ಕರು ಮತ್ತು ಕತ್ತೆ ಮರಿ
Team Udayavani, Mar 5, 2020, 5:31 AM IST
ಆಟವಾಡುತ್ತಿದ್ದ ಮಕ್ಕಳು ಕತ್ತೆಮರಿಯನ್ನು ಅಟ್ಟಾಡಿಸಿಕೊಂಡು ಹೋಗಿ ಕಲ್ಲಿನಿಂದ ಹೊಡೆಯುತ್ತಿದ್ದರು. ಅದೇ ಕರುವನ್ನು ಅಪ್ಪಿ ಮುದ್ದಾಡಿದರು. ಕತ್ತೆ ಮರಿಗೆ ಇದನ್ನು ಕಂಡು ಬೇಸರವಾಯಿತು.
ಕತ್ತೆಗಳ ಗುಂಪೊಂದನ್ನು ಹಳ್ಳಿಯ ಹುಡುಗರು ಕಲ್ಲು ಹೊಡೆಯುತ್ತ ಅಟ್ಟಿಸಿಕೊಂಡು ಹೋಗುತ್ತಿದ್ದರು. ಗುಂಪಿನಲ್ಲಿ ಒಂದು ಮರಿಕತ್ತೆ ಕೂಡ ಇತ್ತು. ಹೆದರುತ್ತ ಮರಿಕತ್ತೆ ಅತ್ತ-ಇತ್ತ ನೋಡುತ್ತ ಗಾಬರಿಯಿಂದ ಓಡುತ್ತಿತ್ತು. ಹುಡುಗರೂ ಅದರ ಹಿಂದೆ ಬಿದ್ದಿದ್ದರು. ಅಷ್ಟರಲ್ಲಿ ಒಂದು ಮುದ್ದು ಕರು ಛಂಗ್ ಎಂದು ನೆಗೆಯುತ್ತಾ¤ ಕಾಣಿಸಿಕೊಂಡಿತು. “ಕರು ಎಷ್ಟು ಚೆನ್ನಾಗಿದೆ’ ಎನ್ನುತ್ತ ಮಕ್ಕಳು ಅದರ ಹಿಂದೆ ಓಡಿ ಹಿಡಿದರು. ಕರುವನ್ನು ಮುದ್ದು ಮಾಡಿದರು. ಇದನ್ನೆಲ್ಲ ದೂರದಿಂದ ಕತ್ತೆಮರಿ ನೋಡುತ್ತಿತ್ತು.
ಸಂಜೆಯಾಗುತ್ತಿದ್ದಂತೆಯೇ ಕತ್ತೆಮರಿ ಕರುವಿದ್ದ ಕೊಟ್ಟಿಗೆಯ ಬಳಿಗೆ ಬಂದಿತು. “ಕರುವೇ, ನೀನೇ ಅದೃಷ್ಟವಂತ. ನಿನ್ನನ್ನು ಎಲ್ಲರೂ ಮುದ್ದು ಮಾಡುತ್ತಾರೆ. ನನ್ನ ಅವಸ್ಥೆ ನೋಡು. ಯಾರೂ ನನ್ನನ್ನು ಇಷ್ಟ ಪಡುವುದಿಲ್ಲ. ಕಲ್ಲು ಹೊಡೆದು ಅಟ್ಟುತ್ತಾರೆ’. ಕರು, ಕತ್ತೆಮರಿಯ ಮಾತನ್ನು ಕೇಳಿ ಪಾಪ ಎನಿಸಿತು. ಕತ್ತೆಮರಿಗೆ ಏನಾದರೂ ಸಹಾಯ ಮಾಡಬೇಕೆಂದೆನಿಸಿತು. ಅಷ್ಟರೊಳಗೆ ಮನೆಯ ಯಜಮಾನ ಕಾಣಿಸಿಕೊಂಡ. “ಅಯ್ಯೋ ಕತ್ತೆಮರಿ ಇಲ್ಲಿ ಸೇರಿಕೊಂಡಿದೆ. ಛೆ.. ಎನ್ನುತ್ತ ಕೈಗೆ ಸಿಕ್ಕ ಕೋಲಿನಿಂದ ಓಡಿಸಿದ. ಕಣ್ಣೀರು ತಂದುಕೊಂಡು ಕತ್ತೆಮರಿ ಅಲ್ಲಿಂದ ಓಡಿಹೋಯಿತು.
