ಕಾಡಿನ ಮಧ್ಯದಲ್ಲೊಂದು ಕೃಷಿ
Team Udayavani, Jan 18, 2020, 5:14 AM IST
ಆ ಕಾಡಿನಲ್ಲಿ ಎಲ್ಲವೂ ಚೆನ್ನಾಗಿತ್ತು. ಬೇಸಗೆಯಲ್ಲಿ ಸಸ್ಯಾಹಾರಿಗಳಿಗೆ ಆಹಾರ ದೊರೆಯುವುದೊಂದು ಬಿಟ್ಟು. ಅದಕ್ಕೂ ಪ್ರಾಣಿಗಳು ಪರಿಹಾರ ಕಂಡುಕೊಂಡವು. ಏನದು? ಅದೊಂದು ದಟ್ಟ ಅರಣ್ಯ. ಒತ್ತೂತ್ತಾಗಿ ಬೆಳೆದ ಮರ, ಗಿಡ, ಬಳ್ಳಿಗಳು, ವಿವಿಧ ಪ್ರಾಣಿ-ಪಕ್ಷಿಗಳು, ಕೀಟಗಳು ಅಲ್ಲಿದ್ದವು. ಮಧ್ಯೆ ಹರಿಯುವ ನದಿ ಆ ಕಾಡನ್ನು ಪೊರೆಯುತ್ತಿತ್ತು. ಅಲ್ಲಿ ಪ್ರಾಣಿ-ಪಕ್ಷಿಗಳೆಲ್ಲ ನೆಮ್ಮದಿಯಿಂದ, ಸೌಹಾರ್ದದಿಂದ ಬದುಕುತ್ತಿದ್ದವು. ಅವರಿಗಿದ್ದ ಒಂದೇ ಒಂದು ಕೊರತೆ ಎಂದರೆ ಬೇಸಗೆಯಲ್ಲಿ ಗಿಡ-ಮರಗಳೆಲ್ಲ ಒಣಗಿ ಸಸ್ಯಾಹಾರಿಗಳಿಗೆ ಆಹಾರ ದೊರೆಯದೆ ಕಷ್ಟವಾಗುತ್ತಿತ್ತು. ನದಿಯೇನೋ ಬತ್ತುತ್ತಿರಲಿಲ್ಲ. ಆದರೆ ಆಹಾರ ದೊರೆಯದೆ ಚಿಕ್ಕ ಪ್ರಾಣಿಗಳು ಸಾಯುತ್ತಿದ್ದವು. ಇದೊಂದು ಸಮಸ್ಯೆ ಸಸ್ಯಾಹಾರಿಗಳಿಗೆ ಬಹು ಸಮಯದಿಂದ ಕಾಡುತ್ತಿತ್ತು.
ಈ ವರ್ಷ ಮಳೆಗಾಲದಲ್ಲೇ ಇದಕ್ಕೊಂದು ಪರಿಹಾರ ಕಂಡುಕೊಳ್ಳಬೇಕು ಎಂದು ಸಸ್ಯಾಹಾರಿಗಳ ರಾಜ ಗಜೇಂದ್ರ ಆನೆ ತೀರ್ಮಾನಿಸಿತು. ಈ ಬಗ್ಗೆ ಎಲ್ಲರೊಂದಿಗೆ ಸಮಾಲೋಚನೆ ನಡೆಸಲು ತೀರ್ಮಾನಿಸಿ ಮಾರನೇ ದಿನ ಸಭೆ ಆಯೋಜಿಸಲು ನಿರ್ಧರಿಸಿತು. ಮಂಗನನ್ನು ಕರೆದು ಎಲ್ಲರನ್ನೂ ಆಹ್ವಾನಿಸಲು ಹೇಳಿತು. ಅದರಂತೆ ಮಂಗಣ್ಣ ಮರದಿಂದ ಮರಕ್ಕೆ ಹಾರುತ್ತಾ, ನೆಲದಲ್ಲಿ ಓಡಾಡುತ್ತಾ ಎಲ್ಲರಿಗೂ ಸಭೆಯ ವಿಷಯ ಮುಟ್ಟಿಸಿತು.
