![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Apr 6, 2017, 3:45 AM IST
ಒಮ್ಮೆ ದೇವರು ಭೂಮಿಯ ಕಡೆಗೆ ನೋಡಿದ. ಮನುಷ್ಯರೆಲ್ಲರೂ ಪದ್ಮಾಸನ ಹಾಕಿ ಭಕ್ತಿಯಿಂದ ಕೈಜೋಡಿಸಿ ಕುಳಿತಿದ್ದಾರೆ. ಕಣ್ಮುಚ್ಚಿ ಧ್ಯಾನಿಸುತ್ತಿದ್ದಾರೆ. ಪಾಪ, ಅದೆಷ್ಟು ಕಾಲದಿಂದ ಹೀಗೆ ದೈವಧ್ಯಾನದಲ್ಲಿ ತಲ್ಲೀನರಾಗಿದ್ದಾರೋ ಏನೊ! ಇವರಿಗೆ ಭಗವಂತನನ್ನು ಕಾಣುವ ಆಸೆ ಇನ್ನೆಷ್ಟು ಇರಲಿಕ್ಕಿಲ್ಲ! ದೇವರು ಹೀಗೆ ಯೋಚಿಸಿದ.
ಧ್ಯಾನಮಗ್ನರಾದ ಭಕ್ತರ ಮುಂದೆ ತಾನೀಗ ಹೋದರೆ ಅವರೆಲ್ಲರೂ ಹರ್ಷ ಪುಳಕಿತರಾಗಬಹುದು. ಹಾಲು, ಹಣ್ಣುಗಳನ್ನು ತಂದು ರಾಶಿ ಹಾಕಿ ತಿನ್ನಲು ಒತ್ತಾಯಿಸಬಹುದು. ಆ ಸಂತಸದ ಕ್ಷಣಗಳನ್ನು ಅನುಭವಿಸಬೇಕು ಅನ್ನಿಸಿತು ದೇವರಿಗೆ.
ಹಠಾತ್ತನೆ ದೇವರು ಭೂಮಿಗೆ ಬಂದಿಳಿದ. “ಭಕ್ತರೇ, ಇದೋ ನಾನು ಬಂದಿದ್ದೇನೆ, ಕಣ್ಣು ತೆರೆಯಿರಿ’ ಎಂದು ಮುಗುಳ್ನಗುತ್ತ ಭಕ್ತರನ್ನು ಕೂಗಿ ಕರೆದ.
ಎಲ್ಲರೂ ಏಕಕಾಲದಲ್ಲಿ ಕಣ್ಣು ತೆರೆದು ಸಂತೋಷ, ಆಶ್ಚರ್ಯಗಳಿಂದ ದೇವರನ್ನು ನೋಡಿದರು. ತಲೆಯಲ್ಲಿ ಕಿರೀಟ, ಚತುಭುìಜಗಳಲ್ಲಿ ಶಂಖ, ಚಕ್ರ, ಗದೆ, ಅಭಯಮುದ್ರೆಗಳು. ಪೀತಾಂಬರ ಧರಿಸಿದ್ದಾನೆ. ಮೈ ಬಣ್ಣ ನೀಲಿ.
“ಬಂದೆಯಾ ಭಗವಂತ! ಎಂಥ ನಿಷ್ಕರುಣಿ ನೀನು! ಬಹುಕಾಲದಿಂದ ನಿನ್ನನ್ನು ಧ್ಯಾನಿಸುತ್ತಿದ್ದರೂ ನಿನಗೆ ಮೈದೋರಲು ಮನಸ್ಸಾಗಲಿಲ್ಲವೆ? ನಿನಗೆ ಕರುಣೆಯಿಲ್ಲವೆ, ಹೃದಯವಿಲ್ಲವೆ?’ ಎಂದು ತರಾಟೆಗೆ ತೆಗೆದುಕೊಂಡರು.
ದೇವರು ತಬ್ಬಿಬ್ಟಾದ. ಜನರು ಅವನನ್ನು ಸ್ತುತಿಸಿ ಆರಾಧಿಸುವ ಬದಲು ಬರಲು ತಡವಾದುದಕ್ಕೆ ವಿಚಾರಣೆ ಮಾಡುತ್ತಿದ್ದಾರೆ. ಜನರಿಂದ ತಪ್ಪಿಸಿಕೊಂಡು ದೇವರು ಓಡಿಹೋಗಲು ನಿರ್ಧರಿಸಿದ. ಆದರೆ ಭಕ್ತರು ಬಿಡಬೇಕಲ್ಲ. ಒಬ್ಬೊಬ್ಬರು ಒಂದೊಂದು ಕೋರಿಕೆಗಾಗಿ ಪೀಡಿಸಿದರು. “ದೇವರೇ, ಈಗಲೇ ಧಾರಾಕಾರ ಮಳೆ ಸುರಿಸು. ನನ್ನ ಭತ್ತದ ಹೊಲ ಬತ್ತಿ ಹೋಗುತ್ತಾ ಇದೆ. ಒಂದು ಮಳೆ ಬಂದರೆ ಬಂಗಾರದ ಬೆಳೆ ಬರುವುದರಲ್ಲಿ ಅನುಮಾನವಿಲ್ಲ. ತಕ್ಷಣ ಮಳೆ ಬರಲಿ’ ಎಂದು ರೈತನೊಬ್ಬ ದುಂಬಾಲು ಬಿದ್ದ.
“ಏನಿದು ಮಾತು?’ ಹೆಣ್ಣು ಹೆತ್ತ ತಂದೆಯೊಬ್ಬ ದೇವರ ಬಳಿಗೆ ಓಡಿ ಬಂದ. “ಅವನ ಮಾತು ಕೇಳಿ ಮಳೆ ಸುರಿಸಬೇಡ. ನಾಳೆ ನನ್ನ ಮಗಳಿಗೆ ಮದುವೆ ಮಾಡಲಿದ್ದೇನೆ. ಮಳೆ ಬಂದರೆ ಕೆಲಸ ಕೆಡುತ್ತದೆ’ ಎಂದ ಆತ. ಮಳೆ ಬೇಕು ಎಂದವ ಆ ಕಡೆಯಿಂದ, ಮಳೆ ಬೇಡ ಎಂದವ ಈ ಕಡೆಯಿಂದ ದೇವರನ್ನು ಕೈ ಹಿಡಿದು ಜಗ್ಗುತ್ತಿರುವಾಗ ವ್ಯಾಪಾರಿಯೊಬ್ಬ ಧಾವಿಸಿ ಬಂದ. “ದೇವರೇ, ಸಟ್ಟಾ ಆಡಿ ನಾನು ದಿವಾಳಿಯಾಗಿದ್ದೇನೆ. ಬದುಕಬೇಕಾದರೆ ನಾನು ಮಣ್ಣು ಮುಟ್ಟಿದರೂ ಚಿನ್ನವಾಗಬೇಕು. ಅಂಥ ವರ ಕೊಡು’ ಎಂದು ಬೇಡಿದ.
ಹೆಂಗಸೊಬ್ಬಳು ಕೋಪದಿಂದ, “ಅವನು ಮಹಾ ಮೋಸಗಾರ. ದೇವರೇ, ಅಕ್ಕಿಯಲ್ಲಿ ಕಲ್ಲು ಬೆರೆಸಿ ಮಾರಾಟ ಮಾಡಿದ ಪಾಪಿ! ಅವನಿಗೆ ಆ ವರ ಕೊಡಬೇಡ’ ಕೂಗಿದಳು.
ಈ ಮಧ್ಯೆ ಹಲವರು ಬಂದರು. “ದೇವರೇ, ನನ್ನ ಮಗಳಂದಿರಿಗೆ ವರನನ್ನು ಅನುಗ್ರಹಿಸು’, “ದೇವರೇ, ಪರೀಕ್ಷೆಯಲ್ಲಿ ತೇರ್ಗಡೆ ಮಾಡು’, ಹೀಗೆ ನಾನಾ ಬೇಡಿಕೆಗಳನ್ನಿರಿಸಿ ಕಾಡಿದರು, ಬೇಡಿದರು.
