ಚಂದ್ರಣ್ಣನ ಅಂಗಳದಲ್ಲಿ…
Team Udayavani, Jul 25, 2019, 5:00 AM IST
ಚಂದ್ರನ ಅಂಗಳದಲ್ಲಿ ಮನು ಮತ್ತವನ ತಂಗಿ ಪುಟ್ಟಿ ಅಡ್ಡಾಡುತ್ತಿದ್ದರು. ಪುಟ್ಟಿ “ಚಂದ್ರಣ್ಣ… ಏ… ಚಂದ್ರಣ್ಣ ಎಲ್ಲಿದ್ದೀಯ? ನಾವು ಬಂದು ತುಂಬಾ ಹೊತ್ತಾಯಿತು. ನಿನ್ನನ್ನು ನೋಡಬೇಕು. ನಿಂಜೊತೆ ಆಡಬೇಕು. ಕಥೆ ಹೇಳಬೇಕು. ಕಥೆ ಹೇಳಿಸ್ಕೋಬೇಕು. ಬಾರೋ ಬೇಗ’ ಎನ್ನುತ್ತಾ ಉತ್ಸಾಹದಿಂದ ಕೂಗಿದಳು. ಏನೂ ಉತ್ತರ ಬರಲಿಲ್ಲ. ಅದೇ ಹೊತ್ತಿಗೆ ದೂರದಲ್ಲೊಂದು ಬೆಳಕು ಕಾಣಿಸಿತು!
“ಚಂದ್ರಣ್ಣನ ಮನೆ ತಲುಪೋದು ಇನ್ನೂ ಎಷ್ಟು ಹೊತ್ತಾಗುತ್ತೆ? ಚಂದ್ರಣ್ಣನ ಮನೆ ಅಷ್ಟು ದೂರಾನ?’ ಎಂದು ಅಣ್ಣನ ಕೈ ಹಿಡಿದುಕೊಂಡು ನಡೆಯುತ್ತಾ ಪುಟ್ಟಿ ಕೇಳಿದಳು. “ಇನ್ನೇನು ಈಗ ಬರುತ್ತೆ. ಸುಸ್ತಾಯ್ತಾ? ಅದೋ ನೋಡು, ದೂರದಲ್ಲಿ ಕಾಣ್ತಿರೋದೇ ಚಂದ್ರಣ್ಣನ ಮನೆ’ ಎಂದು ಅಣ್ಣ ಮನು ಪುಟ್ಟಿಯನ್ನು ಸಮಾಧಾನಪಡಿಸಿದ. ಇಬ್ಬರ ಕಣ್ಣುಗಳಲ್ಲೂ ಹೊಳಪು ಮೂಡಿತು. ಇಬ್ಬರೂ ತಮ್ಮ ತಲೆ ಮುಚ್ಚುವಂತೆ ಶಿರಸ್ತ್ರಾಣ ಧರಿಸಿದ್ದರು. ಬೆಳ್ಳನೆಯ ದಪ್ಪ ಉಡುಪು. ಬೆನ್ನ ಮೇಲೊಂದು ಪುಟ್ಟ ಸಿಲಿಂಡರು. ಬಿಳಿಬಣ್ಣದ ಆಟದ ಶೂ. ಕೈಗಳಿಗೆ ಕ್ರಿಕೆಟ್ ಗ್ಲೌಸುಗಳು. ಸುತ್ತಲೂ ಕಣ್ಣರಳಿಸಿ ಪುಟ್ಟಿ ನೋಡಿದಳು. “ಎತ್ತರೆತ್ತರದ ಕಟ್ಟಡಗಳಾಗಲಿ, ಮನೆಗಳಾಗಲಿ ಇಲ್ಲಿ ಇಲ್ಲ. ಹಸಿರು ಗಿಡಬಳ್ಳಿಗಳೂ ಇಲ್ಲ.’ ಎಂದಳು. “ಅಪ್ಪ ಹೇಳಿದ್ದರಲ್ಲ ಚಂದ್ರನ ಅಂಗಳದಲ್ಲಿ ಅದೆಲ್ಲ ಇರೋದಿಲ್ಲ ಅಂತ. ಇಲ್ಲಿ ಇರೋದೆಲ್ಲ ಮಣ್ಣು, ಕಲ್ಲು ಹಾಗು ಚಿಕ್ಕ ಚಿಕ್ಕ ಬೆಟ್ಟ- ಗುಡ್ಡದ ಮಾದರಿಗಳು. ಹಾಂ! ಕುಳಿಗಳೂ, ಕಣಿವೆಗಳೂ ಇರಬಹುದು.
“ನನಗಂತೂ ಭಾರ ಅಂತ ಅನ್ನಿಸ್ತಾನೇ ಇಲ್ಲ! ನೋಡು ಎಷ್ಟು ಸುಲಭವಾಗಿ ಹಾರಬಲ್ಲೆ!’
