ಹಿಸ್ಟರಿ ಮರೆತ ಹೀರೋಗಳು
ಸ್ವಾತಂತ್ರ್ಯ ಸಂಗ್ರಾಮದ ಅನಾಮಿಕ ಹೆಜ್ಜೆಗಳು
Team Udayavani, Aug 15, 2019, 5:00 AM IST
ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದೊಡ್ಡ ಪಾತ್ರ ವಹಿಸಿದ ಮಹಾತ್ಮ ಗಾಂಧೀಜಿಯ ಎಂಬ ಆಲದ ಮರದ ನೆರಳಿನಲ್ಲಿ ಬಹಳಷ್ಟು ಮಂದಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಅವರಲ್ಲಿ ಕೆಲವರನ್ನು ನೆನಪಿಸಿಕೊಳ್ಳುವ ಪುಟ್ಟ ಪ್ರಯತ್ನ….
ವಿದೇಶಿ ಬ್ರಹ್ಮಚಾರಿಣಿಯ ಸ್ವಾತಂತ್ರ್ಯ ಹೋರಾಟ- ನಿವೇದಿತಾ
ಇಂಗ್ಲೆಂಡ್ ನಿವಾಸಿಯಾದ ನಿವೇದಿತಾ ಭಾರತಕ್ಕೆ ಬಂದುದೇ ಅಲ್ಲದೆ ಬ್ರಿಟಿಷ್ ಸರ್ಕಾರದ ವಿರುದ್ದ ಪ್ರತಿಭಟನೆಯಲ್ಲಿ ತೊಡಗಿದ್ದು ಸೋಜಿಗವೇ ಸರಿ. ಅವರನ್ನು ಭಾರತದತ್ತ ಸೆಳೆದದ್ದು ಅಧ್ಯಾತ್ಮ. ಶಿಕಾಗೋದಲ್ಲಿ ಸ್ವಾಮಿ ವಿವೇಕಾನಂದರು ನೀಡಿದ ವಿಶ್ವವಿಖ್ಯಾತ ಭಾಷಣ ನಿಮಗೆಲ್ಲರಿಗೂ ಗೊತ್ತೇ ಇರುತ್ತದೆ. ಅಲ್ಲಿಂದ ಅವರು ಲಂಡನ್ನಿಗೆ ಪ್ರಯಾಣಿಸಿದರು. ಲಂಡನ್‌ನಲ್ಲಿ ಅವರ ಕರೆಗೆ ಓಗೊಟ್ಟ ನಿವೇದಿತಾ ನೇರವಾಗಿ ಭಾರತಕ್ಕೆ ಬಂದು ರಾಮಕೃಷ್ಣ ಮಿಷನ್ ಸೇರಿಕೊಂಡುಬಿಟ್ಟರು. ರಾಮಕೃಷ್ಣರ ಮಡದಿ ಶ್ರೀಮತಿ ಶಾರದಾದೇವಿ ಮತ್ತು ಸ್ವಾಮಿ ವಿವೇಕಾನಂದರ ಆಪ್ತರೆನಿಸಿಕೊಂಡರು. ಅಂದಹಾಗೆ ಅವರ ಮೂಲ ಹೆಸರು ಮಾರ್ಗರೆಟ್. ನಿವೇದಿತಾ ಎನ್ನುವ ಹೆಸರನ್ನು ಕೊಟ್ಟಿದ್ದು ವಿವೇಕಾನಂದರೇ. ಹಾಗಿದ್ದವರು ರಾಮಕೃಷ್ಣ ಮಿಷನ್‌ಅನ್ನು ತ್ಯಜಿಸುವುದಕ್ಕೆ ಕಾರಣವಾಗಿದ್ದು ಭಾರತ ಸ್ವಾತಂತ್ರ್ಯ ಸಂಗ್ರಾಮ. ಶುರುವಿನಲ್ಲಿ ಬ್ರಿಟಿಷರ ಸರ್ಕಾರದಿಂದ ಭಾರತಕ್ಕೆ ಒಳ್ಳೆಯದಾಗಲಿದೆ ಎಂದು ನಂಬಿದ್ದ ಬ್ರಿಟಿಷರಲ್ಲಿ ನಿವೇದಿತಾ ಕೂಡಾ ಒಬ್ಬರು. ಆದರೆ ಇಲ್ಲಿಗೆ ಬಂದ ನಂತರ ಭಾರತೀಯರು ದಾಸ್ಯದಲ್ಲಿರುವುದನ್ನೂ, ಬ್ರಿಟಿಷರ ದಬ್ಟಾಳಿಕೆಯನ್ನೂ ನೇರವಾಗಿ ಕಂಡ ನಂತರ ಅವರ ಅಭಿಪ್ರಾಯ ಬದಲಾಗಿಬಿಟ್ಟಿತು. ಕ್ರಾಂತಿಕಾರಿಗಳಿಗೆ ಸಾರ್ವಜನಿಕವಾಗಿ ಬೆಂಬಲ ಸೂಚಿಸಿದ್ದ ನಿವೇದಿತಾ “ಅನುಶೀಲನ್ ಸಮಿತಿ’ ಎಂಬ ಕ್ರಾಂತಿಕಾರಿಗಳ ರಹಸ್ಯ ಸಂಘಟನೆಗಳ ಜೊತೆಗೂ ಗುರುತಿಸಿಕೊಂಡು ಹಲವು ಯುವ ಕ್ರಾಂತಿಕಾರಿಗಳಿಗೆ ಪ್ರೇರಣೆಯಾಗಿದ್ದಳು. ಬ್ರಹ್ಮಚಾರಿಣಿಯಾಗಿ ಉಳಿದು “ಸಿಸ್ಟರ್ ನಿವೇದಿತಾ’ ಎಂಬ ಹೆಸರಿನಿಂದ ಖ್ಯಾತಿ ಪಡೆದ ಮಾರ್ಗರೆಟ್ ಶಿಕ್ಷಕಿ, ಸಾಮಾಜಿಕ ಕಾರ್ಯಕರ್ತೆ, ಬರಹಗಾರ್ತಿ, ಭಾಷಣಕಾರ್ತಿಯೂ ಆಗಿದ್ದರು.