ಮಾರನೇ ದಿನ ಮಳೆ ಕಡಿಮೆಯಾದ ಸಮಯದಲ್ಲಿ ಆಲದ ಮರದ ಬುಡಕ್ಕೆ ಒಂದೊಂದೇ ಪ್ರಾಣಿಗಳು ಬರತೊಡಗಿದವು. ನರಿಗೆ ಸಭೆಯಲ್ಲಿ ಭಾಗವಹಿಸುವುದು ಇಷ್ಟವಿರಲಿಲ್ಲ. ಆದರೆ ಬಲಿಷ್ಠ ಗಜೇಂದ್ರ ಕರೆದಿರುವಾಗ ಹೋಗದಿರುವುದು ಹೇಗೆ?ಹಾಗಾಗಿ ನರಿ ಗೊಣಗಿಕೊಂಡೇ ಹೆಜ್ಜೆ ಹಾಕಿತು. ಎಲ್ಲ ಪ್ರಾಣಿಗಳು ಸೇರಿದ ಮೇಲೆ ಸಭೆಯ ಮಧ್ಯ ಭಾಗಕ್ಕೆ ಬಂದ ಗಜೇಂದ್ರ àಳಿಟ್ಟು ಗಂಟಲು ಸರಿಪಡಿಸಿಕೊಂಡಿತು. ನಂತರ ಮಾತನಾಡಲಾರಂಭಿಸಿತು, “ಸ್ನೇಹಿತರೇ ಪ್ರತಿ ವರ್ಷ ಬೇಸಗೆಯಲ್ಲಿ ಆಹಾರ ದೊರೆಯದೇ ತೊಂದರೆ ಅನುಭವಿಸುತ್ತಿದ್ದೇವೆ. ಮರಿ-ಮಕ್ಕಳ ಪಾಡಂತೂ ನೋಡುವಾಗ ಕರುಳು ಕಿವುಚಿದಂತಾಗುತ್ತದೆ. ಹೀಗಾಗಿ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಏನು ಮಾಡಬೇಕೆಂದು ಹೇಳಿ’ ಎಂದಿತು.
ಸಭೆಯಲ್ಲಿ ಗುಸುಗುಸು ಆರಂಭವಾಯಿತು. ಸ್ವಲ್ಪ ಹೊತ್ತಿನಲ್ಲಿ ಕಾಗಕ್ಕ ಎದ್ದು ನಿಂತು, “ನನ್ನ ಬಳಿ ಒಂದು ಉಪಾಯವಿದೆ. ಇದಕ್ಕೆ ಎಲ್ಲರ ಸಹಕಾರ ಬೇಕು’ ಎಂದಿತು. “ಸರಿ. ಅದರ ಬಗ್ಗೆ ಚರ್ಚಿಸುವ. ಮೊದಲು ನೀನು ಕಂಡುಕೊಂಡ ಮಾರ್ಗದ ಬಗ್ಗೆ ಹೇಳು’ ಎಂದು ಗಂಜೇಂದ್ರ ಹೇಳಿತು. ಕಾಗಕ್ಕ ಮುಂದೆ ಬಂದು ಆನೆ ಪಕ್ಕ ನಿಂತು ತನ್ನ ಯೋಜನೆಯನ್ನು ವಿವರಿಸಲಾರಂಭಿಸಿತು.
“ನಾನು ಆಹಾರ ಅರಸಿಕೊಂಡು ನಾಡಿಗೆ ತೆರಳಿದ್ದಾಗ ಕಂಡಿದ್ದೇನೆ. ಅಲ್ಲಿ ಜನರು ಕೃಷಿ ಮಾಡಿ ಆಹಾರ ಧಾನ್ಯ ಬೆಳೆಯುತ್ತಾರೆ. ನಾವೆಲ್ಲ ಸೇರಿ ಯಾಕೆ ಈ ಉಪಾಯ ಬಳಸಬಾರದು?’ಎಂದಿತು. ಕೆಲವು ಪ್ರಾಣಿಗಳಿಗೆ ಈ ಉಪಾಯ ಹಿಡಿಸಿತು.