“ನನಗೂ ಹಾಗೇ ಅನ್ನಿಸ್ತಾ ಇದೆ.’ ಇಬ್ಬರೂ ಖುಷಿಯಿಂದ ಕೈ-ಕೈ ಹಿಡಿದು ಎತ್ತೆತ್ತರಕ್ಕೆ ಹಾರಿದರು.
“ಅಣ್ಣ, ಇಲ್ಲಿ ನೋಡು ನಡೆದಾಡಿದುದಕ್ಕೆ ನಮ್ಮ ಶೂ ಗುರುತು!’
“ಅಣ್ಣ, ಎಷ್ಟೊಂದು ದೂರ ನಡೆದುಕೊಂಡು ಬಂದಿದ್ದೀವಿ. ಚಂದ್ರಣ್ಣನ ಮನೆ ಇಲ್ಲೇ ಹತ್ತಿರ ಇರಬಹುದು. ಕೂಗಿ ಕರೆದು ನೋಡೋಣವೆ?’
“ಏ ಪೆದ್ದಿ, ಚಂದ್ರಣ್ಣನ ಮನೆ ಅಂತ ಹೆಸರು ಅಷ್ಟೆ. ಇಲ್ಲಿ ಯಾರೂ ಇಲ್ಲ. ಅಪ್ಪ ಹೇಳಿಲ್ಲವ?’
“ಮತ್ತೆ ಯಾಕೆ ಚಂದ್ರಣ್ಣನ ಮನೆ, ಚಂದ್ರಣ್ಣನ ಅಂಗಳ ಅಂತ ಹೆಸರಿಟ್ಟಿರೋದು? ನಂಗಂತೂ ಚಂದ್ರಣ್ಣ ಇಲ್ಲೇ ಇದ್ದಾನೆ ಅನ್ನಿಸುತ್ತೆ. ಕರೆದರೆ ಬರಬಹುದು.’
“ಕರೆದು ನೋಡು’ ಅಂದ ಮನು. ಅವನ ದನಿಯಲ್ಲಿ ವ್ಯಂಗ್ಯವಿತ್ತು.
“ಚಂದ್ರಣ್ಣ… ಏ… ಚಂದ್ರಣ್ಣ ಎಲ್ಲಿದ್ದೀಯ? ನಾವು ಬಂದು ತುಂಬಾ ಹೊತ್ತಾಯಿತು. ನಿನ್ನನ್ನು ನೋಡಬೇಕು. ನಿಂಜೊತೆ ಆಡಬೇಕು. ಕಥೆ ಹೇಳಬೇಕು. ಕಥೆ ಹೇಳಿಸ್ಕೋಬೇಕು. ಬಾರೋ ಬೇಗ’ ಎನ್ನುತ್ತಾ ಉತ್ಸಾಹದಿಂದ ಪುಟ್ಟಿ ಕೂಗಿದಳು. ಏನೂ ಉತ್ತರ ಬರಲಿಲ್ಲ.
ಅದೇ ಹೊತ್ತಿಗೆ ದೂರದಲ್ಲೊಂದು ಬೆಳಕು ಕಾಣಿಸಿತು! ಟಾರ್ಚಿನ ಬೆಳಕಿನಂತಿದ್ದ ಅದನ್ನು ಪುಟ್ಟಿ ತೋರಿಸಿದಳು. ನೆಲದಿಂದ ಸ್ವಲ್ಪ ಮೇಲೆ ಆಕಾಶಕಾಯವೊಂದು ನಿಧಾನವಾಗಿ ಬರುತ್ತಿರುವಂತೆ ಕಾಣಿಸಿತು. “ಚಂದ್ರಣ್ಣನೇ ಇರಬೇಕು’ ಎಂದಳು ಪುಟ್ಟಿ. ಅನಿರೀಕ್ಷಿತವಾಗಿ ಕಾಣಿಸಿಕೊಂಡ ವಾಹನದ ಬೆಳಕಿನಿಂದ ಮನುವಿಗೆ ಗಾಬರಿಯೇ ಆಯಿತು. ಪುಟ್ಟಿಯ ಕೈ ಹಿಡಿದು ಸ್ವಲ್ಪ ಪಕ್ಕಕ್ಕೆ ಸರಿದ. ಇಬ್ಬರೂ ಆತಂಕ ಹಾಗು ಆಶ್ಚರ್ಯದ ಕಣ್ಣುಗಳಿಂದ ಹಾರಿಬಂದ ಆಕಾಶಕಾಯದತ್ತ ನೋಡಿದರು. ಅವರ ಕಣ್ಣುಗಳನ್ನು ನಂಬಲಾಗಲಿಲ್ಲ.