ಜಡ್ಡುಗಟ್ಟಿದ ಸಮಾಜದಿಂದ ಮುಕ್ತಿ- ಸದ್ಗುರು ರಾಮ್
ಮೊತ್ತ ಮೊದಲ ಬಾರಿಗೆ “ಅಸಹಕಾರ ಚಳವಳಿ’ ಮತ್ತು “ವಿದೇಶಿ ವಸ್ತುಗಳ ನಿಷೇಧ’ವನ್ನು ಬ್ರಿಟಿಷರ ವಿರುದ್ಧ ಅಸ್ತ್ರವಾಗಿ ಬಳಸಿದ ಖ್ಯಾತಿ ಸದ್ಗುರು ರಾಮ್ ಸಿಂಗ್‌ರದ್ದು. ಅವರು ಸ್ವಾತಂತ್ರ್ಯ ಹೋರಾಟಗಾರರಷ್ಟೇ ಆಗಿರಲಿಲ್ಲ. ತತ್ವಜ್ಞಾನಿ ಮತ್ತು ಸಮಾಜ ಸುಧಾರಕರೆಂದು ಹೆಸರು ಪಡೆದಿದ್ದರು. 18ನೇ ಶತಮಾನದಲ್ಲೇ ಅವರು “ಆನಂದ್ ಕಾರಝ್’ ಎಂಬ ವಿವಾಹ ವ್ಯವಸ್ಥೆಯನ್ನು ಪ್ರಚುರಪಡಿಸಿದ್ದರು. ಅದರಡಿ ಗುರುದ್ವಾರಗಳಲ್ಲಿ ವೈಭವ, ವಿಜೃಂಭಣೆಯಿಲ್ಲದೆ ಅತ್ಯಂತ ಸರಳವಾಗಿ ಮದುವೆಯಾಗಬಹುದಿತ್ತು. ವರದಕ್ಷಿಣೆ, ಹೆಣ್ಣುಭ್ರೂಣ ಹತ್ಯೆಯಂಥ ಸಾಮಾಜಿಕ ಪಿಡುಗುಗಳ ಕುರಿತು ಪಂಜಾಬ್‌ನಾದ್ಯಂತ ಜನರಿಗೆ ಆ ಕಾಲದಲ್ಲೇ ಅರಿವು ಮೂಡಿಸುವ ಕೆಲಸದಲ್ಲಿ ನಿರತರಾಗಿದ್ದರು. ಅವರು ಯುವಕರಾಗಿದ್ದಾಗ ರಾಜರ ಸೈನಿಕ ದಳದಲ್ಲಿ ಕೆಲಸ ಮಾಡುತ್ತಿದ್ದರು ಎಂದರೆ ಎಂಥವರಿಗೂ ಅಚ್ಚರಿಯಾದೀತು. ಆದರೆ, ಕಾಲಾಂತರದಲ್ಲಿ ಅವರಿಗೆ ತಮ್ಮ ಕಾರ್ಯದ ಬಗ್ಗೆಯೇ ಅಸಹ್ಯ ಹುಟ್ಟಿ, ಜಡ್ಡುಗಟ್ಟಿದ ಸಮಾಜದ ವಿರುದ್ಧವೇ ಕಾಳಗಕ್ಕೆ ಇಳಿದರು. 2016ರಲ್ಲಿ ಭಾರತ ಸರ್ಕಾರ, ಅವರ 200ನೇ ಜನ್ಮ ಶತಾಬ್ದಿಯನ್ನು ಅಧಿಕೃತವಾಗಿ ಆಚರಿಸುವ ಘೋಷಣೆಯನ್ನು ಹೊರಡಿಸಿತು.