ಮರುದಿನ ಕತ್ತೆಮರಿ ಒಂಟಿಯಾಗಿ ನದಿಯ ತೀರದಲ್ಲಿ ನಿಂತಿತ್ತು. ಅಲ್ಲಿಗೆ ಬಂದ ಕರುವನ್ನು ಕಂಡು ಕತ್ತೆಮರಿ, “ನಾನು ಕತ್ತೆಯಾಗಿ ಹುಟ್ಟಬಾರದಿತ್ತು’ ಎಂದಿತು. “ವಿಶ್ವಾಸ ಕಳೆದುಕೊಳ್ಳಬೇಡ. ನಿನ್ನನ್ನು ಮುದ್ದು ಮಾಡುವಂತೆ ಮಾಡುವ ಉಪಾಯ ನನ್ನ ಬಳಿ ಇದೆ.’ ಎಂದಿರು ಕರು. “ಅದು ಹೇಗೆ ಸಾಧ್ಯ?’ ಎಂದು ಕತ್ತೆಮರಿ ಅಚ್ಚರಿ ವ್ಯಕ್ತಪಡಿಸಿತು. ಕರು, ಕತ್ತೆಮರಿಯನ್ನು ಒಂದು ಜಾಗಕ್ಕೆ ಕರೆದೊಯ್ಯಿತು.
ಹೊಳೆಯ ದಡದಲ್ಲೇ ಎರಡೂ ನಡೆದವು. ಕತ್ತೆಮರಿ ದಾರಿಯುದ್ದಕ್ಕೂ ಕಾಗದ ಮತ್ತಿತರ ಹಾಳು ಮೂಳನ್ನು ತಿನ್ನುತ್ತಿತ್ತು. ಕರು ಹೇಳಿತು, “ಗೆಳೆಯ ಮೊದಲು ನೀನು ಈ ಹೊಲಸು ತಿನ್ನುವುದನ್ನು ಬಿಡು. ಹೊಲಸು ತಿಂದರೆ ನಿನ್ನ ಬುದ್ಧಿ ಕೂಡ ಹೊಲಸಿನಂತಾಗುತ್ತದೆ. ಆರೋಗ್ಯಕರ ಪದಾರ್ಥಗಳನ್ನು ತಿನ್ನು. ಹಸಿರು ಎಲೆ ತಿನ್ನು. ಹಣ್ಣು ತಿನ್ನು ಎಂದಿತು. ಕತ್ತೆಮರಿಯ ಮೈಮೇಲೆ ಹೇನುಗಳು, ಹುಳ ಹುಪ್ಪಟೆಗಳು ಮನೆ ಮಾಡಿದ್ದವು. ಅದರಿಂದಾಗಿ ಗಾಯ ಬಹಳ ಬೇಗ ವಾಸಿಯಾಗದೆ ಉಳಿದಿರುತ್ತಿತ್ತು. ಅದನ್ನು ಗಮನಿಸಿದ ಕರು “ಹೊಳೆಯಲ್ಲಿ ಮೊದಲು ಸ್ನಾನ ಮಾಡೋಣ ಬಾ’ ಎಂದಿತು. “ಸ್ನಾನ ಯಾಕೆ ನನಗೆ?’ ಎಂದು ಅನುಮಾನಿಸಿತು ಕತ್ತೆಮರಿ. “ದೇಹ ಶುದ್ಧವಾಗಿರಬೇಕು ಗೆಳೆಯ! ಆಗ ಮನಸ್ಸು ಕೂಡಾ ಉಲ್ಲಸಿತವಾಗಿರುತ್ತದೆ. ಒಳ್ಳೆಯ ಆಲೋಚನೆಗಳು ಬರುತ್ತವೆ.’ ಎಂದು ಕರು ಹೇಳಿದಾಗ ಕತ್ತೆಮರಿ ನೀರಿಗಿಳಿಯಿತು.