ಟಾರ್ಚಿನ ಬೆಳಕು ಈಗ ನಾಲ್ಕು ಮೂಲೆಗಳಿಂದಲೂ ಸ್ಪುರಿಸುತ್ತಿತ್ತು. ವಾಹನದ ಮೇಲ್ಮೆ„ಯಿಂದ ಕೆಂಪು- ಹಸಿರು- ನೀಲಿ ಬಣ್ಣಗಳ ಕಾಸಿನಗಲದ ಬಲ್ಬುಗಳು ಮಿಣಿಕ್.. ಮಿಣಿಕ್ ಎಂದು ಹೊಳೆಯುತ್ತಿದ್ದವು. ನೋಡುತ್ತಿದ್ದಂತೆಯೇ ಆ ಅಂತರಿಕ್ಷ ವಾಹನದಿಂದ ನಾಲ್ಕು ಲೋಹದ ಕಂಬಗಳು ನೆಲಕ್ಕೆ ತಾಗಿ ನಿಂತವು. ಮರುಕ್ಷಣದಲ್ಲಿ ಏಣಿಯಂಥ ಸಾಧನವೊಂದು ಅದರೊಳಗಿಂದ ಹೊರಕ್ಕೆ ಚಾಚಿಕೊಂಡಿತು. ವಾಹನದಿಂದ ನಾಲ್ಕು ಮಂದಿ ಗಗನಯಾತ್ರಿಗಳು ಒಬ್ಬರ ಹಿಂದೆ ಒಬ್ಬರು ಇಳಿದರು. ಮಕ್ಕಳಿಬ್ಬರೂ ಧರಿಸಿದಂತೆ ಗಗನಯಾತ್ರಿಗಳೂ ದಿರಿಸನ್ನು ಧರಿಸಿದ್ದರು. ಕ್ಷಿಪಣಿಯಂತಿದ್ದ ಯಂತ್ರದಿಂದ ಇಳಿದ ಕೊನೆಯವನ ಕೈಯಲ್ಲಿ ಭಾರತದ ತ್ರಿವರ್ಣ ಧ್ವಜವಿತ್ತು.
ನಾಲ್ವರಲ್ಲಿ ಒಬ್ಬ ಪುಟ್ಟಿ ಮತ್ತು ಮನು ಕಡೆಗೇ ಧಾವಿಸಿದ. ಪುಟ್ಟಿ ಭಯದಿಂದ ಅಣ್ಣನತ್ತ ನೋಡಿದಳು. ರಕ್ಷಣೆಗೆಂದು ಸೊಂಟದಲ್ಲಿ ಹುದುಗಿಸಿಕೊಂಡಿದ್ದ ಪುಟ್ಟ ಆಟದ ಪಿಸ್ತೂಲಿನ ನೆನಪಾಗಿ ಮನುವಿನ ಕೈ ಅದರ ಮೇಲೆ ಹೋಯಿತು. ಒಡನೆಯೇ ಆ ವ್ಯಕ್ತಿ “ಮಕ್ಕಳೇ ಅಂಜಬೇಡಿ. ನಾವೂ ಭಾರತೀಯರೇ. ದೇಶದ ಹೆಮ್ಮೆಯ ಚಂದ್ರಯಾನದಲ್ಲಿ ನಿಮ್ಮದೇ ಮೊದಲ ಹೆಜ್ಜೆಯಾಗಿದೆ. ಬನ್ನಿ ನಾವೆಲ್ಲ ಸೇರಿ ನಮ್ಮ ರಾಷ್ಟ್ರಧ್ವಜವನ್ನು ಹಾರಿಸೋಣ’ ಎಂದನು. ಮನು “ಜೈ ಭಾರತ್’ ಎಂದು ಕೂಗುತ್ತ ಧಡಕ್ಕನೆ ತನ್ನ ಹಾಸಿಗೆಯ ಮೇಲೆ ಎದ್ದು ಕುಳಿತ. ಅವನ ಚಂದ್ರಯಾನದ ಕನಸು ಮುಗಿದಿತ್ತು. ಅದೇ ಹೊತ್ತಿಗೆ ಪುಟ್ಟಿಯೂ ತನ್ನ ಹಾಸಿಗೆಯಿಂದ ಎದ್ದು ಕುಳಿತು,”ಅಣ್ಣ, ನೀನೂ ಕನಸು ಕಂಡೆಯ?’ಎಂದು ಕೇಳಿದಳು. ಮಕ್ಕಳ ಕೋಣೆಯ ಬಾಗಿಲಲ್ಲಿ ಕಾಣಿಸಿಕೊಂಡ ಅಮ್ಮ, ಅಪ್ಪನ ಬಳಿ, “ನೋಡಿದಿರಾ, ಇದೆಲ್ಲಾ ನೆನ್ನೆ ರಾತ್ರಿ ಮಕ್ಕಳಿಗೆ ನೀವು ಹೇಳಿದ ಚಂದ್ರಯಾನದ ಕಥೆಯ ಪರಿಣಾಮ!!’ ಎಂದು
ನಕ್ಕರು.
-ಮತ್ತೂರು ಸುಬ್ಬಣ್ಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ
R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
ಅಖಿಲ ಭಾರತ ಅಂತರ್ ವಿ.ವಿ.ವೇಟ್‌ಲಿಫ್ಟಿಂಗ್:ಮಂಗಳೂರು ವಿವಿ ರನ್ನರ್ ಅಪ್
Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಬೆಂಬಲ ಬೆಲೆ: ಸಚಿವ ಶಿವಾನಂದ ಪಾಟೀಲ್
Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.