ಜಿರಳೆಗೆ ಎಂಟು ಲಕ್ಷ ವರ್ಷದ ಇತಿಹಾಸ
Team Udayavani, Feb 9, 2017, 3:45 AM IST
ಪ್ರಕೃತಿ ವಿಕೋಪದಿಂದ ಸಕಲ ಜೀವಸಂಕುಲವೂ ಕಣ್ಮರೆ ಜಿರಳೆ ಬದುಕುಳಿಯುತ್ತಂತೆ!
1945ರ ಎರಡನೇ ವಿಶ್ವ ಮಹಾಯುದ್ಧದ ಸಂದರ್ಭದಲ್ಲಿ ಜಪಾನಿನ ಹಿರೋಷಿಮಾ ಮತ್ತು ನಾಗಸಾಕಿ ಪಟ್ಟಣಗಳ ಮೇಲೆ ಅಮೆರಿಕ ನ್ಯೂಕ್ಲಿಯರ್ ಬಾಂಬನ್ನು ಪ್ರಯೋಗಿಸಿದ್ದು ನಿಮಗೆ ತಿಳಿದೇ ಇರುತ್ತದೆ. ನ್ಯೂಕ್ಲಿಯರ್ ಬಾಂಬಿನ ಸ್ಫೋಟದ ತೀವ್ರತೆಯನ್ನು ಜಗತ್ತು ಕಂಡಿದ್ದೇ ಆ ದಿನ. ಒಂದೇ ಕ್ಷಣದಲ್ಲಿ ಪಟ್ಟಣಕ್ಕೆ ಪಟ್ಟಣವೇ ಇನ್ನಿಲ್ಲದಂತೆ ನಾಮವಶೇಷಗೊಂಡಿತ್ತು. ಬಾಂಬನ್ನು ಹಿರೋಷಿಮಾ ನಗರದ ಮೇಲೆ ಬೀಳಿಸಿದ ಯುದ್ಧವಿಮಾನದ ಚಾಲಕ ತಾನು ಇಳಿಸಿದ ಬಾಂಬಿನ ತೀವ್ರತೆಯನ್ನು ಕಂಡು ಆಕಾಶದಿಂದಲೇ “ಅಯ್ಯೋ ದೇವರೇ ನಾವೇನು ಮಾಡಿಬಿಟ್ಟೆವು’ ಎಂದು ಉದ್ಗರಿಸಿದ್ದ. ಸುಮಾರು ಎರಡು ಲಕ್ಷಕ್ಕೂ ಹೆಚ್ಚಿನ ಜನ ಆವತ್ತು ಪ್ರಾಣ ಕಳೆದುಕೊಂಡರು. ಮನೆ, ಕಟ್ಟಡ, ಮಂದಿರ, ಮ್ಯೂಸಿಯಮ್ಮುಗಳೊಂದೂ ಉಳಿಯಲಿಲ್ಲ. ಉಳಿದ ಅಷ್ಟಿಷ್ಟು ಮಂದಿ ತೀವ್ರತರದಲ್ಲಿ ಗಾಯಾಳುಗಳಾದರು.
ಆ ಕರಾಳ ಘಟನೆ ನಡೆದ ಕೆಲ ದಿನಗಳ ತರುವಾಯ ಜಪಾನ್ ಸರಕಾರ ಅಧಿಕಾರಿಗಳ ಸಮಿತಿಯನ್ನು ಅಪಘಾತದ ವರದಿ ನೀಡುವಂತೆ ಅಲ್ಲಿಗೆ ಕಳಿಸಿತ್ತು. ಅವರು ನೀಡಿದ ವರದಿಯಲ್ಲಿ ಆಶ್ಚರ್ಯಕಾರಿ ಮಾಹಿತಿಯೊಂದು ದಾಖಲಾಗಿತ್ತು. ಅದೇನೆಂದರೆ ಎರಡೂ ನಗರಗಳಲ್ಲಿ ಪ್ರಾಣಿಪಕ್ಷಿಗಳಾದಿಯಾಗಿ, ಸೊಳ್ಳೆಗಳನ್ನೂ ಬಿಡದಂತೆ ಆಪೋಶನ ತೆಗೆದುಕೊಂಡಿದ್ದ ನ್ಯೂಕ್ಲಿಯರ್ ಬಾಂಬ್ ದಾಳಿಯಲ್ಲಿ ಜಿರಳೆಗಳು ಮಾತ್ರ ಬಚಾವಾಗಿ ನಗರ ತುಂಬಾ ಓಡಾಡಿಕೊಂಡಿದ್ದವು. ಆವತ್ತು ಪರಿಸರ ವಿಜ್ಞಾನಿಗಳು ಕಂಡುಕೊಂಡಿದ್ದೇನೆಂದರೆ ಯಾವತ್ತಾದರೂ ಭವಿಷ್ಯದಲ್ಲಿ ದೇಶ ದೇಶಗಳ ನಡುವೆ ಯುದ್ಧಗಳೇರ್ಪಟ್ಟು ನ್ಯೂಕ್ಲಿಯರ್ ಬಾಂಬುಗಳ ಸುರಿಮಳೆಯಾಗಿ ಭೂಮಿ ಮೇಲಿನ ಜೀವಜಾಲ ನಾಶವಾದರೂ ಜಿರಳೆಯೊಂದು ಉಳಿಯುತ್ತದೆ ಎನ್ನುವುದು.