ಅವೆರಡೂ ಬಹಳ ಹೊತ್ತಿನವರೆಗೆ ಸ್ನಾನ ಮಾಡಿದವು. ನಂತರ ಬಿಸಿಲಿನಲ್ಲಿ ಮೈ ಒಣಗಿಸಿಕೊಂಡವು. ಕತ್ತೆ ಮರಿಯ ದೇಹವು ಶುಚಿಯಾಯಿತು. ಹೇನುಗಳೆಲ್ಲ ನಿರ್ಮೂಲನಗೊಂಡವು. “ಸ್ನಾನ ಮಾಡಿದ ಮಾತ್ರಕ್ಕೆ ಕತ್ತೆ ಮರಿ ಕರುವಾಗಲು ಸಾಧ್ಯವಿಲ್ಲ’ ಎಂದಿತು ಕತ್ತೆ. ಆಗ ಕರು “ಮೊದಲು ನಿನ್ನ ಮನಃಸ್ಥಿತಿಯನ್ನು ಬದಲಿಸು. ಯಾರು ಏನು ಹೇಳುತ್ತಾರೆನ್ನುವುದು ಮುಖ್ಯವಲ್ಲ. ನಿನ್ನಲ್ಲಿ ವಿಶ್ವಾಸವಿಡು.’ ಎಂದು ಧೈರ್ಯ ತುಂಬಿತು. ಹೀಗೆಯೇ ಕತ್ತೆ ಮರಿ ಮತ್ತು ಕರು ಒಳ್ಳೆಯ ಗೆಳೆಯರಾದವು. ಅವೆರಡೂ ಒಟ್ಟಿಗೆ ಆಟಪಾಠಗಳಲ್ಲಿ ತೊಡಗಿದವು.
ಅದೊಂದು ದಿನ. ಊರಿನ ಬಾಲಕರೆಲ್ಲ ಊರಿನ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದರು. ಅಲ್ಲಿಗೆ ಕರು ಮತ್ತು ಕತ್ತೆ ಮರಿ ಹುಲ್ಲು ಮೆಲ್ಲುತ್ತಾ ಬಂದಿತು. ಕರುವನ್ನು ಕಂಡು ಮಕ್ಕಳು ಮುದ್ದು ಮಾಡಿದರು. ಇನ್ನೇನು ತನ್ನನ್ನು ಕಲ್ಲು ಹಿಡಿದು ಓಡಿಸುತ್ತಾರೆ ಎಂದು ಕೊಂಡ ಕತ್ತೆ ಓಟಕ್ಕೆ ಸಿದ್ಧವಾಯಿತು. ಆದರೆ, ಮಕ್ಕಳು ಕತ್ತೆ ಮರಿಯನ್ನೂ ಆಸಂಗಿಸಿಕೊಂಡು ಮುದ್ದು ಮಾಡಿದರು. ಕರು ಮತ್ತು ಕತ್ತೆ ಎರಡೂ ಜೊತೆಗೆ ಇರುವುದನ್ನು ಕಂಡು ಮಕ್ಕಳು ಅಚ್ಚರಿಪಟ್ಟರು. ಮುದ್ದು ಕರುವಿನ ಜೊತೆ ಮರಿಕತ್ತೆಯೂ ಛಂಗ್ ಎಂದು ಕುಣಿಯುತ್ತ ದೂರ ದೂರ ಓಡಿತು. ಕರು ಮತ್ತು ಕತ್ತೆಮರಿಯ ಆಟವನ್ನು ಕಂಡು ಮಕ್ಕಳೆಲ್ಲ ಖುಷಿಯಿಂದ “ಹೋ…’ ಎಂದು ಕುಣಿದಾಡಿದರು.
– ಮತ್ತೂರು ಸುಬ್ಬಣ್ಣ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.