ಡಕಾಯಿತರ ಮನವೊಲಿಸಿದ ಗೆಂಡಾ ಲಾಲ್
ಪ್ರೀತಿಯ ಸಂಕೇತ ಎಂದೇ ಹೆಸರಾದ ತಾಜ್‌ಮಹಲ್ ಇರುವ ಆಗ್ರಾದಲ್ಲಿ “ಶಿವಾಜಿ ಸಮಿತಿ’ ಎಂಬ ಕ್ರಾಂತಿಕಾರಿಗಳ ಗುಂಪನ್ನು ಮುನ್ನಡೆಸುತ್ತಿದ್ದವರು ಗೆಂಡಾ ಲಾಲ್. ಕ್ರಾಂತಿಕಾರಿಯಾಗುವುದಕ್ಕೆ ಮುಂಚೆ ಅವರು ಶಿಕ್ಷಕರಾಗಿದ್ದರು! ಅಂದಿನ ಬ್ರಿಟಿಷ್ ವೈಸ್‌ರಾಯ್ ಲಾರ್ಡ್ ಕರ್ಝನ್ ಬಂಗಾಳ ವಿಭಜನೆಯನ್ನು ಘೋಷಿಸಿದಾಗ ಭಾರತದಾದ್ಯಂತ ವಿರೋಧ ವ್ಯಕ್ತವಾಗಿತ್ತು. ಸ್ವಾತಂತ್ರ್ಯ ಹೋರಾಟದ ಪರವಾಗಿದ್ದ ಪತ್ರಿಕೆಗಳಂತೂ ಪುಟಗಟ್ಟಲೆ ವರದಿ ಮಾಡಿದವು. ಅಂಧದ್ದೊಂದು ಪತ್ರಿಕೆಯನ್ನು ಬಾಲಗಂಗಾಧರನಾಥ ತಿಲಕರೂ ಹೊರತರುತ್ತಿದ್ದರು. ಪತ್ರಿಕೆಯಲ್ಲಿ ಈ ಕುರಿತು ಅವರ ಬರಹಗಳಿಂದ ಪ್ರೇರಣೆ ಪಡೆದು ಸ್ವರಾಜ್ಯ ಚಳವಳಿಗೆ ಧುಮುಕಿದವರಲ್ಲಿ ಗೆಂಡಾ ಲಾಲ್ ದೀಕ್ಷಿತರೂ ಒಬ್ಬರು. ಶಿಕ್ಷಕ ವೃತ್ತಿಯನ್ನು ತ್ಯಜಿಸಿ ಅವರು ಬ್ರಿಟಿಷರ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಮತ್ತೆ ಅವರು ಹಿಂತಿರುಗಿ ನೋಡಿದ್ದೇ ಇಲ್ಲ. ಚಳವಳಿಗಳಲ್ಲಿ ಪೂರ್ಣಪ್ರಮಾಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಶುರುವಿನಲ್ಲಿ ದೇಶಪ್ರೇಮ ಸಾರುವ ಕರಪತ್ರಗಳನ್ನು, ಸಂದೇಶಗಳನ್ನು ಹಂಚುವ ಕೆಲಸದಲ್ಲಿ ನಿರತರಾಗಿದ್ದ ಗೆಂಡಾ ಲಾಲ್ ಸುತ್ತಮುತ್ತಲ ಪ್ರದೇಶಗಳಲ್ಲಿ ಕಾರ್ಯಾಚರಿಸುತ್ತಿದ್ದ ಡಕಾಯಿತರ ಮನವೊಲಿಸಿ ಅವರನ್ನು ಹೋರಾಟಕ್ಕೆ ಕೈಜೋಡಿಸುವಂತೆ ಮಾಡಿ ತಂಡವನ್ನು ಬಲಪಡಿಸಿದ್ದು ಗೆಂಡಾ ಲಾಲ್‌ಅವರ ಹೆಗ್ಗಳಿಕೆ.
