ಮನಮೋಹಕ ಚಿಟ್ಟೆ ಮತ್ತು ಮರಿಯಾನೆ
Team Udayavani, Oct 31, 2019, 4:36 AM IST
ಚಿಟ್ಟೆಯನ್ನು ನೋಡುತ್ತಾ ಮೈಮರೆತ ಆನೆ ಮರಿ ತನ್ನ ಗುಂಪಿನಿಂದ ಬೇರೆಯಾಗಿತ್ತು. ಅದು ತಿಳಿಯುವಷ್ಟರಲ್ಲಿ ಬಹಳ ದೂರ ಸಾಗಿ ಬಂದಿತ್ತು. ಪೊದೆಯಲ್ಲಡಗಿದ್ದ ಹುಲಿ ಆನೆ ಮರಿಯನ್ನು ತಿನ್ನಲು ಹೊಂಚು ಹಾಕಿ ಕುಳಿತಿತ್ತು. ಅದು ಆನೆ ಮರಿಗೆ ಗೊತ್ತೇ ಆಗಿರಲಿಲ್ಲ.
ಹಸಿರಿನಿಂದ ಕಂಗೊಳಿಸುತ್ತಿದ್ದ ದಟ್ಟವಾದ ಕಾಡಿತ್ತು. ಆನೆಗಳ ಗುಂಪೊಂದು ಆ ಕಾಡಿನಲ್ಲಿ ಮೇಯಲು ಬಂದಿತ್ತು. ಆ ಗುಂಪಿನಲ್ಲಿ ಕೆಲವು ಮರಿಗಳೂ ಇದ್ದವು. ಕಾಡಿನಲ್ಲಿನ ಹುಲ್ಲು ಮತ್ತು ಬಿದಿರನ್ನು ಮೇಯುತ್ತಾ ಗುಂಪು ಮುಂದೆ ಮುಂದೆ ಸಾಗುತ್ತಿತ್ತು. ಆನೆಯ ಗುಂಪಿನಲ್ಲಿದ್ದ ಒಂದು ಮರಿಗೆ ಅಕಸ್ಮಾತ್ ಎಂಬಂತೆ ಒಂದು ಚಿಟ್ಟೆ ಕಣ್ಣಿಗೆ ಬಿತ್ತು. ಚಿಟ್ಟೆ ಆನೆಯ ಗುಂಪಿನ ಜೊತೆಯಲ್ಲೇ ಮುನ್ನಡೆಯುತ್ತಿತ್ತು. ಚಿಟ್ಟೆ ಹಾರುತ್ತಿದ್ದ ರೀತಿ, ರೆಕ್ಕೆಗಳನ್ನು ಬಡಿಯುತ್ತಿದ್ದ ಪರಿಯನ್ನು ನೋಡುತ್ತ ಆನೆಮರಿ ನಿಧಾನವಾಗಿ ನಡೆಯತೊಡಗಿತು. ಮರಿಯ ನಡಿಗೆ ನಿಧಾನವಾಗಿದ್ದರಿಂದ, ಅದು ಗುಂಪಿನಿಂದ ದೂರ ಉಳಿಯಿತು.
ಗುಂಪಿನ ಜೊತೆ- ಜೊತೆಯಲ್ಲೇ ಇದ್ದ ಚಿಟ್ಟೆ ಥಟ್ ಅಂತ ತನ್ನ ದಿಕ್ಕನ್ನು ಬದಲಿಸಿಬಿಟ್ಟಿತು. ಚಿಟ್ಟೆ ಹಾರುವುದನ್ನೇ ನೋಡುತ್ತ ನಡೆಯುತ್ತಿದ್ದ ಮರಿ, ಚಿಟ್ಟೆಯನ್ನೇ ಹಿಂಬಾಲಿಸಿತು. ಚಿಟ್ಟೆ ಕ್ಷಣ-ಕ್ಷಣಕ್ಕೂ, ಒಂದು ಹೂವಿನಿಂದ ಇನ್ನೊಂದು ಹೂವಿನ ಮೇಲೆ ಕೂಡುತ್ತಿತ್ತು. ಆ ಭಂಗಿಯನ್ನು ಆನೆ ಮರಿ ಆನಂದಿಸುತ್ತಿತ್ತು. ಚಿಟ್ಟೆಯನ್ನೇ ಹಿಂಬಾಲಿಸಿ ಬರುತ್ತಿದ್ದ ಮರಿಗೆ, ತಾನು ಗುಂಪಿನಿಂದ ದೂರ ಬಂದಿದ್ದು ಗಮನಕ್ಕೆ ಬರಲೇ ಇಲ್ಲ. ಸ್ವಲ್ಪ ಸಮಯದ ನಂತರ ಚಿಟ್ಟೆ ಮೇಲೆ ಹಾರುತ್ತ ಹಾರುತ್ತ ಒಮ್ಮೆಲೆ ಮಾಯವಾಗಿಬಿಟ್ಟಿತು. ಗಾಬರಿಯಾದ ಆನೆ ಮರಿಗೆ, ಮುಂದೆ ಎಲ್ಲಿ ಹೋಗುವುದೆಂದು ತಿಳಿಯದಾಯಿತು. ಅದು ಹಿಂದೆ ತಿರುಗಿ ನೋಡಿತು. ಅದರ ಅಮ್ಮ ಮತ್ತು ಉಳಿದ ಆನೆಗಳು ಯಾವುವೂ ಕಾಣಲಿಲ್ಲ. ಅದಕ್ಕೆ ಏನು ಮಾಡುವುದೆಂದು ತೋಚದೆ ಅಲ್ಲಿಯೇ ನಿಂತುಬಿಟ್ಟಿತು.