“ಮಳೆ ಕಡಿಮೆಯಾಗುವ ಸಮಯದಲ್ಲಿ ನಾವು ಕೃಷಿ ಆರಂಭಿಸಿದರೆ ಬೇಸಗೆಯಲ್ಲಿ ಬೆಳೆ ನಮ್ಮ ಕೈ ಸೇರುತ್ತದೆ’ ಎಂದಿತು ಕಾಗಕ್ಕ. ಆದರೆ ಮೂಲತಃ ಸೋಮಾರಿಯಾದ ನರಿ ಇದನ್ನು ವಿರೋಧಿಸಬೇಕೆಂದು ಯೋಜನೆ ರೂಪಿಸಿ, “ಏನು ಇದು ಆಗುವ ಹೋಗುವ ವಿಚಾರವ? ಸುಮ್ಮನೆ ಇದೆಲ್ಲ ವ್ಯರ್ಥ’ ಎಂದಿತು ವ್ಯಂಗ್ಯದಿಂದ. ಇದನ್ನು ಖಂಡಿಸಿದ ಮಂಗಣ್ಣ ಹೇಳಿತು, “ಎಲ್ಲರ ಪರಿಶ್ರಮದಿಂದ ಸಾಧ್ಯ. ಪ್ರಯತ್ನ ಪಟ್ಟು ನೋಡುವುದರಲ್ಲಿ ತಪ್ಪಿಲ್ಲ’ ಎಂದಿತು.
“ನಾನಂತೂ ಇಲ್ಲ. ನನ್ನ ಜತೆ ಯಾರೆಲ್ಲ ಬರುತ್ತೀರಿ?’ನರಿ ಹೊರ ಹೋಗಲು ತಯಾರಾಯಿತು. ಕರಡಿ, ಬಸವನ ಹುಳು, ಚೇರಂಟೆ ಕೂಡಾ ಎದ್ದು ನಿಂತವು. “ನಿಮಗೆ ಬೇರೆ ಕೆಲಸ ಇಲ್ಲ’ ಎಂದು ಅವು ಹೊರಟು ಹೋದವು. ಬೇರೆ ಯಾರೂ ಹೋಗದೆ ಇದ್ದುದರಿಂದ ಗಜೇಂದ್ರ ಮಾತು ಮುಂದುವರಿಸಿತು, “ನಮ್ಮ ಪ್ರಯತ್ನ ನಾವು ಮಾಡೋಣ. ಶ್ರದ್ಧೆಯಿಂದ ಕೆಲಸ ಮಾಡಿದರೆ ಫಲ ಖಂಡಿತಾ ದೊರೆಯುತ್ತದೆ’ ಎಂದು ಹುರಿದುಂಬಿಸಿತು. ಬಳಿಕ ಒಂದೊಂದು ತಂಡಗಳನ್ನಾಗಿ ಮಾಡಿ ಜವಾಬ್ದಾರಿಗಳನ್ನು ಹಂಚಲಾಯಿತು.
ಮಾರನೆಯ ದಿನವೇ ಕೃಷಿಗೆ ಸಂಬಂಧಿಸಿದ ಚಟುವಟಿಕೆ ಆರಂಭವಾಯಿತು. ಕಾಗೆ, ಗಿಳಿ, ಗುಬ್ಬಚ್ಚಿ, ಪಾರಿವಾಳ, ಅಳಿಲು ಬಿತ್ತನೆಗೆ ಬೇಕಾದ ಧಾನ್ಯ ಸಂಗ್ರಹಿಸತೊಡಗಿದವು. ಮೊಲ, ಜಿಂಕೆ ಗೊಬ್ಬರದ ಉಸ್ತುವಾರಿ ವಹಿಸಿಕೊಂಡವು. ಆನೆ ಕಾಡೊಳಗೆ ಹೋಗಿ ಬೇಲಿ, ನೇಗಿಲಿಗೆ ಬೇಕಾದ ಮರ, ರೆಂಬೆಗಳನ್ನು ತಂದು ಹಾಕಿತು. ಇಲಿ, ಹೆಗ್ಗಣ ಚೂಪಾದ ಹಲ್ಲಿನಿಂದ ಮರಗಳನ್ನು ಕಡಿದು ಆಕಾರ ಕೊಟ್ಟವು. ಕಾಡು ಕೋಣಗಳಿಗೆ ನೇಗಿಲು ಹೂಡಿ ಮಂಗ ಭತ್ತ ಬಿತ್ತಲು ಜಾಗ ಹದ ಮಾಡಿತು. ತರಕಾರಿ ಬಿತ್ತಲು ನವಿಲು ಕಾಲಿನಿಂದ ನೆಲ ಕೆರೆಯಿತು. ಎಲ್ಲ ಪ್ರಾಣಿ ಪಕ್ಷಿಗಳು ಸೇರಿ ಬೀಜ ಬಿತ್ತಿದವು.