ಚಾಪೇಕರ್ ಸಹೋದರರ ಸವಾಲ್
ಮಹಾರಾಷ್ಟ್ರದ ದಾಮೋದರ್, ಬಾಲಕೃಷ್ಣ ಮತ್ತು ವಾಸುದೇವ ಚಾಪೇಕರ್ ಎಂಬ ಮೂವರು ಸಹೋದರರೇ ಚಾಪೇಕರ್ ಸಹೋದರರೆಂದು ಖ್ಯಾತಿ ಪಡೆದವರು. 1896ರ ಸಮಯದಲ್ಲಿ ಪ್ಲೇಗ್ ಕಾಯಿಲೆ ಭಾರತವನ್ನು ಆಕ್ರಮಿಸಿಕೊಂಡಿತ್ತು. ಗ್ರಾಮಗಳ ಅರ್ಧಕ್ಕರ್ಧ ಜನಸಂಖ್ಯೆ ಮರಣ ಹೊಂದಿದರೆ, ಇನ್ನುಳಿದವರನ್ನು ಹೀನಾಯವಾಗಿ ನಡೆಸಿಕೊಂಡಿತು ಬ್ರಿಟಿಷ್ ಸರ್ಕಾರ. ನಾಗರಿಕರನ್ನು ವಿವಸ್ತ್ರಗೊಳಿಸುವುದು, ಊರು ಬಿಟ್ಟು ಹೋಗದಂತೆ ತಡೆಯುವುದು ಸೇರಿದಂತೆ ಹಲವು ವಿಧಗಳಲ್ಲಿ ಭಾರತೀಯರು ತೊಂದರೆಗೀಡಾಗಿದ್ದರು. ಅದರಿಂದ ಕ್ರುದ್ಧರಾಗಿದ್ದ ಭಾರತೀಯರಲ್ಲಿ ಚಾಪೇಕರ್ ಸಹೋದರರೂ ಇದ್ದರು. ಪುಣೆಯ ಚಿಂಚವಾಡ ಎಂಬ ಗ್ರಾಮದ ನಿವಾಸಿಗಳಾಗಿದ್ದ ಅವರು ಈ ಅನ್ಯಾಯವನ್ನೆಲ್ಲಾ ಕಣ್ಣಾರೆ ಕಂಡಿದ್ದರು. ಇದಕ್ಕೆಲ್ಲಾ ಕಾರಣಕರ್ತಕಾಗಿದ್ದ ಬ್ರಿಟಿಷ್ ಅಧಿಕಾರಿ ರ್‍ಯಾಂಡ್‌ನನ್ನು ಗುಂಡಿಕ್ಕುವ ಮೂಲಕ ಬ್ರಿಟಿಷ್ ಸರ್ಕಾರಕ್ಕೆ ಸಂದೇಶ ರವಾನಿಸಲು ಚಾಪೇಕರ್ ಸಹೋದರರು ನಿರ್ಧರಿಸಿದರು. ಅಷ್ಟೇ ಅಲ್ಲ, ಅದರಲ್ಲಿ ಯಶಸ್ವಿಯಾದರು. ನಂತರ ಸೆರೆಸಿಕ್ಕು ದೇಶಕ್ಕಾಗಿ ವೀರಮರಣವನ್ನಪ್ಪಿದರು.
ಕ್ರಾಂತಿಕಾರಿ ಕವಿ ಚತುರ ರಾಮ್ ಪ್ರಸಾದ್ ಬಿಸ್ಮಿಲ್
ಪ್ರತಿಭಾನ್ವಿತ ಕವಿ ಮತ್ತು ಲೇಖಕ ಎಂದು ಭಗತ್ ಸಿಂಗ್‌ರಿಂದಲೇ ಹೊಗಳಿಸಿಕೊಂಡ ಕೀರ್ತಿ ಸ್ವಾತಂತ್ರ್ಯ ಹೋರಾಟಗಾರ ರಾಮ್ ಪ್ರಸಾದ್ ಬಿಸ್ಮಿಲ್ ಅವರದು. ಸಮಾಜ ಸುಧಾರಕ ದಯಾನಂದ ಸರಸ್ವತಿಯವರು ಸ್ಥಾಪಿಸಿದ “ಆರ್ಯ ಸಮಾಜ’ದ ಜೊತೆ ಅವರು ಗುರುತಿಸಿಕೊಂಡಿದ್ದರು. ವಿದ್ಯಾರ್ಥಿದೆಸೆಯಲ್ಲಿ ದೇಶಪ್ರೇಮ ಸಾರುವ ಕವಿತೆಗಳನ್ನು ಬರೆಯುವುದರಲ್ಲಿ ನಿಷ್ಣಾತರಾಗಿದ್ದ ರಾಮ್ ಪ್ರಸಾದ್ ಬಿಸ್ಮಿಲ್, ರಾಮ್ ಮತ್ತು ಬಿಸ್ಮಿಲ್ ಎನ್ನುವ ಹೆಸರಿನಲ್ಲಿ ಕವಿತೆಗಳನ್ನು ರಚಿಸುತ್ತಿದ್ದರು. ಕ್ರಾಂತಿಕಾರಿ ಸಂದೇಶಗಳನ್ನು ಹೊತ್ತ ಕವಿತೆಗಳು, ಕರಪತ್ರಗಳು, ಪುಸ್ತಕಗಳನ್ನು ಗುಪ್ತ ಮಾರ್ಗದಲ್ಲಿ ಪ್ರಕಟಿಸಿ ಹಂಚುವುದರಲ್ಲಿ ರಾಮ್ ಪ್ರಸಾದ್ ಚಾಕಚಕ್ಯತೆಯನ್ನು ಮೆರೆಯುತ್ತಿದ್ದರು. ಅವರನ್ನು ಸೆರೆಹಿಡಿಯಲು ಪೊಲೀಸರ ಗುಂಪೇ ಸಿದ್ಧವಾಗಿತ್ತು ಎಂದರೆ ಅವರ ಖ್ಯಾತಿಯನ್ನು ಊಹಿಸಬಹುದು. ಒಂದು ಸಲವಂತೂ ಬಿಸ್ಮಿಲ್ ಅವರ ಬೆನ್ನತ್ತಿದ ಪೊಲೀಸರಿಗೆ ಇನ್ನೇನು ಸಿಕ್ಕಿಯೇ ಬಿಟ್ಟರು ಎನ್ನುವಾಗ ಯಮುನಾ ನದಿಗೆ ಹಾರಿ ನೀರಿನಡಿಯೇ ಈಜಿಕೊಂಡು ಪಾರಾಗಿಬಿಟ್ಟಿದ್ದರು. ಸರ್ಕಾರ, ಅವರ ನೆನಪಿನಾರ್ಥ ಅವರ ಹುಟ್ಟೂರಾದ ಉತ್ತರಪ್ರದೇಶದ ಶಹಜಹಾನ್‌ಪುರದಲ್ಲಿ ರೈಲುನಿಲ್ದಾಣಕ್ಕೆ ರಾಮ್‌ಪ್ರಸಾದ್ ಬಿಸ್ಮಿಲ್ ಅವರ ಹೆಸರನ್ನಿಟ್ಟು ಗೌರವಿಸಿತು.
ಹುಡುಗಾಟದ ಹೋರಾಟಗಾರ ಖುದಿರಾಮ್ - ಖುದಿರಾಮ್ ಬೋಸ್
ಭಾರತ ಕಂಡ ಅತ್ಯಂತ ಕಿರಿಯ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರು ಖುದಿರಾಮ್ ಬೋಸ್. ಬ್ರಿಟಿಷರ ಪಾಲಿಗೆ ತಲೆನೋವಾಗಿ ಪರಿಣಮಿಸಿದ್ದ ಖುದಿರಾಮ್, ಬ್ರಿಟಿಷ್ ನ್ಯಾಯಾಧೀಶರೊಬ್ಬರ ಮೇಲೆ ಹತ್ಯೆ ಯತ್ನ
ನಡೆಸಿದ್ದರ ಆರೋಪ ದಲ್ಲಿ ಬಂಧಿತನಾಗಿ ಗಲ್ಲು ಶಿಕ್ಷೆಗೆ ಪಾತ್ರರಾಗಿದ್ದರು. ಆಗ ಅವರ ವಯಸ್ಸು 18 ವರ್ಷ 7 ತಿಂಗಳು. ಅವರು ಬಂಧಿತನಾಗಿ ಸೆರೆಮನೆ ಸೇರಿದ್ದ ಸಮಯದಲ್ಲಿ ಬಾಲಗಂಗಾಧರನಾಥ ತಿಲಕರು ತಮ್ಮ “ಕೇಸರಿ’ ಪತ್ರಿಕೆಯಲ್ಲಿ ಖುದಿರಾಂ ಪರವಾಗಿ ಬರೆದು ಅವರನ್ನು ಸಮರ್ಥಿಸಿಕೊಂಡಿದ್ದರು. ಅದಕ್ಕೆ ಪ್ರತೀಕಾರವಾಗಿ ಬ್ರಿಟಿಷರು ತಿಲಕರನ್ನು ಬಂಧಿಸಿದ ಘಟನೆಯೂ ನಡೆಯಿತು. ಗಲ್ಲಿಗೇರುವುದಕ್ಕೆ ಮುಂಚೆ ಪೊಲೀಸರು ದಾಖಲಿಸಿದ ಹೇಳಿಕೆಯಲ್ಲಿ ಖುದಿರಾಮ್ ಹೇಳಿದ್ದು “ಚಿಕ್ಕಂದಿನಲ್ಲಿ ನಾನು ತುಂಬಾ ತುಂಟನಾಗಿದ್ದೆ. ಕಾಲೇಜು ಸೇರಿದ ಮೇಲೆ ನನ್ನಲ್ಲಿ ಬದಲಾವಣೆ ಕಾಣತೊಡಗಿತ್ತು.’ 16ನೇ ವಯಸ್ಸಿನಲ್ಲೇ
ಹೋರಾಟಗಳನ್ನು ಸಂಘಟಿಸುತ್ತಿದ್ದ ಖುದಿರಾಮ್‌ನ ಸಾಹಸದ
ನೆನಪನ್ನು ಅವರ ಹೆಸರಿನ ಕಾಲೇಜು, ಆಸ್ಪತ್ರೆಗಳು, ರೈಲು ನಿಲ್ದಾಣಗಳ ಮೂಲಕ ಕೋಲ್ಕತಾದಲ್ಲಿ ಇಂದಿಗೂ ಜನರು ಉಳಿಸಿಕೊಂಡಿದ್ದಾರೆ.
