ಬಾಟಲಿ ಸೇತುವೆ ನೋಡಲು ಬರ್ತೀರಾ?
Team Udayavani, Apr 25, 2019, 6:15 AM IST
ಜೀವರಾಶಿಗೆ ಮಾರಕವಾಗಿರುವ ಪ್ಲಾಸ್ಟಿಕ್ ಬಾಟಲಿಗಳನ್ನು ಎಲ್ಲೆಂದರಲ್ಲಿ ಬಿಸಾಡದೆ ಜನರಿಗೆ ಉಪಯೋಗ ಆಗುವ ಹಾಗೆ ಏನು ಮಾಡಬಹುದು? ಇಲ್ಲೊಂದು ಕಡೆ ಬಾಟಲಿಗಳನ್ನು ಸಂಗ್ರಹಿಸಿ ಸೇತುವೆ ಮಾಡಿದ್ದಾರೆ!
ಬೀದಿಯುದ್ದಕ್ಕೂ ರಾಶಿ ರಾಶಿಯಾಗಿ ಬೀಳುವ ಪ್ಲಾಸ್ಟಿಕ್ ಬಾಟಲಿಗಳು ಪರಿಸರಕ್ಕೆ ಮಾರಕವೆಂಬುದರಲ್ಲಿ ಅನುಮಾನವೇ ಇಲ್ಲ. ನೀರು, ತುಪ್ಪ, ಪಾನೀಯಗಳು… ಹೀಗೆ ಹಲವು ಆಹಾರಪದಾರ್ಥಗಳನ್ನು ಮಾರಾಟ ಮಾಡಲು ಬಳಸುವ ಈ ಬಾಟಲಿಗಳನ್ನು ಖಾಲಿಯಾದ ಕೂಡಲೇ ಕಂಡಲ್ಲಿ ಎಸೆದು ಬಿಡುತ್ತಾರೆ. ಇವು ಸುತ್ತಮುತ್ತಲ ಪರಿಸರ ಸೇರಿ ಉಂಟು ಮಾಡುವ ಹಾನಿ ಅಷ್ಟಿಷ್ಟಲ್ಲ. ಒಂದು ಲೆಕ್ಕಾಚಾರದಂತೆ ವಿಶ್ವದಾದ್ಯಂತ ಸುಮಾರು ಹತ್ತು ದಶಲಕ್ಷ ಟನ್ ಪ್ರಮಾಣದ ಪ್ಲಾಸ್ಟಿಕ್, ಸಮುದ್ರವನ್ನು ಸೇರುತ್ತದಂತೆ. ಇವು ಕಡಲಲ್ಲಿ ವಾಸಿಸುವ ಜೀವರಾಶಿಗೆ ಮಾರಕವಾಗಿವೆ.
ಇಂಥ ನಿರುಪಯೋಗಿ ಬಾಟಲಿಗಳನ್ನು ಒಟ್ಟು ಮಾಡಿ, ಅದರಿಂದಲೇ ಜನರು ದಾಟುವ ಒಂದು ಸೇತುವೆಯನ್ನು ನದಿಗೆ ಅಡ್ಡಲಾಗಿ ನಿರ್ಮಿಸುವ ಪ್ರಯತ್ನವೊಂದು ಗಿನ್ನೆಸ್ ದಾಖಲೆಗೆ ಸೇರಿಕೊಂಡಿದೆ. ಬಾಟಲಿಗಳಿಂದ ಸೇತುವೆ ನಿರ್ಮಿಸುವ ಸಾಹಸವೇನೂ ಇದೇ ಮೊದಲಲ್ಲ. ಆದರೆ ಇಷ್ಟು ದೊಡ್ಡ ಬಾಟಲಿ ಸೇತುವೆಯೊಂದನ್ನು ಕಟ್ಟಿರುವುದು ಇದೇ ಮೊದಲ ಸಲ ಎನ್ನುವುದು ಇದರ ಹೆಗ್ಗಳಿಕೆ.
