೆ ಕೈ ಮುಗಿದು ಎಲ್ಲರಿಂದ ಬೀಳ್ಕೊಂಡರು. ಭೀಷ್ಮರ ಪ್ರಾಣವು ಆಕಾಶಕ್ಕೆ ಹಾರಿತು. ಪಾಂಡವರು ಬಹು ಭಕ್ತಿಯಿಂದ ಅವರ ಅಂತ್ಯಸಂಸ್ಕಾರ ಮಾಡಿದರು.
– ಪ್ರೊ. ಎಲ್. ಎನ್ ಶೇಷಗಿರಿರಾವ್
(ಅವರ “ಕಿರಿಯರ ಭಾಗವತ’ ಪುಸ್ತಕದಿಂದ)
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.