ಕ್ರಾಂತಿಕಾರಿ ಕವಿ ಚತುರ - ತಾತ್ಯಾ ಟೋಪೆ
1857ರ ಸಿಪಾಯಿ ದಂಗೆಯಲ್ಲಿ ಅತಿ ಮುಖ್ಯ ಪಾತ್ರ ವಹಿಸಿದವರಲ್ಲಿ ತಾತ್ಯಾ ಟೋಪೆಯೂ ಒಬ್ಬರು. 1814ರಲ್ಲಿ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಹುಟ್ಟಿದ ತಾತ್ಯಾ ಟೋಪೆಯ ಮೂಲ ಹೆಸರು ರಾಮಚಂದ್ರ ಪಾಂಡುರಂಗ. ಕಾನ್‌ಪುರ, ಕಲ್ಪಿ, ಜಾನ್ಸಿಗಳಲ್ಲಿ ಯುದ್ಧ ಸಂಘಟನೆ ನಡೆಸಿದ ತಾತ್ಯಾ ಟೋಪೆ, ಯುದ್ಧದಲ್ಲಿ ಬ್ರಿಟಿಷ್ ಸೇನೆಯನ್ನು ಮಣ್ಣು ಮುಕ್ಕುವಂತೆ ಮಾಡಿದ್ದರು. ಅವರ ಅದ್ಭುತ ಸಂಘಟನಾ ಶಕ್ತಿಯಿಂದಾಗಿ ತಾತ್ಯಾ ಟೋಪೆಯನ್ನು, ಬಹಾದ್ದೂರ್ ಎಂದು ಚರಿತ್ರೆಯಲ್ಲಿ ಬಣ್ಣಿಸಲಾಗಿದೆ. ನಂಬಿದ ಗೆಳೆಯ ಮಾಡಿದ ಮೋಸದಿಂದಾಗಿ ತಾತ್ಯಾ ಟೋಪೆ ಬ್ರಿಟಿಷರ ಕೈಯಲ್ಲಿ ಸಿಕ್ಕಿಬಿದ್ದು, ನೇಣುಗಂಬವನ್ನು ಏರಬೇಕಾಯ್ತು. 1859ರ ಏಪ್ರಿಲ್ 18ರಂದು ಗಲ್ಲಿಗೇರಿದಾಗ ಅವರಿಗೆ 45 ವರ್ಷ ವಯಸ್ಸಾಗಿತ್ತು.
ಕ್ರಾಂತಿಕಾರಿ ಕವಿ ಚತುರ - ಜಾನಕಿ ದೇವಿ
ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ ಮಹಿಳೆಯರಲ್ಲಿ ಜಾನಕಿ ದೇವಿ ಬಜಾಜ್ ಕೂಡಾ ಒಬ್ಬರು. 1893ರಲ್ಲಿ ಮಧ್ಯಪ್ರದೇಶದಲ್ಲಿ ಜನಿಸಿದ ಜಾನಕಿ ದೇವಿ, 8ನೇ ವಯಸ್ಸಿನಲ್ಲಿ ಮದುವೆಯಾದರು. ಆಗ ಅವರ ಪತಿ ಉದ್ಯಮಿ ಜಮ್ನಲಾಲ್ ಬಜಾಜ್‌ರಿಗೆ 12 ವರ್ಷ ವಯಸ್ಸು. ಮುಂದೆ ಉದ್ಯಮ ಕ್ಷೇತ್ರದಲ್ಲಿ ಬಜಾಜ್ ಉನ್ನತಿ ಪಡೆದರೂ, ಈ ದಂಪತಿ ದೇಶಸೇವೆಯಲ್ಲಿ ಹಿಂದೆ ಬೀಳಲಿಲ್ಲ. ಗಂಡ-ಹೆಂಡತಿಯಿಬ್ಬರೂ ಮಹಾತ್ಮ ಗಾಂಧೀಜಿಯ ಅನುಯಾಯಿಗಳಾಗಿ, ಅವರ ಆದರ್ಶಗಳನ್ನು ಪಾಲಿಸುತ್ತಾ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡರು. ಜಾನಕಿ ದೇವಿಯವರು ಚರಕದಲ್ಲಿ ನೇಯ್ಗೆ ಮಾಡುತ್ತಾ, ಗೋಸೇವೆ, ಹರಿಜನರ ಏಳಿಗೆಗಾಗಿ ದುಡಿದರು. ವಿನೋಭಾ ಭಾವೆ ಭೂದಾನ ಚಳವಳಿಯಲ್ಲಿಯೂ ಕೈ ಜೋಡಿಸಿದ ಜಾನಕಿ ದೇವಿ, ಸ್ವಾತಂತ್ರ್ಯಾನಂತರ ಅಖೀಲ ಭಾರತ ಗೋಸೇವಾ ಸಂಘದ ಅಧ್ಯಕ್ಷೆಯಾದರು. ಅವರಿಗೆ ಪದ್ಮವಿಭೂಷಣ ಪ್ರಶಸ್ತಿಯೂ ಸಿಕ್ಕಿದೆ.