ಆನೆ ಮರಿಗೆ ಏನೋ ಶಬ್ದ ಕೇಳಿಸಿದಂತಾಗಿ, ಅದು ನಿಂತಲ್ಲೇ ಒಂದು ಕ್ಷಣ ನಡುಗಿಹೋಯಿತು. ಹುಲಿ- ಸಿಂಹವೇನಾದರೂ ಬಂದರೆ ನನ್ನ ಗತಿ ಏನಪ್ಪಾ ಅಂತ ಹೆದರಿಕೆ ಶುರುವಾಯಿತು. ಅಷ್ಟರಲ್ಲಿ ಅದಕ್ಕೆ ಏನೋ ಸದ್ದು ಕೇಳಿತು. ಕಿವಿಗೊಟ್ಟು ಕೇಳಿಸಿಕೊಂಡಾಗ “ಝುಳು ಝುಳು’ ಶಬ್ದ ಕೇಳಿಸಿತು. ಅದು ನೀರು ಹರಿಯುವ ಶಬ್ದ ಎಂದು ಮನವರಿಕೆಯಾದ ಮೇಲೆ, ಆನೆ ಮರಿ ಶಬ್ದ ಕೇಳಿಬಂದ ದಿಕ್ಕಿನ ಕಡೆಗೆ ನಡೆಯತೊಡಗಿತು. ಸ್ವಲ್ಪ ದೂರ ನಡೆಯುವಷ್ಟರಲ್ಲಿ ಒಂದು ಪುಟ್ಟ ಹಳ್ಳ ಹರಿಯುತ್ತಿರುವುದು ಕಾಣಿಸಿತು. ಆನೆ ಮರಿಗೆ ಬಾಯಾರಿಕೆಯಾಗಿತ್ತು. ಹಳ್ಳವನ್ನು ಕಂಡ ತಕ್ಷಣ ನೀರು ಕುಡಿಯಲು ಮುಂದಾಯಿತು.
ಹಳ್ಳದ ಇನ್ನೊಂದು ದಂಡೆಯಲ್ಲಿ, ಪೊದೆಯೊಳಗೆ ಒಂದು ಹುಲಿ ಅಡಗಿ ಕುಳಿತಿತ್ತು. ಅದು ಬಹಳ ಹೊತ್ತಿನಿಂದ ಬೇಟೆಗಾಗಿ ಹೊಂಚು ಹಾಕುತ್ತಿತ್ತು. ಎಷ್ಟು ಹೊತ್ತಾದರೂ ಯಾವ ಪ್ರಾಣಿಯೂ ಹಳ್ಳದತ್ತ ಬರದಿದ್ದುದ ಕಂಡು ಕೋಪದಿಂದ ಕುದಿಯುತ್ತಿತ್ತು. ಆನೆ ಮರಿ ಹಳ್ಳದ ಸಮೀಪ ಬರುವುದು ಕಂಡಾಗ ಹುಲಿಗೆ ತುಂಬಾ ಸಂತೋಷವಾಯಿತು. ಅದು ಸರಿಯಾದ ಸಮಯ ನೋಡಿ ಆನೆ ಮರಿ ಮೇಲೆ ಮುಗಿಬೀಳಲು ಸಿದ್ಧವಾಯಿತು.