200 ಮಂದಿಯ ಭಾರ ತಡೆಯುತ್ತದೆ
ಪಶ್ಚಿಮ ರೊಮೇನಿಯಾದ ಟೈಮಿಸೋರಾದಲ್ಲಿ ಈ ಸೇತುವೆ ಇದೆ. ಈ ನಗರ ಬಹಳ ಪುರಾತನವಾದುದು. ಈ ನಗರದಲ್ಲಿ ತಿಮಿ ಮತ್ತು ಬೆಗಾ ನದಿ ಗಳು ಹರಿದು ಒಂದೆಡೆ ಸಂಗಮಿಸುತ್ತವೆ. ಈ ಸಂಗಮದಲ್ಲೇ ಪ್ಲಾಸ್ಟಿಕ್ ಬಾಟಲಿಗಳ ಸೇತುವೆ ಕಟ್ಟಲಾಗಿರುವುದು. ಏಕಕಾಲದಲ್ಲಿ ಇನ್ನೂರು ಮಂದಿ ಇದರ ಮೂಲಕ ದಾಟಿದರೂ ಇದು ಜಗ್ಗುವುದಿಲ್ಲ.
ಅಡಿಯಲ್ಲಿ ದೋಣಿ ಹಾಯಲು ಜಾಗ
ಅವುಗಳನ್ನು ತಂತಿಯಿಂದ ಸುರುಳಿಯಾಗಿ ಬಿಗಿದು ಕಟ್ಟಿ ಈ ಸುರುಳಿಗಳ ಮೇಲೆ ಸುರುಳಿಗಳನ್ನಿರಿಸಿ ಜೋಡಿಸಿ ಇಟ್ಟಿಗೆಗಳಂತೆ ಬಿಗಿಗೊಳಿಸುವ ಕೆಲಸಕ್ಕೆ ಮೂರು ವಾರ ಬೇಕಾಯಿತು. ಸೇತುವೆ 75 ಅಡಿ ಉದ್ದವಾಗಿದೆ. ಸೇತುವೆಯ ಕೆಳಗೆ ಸಣ್ಣ ಸಣ್ಣ ದೋಣಿಗಳು ಸಲೀಸಾಗಿ ಮುಂದೆ ಹೋಗಲು ಬೇಕಾದಷ್ಟು ಸ್ಥಳಾವಕಾಶವಿದೆ. ಇದರಿಂದ ಬೀದಿಯಲ್ಲಿ ರಾಶಿಗಟ್ಟಲೆ ಬಿದ್ದಿರುವ ಬಾಟಲಿಗಳನ್ನು ಜನೋಪಯೋಗಿಗೊಳಿಸಲು ಒಂದು ದಾರಿ ಸಿಕ್ಕಂತಾಗಿದೆ.
ವಿದ್ಯಾರ್ಥಿಗಳೇ ಕಟ್ಟಿದ ಸೇತುವೆ
ಟೈಮಿಸೋರಾ ವಿಶ್ವದ್ಯಾಲಯದ ಆರ್ಕಿಟೆಕ್ಟ್ ವಿದ್ಯಾರ್ಥಿಗಳ ತಂಡ, ಈ ಸೇತುವೆ ನಿರ್ಮಾಣಕ್ಕೆ ಕಾರಣ. ಅವರದೇ ಪ್ಲಾಸ್ಟಿಕ್ ಬಾಟಲಿ ಐಡಿಯಾ. ಐನೂರಕ್ಕೂ ಅಧಿಕ ಮಂದಿ ಸ್ವಯಂಸೇವಕರು ಬೀದಿಗಳಲ್ಲಿ, ಮನೆಮನೆಗಳಲ್ಲಿ ಅಲೆದು ಸಂಗ್ರಹಿಸಿದ 1.57 ಲಕ್ಷ ಖಾಲಿ ಬಾಟಲಿಗಳನ್ನು ಬಳಸಿ ಸೇತುವೆ ಕಟ್ಟಲಾಗಿದೆ.
— ಪ. ರಾಮಕೃಷ್ಣ ಶಾಸ್ತ್ರಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.