ಕ್ರಾಂತಿಕಾರಿ ಕವಿ ಚತುರ - ಗಣೇಶ ಶಂಕರ್
ಪತ್ರಕರ್ತರೂ, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ನ ನಾಯಕರೂ ಆಗಿದ್ದ ಗಣೇಶ್ ಶಂಕರ್ ವಿದ್ಯಾರ್ಥಿ ಅಸಹಕಾರ ಚಳವಳಿಯಲ್ಲಿ ಬಹುಮುಖ್ಯ ಪಾತ್ರ ವಹಿಸಿದವರು. ಪ್ರತಾಪ್ ಎಂಬ ಪತ್ರಿಕೆಯನ್ನು ಪ್ರಾರಂಭಿಸಿ ಆ ಮೂಲಕ ದೀನ ದಲಿತರ ದನಿಯಾಗಿ, ಬ್ರಿಟಿಷರ ವಿರುದ್ಧ ರಣಕಹಳೆಯಾಗಿ ಗಣೇಶ್ ಶಂಕರ್ ಹೊರಹೊಮ್ಮಿದರು. ಆ ಪರಿಣಾಮವಾಗಿ ಅನೇಕ ಬಾರಿ ಜೈಲುವಾಸವನ್ನೂ ಅನುಭವಿಸಬೇಕಾಯ್ತು. 1931ರಲ್ಲಿ ಖಾನ್‌ಪುರ್‌ನಲ್ಲಿ ನಡೆದ ಕೋಮು ದಂಗೆಯನ್ನು ಹತ್ತಿಕ್ಕುವ ಪ್ರಯತ್ನದಲ್ಲಿ ಗಣೇಶ್ ಶಂಕರ್ ಹತರಾದರು.
ಮೆದುಹೃದಯಿ ಕ್ರಾಂತಿಕಾರಿಯಾಗಿದ್ದು! ಜತೀಂದ್ರನಾಥ ಮುಖರ್ಜಿ
ಸಹವರ್ತಿಗಳ ವಲಯದಲ್ಲಿ ಭಾಗಾ ಜತಿನ್ ಎಂದೇ ಹೆಸರಾದ ಜತೀಂದ್ರನಾಥ ಮುಖರ್ಜಿ ಕೋಲ್ಕತ್ತಾದ ಸೆಂಟ್ರಲ್ ಕಾಲೇಜಿನಲ್ಲಿ ಫೈನ್ ಆರ್ಟ್ಸ್ ವಿಷಯದಲ್ಲಿ ಪದವಿ ಪಡೆದರು. ಮೊದಲಿನಿಂದಲೂ ವಿವೇಕಾನಂದರ ಚಿಂತನೆಗಳಿಂದ ಪ್ರಭಾವಿತಗೊಂಡಿದ್ದ ಅವರು ವಿವೇಕಾನಂದರನ್ನು ಭೇಟಿ ಮಾಡುತ್ತಿದ್ದರು. ಇದರ ಪರಿಣಾಮ, ಓದು ಮುಗಿದ ನಂತರ ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿಬಿಟ್ಟಿದ್ದರು. ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಸ್ವತಂತ್ರ ಗಳಿಸಬೇಕೆನ್ನುವುದರತ್ತಲೇ ಅವರ ಒಲವಿತ್ತು. ಈ ಹಿನ್ನೆಲೆಯಲ್ಲಿ ವಿವೇಕಾನಂದರ ಮಾರ್ಗದರ್ಶನದಂತೆ ‘ಉಕ್ಕಿನ ಮಾಂಸಖಂಡ ಮತ್ತು ನರಗಳನ್ನು’ ಹೊಂದಿದ ಯುವಕ/ ಯುವತಿಯರ ತಂಡವನ್ನು ಕಟ್ಟುವಲ್ಲಿ ಜತಿನ್ ನೆರವಾದರು. ಅಲ್ಲದೆ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿದ್ದ ಸಿಸ್ಟರ್ ನಿವೇದಿತಾರ ಸಹಕಾರಕ್ಕೂ ನಿಂತರು. ಇಂತಿಪ್ಪ ಜತಿನ್ ಮುಂದೆ ಕ್ರಾಂತಿಕಾರಿ ನೀತಿಗಳನ್ನು ಅನುಸರಿಸಿದ್ದು ಎಂಥವರಿಗೂ ಅಚ್ಚರಿ ಮೂಡಿಸುತ್ತದೆ. ರಹಸ್ಯವಾಗಿ ಕಾರ್ಯಾಚರಿಸುತ್ತಾ, ಪೊಲೀಸರಿಂದ ತಲೆಮರೆಸಿಕೊಂಡು ಓಡಾಡುತ್ತಾ ಬಾಂಬು ತಯಾರಿಸುವ ಘಟಕವನ್ನೇ ಅವರು ಸ್ಥಾಪಿಸಿದ್ದು ಮೂಗಿನ ಮೇಲೆ ಬೆರಳಿಡುವಂತೆ ಮಾಡುತ್ತದೆ.