ಆನೆ ಮರಿ ಬಗ್ಗಿ ನೀರು ಕುಡಿಯಲು ಶುರು ಮಾಡುತ್ತಿದ್ದಂತೆಯೇ ಹುಲಿ ಆನೆ ಮರಿ ಮೇಲೆ ಜಿಗಿಯಲೆಂದು ಪೊದೆಯಿಂದ ಎದ್ದು ಬಂದಿತು. ನೋಡ ನೋಡುತ್ತಿದ್ದಂತೆಯೇ ಹುಲಿ ಜಿಗಿದೇಬಿಟ್ಟಿತ್ತು. ಅಷ್ಟರಲ್ಲಿ ಅದೆಲ್ಲಿಂದಲೋ ಬಂದ ಸೊಂಡಿಲೊಂದು ಹುಲಿಯನ್ನು ಎತ್ತಿ ಬಿಸಾಕಿತು. ಹುಲಿ ಅಯ್ಯಮ್ಮಾ ಎಂದು ನೆಲದ ಮೇಲೆ ಬಿದ್ದು ಸೊಂಟ ಮುರಿದುಕೊಂಡಿತು. ನೀರು ಕುಡಿಯುತ್ತಿದ್ದ ಆನೆ ಮರಿ ಏನಾಗುತ್ತಿದೆ ಎಂದು ತಲೆ ಎತ್ತಿ ನೋಡಿದಾಗ ಅದಕ್ಕೆ ಆಶ್ಚರ್ಯ ಕಾದಿತ್ತು. ಅಮ್ಮ ಆನೆ ಸರಿಯಾದ ಸಮಯಕ್ಕೆ ಬಂದು ತನ್ನ ಕಂದನನ್ನು ರಕ್ಷಿಸಿತ್ತು. ಗುಂಪಿನಲ್ಲಿ ತನ್ನ ಮರಿಯನ್ನು ಕಾಣದೆ ಮರಿಯ ಅಮ್ಮ ಕಂಗಾಲಾಗಿ ಹುಡುಕುತ್ತಾ ಬಂದಾಗ ಮರಿಯ ಹೆಜ್ಜೆಗುರುತುಗಳು ಕಂಡುಬಂದಿದ್ದವು. ಅದನ್ನೇ ಹಿಂಬಾಲಿಸುತ್ತಾ ಓಡೋಡಿ ಬಂದಾಗ ಕಡೆಗೂ ಮರಿಯ ಬಳಿಗೆ ಬಂದಿತ್ತು.
ನೆಲದ ಮೇಲೆ ಬಿದ್ದಿದ್ದ ಹುಲಿ ಸಾವರಿಸಿಕೊಂಡು ಎದ್ದು ನಿಂತು ತಿರುಗಿ ನೋಡಿತು. ಆನೆ ತನ್ನ ಮರಿಯ ತಂಟೆಗೆ ಬಂದರೆ ಹುಷಾರ್ ಎಂದು ಎಚ್ಚರಿಕೆ ನೀಡಿತು. ಸೊಂಟ ಮುರಿದು ಏನೂ ಮಾಡಲಿಕ್ಕಾಗದೆ ಹುಲಿ “ಆನೆಗಳ ಸಹವಾಸವೇ ಬೇಡ. ಬೇರೆ ಯಾವುದಾದರೂ ಸಣ್ಣ ಪ್ರಾಣಿಯನ್ನು ಬೇಟೆ ಆಡಿದರಾಯಿತು’ ಎಂದುಕೊಂಡು ಅಲ್ಲಿಂದ ಕಾಲು ಕಿತ್ತಿತು. ಆನೆಯೂ, ಆನೆ ಮರಿಯೂ ಸಂತಸದಿಂದ ತಮ್ಮ ಗುಂಪಿನೆಡೆಗೆ ಪ್ರಯಾಣ ಬೆಳೆಸಿದವು. ಮರಿಯಾನೆಯನ್ನು ಸೆಳೆದಿದ್ದ ಚಿಟ್ಟೆ ಮತ್ತೆ ಕಾಣಿಸಿಕೊಂಡಿತು. ಮರಿಯಾನೆ “ಅಮ್ಮಾ ಇದೇ ನೋಡು ಚಿಟ್ಟೆ’ ಎಂದು ತೋರಿಸಿ ನಕ್ಕಿತು. ಅಮ್ಮನೂ ನಕ್ಕಳು.
– ಪ್ರೇಮಾ ಬಿರಾದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.