ನಮ್ಮ ಅಡುಗೆ ಮನೆಗಳಲ್ಲಿ, ಬೆಡ್‌ರೂಮುಗಳ ಹಾಸಿಗೆ ಸಂಧಿಯಲ್ಲಿ ಹೊರಕ್ಕೆ ಇಣುಕಿ ಮನೆಯವರ ರಂಪಾಟಕ್ಕೆ ಕಾರಣವಾಗುವ ಈ ಕೀಟವನ್ನು ಇಷ್ಟಪಡದವರೇ ಹೆಚ್ಚು. ಇದರ ನಿರ್ನಾಮಕ್ಕೆಂದೇ ಅನೇಕ ಕೆಮಿಕಲ್ ಉತ್ಪನ್ನಗಳು, ಉಪಕರಣಗಳೂ ಇವೆ. ಆದರೂ ಇವುಗಳ ಆಟೋಪ ಮಾತ್ರ ನಿಲ್ಲುವುದಿಲ್ಲ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಜಿರಳೆ ಮತ್ತಿತರ ಜಂತುಗಳ ನಿರ್ಮೂಲನೆಗೆ ಪೆಸ್ಟ್ ಕಂಟ್ರೋಲ್ ಎಂಬ ಖಾಸಗಿ ಕಂಪನಿಗಳ ಪಡೆಯೇ ಇವೆ. ನಮ್ಮ ನಮ್ಮ ಮನೆಗಳಿಂದ ಜಿರಳೆಗಳನ್ನು ಓಡಿಸುವ ನಾವು ಒಂದು ವಿಷಯವನ್ನು ಮರೆತೇ ಬಿಟ್ಟಿದ್ದೇವೆ. ಈ ಭೂಮಿ ಮೇಲಿನ ಅತ್ಯಂತ ಪ್ರಾಚೀನ ನಿವಾಸಿಗಳಲ್ಲಿ ಜಿರಳೆ ಒಂದು. ಡೈನೋಸಾರ್‌ಗಳು ಭೂಮಿ ಮೇಲೆ ನಡೆದಾಡುವುದಕ್ಕೆ ಮುಂಚಿನಿಂದಲೂ ಜಿರಳೆಗಳು ಭೂಮಿ ಮೇಲಿದ್ದವು. ಅಂದರೆ ಸುಮಾರು 120 ಮಿಲಿಯನ್ ವರ್ಷಗಳಿಗೆ ಹಿಂದಿನಿಂದಲೂ ಜಿರಳೆಗಳು ಭೂಮಿಯ ನಿವಾಸಿಗಳಾಗಿವೆ.
ಕೆಲ ವರ್ಷಗಳ ಹಿಂದೆ ಭೂಮಿಯಡಿ ಉತ್ಖನನ ನಡೆಸುತ್ತಿದ್ದ ಸಂಶೋಧಕರಿಗೆ ಮರದ ಮೇಣದ ಅಂಟಿನಲ್ಲಿ ಸೆರೆಯಾಗಿದ್ದ ಕೀಟವೊಂದು ದೊರೆತಿತ್ತು. ನೋಡಲು ವಿಚಿತ್ರವಾಗಿದ್ದ ಆ ಕೀಟ ಯಾವುದೆಂದು ಯಾರಿಗೂ ತಿಳಿಯದಾಯಿತು. ಏಕೆಂದರೆ ಆ ಕೀಟ ಭೂಮಿ ಮೇಲೆ ಪ್ರಸ್ತುತ ಇದ್ದ ಯಾವ ಕೀಟವನ್ನೂ ಹೋಲುತ್ತಿರಲಿಲ್ಲ. ಆ ಮೇಣದ ಅಂಟನ್ನು ಅಧ್ಯಯನಕ್ಕೊಳಪಡಿಸಿದಾಗ ಅದು 100 ಮಿಲಿಯನ್ ವರ್ಷಕ್ಕೂ ಹಿಂದಿನದೆಂದು ತಿಳಿದುಬಂತು. ಯಾವ ಕೀಟ ಅದರೊಳಗೆ ಸಿಕ್ಕಿಕೊಂಡಿತ್ತೋ ಅದು ಈಗಿನ ಜಿರಳೆಯ ಪೂರ್ವಜ ಎಂಬುದೂ ತಿಳಿದು ಬಂತು. ಆಗಿನ ಜಿರಳೆಯ ರೂಪಕ್ಕೂ ಈಗಿನ ಜಿರಳೆ ರೂಪಕ್ಕೂ ಅಜಗಜಾಂತರ ವ್ಯತ್ಯಾಸವಿದ್ದಿದ್ದರಿಂದ ವಿಜ್ಞಾನಿಗಳಿಗೆ ಕಣ್ಣಾರೆ ಕಂಡು ಪತ್ತೆ ಮಾಡಲಾಗಿರಲಿಲ್ಲ.
– ಹರ್ಷವರ್ಧನ, ಸುಳ್ಯ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.