ದೇವರು ತಬ್ಬಿಬ್ಟಾದ, ಕಂಗಾಲಾದ, ಅವನ ಮೈ ಬೆವರಿನಿಂದ ನೆನೆಯಿತು. ಹೇಗೋ ಜನರಿಂದ ತಪ್ಪಿಸಿಕೊಂಡು ವೇಗವಾಗಿ ಓಡಲಾರಂಭಿಸಿದ. ಆದರೆ ಜನರು ದೇವರನ್ನು ಅಟ್ಟಿಸಿಕೊಂಡು ಬಂದರು.
ಇದೇ ವೇಳೆ ದೇವರಿಗೆ ನಾರದ ಮುನಿ ಎದುರಾದ. “ನಾರದಾ, ಬಚಾವು ಮಾಡು. ಈ ಜನಗಳು ತಮ್ಮ ಬೇಡಿಕೆಗಳಿಗಾಗಿ ನನ್ನನ್ನು ಕೊಲ್ಲದೆ ಬಿಡುವುದಿಲ್ಲ. ಎಲ್ಲಿ ಅಡಗಿಕೊಂಡರೂ ಶೋಧಿಸುತ್ತಾರೆ. ನನಗೆ ಅವಿತುಕೊಳ್ಳಲು ಒಳ್ಳೆಯ ತಾಣ ತೋರಿಸು’, ದೇವರು ಗೋಗರೆದ.
ನಾರದ ತಕ್ಷಣವೇ ಅಂದ “ದೇವರೇ, ಅಳಬೇಡ. ನೀನು ಅಡಗಿಕೊಳ್ಳಲು ಪ್ರಶಸ್ತ ತಾಣವೊಂದಿದೆ. ಅಲ್ಲಿ ನೀನಿದ್ದರೆ ಭಕ್ತರು ಕಂಡು ಹಿಡಿಯುವುದಿಲ್ಲ.’
“ಯಾವುದಪ್ಪಾ ಅಂಥ ಜಾಗ?’ ದೇವರು ಕಿವಿ ನಿಮಿರಿಸಿದ. ಎಲ್ಲರ ಹೃದಯದೆಡೆಗೆ ನಾರದ ಕೈ ತೋರಿಸಿದ.”ನಿನಗೆ ಬಚ್ಚಿಟ್ಟುಕೊಳ್ಳಲು ಅದೇ ಪ್ರಶಸ್ತ ಜಾಗ! ಎಂತೆಂಥ ಯೋಗಿಗಳಾದರೂ ಒಂಟಿ ಕಾಲಲ್ಲಿ ನಿಂತು ನಿನ್ನ ತಪಸ್ಸು ಮಾಡುತ್ತಾರಲ್ಲದೆ ತಮ್ಮ ಹೃದಯದಲ್ಲಿ ನೀನು ನೆಲೆಸಿದ್ದೀ ಎಂಬುದನ್ನು ಅರಿತುಕೊಳ್ಳಲಾರರು’ ಎಂದ ನಾರದ.
ದೇವರು ಅಣುರೂಪ ಧರಿಸಿ ಭಕ್ತರ ಹೃದಯದೊಳಗೆ ಸೇರಿಕೊಂಡ. ಅಂದಿನಿಂದಲೂ ಭಕ್ತರು ಅವನನ್ನು ಹುಡುಕುತ್ತಲೇ ಇದ್ದಾರೆ, ತಮ್ಮೊಳಗೆ ದೇವರಿದ್ದಾನೆಂದು ಇಲ್ಲಿಯವರೆಗೂ ಅವರಿಗೆ ಗೊತ್ತೇ ಆಗಿಲ್ಲ.
– ಪ. ರಾಮಕೃಷ್ಣ ಶಾಸ್ತ್ರೀ
You seem to have an Ad Blocker on.
To continue reading, please turn it off or whitelist Udayavani.