ಕೆಲವು ದಿನಗಳಲ್ಲಿ ಗಿಡ ಚಿಗುರೊಡೆಯತೊಡಗಿದವು. ಸೂಕ್ತ ಪೋಷಕಾಂಶ ದೊರೆತು ಸಮೃದ್ಧವಾಗಿ ಬೆಳೆಯತೊಡಗಿದವು. ಮಳೆ ಕಡಿಮೆಯಾಗಿ ಚಳಿಗಾಲ ಮುಗಿದು ಬೇಸಗೆ ಕಾಲಿಟ್ಟಿತು. ಅದುವರೆಗೆ ನಳನಳಿಸುತ್ತಿದ್ದ ಕೃಷಿ ಬಾಡತೊಡಗಿತು. ನರಿ ಮತ್ತು ಸಂಗಡಿಗರು ವ್ಯಂಗ್ಯವಾಡತೊಡಗಿದವು.
ಒಂದು ದಿನ ಪ್ರಾಣಿಗಳೆಲ್ಲ ಕೃಷಿ ಪ್ರದೇಶದ ಸಮೀಪ ತಲೆಗೆ ಕೈ ಹೊತ್ತು ಕುಳಿತಿದ್ದವು. ಕಷ್ಟಪಟ್ಟು ಬೆಳೆದ ಬೆಳೆ ಕಮರುತ್ತಿರುವುದು ಅವರಿಗೆ ಬೇಸರ ತರಿಸಿತ್ತು. ಚಿಂತಾಕ್ರಾಂತವಾಗಿ ಕುಳಿತ ಗಜೇಂದ್ರನ ಬೆನ್ನ ಮೇಲೆ ನೊಣವೊಂದು ಕುಳಿತಿತ್ತು. ಅದನ್ನು ಓಡಿಸಲು ಸೊಂಡಿಲು ಬೀಸಿತು. ಅಷ್ಟೇ, ಆನೆ ತಲೆಯಲ್ಲೊಂದು ಉಪಾಯ ಹೊಳೆಯಿತು. ಸೀದಾ ಎದ್ದು ದುಡು ದುಡು ಓಡಿತು. ಉಳಿದ ಪ್ರಾಣಿಗಳು ಏನಾಯ್ತು ಎಂದು ಕೇಳುತ್ತಿದ್ದಂತೆ ಓಡಿ ನದಿ ಬುಡ ತಲುಪಿತು. ಸೊಂಡಿಲಲ್ಲಿ ನೀರು ತುಂಬಿಕೊಂಡು ಬಂದ ಆನೆ ಗಿಡಗಳ ಮೇಲೆ ಚಿಮುಕಿಸಿತು. ಈಗ ಎಲ್ಲರ ಮುಖ ಅರಳಿತು. ಅನಂತರ ಆನೆ ದಿನಾ ಗಿಡಗಳಿಗೆ ನೀರು ಹಾಕುತ್ತಿತ್ತು.
ಬೇಸಗೆ ತೀವ್ರವಾಗುತ್ತಿದ್ದಂತೆ ವರ್ಷದಂತೆ ಆಹಾರಕ್ಕಾಗಿ ಹಾಹಾಕಾರ ಆರಂಭವಾಯಿತು. ಆದರೆ ಆಗಲೇ ಬೆಳೆಯೂ ಕೈಗೆ ಬಂದಿದ್ದರಿಂದ ಗಜೇಂದ್ರ ಮತ್ತು ಗೆಳೆಯರು ನಿರಾಳವಾಗಿದ್ದರು. ಹೊಟ್ಟೆ ತುಂಬ ತಿನ್ನುತ್ತಿದ್ದವು. ಈಗ ನರಿ ಬಳಗದವರಿಗೆ ಬಿಸಿ ತಟ್ಟತೊಡಗಿತು. ಆಹಾರ ದೊರೆಯದೆ ಒದ್ದಾಡತೊಡಗಿದವು. ಕೊನೆಗೆ ಗಜೇಂದ್ರನ ಕ್ಷಮೆ ಕೇಳಿದಾಗ ಅವುಗಳಿಗೂ ಆಹಾರ ನೀಡ ಲಾಯಿತು. ಮುಂದೆ ಅವುಗಳೂ ಕೃಷಿಯಲ್ಲಿ ಕೈಜೋಡಿಸ ತೊಡಗಿದವು.
- ರಮೇಶ್ ಬಳ್ಳಮೂಲೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.