ಪತ್ರಕರ್ತನ ಅಕ್ಷರ ಹೋರಾಟ ರಮಾನಂದ ಚಟರ್ಜಿ
1865ರಲ್ಲಿ ಕೋಲ್ಕತಾದಲ್ಲಿ ಜನಿಸಿದ ರಮಾನಂದ ಅವರು, ಭಾರತೀಯ ಪತ್ರಿಕೋದ್ಯಮದ ಪಿತಾಮಹ ಎಂದೇ ಖ್ಯಾತರಾಗಿದ್ದಾರೆ. ಸಸ್ಯಗಳಿಗೂ ಜೀವವಿದೆ ಎಂದು ಪ್ರತಿಪಾದಿಸಿದ ಜಗದೀಶ್ಚಂದ್ರ ಬೋಸ್ ಅವರ
ಸಹಪಾಠಿಯಾಗಿದ್ದರು. ರಮಾನಂದ ಚಟರ್ಜಿ ಮಾಡರ್ನ್ ವ್ಯೂ ಎಂಬ ಪತ್ರಿಕೆಯಲ್ಲಿ ಅಸಂಖ್ಯ ಓದುಗರನ್ನು ಪ್ರಭಾವಿಸಿದರು. ಗಾಂಧೀಜಿ, ಜವಾಹರಲಾಲ್ ನೆಹರೂ, ಸುಭಾಷ್‌ಚಂದ್ರ ಬೋಸ್, ಪ್ರೇಮ್‌ಚಂದ್, ಲಾಲಾ ಲಜಪತ್ ರಾಯ್ ಮುಂತಾದ ಸ್ವಾತಂತ್ರ್ಯ ಹೋರಾಟಗಾರರೆಲ್ಲರೂ ಚಟರ್ಜಿಯವರ ಪತ್ರಿಕೆಯಲ್ಲಿ
ಬರಹಗಾರರಾಗಿದ್ದರು. ಪ್ರಜಾಸತ್ತೆ ಬರಬೇಕೆಂಬುದು ಅವರ ಒತ್ತಾಸೆಯಾಗಿತ್ತು. ಸ್ವಾತಂತ್ರ್ಯ ಹೋರಾಟಕ್ಕೆ ವಿಭಿನ್ನ
ದೃಷ್ಟಿಕೋನವನ್ನು ನೀಡುವ ಮೂಲಕ ಪ್ರೇರಕ ಶಕ್ತಿಯಾಗಿದ್ದು ಅವರ ಸಾಧನೆ.
ಶಿಕ್ಷೆ ನಂತರ ಇನ್ನೊಂದು ಶಿಕ್ಷೆ ಬಟುಕೇಶ್ವರ್ ದತ್ತ
ಬ್ರಿಟಿಷರನ್ನು ನಡುಗಿಸಿದ ಘಟನೆ ಸಂಸತ್ತಿನಲ್ಲಿ ನಡೆದ ಬಾಂಬ್ ಸ್ಫೋಟ. ಈ ಘಟನೆಯಿಂದಲೇ ಪ್ರಖ್ಯಾತರಾದವರು, ಅಸಂಖ್ಯ ಭಾರತೀಯರಿಗೆ ಪ್ರೇರಣಾ ಶಕ್ತಿ ತುಂಬಿದವರು ಭಗತ್ ಸಿಂಗ್. ಆ ದಿನ ಅವರ ಜೊತೆ ಇದ್ದವರು ಮತ್ತೂಬ್ಬ ಹೋರಾಟಗಾರ ಬಟುಕೇಶ್ವರ್ ದತ್ತ. ಅವರಿಗೆ ಜೈಲುವಾಸ ದೊರಯಿತೇ ಹೊರತು ಗಲ್ಲು ಶಿಕ್ಷೆಯಾಗಲಿಲ್ಲ. ತಮ್ಮ ಶಿಕ್ಷೆಯ ಅವಧಿ ಮುಗಿದ ನಂತರ ದತ್ತ ಸುಮ್ಮನೆ ಕೂರಲಿಲ್ಲ. ಮಹಾತ್ಮಾ ಗಾಂಧಿಯವರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದರು. ಅದರ ಫಲವಾಗಿ ಮತ್ತೆ 4 ವರ್ಷಗಳ ಕಾಲ ಜೈಲು ಶಿಕ್ಷೆಗೊಳಗಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.